ಪಂಜಾಬ್ ಕಾಂಗ್ರೆಸ್ (Punjab Congress) ವಲಯದಲ್ಲಿ ಗೊಂದಲಗಳಿಗೆ ಕೊನೆಯಿಲ್ಲದಂತಾಗಿದೆ. ಈಗಾಗಲೇ ಮುಖ್ಯಮಂತ್ರಿ ಬದಲಾವಣೆ ಆಯ್ತು. ಅದರ ಬೆನ್ನಲ್ಲೇ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ, ಅವರು ಅಧ್ಯಕ್ಷಸ್ಥಾನದಲ್ಲೇ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗ ಅಲ್ಲಿ ಇನ್ನೊಂದು ಮುಖ್ಯ ಬೆಳವಣಿಗೆಯಾಗುವ ಸಾಧ್ಯತೆ ಇದೆ. ಪಂಜಾಬ್ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿ ಹರೀಶ್ ರಾವತ್ (Harish Rawat) ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಈ ಹುದ್ದೆಗೆ ಹರೀಶ್ ಚೌಧರಿ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
2014ರಿಂದ 2017ರವರೆಗೆ ಉತ್ತರಾಖಂಡ್ ಮುಖ್ಯಮಂತ್ರಿಯಾಗಿದ್ದ ಹರೀಶ್ ರಾವತ್ರನ್ನು ಪಂಜಾಬ್ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಈಗ ಹರೀಶ್ ರಾವತ್ರನ್ನು ಆ ಸ್ಥಾನದಿಂದ ಕೆಳಗೆ ಇಳಿಸಿ, ಅಲ್ಲಿಗೆ ರಾಹುಲ್ ಗಾಂಧಿ ಆಪ್ತ, ರಾಜಸ್ಥಾನದ ಕಂದಾಯ ಸಚಿವ ಹರೀಶ್ ಚೌಧರಿಯನ್ನು ನೇಮಕ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಬಲ್ಲಮೂಲಗಳಿಂದ ಗೊತ್ತಾಗಿದೆ.
ಪಂಜಾಬ್ ಕಾಂಗ್ರೆಸ್ನಲ್ಲಿ ಗೊಂದಲಗಳು ಹೆಚ್ಚಾಗಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಈ ಹರೀಶ್ ಚೌಧರಿಯನ್ನು ಹೈಕಮಾಂಡ್ನಿಂದ ವೀಕ್ಷಕನನ್ನಾಗಿ ಕಳಿಸಲಾಗಿತ್ತು. ಇನ್ನು ಇದೀಗ ಹೊಸದಾಗಿ ಮುಖ್ಯಮಂತ್ರಿಯಾಗಿರುವ ಚರಣಜಿತ್ ಸಿಂಗ್ ಛನ್ನಿ ಮತ್ತು ನವಜೋತ್ ಸಿಂಗ್ ಸಿಧು ಮಧ್ಯೆಯೂ ಕೆಲವು ಭಿನ್ನಾಭಿಪ್ರಾಯಗಳು ಎದ್ದಿದ್ದು, ಇವರಿಬ್ಬರ ನಡುವೆ ಹರೀಶ್ ಚೌಧರಿ ಮಧ್ಯಸ್ಥಿಕೆ ವಹಿಸಿ, ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಪಕ್ಷ ನನಗೆ ಯಾವುದೇ ಹೊಸ ಜವಾಬ್ದಾರಿ ಕೊಟ್ಟರೂ ನಿರ್ವಹಿಸಲು ಸಿದ್ಧನಿದ್ದೇನೆ ಎಂದೂ ತಿಳಿಸಿದ್ದಾರೆ.
ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ಕೇಳಿದ್ದ ಹರೀಶ್ ರಾವತ್
ಇನ್ನು ಹರೀಶ್ ರಾವತ್ ಕೂಡ ತಮ್ಮನ್ನು ಪಂಜಾಬ್ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿ ಸ್ಥಾನದಿಂದ ಮುಕ್ತಗೊಳಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಬಳಿ ಕೇಳಿಕೊಂಡಿದ್ದರು ಎಂದು ಹೇಳಲಾಗಿದೆ. ಮುಂದಿನ ವರ್ಷ ಉತ್ತರಾಖಂಡ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪಂಜಾಬ್ ಜವಾಬ್ದಾರಿಯಿಂದ ಮುಕ್ತನಾದರೆ ಅಲ್ಲಿ ಸಂಪೂರ್ಣ ಗಮನಹರಿಸಬಹುದು ಎಂದೂ ಹೇಳಿದ್ದಾರೆ ಎನ್ನಲಾಗಿದೆ.
ಅಮರಿಂದರ್ ಮತ್ತು ರಾವತ್ ನಡುವೆ ಮಾತಿನ ಸಮರ
ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಕ್ಯಾ.ಅಮರಿಂದರ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಾಗ, ತಮಗೆ ಕಾಂಗ್ರೆಸ್ನಿಂದ ತುಂಬ ಅವಮಾನ ಆಗಿದೆ ಎಂದು ಹೇಳಿದ್ದಾರೆ. ಆದರೆ ಅದಕ್ಕೆ ಹರೀಶ್ ರಾವತ್ ತಿರುಗೇಟು ನೀಡಿದ್ದರು. ಕಾಂಗ್ರೆಸ್ನಿಂದ ಅಮರಿಂದರ್ ಸಿಂಗ್ಗೆ ಯಾವುದೇ ಅವಮಾನ ಆಗಿಲ್ಲ. ಅವರು ಮಹತ್ವದ ವಿಷಯಗಳಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. ಪಂಜಾಬ್ನ ಹಲವು ಕಾಂಗ್ರೆಸ್ ನಾಯಕರು ಕ್ಯಾಪ್ಟನ್ ಅಮರಿಂದರ್ ಬಗ್ಗೆ ಅಸಮಾಧಾನ, ಅತೃಪ್ತಿ ಹೊರಹಾಕಿದ್ದಾರೆ. ಅವರನ್ನು ಬದಲಿಸುವಂತೆ ಆಗ್ರಹಿಸಿದ್ದಾರೆ. ಹಾಗಾಗಿಯೇ ಹೈಕಮಾಂಡ್ ಕೂಡ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಿಕೆ ನೀಡಿದ್ದರು. ಹರೀಶ್ ರಾವತ್ ಮಾತಿನಿಂದ ಸಿಟ್ಟಾದ ಅಮರಿಂದರ್ ಸಿಂಗ್, ಪಕ್ಷದ ಹಿರಿಯ ನಾಯಕರೂ ನನ್ನ ವಿರುದ್ಧ ಅಸಮಾಧಾನ ಹೊಂದಿದ್ದರು ಎಂದು ಈಗ ಹರೀಶ್ ರಾವತ್ ಹೇಳುತ್ತಿದ್ದಾರೆ. ಅಂದ ಮೇಲೆ ಯಾಕೆ ನನ್ನನ್ನು ಇಷ್ಟು ದಿನ ಸಿಎಂ ಹುದ್ದೆಯಲ್ಲಿ ಮುಂದುವರಿಸಿದರು? ನನ್ನನ್ನೇಕೆ ಕತ್ತಲಲ್ಲಿ ಇಟ್ಟರು ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್; ಧನ್ಯಾ ರಾಮ್ಕುಮಾರ್-ಸೂರಜ್ಗೆ ತಲೈವಾ ಬೆಂಬಲ