ದಕ್ಷಿಣ ಭಾರತದಲ್ಲಿ ಮುಂದಿನ ಮೂರು ದಿನಗಳ ಕಾಲ ವಿಪರೀತ ಮಳೆ: ಹವಾಮಾನ ಇಲಾಖೆ ವರದಿ
Cyclone Shaheen: ತಮಿಳುನಾಡಿನ ಕೊಯಂಬತ್ತೂರ್, ಸೇಲಂ, ಧರ್ಮಪುರಿ, ಪೇರಂಬೂರ್ ಸೇರಿ ದಕ್ಷಿಣದ ಹಲವು ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಅತ್ಯಂತ ಹೆಚ್ಚು ಮಳೆ ಬೀಳುವ ನಿರೀಕ್ಷೆ ಇದೆ.
ದಕ್ಷಿಣ ಭಾರತದ ಹಲವು ಕಡೆ ಮುಂದಿನ ಮೂರು ದಿನಗಳ ಕಾಲ ಸಿಕ್ಕಾಪಟೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಶಾಹೀನ್ ಚಂಡಮಾರುತ ಒಮಾನ್ ಕಡೆಗೆ ಸ್ಥಿರವಾಗಿ ಚಲಿಸುತ್ತಿರುವ ಕಾರಣ, ತಮಿಳುನಾಡು, ಕೇರಳ, ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ ವಿಪರೀತ ಮಳೆಯಾಗಲಿದೆ ಎಂದು ಐಎಂಡಿ ತನ್ನ ಹೊಸ ಬುಲೆಟಿನ್ನಲ್ಲಿ ಹೇಳಿದೆ. ಮಹಾರಾಷ್ಟ್ರ ಮತ್ತು ಗೋವಾವನ್ನೊಳಗೊಂಡ ಕೊಂಕಣ ತೀರದ ಪ್ರದೇಶಗಳಲ್ಲೂ ಸಹ ಅಕ್ಟೋಬರ್ 3ರಿಂದ 6ರವರೆಗೆ ತೀವ್ರ ಮಳೆಯಾಗಲಿದೆ.
ಕೇರಳದ ಬೆಟ್ಟ ಪ್ರದೇಶಗಳಲ್ಲಿ ಭೂಕುಸಿತ ಕೇರಳದಲ್ಲಿ ಮಂಗಳವಾರದವರೆಗೆ ಸಿಕ್ಕಾಪಟೆ ಮಳೆಯಾಗಲಿದೆ ಎಂದು ಹೇಳಿರುವ ಕೇಂದ್ರ ಹವಾಮಾನ ಇಲಾಖೆ, ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ವಯಾನಾಡ್ ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್ ಘೋಷಣೆ ಮಾಡಿದೆ. ಕೇರಳದ ಉತ್ತರ ಭಾಗಗಳಲ್ಲಿ ವಿಪರೀತ ಮಳೆಯಿಂದ ಈಗಾಗಲೇ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹಾಗೇ ಕೋಯಿಕ್ಕೋಡ್-ವಯಾನಾಡ್ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಅದರೊಂದಿಗೆ ಕಾಸರಗೋಡಿನ ಬೆಟ್ಟಗಳಲ್ಲಿ ಭೂಕುಸಿತವೂ ಉಂಟಾಗಿದೆ.
ದಕ್ಷಿಣ ತಮಿಳುನಾಡಿನಲ್ಲಿ ಗುಡುಗು ಸಹಿತ ಮಳೆ ತಮಿಳುನಾಡಿನ ಕೊಯಂಬತ್ತೂರ್, ಸೇಲಂ, ಧರ್ಮಪುರಿ, ಪೇರಂಬೂರ್ ಸೇರಿ ದಕ್ಷಿಣದ ಹಲವು ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಅತ್ಯಂತ ಹೆಚ್ಚು ಮಳೆ ಬೀಳುವ ನಿರೀಕ್ಷೆ ಇದೆ ಎಂದು ಚೆನ್ನೈನ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ. ತಮಿಳುನಾಡಿನ ಉತ್ತರ ಒಳನಾಡು ಮತ್ತು ಕರಾವಳಿ ತೀರಗಳಲ್ಲಿ ನಾಳೆ (ಅಕ್ಟೋಬರ್4) ಹೆಚ್ಚಿನ ಮಳೆ ಬೀಳಬಹುದು ಎಂದೂ ಹೇಳಲಾಗಿದೆ. ಅದರಂತೆ ಕರ್ನಾಟಕದ ಕರಾವಳಿ ಭಾಗಗಳಲ್ಲೂ ಮುಂದಿನ 24 ಗಂಟೆಗಳಲ್ಲಿ ಗುಡುಗು ಸಹಿತ ಮಳೆ ಬೀಳಲಿದ್ದು, ಮುಂದಿನ ಮೂರು ದಿನಗಳ ಕಾಲ ಮುಂದುವರಿಯಲಿದೆ ಎಂದು ಐಎಂಡಿ ಹೇಳಿದೆ.
ನಾಳೆ ಒಮಾನ್ ಕರಾವಳಿ ದಾಟಳಿರುವ ಶಾಹೀನ್ ಶಾಹೀನ್ ಚಂಡಮಾರುತ ಅಕ್ಟೋಬರ್ 4ರ ಮುಂಜಾನೆ ಹೊತ್ತಲ್ಲಿ ಒಮಾನ್ ಕರಾವಳಿಯನ್ನು ದಾಟಲಿದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 80-90 ಕಿಮೀ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹಾಗೇ, ಒಮಾನ್ ಕರಾವಳಿ ತೀರದ ನಿವಾಸಿಗಳಿಗೆ ಅದಾಗಲೇ ಎಚ್ಚರಿಕೆ ನೀಡಲಾಗಿದ್ದು, ಸಾದ್ಯವಾದಷ್ಟು ಬೇಗ ಬೇರೆಕಡೆಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ.
ಇದನ್ನೂ ಓದಿ: Viral Video: ಕೊಳದ ದಡದಲ್ಲಿ ಅಡ್ಡಾಡುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದ ಸಿಂಹ; ಆಮೇಲೇನಾಯ್ತು? ವಿಡಿಯೊ ನೋಡಿ
ಪರಿಸರ ಶಾಲೆಯೆಂದೇ ಖ್ಯಾತಿ ಗಳಿಸಿದೆ ವಿಜಯಪುರದ ಸರ್ಕಾರಿ ಶಾಲೆ; ತಮ್ಮ ಮಕ್ಕಳು ಇಲ್ಲೇ ಓದಬೇಕು ಅಂತಾರೆ ಪೋಷಕರು