ಅಹಮದಾಬಾದ್: ಸೋಮವಾರ ರಾತ್ರಿ ಗುಜರಾತ್‌ನ (Gujarat Hooch Tragedy) ಅಹಮದಾಬಾದ್ ಮತ್ತು ಬೊಟಾಡ್ ಜಿಲ್ಲೆಯ ಹಳ್ಳಿಗಳಲ್ಲಿ ನಕಲಿ ಮದ್ಯ ಸೇವನೆಯಿಂದ (ಕಳ್ಳಭಟ್ಟಿ) ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಇನ್ನೂ 45 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಜರಾತ್‌ನಲ್ಲಿ ಮದ್ಯದ ತಯಾರಿಕೆ, ಮಾರಾಟ ಮತ್ತು ಸೇವನೆಯನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಕಳ್ಳಭಟ್ಟಿ ಸೇವನೆಯ ನಂತರ ಸಾಕಷ್ಟು ಜನರ ಸ್ಥಿತಿ ಹದಗೆಟ್ಟಿದ್ದು, 50ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೆಲವು ಗಂಭೀರ ರೋಗಿಗಳನ್ನು ಬೊಟಾಡ್, ಅಹಮದಾಬಾದ್ ಮತ್ತು ಭಾವನಗರದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ 6 ಜನರನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿದೆ ಎಂದು ವೈದ್ಯಾಧಿಕಾರಿ ಧಂಧೂಕ ಡಾ.ಸಂಕೇತ್ ತಿಳಿಸಿದ್ದಾರೆ. ಗ್ರಾಮಗಳಲ್ಲಿ ಕಳ್ಳಭಟ್ಟಿ ಮಾರಾಟದಲ್ಲಿ ತೊಡಗಿದ್ದ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ತನಿಖೆಗಾಗಿ ಗುಜರಾತ್ ಸರ್ಕಾರದಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೂಡ ರಚಿಸಲಾಗಿದೆ.
ಭಾವನಗರ ಮತ್ತು ಬೋಟಾಡ್‌ನಲ್ಲಿ ಕೆಲವು ರೋಗಿಗಳ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎನ್ನಲಾಗಿದೆ. ಈ ಘಟನೆಯ ನಂತರ ಭಾವನಗರ ರೇಂಜ್‌ನ ಇನ್ಸ್‌ಪೆಕ್ಟರ್ ಜನರಲ್ ಅಶೋಕ್ ಕುಮಾರ್ ಯಾದವ್ ಬೋಟಾಡ್‌ಗೆ ಧಾವಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಭಾವನಗರ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ತಂಡವನ್ನು ಬೋಟಾಡ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಇದೇ ವೇಳೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಎನ್ನಲಾದ ಪಿಂಟು ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Howrah Tragedy: ಕಳ್ಳಭಟ್ಟಿ ಸೇವಿಸಿ ಹೌರಾದಲ್ಲಿ 7 ಮಂದಿ ಸಾವು, 20ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ
ಬೊಟಾಡ್ ಜಿಲ್ಲೆಯ ಮೂವರು ಮದ್ಯ ಕಳ್ಳಸಾಗಣೆದಾರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗುಜರಾತ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆಶಿಶ್ ಭಾಟಿಯಾ ಹೇಳಿದ್ದಾರೆ. ಮೃತರಲ್ಲಿ ಹೆಚ್ಚಿನವರು ಕೂಲಿ ಕಾರ್ಮಿಕರು. ರೋಜಿದ್ ಗ್ರಾಮದಲ್ಲಿ ಕಳ್ಳಭಟ್ಟಿ ಸೇವಿಸಿದ ಕೆಲವೇ ಗಂಟೆಗಳಲ್ಲಿ ತನ್ನ ಗಂಡನ ಸ್ಥಿತಿ ಹದಗೆಡಲು ಪ್ರಾರಂಭಿಸಿತು ಎಂದು ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಪತ್ನಿ ಮಾಹಿತಿ ನೀಡಿದ್ದಾರೆ.
ಗುಜರಾತ್ ಪ್ರವಾಸದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಘಟನೆಯನ್ನು ದುರದೃಷ್ಟಕರ ಎಂದು ಹೇಳಿದ್ದು, ನಿಷೇಧಾಜ್ಞೆ ಜಾರಿಯಲ್ಲಿರುವ ಗುಜರಾತ್‌ನಲ್ಲಿ ಅಕ್ರಮ ಮದ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಕ್ರಮ ಮದ್ಯ ಮಾರಾಟ ಮಾಡುವವರು ರಾಜಕೀಯ ರಕ್ಷಣೆ ಪಡೆಯುತ್ತಿದ್ದಾರೆ. ನಿಷೇಧದ ಹೊರತಾಗಿಯೂ, ಗುಜರಾತ್‌ನಲ್ಲಿ ಅಕ್ರಮ ಮದ್ಯವನ್ನು ಭಾರೀ ಪ್ರಮಾಣದಲ್ಲಿ ಮಾರಾಟ ಮಾಡುತ್ತಿರುವುದು ದುರದೃಷ್ಟಕರವಾಗಿದೆ. ಅಕ್ರಮ ಮದ್ಯ ಮಾರಾಟ ಮಾಡುವವರು ಯಾರು? ಅವರಿಗೆ ಯಾರು ರಾಜಕೀಯ ರಕ್ಷಣೆಯನ್ನು ನೀಡುತ್ತಿದ್ದಾರೆ? ಅಕ್ರಮ ಮದ್ಯ ಮಾರಾಟದಿಂದ ಉತ್ಪತ್ತಿಯಾಗುವ ಹಣ ಎಲ್ಲಿಗೆ ಹೋಗುತ್ತದೆ? ಈ ಬಗ್ಗೆ ತನಿಖೆಯಾಗಬೇಕು ಎಂದು ಅವರು ಪೋರಬಂದರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
Published On - 9:36 am, Tue, 26 July 22