Haryana Crisis: ಜೆಜೆಪಿಯ ಹಲವು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ; ಮನೋಹರ್ ಲಾಲ್ ಖಟ್ಟರ್

|

Updated on: May 09, 2024 | 10:05 PM

ಹರಿಯಾಣದ ಬಿಜೆಪಿ ಸರ್ಕಾರದಲ್ಲಿ ಬಹುಮತವಿಲ್ಲದ ಕಾರಣ ಪತನವಾಗುವ ಆತಂಕದಲ್ಲಿದೆ. ಈ ನಡುವೆ ಜೆಜೆಪಿಯ ಹಲವು ಶಾಸಕರು ನಮ್ಮ ಸಂಪರ್ಕದಲ್ಲಿರುವುದರಿಂದ ನಮ್ಮ ಸರ್ಕಾರಕ್ಕೆ ಅಪಾಯವಿಲ್ಲ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ಮನೋಹರ್ ಲಾಲ್ ಕಟ್ಟರ್ ಹೇಳಿದ್ದಾರೆ.

Haryana Crisis: ಜೆಜೆಪಿಯ ಹಲವು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ; ಮನೋಹರ್ ಲಾಲ್ ಖಟ್ಟರ್
ಮನೋಹರ್ ಲಾಲ್ ಕಟ್ಟರ್
Follow us on

ನವದೆಹಲಿ: ಹರಿಯಾಣ ಸರ್ಕಾರಕ್ಕೆ (Haryana Government) ನೀಡಿದ್ದ ಬೆಂಬಲವನ್ನು ಮೂವರು ಪಕ್ಷೇತರ ಶಾಸಕರು ಹಿಂಪಡೆದ ಬಳಿಕ ಅಲ್ಲಿನ ಸೈನಿ ನೇತೃತ್ವದ ಬಿಜೆಪಿ (BJP) ಸರ್ಕಾರಕ್ಕೆ ಪತನದ ಭೀತಿ ಶುರುವಾಗಿದೆ. ಇನ್ನೊಂದೆಡೆ, ಒಂದುವೇಳೆ ಅವಿಶ್ವಾಸ ನಿರ್ಣಯ ಮಂಡಿಸಿದರೆ ಬಿಜೆಪಿ ಸರ್ಕಾರದ ಪರವಾಗಿ ತಾವು ಮತ ಚಲಾಯಿಸುವುದಿಲ್ಲ ಎಂದು ಜೆಜೆಪಿ ನಾಯಕರು ಘೋಷಿಸಿದ್ದಾರೆ. ಆದರೆ, ಇದೀಗ ಅನೇಕ ಜೆಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ಘೋಷಿಸಿಕೊಂಡಿದೆ.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಮೂವರು ಸ್ವತಂತ್ರ ಶಾಸಕರು ರಾಜೀನಾಮೆ ನೀಡಿದ ನಂತರ, ಬಿಜೆಪಿ ಈಗ 88 ಶಾಸಕರ ಪೈಕಿ 40 ಶಾಸಕರನ್ನು ಮಾತ್ರ ಹೊಂದಿದೆ. ಹೀಗಾಗಿ, ಬಿಜೆಪಿಗೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದಂತಾಗಿದೆ. ಆದರೆ, ಜನನಾಯಕ ಜನತಾ ಪಕ್ಷದ (ಜೆಜೆಪಿ) ಹಲವಾರು ಶಾಸಕರು ಕೇಸರಿ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ರಾಜ್ಯ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಇಂದು ಹೇಳಿದ್ದಾರೆ.

ಇದನ್ನೂ ಓದಿ: ಹರಿಯಾಣ ಸರ್ಕಾರಕ್ಕೆ ಕೈ ಕೊಟ್ಟು ಕಾಂಗ್ರೆಸ್​ಗೆ ಬೆಂಬಲ ನೀಡಿದ ಮೂವರು ಸ್ವತಂತ್ರ ಶಾಸಕರು

ಈ ಹಿಂದೆ ಬಿಜೆಪಿ ಸರ್ಕಾರವನ್ನು ಬೆಂಬಲಿಸುತ್ತಿದ್ದ ಮೂವರು ಸ್ವತಂತ್ರ ಅಭ್ಯರ್ಥಿಗಳು ತಮ್ಮ ಬೆಂಬಲವನ್ನು ಹಿಂಪಡೆದು ‘ಕಾಂಗ್ರೆಸ್​ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಇದರಿಂದ ಬಿಜೆಪಿಗೆ ತಲೆನೋವು ಎದುರಾಗಿತ್ತು.

ಇದೀಗ ವರದಿಗಳ ಪ್ರಕಾರ, ಕೆಲವು ಜೆಜೆಪಿ ಶಾಸಕರು ಸಹ ಮಾಜಿ ಮುಖ್ಯಮಂತ್ರಿ ಮನೋಹರ್ ಕಟ್ಟರ್ ಅವರನ್ನು ಭೇಟಿ ಮಾಡಿದ್ದಾರೆ. ಇಂದು ಮುಂಜಾನೆ, ಜೆಜೆಪಿ ನಾಯಕ ಮತ್ತು ಹರಿಯಾಣದ ಮಾಜಿ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಅವರು ಬಿಜೆಪಿ ಸರ್ಕಾರಕ್ಕೆ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಮೂರು ಸ್ವತಂತ್ರ ಶಾಸಕರು ವಿಶ್ವಾಸಮತ ಪರೀಕ್ಷೆಗೆ ಆದೇಶಿಸುವಂತೆ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಕೇಳಿದ್ದರು. ಆದರೆ ಕಾಂಗ್ರೆಸ್ ನೈತಿಕ ಆಧಾರದ ಮೇಲೆ ಬಿಜೆಪಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿತ್ತು.

ಇದನ್ನೂ ಓದಿ: Haryana Politics: ಹರಿಯಾಣ ರಾಜಕೀಯ ಬಿಕ್ಕಟ್ಟು; ಬಿಜೆಪಿ ಸರ್ಕಾರದ ವಿರುದ್ಧ ಮತ ಚಲಾಯಿಸಲು ಜೆಜೆಪಿ ನಿರ್ಧಾರ

ಚೌತಾಲಾ ಅವರು ರಾಜ್ಯಪಾಲರಿಗೆ ಪತ್ರ ಬರೆದು, ನಯಾಬ್ ಸಿಂಗ್ ಸೈನಿ ಸರ್ಕಾರವು ಬಹುಮತವನ್ನು ಹೊಂದದ ಕಾರಣ 174ನೇ ವಿಧಿಯ ಅಡಿಯಲ್ಲಿ ಅವರ ಮಧ್ಯಸ್ಥಿಕೆಯನ್ನು ಕಾಂಗ್ರೆಸ್ ಕೋರಿತ್ತು.

ಎರಡು ದಿನಗಳ ಹಿಂದೆ ಸ್ವತಂತ್ರ ಶಾಸಕರಾದ ಸೋಂಬಿರ್ ಸಾಂಗ್ವಾನ್ (ದಾದ್ರಿ), ರಣಧೀರ್ ಸಿಂಗ್ ಗೊಲ್ಲೆನ್ (ಪುಂಡ್ರಿ) ಮತ್ತು ಧರಂಪಾಲ್ ಗೊಂಡರ್ (ನಿಲೋಖೇರಿ) ಬಿಜೆಪಿ ಸರ್ಕಾರಕ್ಕೆ ಬೆಂಬಲವನ್ನು ಹಿಂಪಡೆದು ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ಆದರೆ, ತಮ್ಮ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿ ಸೈನಿ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:05 pm, Thu, 9 May 24