ಜಮ್ಮು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ: ವಿದೇಶಾಂಗ ವ್ಯವಹಾರಗಳ ಇಲಾಖೆ ಆತಂಕ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 07, 2021 | 10:19 PM

ನಮ್ಮ ಸಹವರ್ತಿಗಳ ಜೊತೆಗೆ ಗಡಿಯಾಚೆಗಿನ ಭಯೋತ್ಪಾದನೆ ತಡೆಯುವ ಕುರಿತು ಚರ್ಚೆ ನಡೆಸುತ್ತಿರುತ್ತೇವೆ’ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಅರಿಂಧಂ ಬಾಗ್ಚಿ ಮಾಧ್ಯಮಗಳಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ

ಜಮ್ಮು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ: ವಿದೇಶಾಂಗ ವ್ಯವಹಾರಗಳ ಇಲಾಖೆ ಆತಂಕ
ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಅರಿಂಧಂ ಬಾಗ್ಚಿ
Follow us on

ದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮುಗ್ಧ ನಾಗರಿಕರನ್ನು ಭಯೋತ್ಪಾದಕರು ಗುರಿಯಾಗಿಸಿ ಹತ್ಯೆ ಮಾಡುತ್ತಿರುವ ಬೆಳವಣಿಗೆಯನ್ನು ಖಂಡಿಸಿರುವ ವಿದೇಶಾಂಗ ವ್ಯವಹಾರಗಳ ಇಲಾಖೆ, ಗಡಿಯಾಚೆಗಿನ (ಪಾಕ್ ಪ್ರಾಯೋಜಿತ) ಭಯೋತ್ಪಾದನೆಯ ಬಗ್ಗೆ ಈ ಹಿಂದೆ ವ್ಯಕ್ತಪಡಿಸಿದ್ದ ಆತಂಕವನ್ನು ಪುನರುಚ್ಚರಿಸಿದೆ. ‘ಜಮ್ಮು ಮತ್ತು ಕಾಶ್ಮೀರದಲ್ಲಿ ಮುಗ್ಧರ ಹತ್ಯೆ ಮಾಡಲಾಗುತ್ತಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇವು ಗುರಿಯಾಗಿಸಿ ನಡೆಯುತ್ತಿರುವ ಹತ್ಯೆಗಳು. ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ನಮಗೆ ಆತಂಕವಿದೆ. ನಮ್ಮ ಸಹವರ್ತಿಗಳ ಜೊತೆಗೆ ಗಡಿಯಾಚೆಗಿನ ಭಯೋತ್ಪಾದನೆ ತಡೆಯುವ ಕುರಿತು ಚರ್ಚೆ ನಡೆಸುತ್ತಿರುತ್ತೇವೆ’ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಅರಿಂಧಂ ಬಾಗ್ಚಿ ಮಾಧ್ಯಮಗಳಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಲ್ಲಿ ನಾಗರಿಕರ ಹತ್ಯೆ ಹೆಚ್ಚಾಗಿದೆ. ಮಹಿಳಾ ಪ್ರಾಚಾರ್ಯರು ಮತ್ತು ಶಿಕ್ಷಕಿಯನ್ನು ಗುರುವಾರ ಅತ್ಯಂತ ಸನಿಹದಿಂದ ಗುಂಡಿಕ್ಕಿ ಕೊಲ್ಲಲಾಗಿದೆ. ಮಂಗಳವಾರವಷ್ಟೇ ಮರ್ಖನ್ ಲಾಲ್ ಬಿಂದ್ರೋ ಹೆಸರಿನ ಕಾಶ್ಮೀರಿ ಪಂಡಿತ್ ಮುಖಂಡನನ್ನು ಶ್ರೀನಗರದಲ್ಲಿ ಭಯೋತ್ಪಾದಕರು ಕೊಂದಿದ್ದರು.

ಶ್ರೀನಗರದ ಸಾಫಾ ಕಡಲ್​ ಪ್ರದೇಶದಲ್ಲಿರುವ ಶಾಲೆಯೊಂದರ ಪ್ರಿನ್ಸಿಪಾಲ್​ ಮತ್ತು ಶಿಕ್ಷಕರೊಬ್ಬರನ್ನು ಉಗ್ರರು (Terrorists) ಹತ್ಯೆಗೈದಿದ್ದಾರೆ. ಶ್ರೀನಗರ ಮತ್ತು ಬಂಡಿಪೋರಾದಲ್ಲಿ ಎರಡು ದಿನಗಳ ಹಿಂದೆ ಒಟ್ಟು ಮೂವರು ನಾಗರಿಕರನ್ನು ಉಗ್ರರು ಗುಂಡುಹೊಡೆದು ಕೊಂದಿದ್ದರು. ಇದೀಗ ಇಬ್ಬರು ಶಿಕ್ಷಕರನ್ನು ಹತ್ಯೆಗೈದಿದ್ದಾರೆ. ಮೃತರನ್ನು ಸತೀಂದರ್​ ಕೌರ್​ ಮತ್ತು ದೀಪಕ್​ ಚಾಂದ್​ ಎಂದು ಗುರುತಿಸಲಾಗಿದ್ದು, ಇಬ್ಬರೂ ಅಲೋಚಿಬಾಗ್ ನಿವಾಸಿಗಳು ಎನ್ನಲಾಗಿದೆ. ಉಗ್ರರಿಂದ ಗುಂಡೇಟು ತಿಂದು ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಕರೆದುಕೊಂಡು ಬರುವಷ್ಟರಲ್ಲಿಯೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದ ನಂತರ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಾಗುವ ಆತಂಕ ವ್ಯಕ್ತವಾಗಿತ್ತು. ಭಯೋತ್ಪಾದಕರ ಉಪಟಳ ಹೆಚ್ಚಾಗುವುದರೊಂದಿಗೆ ಈ ಆತಂಕಗಳು ನಿಜವಾಗಬಹುದು ಎಂಬ ಭೀತಿ ಎದುರಾಗಿದೆ. ಕಳೆದ ಎರಡು ವರ್ಷಗಳಿಂದ ಕೇಂದ್ರ ಸರ್ಕಾರದ ಬಿಗಿ ಹಿಡಿತದಲ್ಲಿದ್ದ ಕಾಶ್ಮೀರದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳು ದೇಶದ ಭದ್ರತೆಗೆ ಹೊಸ ಆತಂಕ ತಂದೊಡ್ಡಿದೆ.

ಇದನ್ನೂ ಓದಿ: ಶ್ರೀನಗರದಲ್ಲಿ ಇಬ್ಬರು ಶಿಕ್ಷಕರನ್ನು ಹತ್ಯೆಗೈದ ಭಯೋತ್ಪಾದಕರು; 3 ನಾಗರಿಕರು ಕೊಲೆಯಾದ ಎರಡೇ ದಿನದಲ್ಲಿ ಘಟನೆ
ಇದನ್ನೂ ಓದಿ: ಶ್ರೀನಗರದಲ್ಲಿ ಒಂದೇ ಗಂಟೆಯ ಅವಧಿಯಲ್ಲಿ ಪ್ರತ್ಯೇಕ 3 ಉಗ್ರದಾಳಿ; ಮೂವರು ಬಲಿ

Published On - 10:19 pm, Thu, 7 October 21