ಬೆಂಗಳೂರು: ಭಾರತದಲ್ಲಿ ಕೊರೊನಾ ಸೋಂಕು (Coronavirus Infection) ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯು (Union Health Department) ಐದು ರಾಜ್ಯಗಳಿಗೆ ಪತ್ರ ಬರೆದಿದ್ದು ಸೋಂಕು ಹರಡುವುದನ್ನು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದೆ. ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ಬರೆದಿದ್ದು, ಕೆಲವು ರಾಜ್ಯಗಳಲ್ಲಿ ಮಾತ್ರ ಸೋಂಕಿನ ಪ್ರಮಾಣ ಹೆಚ್ಚಾಗಿ ವರದಿಯಾಗುತ್ತಿದೆ ಎಂದು ಹೇಳಿದ್ದಾರೆ. ಸೋಂಕು ಸ್ಥಳೀಯವಾಗಿ ಹೆಚ್ಚಾಗುತ್ತಿರುವ ವಿದ್ಯಮಾನದ ಬಗ್ಗೆಯೂ ಅವರು ಗಮನ ಸೆಳೆದಿದ್ದಾರೆ.
ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಈವರೆಗಿನ ಸಾಧನೆಗಳನ್ನು ಬಿಟ್ಟುಕೊಡದ ರೀತಿಯಲ್ಲಿ ಗಮನ ಹರಿಸಬೇಕು. ಸಂಭವೀಯ ಅಪಾಯಗಳನ್ನು ಮುಂದಾಗಿಯೇ ಅಂದಾಜಿಸಿ ಕ್ರಮ ವಹಿಸಬೇಕು. ಭಾರತದಲ್ಲಿ ಕಳೆದ 3 ತಿಂಗಳ ಅವಧಿಯಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿ ಮಹತ್ವದ ಸಾಧನೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಮೇ 27ರಂದು 15,708 ಮಂದಿಯಲ್ಲಿ ಸೋಂಕು ವರದಿಯಾಗಿದೆ. ಜೂನ್ 3ರಂದು ಈ ಸಂಖ್ಯೆ 21,055ಕ್ಕೆ ಹೆಚ್ಚಾಗಿದೆ.
ಮೇ 27ಕ್ಕೆ ಅಂತ್ಯಗೊಂಡ ವಾರದಲ್ಲಿ ವಾರದ ಪಾಸಿಟಿವಿಟಿ ಪ್ರಮಾಣವು ಶೇ 0.52 ಇದ್ದರೆ, ಜೂನ್ 3ಕ್ಕೆ ಅಂತ್ಯಗೊಂಡ ವಾರದಲ್ಲಿ ಶೇ 0.73ಕ್ಕೆ ಏರಿಕೆಯಾಗಿತ್ತು. ಏಪ್ರಿಲ್ 8, 2022ರಂದು ಕೇಂದ್ರ ಅರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದ್ದ ಪತ್ರದಲ್ಲಿ ಇರುವ ಮಾಹಿತಿಯನ್ನು ಪರಿಶೀಲಿಸಬಹುದಾಗಿದೆ. ರಾಜ್ಯ ಸರ್ಕಾರಗಳು ಅಗತ್ಯ ಎನಿಸಿದಾಗ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಈ ಪತ್ರದಲ್ಲಿ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ವಿವಿಧ ಚಟುವಟಿಕೆಗಳಲ್ಲಿ ರಿಯಾಯ್ತಿ, ಪರೀಕ್ಷೆ, ನಿಗಾವಣೆ, ಚಿಕಿತ್ಸೆ, ಲಸಿಕೆ ಮತ್ತು ಸಮುದಾಯ ಸಹಭಾಗಿತ್ವದ ಬಗ್ಗೆ ಪುರಾವೆ ಆಧರಿತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕೊವಿಡ್-19 ಸೋಂಕು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಗ್ಯ ಸಚಿವಾಲಯವು ಕಾಲಕಾಲಕ್ಕೆ ಬಿಡುಗಡೆ ಮಾಡುವ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
ತಪಾಸಣೆ, ಸಂಪರ್ಕಿರ ಪತ್ತೆ, ಚಿಕಿತ್ಸೆ, ಲಡಿಕೆ ಮತ್ತು ನಿಯಮ ಪಾಲನೆಯ (ಟೆಸ್ಟ್, ಟ್ರ್ಯಾಕ್, ಟ್ರೀಟ್, ವ್ಯಾಕ್ಸಿನೇಶನ್ ಮತ್ತು ಅಡ್ಹರೆನ್ಸ್) ಸೂತ್ರಗಳನ್ನು ಅನುಸರಿಸಬೇಕು. ಇದೇ ವೇಳೆ ವಿವಿಧ ರೀತಿಯ ಜ್ವರಗಳು ಹರಡದಂತೆ ಎಚ್ಚರ ವಹಿಸಬೇಕು. ಜಿನಾಮ್ ಸಿಕ್ವೆನ್ಸ್ ಬಗ್ಗೆಯೂ ಗಮನ ಹರಿಸಬೇಕು. ವಿದೇಶಗಳಿಂದ ಬರುವವರನ್ನು ಕಠಿಣ ತಪಾಸಣೆಗೆ ಒಳಪಡಿಸಬೇಕು ಎಂದು ಹೇಳಿದರು.
ಪತ್ರದಲ್ಲಿ ಉಲ್ಲೇಖಿಸಿರುವ ಪ್ರಕಾರ ತಮಿಳುನಾಡಿನಲ್ಲಿ ಮೇ 27ರಂದು 335 ಇದ್ದ ಹೊಸ ಪ್ರಕರಣಗಳು, ಜೂನ್ 3ಕ್ಕೆ 659ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಜೂನ್ 3ರಂದು ವರದಿಯಾದ ಒಟ್ಟು ಪ್ರಕರಣಗಳಲ್ಲಿ ತಮಿಳುನಾಡಿನ ಸಂಖ್ಯೆ ಶೇ 3.13. ತಮಿಳುನಾಡಿನ ಪಾಸಿಟಿವಿಟಿ ಪ್ರಮಾಣವೂ ಶೇ 0.8ರಷ್ಟು ಹೆಚ್ಚಾಗಿದೆ. ಚೆನ್ನೈ ಮತ್ತು ಚೆಂಗಲಪಟ್ಟು ಜಿಲ್ಲೆಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಸೋಂಕು ಹೆಚ್ಚಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಶೀಘ್ರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಪತ್ರವು ಸಲಹೆ ಮಾಡಿದೆ.
ಕರ್ನಾಟಕದಲ್ಲಿ ಮೇ 27ರಂದು 1,003 ಹೊಸ ಸೋಂಕು ಪ್ರಕರಣ ವರದಿಯಾಗಿತ್ತು. ಜೂನ್ 3ರಂದು ಇದು 1,446ಕ್ಕೆ ಏರಿಕೆಯಾಗಿದೆ. ಭಾರತದ ಒಟ್ಟು ಸೋಂಕಿತರ ಸರಾಸರಿಯಲ್ಲಿ ಕರ್ನಾಟಕದ ಪಾಲು ಶೇ 6.87ರಷ್ಟು ಇದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ರಾಜ್ಯ ಸರ್ಕಾರವು ನಗರ ವ್ಯಾಪ್ತಿಯಲ್ಲಿ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಸೂಚಿಸಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:16 am, Sat, 4 June 22