ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಇದ್ದ ಹೆಲಿಕಾಪ್ಟರ್ ಪಿಥೋರ್ಗಢದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಉತ್ತರಾಖಂಡದ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ವಿಜಯ್ ಕುಮಾರ್ ಅವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಬುಧವಾರ ಪಿಥೋರ್ಗಢ ಜಿಲ್ಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಈ ಕುರಿತು ಎಎನ್ಐ ವರದಿ ಮಾಡಿದ್ದು, ಹೆಲಿಕಾಪ್ಟರ್‌ನಲ್ಲಿರುವ ಎಲ್ಲಾ ಜನರು ಸುರಕ್ಷಿತವಾಗಿದ್ದಾರೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.
ಇಬ್ಬರು ಅಧಿಕಾರಿಗಳು ಸುರಕ್ಷಿತವಾಗಿ ಪಿಥೋರಗಢದ ರಲಂ ಗ್ರಾಮದಲ್ಲಿ ಬಂದಿಳಿದರು, ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೆಲಿಕಾಪ್ಟರ್ ಲ್ಯಾಂಡ್ ಆಗಿತ್ತು. ಚುನಾವಣಾ ಆಯೋಗದ ಉನ್ನತ ಅಧಿಕಾರಿ ಉತ್ತರಾಖಂಡ್‌ನ ಆದಿ ಕೈಲಾಶ್‌ಗೆ ಭೇಟಿ ನೀಡುತ್ತಿದ್ದಾಗ ಅವರ ಹೆಲಿಕಾಪ್ಟರ್ ಕೆಟ್ಟ ಹವಾಮಾನದಿಂದಾಗಿ ಪ್ರಕ್ಷುಬ್ಧತೆಗೆ ಒಳಗಾಯಿತು, ಹಾಗಾಗಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.
ಮುಖ್ಯ ಚುನಾವಣಾ ಆಯುಕ್ತರು ನಿನ್ನೆ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದರು.
ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಒಂದು ಹಂತದಲ್ಲಿ ಮತದಾನ ನಡೆಯಲಿದೆ, ಆದರೆ ಜಾರ್ಖಂಡ್ ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಪ್ರಸ್ತುತ ಮಹಾರಾಷ್ಟ್ರ ವಿಧಾನಸಭೆಯು ತನ್ನ ಅವಧಿಯನ್ನು ಪೂರ್ಣಗೊಳಿಸುವ ಒಂದು ದಿನದ ಮೊದಲು ನವೆಂಬರ್ 23 ರಂದು ಮತಗಳ ಎಣಿಕೆ ನಡೆಯಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Wed, 16 October 24