ಪ್ರಧಾನಿ ವಿರುದ್ಧ ನಿಂದನಾತ್ಮಕ ಪೋಸ್ಟ್ ಹಾಕಿ ಜೈಲು ಸೇರಿದ್ದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಜಾಮೀನು
ದೂರು ನೀಡಿದ್ದ ಬಿಜೆಪಿ ನಾಯಕ ಅರೂಪ್ ಕುಮಾರ್ ಡೇ, ಮೇವಾನಿ ಟ್ವೀಟ್ಗಳೆಲ್ಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನರ ಭಾವನೆಗಳನ್ನು ಕೆರಳಿಸುವಂತೇ ಇರುತ್ತವೆ ಎಂದು ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹಲವು ನಿಂದನಾತ್ಮಕ ಟ್ವೀಟ್ಗಳನ್ನು ಮಾಡಿ, ಜೈಲು ಸೇರಿದ್ದ ದಲಿತ ಮುಖಂಡ, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಇಂದು ಅಸ್ಸಾಂ ನ್ಯಾಯಾಲಯ ಜಾಮೀನು ನೀಡಿದೆ. ನಿನ್ನೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಅಂತಿಮವಾಗಿ ಜಿಗ್ನೇಶ್ ಮೇವಾನಿಗೆ ಬೇಲ್ ಸಿಕ್ಕಿದೆ. ನಾಲ್ಕು ದಿನಗಳ ಹಿಂದೆ ಅಂದರೆ ಗುರುವಾರ ಗುಜರಾತ್ನ ಪಾಲನ್ಪುರದಲ್ಲಿರುವ ಸರ್ಕೀಟ್ ಹೌಸ್ನಲ್ಲಿ ಜಿಗ್ನೇಶ್ರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೀಳಾಗಿ ಹಲವು ಟ್ವೀಟ್ಗಳನ್ನು ಮಾಡಿದ್ದ ಮೇವಾನಿ ವಿರುದ್ಧ ಅಸ್ಸಾಂನ ಕೊಕ್ರಾಝರ್ನ ಬಿಜೆಪಿ ನಾಯಕ ಅರೂಪ್ ಕುಮಾರ್ ಡೇ ದೂರು ನೀಡಿದ್ದರು. ಎಫ್ಐಆರ್ ಕೂಡ ದಾಖಲಾಗಿತ್ತು. ಆದರೆ ತಮ್ಮ ಬಂಧನವನ್ನು ಜಿಗ್ನೇಶ್ ಮೇವಾನಿ ಖಂಡಿಸಿದ್ದರು. ಪ್ರಧಾನಿ ಕಾರ್ಯಾಲಯ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಹೇಳಿದ್ದರು.
ಇಂದು ಜೈಲಿನಿಂದ ಬಿಡುಗಡೆಯಾದ ಬಳಿಕ ಮಾತನಾಡಿದ ಜಿಗ್ನೇಶ್ ಮೇವಾನಿ, ನನ್ನ ಪ್ರತಿಷ್ಠೆಯನ್ನು ಕುಂದಿಸಲು ಬಿಜೆಪಿ ಮತ್ತು ಆರ್ಎಸ್ಎಸ್ನಿಂದ ಕುತಂತ್ರ ನಡೆಯುತ್ತಿದೆ. ನನ್ನ ವಿರುದ್ಧ ವ್ಯವಸ್ಥಿತವಾಗಿ ಬಲೆ ಹೆಣೆದಿದ್ದಾರೆ. ಅಂದು ಚಂದ್ರಶೇಖರ್ ಆಜಾದ್, ರೋಹಿತ್ ವೇಮುಲಾಗೇ ಮಾಡಿದ್ದನ್ನೇ ನನಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಂದಹಾಗೇ, ಜಿಗ್ನೇಶ್ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಮೂಲಕ ಶಾಂತಿ ಭಂಗಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪದಡಿ ಅವರನ್ನ ಬಂಧಿಸಲಾಗಿತ್ತು.
ಇನ್ನು ದೂರು ನೀಡಿದ್ದ ಬಿಜೆಪಿ ನಾಯಕ ಅರೂಪ್ ಕುಮಾರ್ ಡೇ, ಮೇವಾನಿ ಟ್ವೀಟ್ಗಳೆಲ್ಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನರ ಭಾವನೆಗಳನ್ನು ಕೆರಳಿಸುವಂತೇ ಇರುತ್ತವೆ ಎಂದು ಹೇಳಿದ್ದರು. ಬಳಿಕ ಮಾಧ್ಯಮವೊಂದರ ಜತೆಗೆ ಮಾತನಾಡಿದ್ದ ಅವರು, ಜಿಗ್ನೇಶ್ ಮೇವಾನಿ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ನರೇಂದ್ರ ಮೋದಿಯವರಂಥ ಪ್ರಧಾನಿಯನ್ನು ಪಡೆಯಲು ನಾವು ಪುಣ್ಯ ಮಾಡಿರಬೇಕು. ಆದರೆ ಯಾವುದೇ ಹಿಂಸಾಚಾರವಾದರೂ ಅದಕ್ಕೆ ಮೋದಿಯವರ ಹೆಸರು ತರುತ್ತಾರೆ. ಪ್ರಧಾನಿ ಹೇಗೆ ಕಾರಣರಾಗುತ್ತಾರೆ ಎಂದು ಪ್ರಶ್ನಿಸಿದ್ದರು.
ಗುಜರಾತ್ನ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿಯವರ ಬಂಧನವನ್ನು ಕಾಂಗ್ರೆಸ್ ವಿರೋಧಿಸಿತ್ತು. ರಾಹುಲ್ ಗಾಂಧಿ ಟ್ವೀಟ್ ಮಾಡಿ, ಮೋದಿ ಜೀ ನೀವು ನಿಮ್ಮ ವಿರುದ್ಧ ಭಿನ್ನಾಭಿಪ್ರಾಯ ಹೊಂದಿರುವವರನ್ನು ಹತ್ತಿಕ್ಕಲು ಪ್ರಯತ್ನ ಮಾಡಬಹುದು. ಆದರೆ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದಿದ್ದರು.
ಇದನ್ನೂ ಓದಿ: viral video: ಸದ್ದಿಲ್ಲದೆ ಆಸ್ಟ್ರೇಲಿಯಾದ ಬಾರ್ವೊಂದಕ್ಕೆ ಎಂಟ್ರಿ ಕೊಟ್ಟ ಕಾಂಗರೂ; ಮುಂದೇನಾಯ್ತು..!