Tamil Nadu Rain: ಮಳೆಯಿಂದ ಚೆನ್ನೈ ಸೇರಿದಂತೆ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್; ತಮಿಳುನಾಡಿನ ತಿರುವಳ್ಳೂರು, ಕಾಂಚೀಪುರಂನಲ್ಲಿ ಶಾಲೆಗಳಿಗೆ ರಜೆ ಘೋಷಣೆ
Rain Updates: ಚೆನ್ನೈ, ತಿರುವಳ್ಳೂರ್ ಮತ್ತು ಕಾಂಚೀಪುರಂ ಸೇರಿದಂತೆ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ನವೆಂಬರ್ 13ರವರೆಗೆ ತಮಿಳುನಾಡಿನಲ್ಲಿ ಭಾರೀ ಮಳೆಯಾಗಲಿದೆ
ಚೆನ್ನೈ: ತಮಿಳುನಾಡಿನ (Tamil Nadu Rains) ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತಿರುವಳ್ಳೂರು ಮತ್ತು ಕಾಂಚೀಪುರಂ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಇಂದು (ನವೆಂಬರ್ 11) ರಜೆ ಘೋಷಿಸಲಾಗಿದೆ. ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರವು ಚೆನ್ನೈ (Chennai Rain), ತಿರುವಳ್ಳೂರ್ ಮತ್ತು ಕಾಂಚೀಪುರಂ ಸೇರಿದಂತೆ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ (Red Alert) ಘೋಷಿಸಿದೆ. ನವೆಂಬರ್ 13ರವರೆಗೆ ತಮಿಳುನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಮುಂದಿನ ಕೆಲವು ದಿನಗಳಲ್ಲಿ ಚೆನ್ನೈ ಮತ್ತು ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದೆ. ಹೀಗಾಗಿ, ತಿರುವಳ್ಳೂರು ಶಾಲೆಗಳಿಗೆ ರಜೆ ನೀಡಲಾಗಿದೆ. ನೈಋತ್ಯ ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದಲ್ಲಿ ಚಂಡಮಾರುತದ ಪರಿಚಲನೆಯಿಂದ ಭಾರೀ ಮಳೆ ಉಂಟಾಗಲಿದೆ ಎಂದು IMD ಸೂಚನೆ ನೀಡಿದೆ.
ಈ ತಿಂಗಳಲ್ಲಿ ಇದು ಎರಡನೇ ಬಾರಿಗೆ ತಮಿಳುನಾಡಿನಲ್ಲಿ ಮಳೆಯಿಂದಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ನವೆಂಬರ್ 2ರಂದು ಚೆನ್ನೈ, ರಾಣಿಪೇಟ್, ತಿರುವಳ್ಳೂರು, ವೆಲ್ಲೂರು, ಕಾಂಚೀಪುರಂ, ವಿಲ್ಲುಪುರಂ, ತಿರುವಣ್ಣಾಮಲೈ ಮತ್ತು ಚೆಂಗಲ್ಪಟ್ಟು ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಶಾಲೆಗಳನ್ನು ಮುಚ್ಚಲಾಗಿತ್ತು.
ಇದನ್ನೂ ಓದಿ: Karnataka Rain: ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇಂದು ಮಿಂಚು ಸಹಿತ ಮಳೆ; ಬೆಂಗಳೂರು ಸೇರಿ ಹಲವೆಡೆ ಹಳದಿ ಅಲರ್ಟ್ ಘೋಷಣೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ನವೆಂಬರ್ 13ರವರೆಗೆ ಭಾರಿ ಮಳೆ ಮುಂದುವರಿಯಲಿದ್ದು, ನ. 14ರ ವೇಳೆಗೆ ಕಡಿಮೆಯಾಗುವ ಸಾಧ್ಯತೆ ಇದೆ.
Based on the rain forecast for tomorrow, holiday declared for all the schools and colleges in Tiruvallur district for tomorrow. #Tiruvallur pic.twitter.com/PGfP5DmVDf
— Collector, Tiruvallur (@TiruvallurCollr) November 10, 2022
ಇಂದು ತಿರುವಳ್ಳೂರು, ಕಾಂಚೀಪುರಂ ಮತ್ತು ರಾಣಿಪೇಟ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ಮುಂದುವರಿದಿರುವುದರಿಂದ ಚೆನ್ನೈ, ಚೆಂಗಲ್ಪಟ್ಟು, ವಿಲ್ಲುಪುರಂ, ಕಲ್ಲಾಕುರಿಚಿ ಮತ್ತು ಡೆಲ್ಟಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.
ತಮಿಳುನಾಡು ಮಾತ್ರವಲ್ಲದೆ ಇಂದು ದಕ್ಷಿಣ ಭಾರತದ ಬೇರೆ ರಾಜ್ಯಗಳಲ್ಲೂ ಮಳೆ ಹೆಚ್ಚಾಗಲಿದೆ. ತಮಿಳುನಾಡು, ಪುದುಚೇರಿ, ಕೇರಳ, ಆಂಧ್ರಪ್ರದೇಶ ಮತ್ತು ರಾಯಲಸೀಮಾದಲ್ಲಿ ಇಂದಿನಿಂದ ನವೆಂಬರ್ 13ರವರೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ವ್ಯಾಪಕ ಮಳೆ ಮತ್ತು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆಂಧ್ರಪ್ರದೇಶದ ಅಂಡಮಾನ್ ಮತ್ತು ನಿಕೋಬಾರ್, ಕೇರಳ, ಮಾಹೆ ಮತ್ತು ಲಕ್ಷದ್ವೀಪಗಳಲ್ಲಿ ಗುಡುಗು ಸಹಿತ ಚದುರಿದ ಮಳೆ ಸಾಧ್ಯತೆಯಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಉಪ-ಹಿಮಾಲಯ ಪಶ್ಚಿಮ ಬಂಗಾಳ, ಸಿಕ್ಕಿಂನಲ್ಲೂ ಭಾರೀ ಮಳೆಯಾಗಲಿದೆ.