Gyanvapi Mosque Case: ಜ್ಞಾನವಾಪಿ ಶಿವಲಿಂಗ ವಿಸ್ತರಣೆ ಕುರಿತು ಸುಪ್ರೀಂ ಕೋರ್ಟ್​ನಲ್ಲಿ ಇಂದು ವಿಚಾರಣೆ

| Updated By: ಸುಷ್ಮಾ ಚಕ್ರೆ

Updated on: Nov 11, 2022 | 11:23 AM

ಮಸೀದಿ ಆಡಳಿತ ಸಮಿತಿಯ ಈ ಅರ್ಜಿಯು ಹಿಂದೂ ಮಹಿಳೆಯರ ದಾವೆಯನ್ನು ನಿರ್ವಹಣೆಯ ಆಧಾರದ ಮೇಲೆ ಮತ್ತು ಪೂಜಾ ಸ್ಥಳಗಳ ಕಾಯಿದೆ, 1991ರ ಉಲ್ಲಂಘನೆಗಾಗಿ ವಜಾಗೊಳಿಸುವಂತೆ ಕೋರಿತ್ತು.

Gyanvapi Mosque Case: ಜ್ಞಾನವಾಪಿ ಶಿವಲಿಂಗ ವಿಸ್ತರಣೆ ಕುರಿತು ಸುಪ್ರೀಂ ಕೋರ್ಟ್​ನಲ್ಲಿ ಇಂದು ವಿಚಾರಣೆ
ಜ್ಞಾನವಾಪಿ ಮಸೀದಿ
Follow us on

ವಾರಾಣಸಿ: ವಾರಾಣಸಿಯ ಜ್ಞಾನವಾಪಿ ಮಸೀದಿ (Gyanvapi Mosque) ಸಂಕೀರ್ಣದಲ್ಲಿ ಶಿವಲಿಂಗವೊಂದು ಪತ್ತೆಯಾಗಿದೆ ಎಂದು ಹೇಳಲಾದ ಭಾಗದ ರಕ್ಷಣೆಯನ್ನು ವಿಸ್ತರಿಸಬೇಕೆಂಬ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ವಿಚಾರಣೆ ನಡೆಸಲಿದೆ. ಈ ಭಾಗದ ರಕ್ಷಣೆಯ ಮಧ್ಯಂತರ ಆದೇಶವು ನವೆಂಬರ್ 12ರಂದು ಮುಕ್ತಾಯಗೊಳ್ಳಲಿದ್ದು, ಹಿಂದಿನ ಆದೇಶವನ್ನು ಮುಂದುವರಿಸಲು ಅವರ ಅರ್ಜಿಯ ವಿಚಾರಣೆಗೆ ತುರ್ತು ದಿನಾಂಕವನ್ನು ನಿಗದಿಪಡಿಸುವಂತೆ ವಕೀಲ ವಿಷ್ಣು ಶಂಕರ್ ಜೈನ್ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿಗೆ ಗುರುವಾರ ಮನವಿ ಮಾಡಿದ್ದರು.

ವಾರಾಣಸಿಯ ಸಿವಿಲ್ ಕೋರ್ಟ್‌ನಲ್ಲಿ ಕೆಲವು ಹಿಂದೂ ಮಹಿಳೆಯರನ್ನು ಪ್ರತಿನಿಧಿಸಿದ್ದ ವಿಷ್ಣು ಶಂಕರ್ ಜೈನ್, ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಮಾಡಲು ಅನುಮತಿ ಕೋರಿ ವಾರಾಣಸಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಮೇ 17ರಂದು ವಾರಣಾಸಿಯಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹೇಳಲಾದ ಪ್ರದೇಶವನ್ನು ಸುಪ್ರೀಂ ಕೋರ್ಟ್ ರಕ್ಷಿಸಲು ಸೂಚಿಸಿತ್ತು. ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿ ಸಂಕೀರ್ಣದ ವಿಡಿಯೋಗ್ರಾಫಿಕ್ ಸಮೀಕ್ಷೆಗೆ ಸಿವಿಲ್ ಕೋರ್ಟ್ ಅನುಮತಿ ನೀಡಿತ್ತು. ಜ್ಞಾನವಾಪಿ ಮಸೀದಿ ಆಡಳಿತ ಸಮಿತಿಯು ಸಿವಿಲ್ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯನ್ನು ವಿಲೇವಾರಿ ಮಾಡಿದ ನಂತರ 8 ವಾರಗಳವರೆಗೆ ಈ ಪ್ರದೇಶವನ್ನು ಭದ್ರಪಡಿಸುವ ಮೇ 17ರ ಆದೇಶವು ಕಾರ್ಯಾಚರಣೆಯಲ್ಲಿರುತ್ತದೆ ಎಂದು ಅವರು ಹೇಳಿದ್ದರು.

ಮಸೀದಿ ಆಡಳಿತ ಸಮಿತಿಯ ಈ ಅರ್ಜಿಯು ಹಿಂದೂ ಮಹಿಳೆಯರ ದಾವೆಯನ್ನು ನಿರ್ವಹಣೆಯ ಆಧಾರದ ಮೇಲೆ ಮತ್ತು ಪೂಜಾ ಸ್ಥಳಗಳ ಕಾಯಿದೆ, 1991ರ ಉಲ್ಲಂಘನೆಗಾಗಿ ವಜಾಗೊಳಿಸುವಂತೆ ಕೋರಿತ್ತು. ಆದರೂ ಸಿವಿಲ್ ನ್ಯಾಯಾಲಯವು ಸೆಪ್ಟೆಂಬರ್ 12ರಂದು ಮಸೀದಿ ಆಡಳಿತ ಸಮಿತಿಯ ಮನವಿಯನ್ನು ತಿರಸ್ಕರಿಸಿತ್ತು.

ಗುರುವಾರ ವಕೀಲ ವಿಷ್ಣು ಶಂಕರ್ ಜೈನ್ ಅವರು ಸಿಜೆಐ ಮುಂದೆ ಈ ಪ್ರದೇಶವನ್ನು ರಕ್ಷಿಸಬೇಕಾಗಿದೆ ಮತ್ತು ಹಿಂದಿನ ನಿರ್ದೇಶನವನ್ನು ವಿಸ್ತರಿಸುವ ನ್ಯಾಯಾಲಯದ ಮತ್ತೊಂದು ಆದೇಶದ ಅಗತ್ಯವಿದೆ ಎಂದು ಮನವಿ ಮಾಡಿದ್ದರು.

ಜ್ಞಾನವಾಪಿ ಪ್ರಕರಣವು ತಮ್ಮ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ವಿಶೇಷ ಪೀಠದ ಮುಂದೆ ಇದೆ ಎಂದು ಗಮನಿಸಿದ ನ್ಯಾಯಮೂರ್ತಿ ಚಂದ್ರಚೂಡ್ ಅವರು ಇಂದು ಮಧ್ಯಾಹ್ನ 3 ಗಂಟೆಗೆ ವಿಚಾರಣೆ ನಡೆಸಲು ಒಪ್ಪಿಕೊಂಡಿದ್ದರು. ಜ್ಞಾನವಾಪಿ ಮಸೀದಿ ಆವರಣದಲ್ಲಿ ಪೂಜೆ ಸಲ್ಲಿಸುವ ಹಕ್ಕು ಕೋರಿ ಹಿಂದೂ ಭಕ್ತರು ಸಲ್ಲಿಸಿದ್ದ ಮೊಕದ್ದಮೆಯನ್ನು ವಜಾಗೊಳಿಸುವಂತೆ ಮಸೀದಿ ಸಮಿತಿಯ ಮನವಿಯನ್ನು ಜಿಲ್ಲಾ ನ್ಯಾಯಾಲಯ ನಿರಾಕರಿಸಿದ ನಂತರ ಮೊದಲ ಬಾರಿಗೆ ಇಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ. ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ಕಾಯಲು ಸುಪ್ರೀಂ ಕೋರ್ಟ್ ಈ ಹಿಂದೆ ಜುಲೈನಲ್ಲಿ ಪ್ರಕರಣವನ್ನು ಮುಂದೂಡಿತ್ತು.

ಇದನ್ನೂ ಓದಿ: Gyanvapi Case: ಜ್ಞಾನವಾಪಿ ಪ್ರಕರಣ; ಶಿವಲಿಂಗದ ಪೂಜೆ ಕುರಿತು ಇಂದು ವಾರಾಣಸಿ ಕೋರ್ಟ್​ನಿಂದ ಮಹತ್ವದ ತೀರ್ಪು

ವಾರಣಾಸಿಯ ಅಜ್ನುಮಾನ್ ಇಂತೇಜಾಮಿಯಾ ಮಸೀದಿಯ ನಿರ್ವಹಣಾ ಸಮಿತಿಯು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದು, ಸಲ್ಲಿಸಿದ ದಾವೆಯ ಆಧಾರದ ಮೇಲೆ ಮಸೀದಿಯ ಸಮೀಕ್ಷೆಗೆ ನಿರ್ದೇಶಿಸುವ ವಾರಾಣಸಿ ಸಿವಿಲ್ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿರುವುದನ್ನು ಪ್ರಶ್ನಿಸಿ ಕೆಲವು ಹಿಂದೂ ಭಕ್ತರು ಅರ್ಜಿ ಸಲ್ಲಿಸಿದ್ದರು.

ವಾರಾಣಸಿಯ ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗ, 2021ರ ಏಪ್ರಿಲ್ 18 ಮತ್ತು 2022ರ ಏಪ್ರಿಲ್ 5 ಮತ್ತು 8ರಂದು ಹೊರಡಿಸಿದ ಮೂರು ಆದೇಶಗಳನ್ನು ಮಸೀದಿ ಸಮಿತಿಯು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ, ಸ್ಥಳೀಯ ತಪಾಸಣೆ ಮತ್ತು ಪರಿಶೀಲನೆಗೆ ವಕೀಲ ಕಮಿಷನರ್‌ನ ಎಕ್ಸ್‌ಪಾರ್ಟೆ ನೇಮಕಕ್ಕೆ ಅನುಮತಿ ನೀಡಿತ್ತು.

ಮೇ 17ರಂದು ಸುಪ್ರೀಂ ಕೋರ್ಟ್ ವಾರಾಣಸಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ನಿರ್ದೇಶನ ನೀಡಿದ್ದು, ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದ ಒಳಗೆ ಶಿವಲಿಂಗ ಕಂಡುಬಂದಿದೆ ಎಂದು ಹೇಳಲಾಗಿತ್ತು. ಆದರೂ ಅಲ್ಲಿ ಮುಸ್ಲಿಮರಿಗೆ ನಮಾಜ್ ಮಾಡಲು ಅವಕಾಶ ನೀಡಿತ್ತು.

ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂಟೆಝಾಮಿಯಾ ಮಸೀದಿಯ ಆಡಳಿತ ಸಮಿತಿಯು ಸಲ್ಲಿಸಿದ ಮನವಿಯನ್ನು ಆಲಿಸಿದ ಉನ್ನತ ನ್ಯಾಯಾಲಯವು ಆದೇಶವನ್ನು ಅಂಗೀಕರಿಸಿತ್ತು. ಅಕ್ಟೋಬರ್‌ನಲ್ಲಿ ನಡೆದ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ವಾರಾಣಸಿ ನ್ಯಾಯಾಲಯವು ‘ಶಿವಲಿಂಗ’ದ ವೈಜ್ಞಾನಿಕ ತನಿಖೆಗೆ ಅನುಮತಿ ನೀಡಲು ನಿರಾಕರಿಸಿತ್ತು. ಹಿಂದೂ ಕಡೆಯವರು ಜ್ಞಾನವಾಪಿ ಮಸೀದಿಯ ವಝುಖಾನಾದಲ್ಲಿ ಕಂಡುಬಂದಿರುವ ಶಿವಲಿಂಗ ಎಂದು ಹೇಳಿಕೊಳ್ಳುವ ರಚನೆಯ ಕಾರ್ಬನ್ ಡೇಟಿಂಗ್​ಗೆ ಒತ್ತಾಯಿಸಿದ್ದರು.

ಆದರೆ, ಅಲ್ಲಿ ಸಿಕ್ಕಿರುವ ರಚನೆಯು ಶಿವಲಿಂಗವಲ್ಲ, ಅದೊಂದು ‘ಕಾರಂಜಿ’ ಎಂದು ಮುಸ್ಲಿಂ ಸಮುದಾಯದವರು ಹೇಳಿದ್ದರು. ನಂತರ ಹಿಂದೂ ಕಡೆಯವರು ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 22ರಂದು ಅರ್ಜಿಯನ್ನು ಸಲ್ಲಿಸಿದ್ದು, ಅವರು ‘ಶಿವಲಿಂಗ’ ಎಂದು ಹೇಳಿಕೊಳ್ಳುವ ವಸ್ತುವಿನ ಕಾರ್ಬನ್ ಡೇಟಿಂಗ್ ಅನ್ನು ಕೋರಿದ್ದರು.

ಇದನ್ನೂ ಓದಿ: Gyanvapi Mosque Case: ಜ್ಞಾನವಾಪಿ ಮಸೀದಿ ಪ್ರಕರಣ; ಸುಪ್ರೀಂ ಕೋರ್ಟ್​ನಲ್ಲಿ ನಾಳೆ ಮಹತ್ವದ ವಿಚಾರಣೆ

ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದ ಶಿವಲಿಂಗದ ವೈಜ್ಞಾನಿಕ ತನಿಖೆಗೆ ಅನುಮತಿ ನಿರಾಕರಿಸಿದ ವಾರಾಣಸಿ ನ್ಯಾಯಾಲಯದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನ ಮೊರೆ ಹೋಗುವುದಾಗಿ ಹಿಂದೂ ಸಮುದಾಯ ಹೇಳಿತ್ತು. ಕಾರ್ಬನ್ ಡೇಟಿಂಗ್ ಎನ್ನುವುದು ಪುರಾತತ್ತ್ವ ಶಾಸ್ತ್ರದ ವಸ್ತು ಅಥವಾ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ವಯಸ್ಸನ್ನು ಕಂಡುಹಿಡಿಯುವ ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಪ್ರಕರಣದ ಆದೇಶವನ್ನು ಕಾಯ್ದಿರಿಸಿತ್ತು. ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಸಂಬಂಧಿಸಿದ ಪ್ರಕರಣವನ್ನು ಸಿವಿಲ್ ನ್ಯಾಯಾಧೀಶರಿಂದ ವಾರಾಣಸಿಯ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಿ ಮೇ 20ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

ಮೇ 16ರಂದು ಜ್ಞಾನವಾಪಿ ಮಸೀದಿಯ ಆವರಣದಲ್ಲಿ ವಿಡಿಯೋ ಸಮೀಕ್ಷೆ ನಡೆಸಲಾಗಿತ್ತು. ಮುಸ್ಲಿಮರು ನಮಾಜ್​ಗೂ ಮೊದಲು ಬಳಸುತ್ತಿದ್ದ ಕೊಳದ ಬಳಿ ಶಿವಲಿಂಗದ ಆಕೃತಿ ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಆ ಆಕೃತಿಯನ್ನು ಕಾರ್ಬನ್ ಡೇಟಿಂಗ್​ಗೆ ಒಳಪಡಿಸಬೇಕೆಂದು ಹಿಂದೂ ಪರ ಅರ್ಜಿದಾರರು ಮನವಿ ಮಾಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ