ಜಾಮ್ನಗರ್, ನವೆಂಬರ್ 7: ಕೇರಳದಲ್ಲಿ 130 ಕಿಲೋ ತೂಕದ ಮರಿಯಾನೆಯೊಂದು ನಡೆಯಲೂ ಆಗದೆ, ಏಳಲೂ ಆಗದೇ ಮಲಗಿರುವ ದೃಶ್ಯ ಇಡೀ ದೇಶದ ಗಮನ ಸೆಳೆದಿದೆ. ಮೂಳೆ ಸಂಪೂರ್ಣ ದುರ್ಬಲಗೊಂಡ ಪರಿಣಾಮ ಈ ಪರಿಸ್ಥಿತಿ ಅನುಭವಿಸುತ್ತಿರುವ ಮಾಯಾ ಹೆಸರಿನ ಈ ಆನೆಮರಿಯನ್ನು ಕೇರಳದಿಂದ ಗುಜರಾತ್ನ ವಂತಾರಗೆ ಸ್ಥಳಾಂತರ ಮಾಡಲಾಗಿದೆ. ಜಾಮ್ನಗರ್ನಲ್ಲಿರುವ ವಂತಾರ ವನ್ಯಜೀವಿಧಾಮವು ಕಾಡುಪ್ರಾಣಿಗಳ ರಕ್ಷಣೆ ಮತ್ತು ಚಿಕಿತ್ಸೆಗೆ ಹೆಸರುವಾಸಿಯಾಗಿದೆ. ಇಲ್ಲಿ ಮಾಯಾಳಿಗೆ ಚಿಕಿತ್ಸೆ ನೀಡಿದ ಬಳಿಕ ವಾಪಸ್ ಕೇರಳಕ್ಕೆ ಕಳುಹಿಸಲಾಗುತ್ತದೆ.
2025ರ ಏಪ್ರಿಲ್ 19 ರಂದು ಕೇರಳದ ಮಲೆಯತ್ತೂರು ವಿಭಾಗದ ಕಪ್ರಿಕ್ಕಾಡ್ ಬಳಿ ಆನೆಯ ಹಿಂಡೊಂದು ನದಿ ದಾಟುವಾಗ ನವಜಾತ ಆನೆ ಮರಿಯೊಂದನ್ನು ಬಿಟ್ಟು ಹೋಯಿತು. ಅರಣ್ಯ ಸಿಬ್ಬಂದಿ ಬಹಳ ಹೊತ್ತು ಕಾದರೂ ಯಾವುದೇ ಆನೆ ಆ ಮರಿಯತ್ತ ಬರಲಿಲ್ಲ. ತಾಯಿಯಾನೆಯೂ ಬರಲಿಲ್ಲ. ಅತ್ಯಂತ ನಿರ್ಜಲೀಕರಣಗೊಂಡಿದ್ದ ಆ ಮರಿಯನ್ನು ರಕ್ಷಿಸಿ ‘ಅಭಯಾರಣ್ಯ’ಕ್ಕೆ ಕರೆತರಲಾಯಿತು.
ಕೇರಳದ ಪಶುವೈದ್ಯ ಡಾ. ಬಿನೋಯ್ ಸಿ. ಬಾಬು ಮತ್ತು ಆರೈಕೆದಾರ ನಿಖಿಲ್ ಬಾಬು ಸೇರಿದಂತೆ ಅರಣ್ಯ ಸಿಬ್ಬಂದಿ ಕಳೆದ 18 ತಿಂಗಳಿಂದ ಹಗಲು-ರಾತ್ರಿ ಎನ್ನದೆ ಆ ಮರಿಯನ್ನು ತಮ್ಮ ಕೈಯಿಂದಲೇ ಹಾಲುಣಿಸಿ ಬೆಳೆಸಿದ್ದರು.
ಇದನ್ನೂ ಓದಿ: ಜೀವನ್ಮರಣ ಹೋರಾಟದಲ್ಲಿ ಕೇರಳದ ‘ಮಾಯಾ’; ವಿಶೇಷ ಚಿಕಿತ್ಸೆಗೆ ಗುಜರಾತ್ನ ವಂತಾರಾಗೆ ಆನೆಮರಿ ಸ್ಥಳಾಂತರ
2026ರ ಜುಲೈನಲ್ಲಿ ಆಟವಾಡುವಾಗ ಬಿದ್ದಿದ್ದರಿಂದ ಮಾಯಾಳ ಭುಜಕ್ಕೆ ಗಾಯವಾಗಿತ್ತು. ಇದು ಸಣ್ಣ ಗಾಯವೆಂದು ಮೇಲ್ನೋಟಕ್ಕೆ ಭಾಸವಾದರೂ ಕ್ರಮೇಣವಾಗಿ ಈ ಆನೆಮರಿಯ ಆರೋಗ್ಯದಲ್ಲಿ ಏರುಪೇರಾಗತೊಡಗಿತು. ಆಕೆಯ ಮೂಳೆಗಳು ಅತ್ಯಂತ ದುರ್ಬಲಗೊಂಡವು. ಅಕ್ಟೋಬರ್ ತಿಂಗಳಷ್ಟರಲ್ಲಿ ಆಕೆಯ ಕಾಲುಗಳಿಗೆ ಫ್ರಾಕ್ಚರ್ ಆಯಿತು. ಮರಿಗೆ ನಿಲ್ಲಲೂ ಸಾಧ್ಯವಾಗದ ಸ್ಥಿತಿ ಬಂತು. ಕೇವಲ ದ್ರವ ಆಹಾರದ ಮೇಲೆ ಬದುಕುವಂತಾಯಿತು.
ಮರಿಯ ಸ್ಥಿತಿ ಗಂಭೀರವಾಗಿದ್ದರಿಂದ ಮತ್ತು ಹೆಚ್ಚಿನ ಯಾತನೆ ತಪ್ಪಿಸಲು ಅಕ್ಟೋಬರ್ 29 ರಂದು ವೈದ್ಯಕೀಯ ಮಂಡಳಿಯು ದಯಾಮರಣವನ್ನು (Euthanasia) ಶಿಫಾರಸು ಮಾಡಿತ್ತು.
ದಯಾಮರಣದ ನಿರ್ಧಾರ ಕೈಗೊಳ್ಳುವ ಮುನ್ನ, ಕೇರಳದ ಮುಖ್ಯ ವನ್ಯಜೀವಿ ವಾರ್ಡನ್ ಡಾ. ಪಿ. ಪುಗಳೇಂದಿ ಅವರು ಮತ್ತೊಬ್ಬರ ತಜ್ಞರ ಸಲಹೆ ಕೋರಿದರು. ಅಸ್ಸಾಂನ ಖ್ಯಾತ ಆನೆ ತಜ್ಞ ಡಾ. ಕುಶಲ್ ಕೊನ್ವಾರ್ ಶರ್ಮಾ ಅವರು ಇದು ಪ್ಯಾರಾಥಾಯ್ಡ್ಗೆ ಸಂಬಂಧಿಸಿದ ಸಮಸ್ಯೆಯಾಗಿರಬಹುದು ಎಂದು ತಿಳಿಸಿ, ವಂತಾರಾದಲ್ಲಿ ಚಿಕಿತ್ಸೆ ಕೊಡಿಸಲು ಶಿಫಾರಸು ಮಾಡಿದರು.
ಇದನ್ನೂ ಓದಿ: ಮೋದಿ ಅವರ ಈ ಬಾರಿಯ ದೀಪಾವಳಿಗೆ ಮತ್ತಷ್ಟು ಮೆರುಗು ತಂದವರು ಯಾರು ಗೊತ್ತೇ? ಇಲ್ಲಿದೆ ನೋಡಿ ವಿಡಿಯೋ
ಇದರಂತೆ, ಅನಂತ್ ಅಂಬಾನಿ ಅವರ ‘ವಂತಾರಾ’ (Vantara) ಸಂಸ್ಥೆಯು ಮರಿಯನ್ನು ಜಾಮ್ಗರಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಿತು.
ನವೆಂಬರ್ 6 ರಂದು ಜೀವ ರಕ್ಷಕ ಉಪಕರಣಗಳು ಮತ್ತು ಪಶುವೈದ್ಯರ ವಿಶೇಷ ತಂಡದೊಂದಿಗೆ ಮಾಯಾಳನ್ನು ವಿಶೇಷ ವಿಮಾನದಲ್ಲಿ (Airlift) ಗುಜರಾತ್ನ ಜಾಮ್ನಗರದಲ್ಲಿರುವ ವಂತಾರಾ ಆಸ್ಪತ್ರೆಗೆ ಸುರಕ್ಷಿತವಾಗಿ ಕರೆತರಲಾಯಿತು. ಮರಿಗೆ ಚಿಕಿತ್ಸೆ ಮುಗಿದ ಬಳಿಕ ಆಕೆಯನ್ನು ಮರಳಿ ಕೇರಳದ ಅಭಯಾರಣ್ಯಕ್ಕೆ ಕಳುಹಿಸಿಕೊಡಲಾಗುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ