Gyanvapi Case: ಜ್ಞಾನವಾಪಿ ಪ್ರಕರಣ; ಶಿವಲಿಂಗದ ಪೂಜೆ ಕುರಿತು ಇಂದು ವಾರಾಣಸಿ ಕೋರ್ಟ್ನಿಂದ ಮಹತ್ವದ ತೀರ್ಪು
ಈ ಹಿಂದೆ ಜ್ಞಾನವಾಪಿ ಸಂಕೀರ್ಣದಲ್ಲಿ ಪತ್ತೆಯಾದ ಶಿವಲಿಂಗದ ಆಯಸ್ಸನ್ನು ನಿರ್ಧರಿಸಲು ಕಾರ್ಬನ್ ಡೇಟಿಂಗ್ನಂತಹ ವೈಜ್ಞಾನಿಕ ತನಿಖೆ ನಡೆಸಬೇಕು ಎಂಬ ಹಿಂದೂ ಅರ್ಜಿದಾರರ ಬೇಡಿಕೆಯನ್ನು ವಾರಾಣಸಿ ನ್ಯಾಯಾಲಯ ತಿರಸ್ಕರಿಸಿತ್ತು.
ವಾರಾಣಸಿ: ಜ್ಞಾನವಾಪಿ ಮಸೀದಿಯ (Gyanvapi Masjid) ಆವರಣದಲ್ಲಿ ಪತ್ತೆಯಾದ ‘ಶಿವಲಿಂಗ’ದ ಆಕೃತಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಹಿಂದೂಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿರುವ ವಾರಾಣಸಿ ನ್ಯಾಯಾಲಯ (Varanasi Court) ಇಂದು ತೀರ್ಪು ನೀಡಲಿದೆ. ಈ ಹಿಂದೆ ಜ್ಞಾನವಾಪಿ ಸಂಕೀರ್ಣದಲ್ಲಿ ಪತ್ತೆಯಾದ ಶಿವಲಿಂಗದ ಆಯಸ್ಸನ್ನು ನಿರ್ಧರಿಸಲು ಕಾರ್ಬನ್ ಡೇಟಿಂಗ್ನಂತಹ ವೈಜ್ಞಾನಿಕ ತನಿಖೆ ನಡೆಸಬೇಕು ಎಂಬ ಹಿಂದೂ ಅರ್ಜಿದಾರರ ಬೇಡಿಕೆಯನ್ನು ವಾರಾಣಸಿ ನ್ಯಾಯಾಲಯ ತಿರಸ್ಕರಿಸಿತ್ತು.
ಸ್ವಯಂಭೂ ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರನ ಪ್ರಾರ್ಥನೆಗೆ ತಕ್ಷಣದ ಅನುಮತಿ, ಸಂಪೂರ್ಣ ಜ್ಞಾನವಾಪಿ ಸಂಕೀರ್ಣವನ್ನು ಹಿಂದೂಗಳಿಗೆ ಹಸ್ತಾಂತರಿಸುವುದು ಮತ್ತು ನಿಷೇಧಿಸುವುದು, ಜ್ಞಾನವಾಪಿ ಸಂಕೀರ್ಣದ ಆವರಣದೊಳಗೆ ಮುಸ್ಲಿಮರ ಪ್ರವೇಶ ಈ 3 ಪ್ರಮುಖ ಬೇಡಿಕೆಗಳ ಮೇಲೆ ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗದ ತ್ವರಿತ ನ್ಯಾಯಾಲಯವು ಇಂದು ತನ್ನ ತೀರ್ಪು ನೀಡಲಿದೆ.
ಪ್ರಸ್ತುತ ಮುಸ್ಲಿಮರಿಗೆ ಜ್ಞಾನವಾಪಿ ಮಸೀದಿಯೊಳಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಕ್ಟೋಬರ್‌ನಲ್ಲಿ ನಡೆದ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ವಾರಾಣಸಿ ನ್ಯಾಯಾಲಯವು ‘ಶಿವಲಿಂಗ’ದ ವೈಜ್ಞಾನಿಕ ತನಿಖೆಗೆ ಅನುಮತಿ ನೀಡಲು ನಿರಾಕರಿಸಿತ್ತು. ಹಿಂದೂ ಕಡೆಯವರು ಜ್ಞಾನವಾಪಿ ಮಸೀದಿಯ ವಝುಖಾನಾದಲ್ಲಿ ಕಂಡುಬಂದಿರುವ ಶಿವಲಿಂಗ ಎಂದು ಹೇಳಿಕೊಳ್ಳುವ ರಚನೆಯ ಕಾರ್ಬನ್ ಡೇಟಿಂಗ್ಗೆ ಒತ್ತಾಯಿಸಿದ್ದರು.
ಆದರೆ, ಅಲ್ಲಿ ಸಿಕ್ಕಿರುವ ರಚನೆಯು ಶಿವಲಿಂಗವಲ್ಲ, ಅದೊಂದು ‘ಕಾರಂಜಿ’ ಎಂದು ಮುಸ್ಲಿಂ ಸಮುದಾಯದವರು ಹೇಳಿದ್ದರು. ನಂತರ ಹಿಂದೂ ಕಡೆಯವರು ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 22ರಂದು ಅರ್ಜಿಯನ್ನು ಸಲ್ಲಿಸಿದ್ದು, ಅವರು ‘ಶಿವಲಿಂಗ’ ಎಂದು ಹೇಳಿಕೊಳ್ಳುವ ವಸ್ತುವಿನ ಕಾರ್ಬನ್ ಡೇಟಿಂಗ್ ಅನ್ನು ಕೋರಿದ್ದರು.
ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದ ಶಿವಲಿಂಗದ ವೈಜ್ಞಾನಿಕ ತನಿಖೆಗೆ ಅನುಮತಿ ನಿರಾಕರಿಸಿದ ವಾರಾಣಸಿ ನ್ಯಾಯಾಲಯದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನ ಮೊರೆ ಹೋಗುವುದಾಗಿ ಹಿಂದೂ ಸಮುದಾಯ ಹೇಳಿದೆ.
ಕಾರ್ಬನ್ ಡೇಟಿಂಗ್ ಎನ್ನುವುದು ಪುರಾತತ್ತ್ವ ಶಾಸ್ತ್ರದ ವಸ್ತು ಅಥವಾ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ವಯಸ್ಸನ್ನು ಕಂಡುಹಿಡಿಯುವ ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಪ್ರಕರಣದ ಆದೇಶವನ್ನು ಕಾಯ್ದಿರಿಸಿತ್ತು. ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಸಂಬಂಧಿಸಿದ ಪ್ರಕರಣವನ್ನು ಸಿವಿಲ್ ನ್ಯಾಯಾಧೀಶರಿಂದ ವಾರಾಣಸಿಯ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಿ ಮೇ 20ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ಮೇ 16ರಂದು ಜ್ಞಾನವಾಪಿ ಮಸೀದಿಯ ಆವರಣದಲ್ಲಿ ವಿಡಿಯೋ ಸಮೀಕ್ಷೆ ನಡೆಸಲಾಗಿತ್ತು. ಮುಸ್ಲಿಮರು ನಮಾಜ್ಗೂ ಮೊದಲು ಬಳಸುತ್ತಿದ್ದ ಕೊಳದ ಬಳಿ ಶಿವಲಿಂಗದ ಆಕೃತಿ ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಆ ಆಕೃತಿಯನ್ನು ಕಾರ್ಬನ್ ಡೇಟಿಂಗ್ಗೆ ಒಳಪಡಿಸಬೇಕೆಂದು ಹಿಂದೂ ಪರ ಅರ್ಜಿದಾರರು ಮನವಿ ಮಾಡಿದ್ದರು.
ಕೋರ್ಟ್ನಲ್ಲಿ ಮುಸ್ಲಿಂ ಪರ ವಾದ ಮಂಡಿಸಿದ ವಕೀಲ ಮುಮ್ತಾಜ್ ಅಹ್ಮದ್, ‘ಯಾವುದೇ ವಸ್ತುವಿನ ಕಾರ್ಬನ್ ಡೇಟಿಂಗ್ ಪ್ರಕ್ರಿಯೆಯ ವೇಳೆ ಆ ವಸ್ತು ಹಾನಿಗೊಳಗಾದರೆ ಅದು ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿದಂತೆ ಆಗುತ್ತದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಆ ಆಕೃತಿಯನ್ನು ಸುರಕ್ಷಿತವಾಗಿಡಲು ಈ ಹಿಂದೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಹಾಗಾಗಿ, ಅದನ್ನು ಅಧ್ಯಯನಕ್ಕೆ ಒಳಪಡಿಸುವುದು ಸರಿಯಲ್ಲ’ ಎಂದು ಹೇಳಿದ್ದರು. ಇದರ ಮೂಲ ಪ್ರಕರಣವು ಶೃಂಗಾರ್ ಗೌರಿಯ ಪೂಜೆಗೆ ಸಂಬಂಧಿಸಿದ್ದು ಆದರೆ ಮಸೀದಿಯಲ್ಲಿನ ರಚನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮುಸ್ಲಿಂ ಪರ ವಕೀಲರು ವಾದಿಸಿದ್ದರು.
ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿದೆ. ವಾರಣಾಸಿ ನ್ಯಾಯಾಲಯದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಕೆಡವಲ್ಪಟ್ಟ ಹಿಂದೂ ರಚನೆಯ ಒಂದು ಭಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ಆರೋಪವನ್ನು ಮತ್ತೆ ಚರ್ಚೆಗೆ ಎತ್ತಿಕೊಳ್ಳಲಾಗಿದೆ. ‘ಶಿವಲಿಂಗ’ ಎಂದು ಕರೆಯಲ್ಪಡುವ ವಸ್ತುವು ವಾಸ್ತವವಾಗಿ ಕಾರಂಜಿಯಾಗಿತ್ತು ಎಂದು ಮಸೀದಿ ಸಮಿತಿ ಹೇಳಿತ್ತು.