ಮದುವೆಯ ದಿನ ಹಗಲಿಡೀ ವರ ಕಾಣೆಯಾಗಿ, ಸಂಜೆ ಹೊತ್ತಿಗೆ ಕಾಣಿಸಿಕೊಂಡ ವಿಚಿತ್ರ ಪ್ರಹಸನ ಬಿಹಾರದ (Bihar) ಧನಬಾದ್ ಎಂಬಲ್ಲಿ ನಡೆದಿದೆ. ಬೆಳಗ್ಗೆ ಮದುವೆ ನಡೆಯಬೇಕಿದ್ದ ಸ್ಥಳಕ್ಕೆ ವಧುವಿನ ಕಡೆಯವರು ಬಂದರು. ವಧುವಂತೂ ಪೂರ್ತಿ ಸಿದ್ಧಳಾಗಿ ನಿಂತಿದ್ದಳು. ಆದರೆ ಎಷ್ಟು ಹೊತ್ತಾದರೂ ವರ ಮಾತ್ರ ಕಾಣಲಿಲ್ಲ. ಹುಡುಕಿದ್ದಾಯ್ತು, ಹುಡುಕಿಸಿದ್ದಾಯ್ತು ಸಂಜೆ ಆಗುತ್ತ ಬಂದರೂ ವರ ಬರಲಿಲ್ಲ. ಕೊನೆಗೆ ಬೇಸತ್ತ ವಧುವಿನ ಕುಟುಂಬದವರು ಪೊಲೀಸ್ ಠಾಣೆ ಮೆಟ್ಟಿಲೇರಿ, ಇನ್ನೇನು ಎಫ್ಐಆರ್ ದಾಖಲು ಮಾಡಬೇಕು ಅನ್ನುವಷ್ಟರಲ್ಲಿ ಇತ್ತ ವರ ಪ್ರತ್ಯಕ್ಷನಾಗಿದ್ದಾನೆ.
ಈ ವರನ ಹೆಸರು ರತ್ನೇಶ್ ಕುಮಾರ್. ಧನ್ಬಾದ್ನ ಭುಲಿ ನಿವಾಸಿ. ಭಾರತೀಯ ರೈಲ್ವೆಯಲ್ಲಿ ಉದ್ಯೋಗಿ. ಹುಡುಗ ವಧುವಿಗೆ ವಂಚನೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಹುಡುಗಿಯ ಸಂಬಂಧಿಕರು ಆರೋಪಿಸಿದ್ದಾರೆ. ವರ ಕಾಣಿಸುತ್ತಿಲ್ಲವೆಂದು ಮಹಿಳಾ ಪೊಲೀಸ್ ಠಾಣೆಗೆ ದೂರು ಕೊಡಲು ಹೋದ ವೇಳೆ ವಧು ಕೆಲವು ಮಹತ್ವದ ಸಂಗತಿಗಳನ್ನು ತಿಳಿಸಿದ್ದಾಳೆ. ಮದುವೆ ಕಳೆದ ವರ್ಷವೇ ನಿಗದಿಯಾಗಿತ್ತು. ಆದರೆ ಆಗಲೂ ಕೊನೇ ಕ್ಷಣದಲ್ಲಿ ವರ ತಿರಸ್ಕರಿಸಿದ್ದ. ನಂತರ ರಾಜಿ ಪಂಚಾಯಿತಿ ಮಾಡಿ ಎರಡೂ ಕಡೆಯವರ ಮಧ್ಯೆ ಒಪ್ಪಂದವಾಗಿತ್ತು ಎಂದು ಹೇಳಿದ್ದಾರೆ.
ಬಳಿಕ ಮತ್ತೆ ನಮ್ಮ ಎರಡೂ ಕುಟುಂಬದವರು ಸೇರಿ ಚರ್ಚಿಸಿ, ಮಾರ್ಚ್ 25ರಂದು ಮದುವೆ ನಿಗದಿ ಪಡಿಸಿದರು. ಅದರಂತೆ ನಾವು ಎಲ್ಲ ಸಿದ್ಧತೆಗಳೊಂದಿಗೆ ಧನ್ಬಾದ್ಗೆ ಬಂದೆವು. ಆದರೆ ಹುಡುಗ ನಾಪತ್ತೆಯಾದ ಎಂದು ಯುವತಿ ಹೇಳಿದ್ದಾಳೆ. ಸಂಜೆ ಹೊತ್ತಿಗೆ ಯುವಕ ಮತ್ತೆ ಕಾಣಿಸಿಕೊಂಡ ಬಳಿಕ ಇವರಿಬ್ಬರಿಗೂ ರಾತ್ರಿ ಮದುವೆ ಮಾಡಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ: Shri Lanka: 54 ವರ್ಷಗಳ ನಂತರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮರು ಉದ್ಘಾಟನೆ; ಮಾಲ್ಡೀವ್ಸ್ನಿಂದ ಬಂತೊಂದು ಫ್ಲೈಟ್