ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದ ವಿದೇಶಿಯರು ತವರಿಗೆ ಮರಳಲು ನೆರವಾಗಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ
ದೇಶದಲ್ಲಿ ಕೊರೊನಾ ವೈರಸ್ ಹರಡಿದ್ದೇ ತಬ್ಲಿಘಿಯಿಂದ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 36 ವಿದೇಶಿಗರ ವಿರುದ್ಧ ಚಾರ್ಜ್ಶೀಟ್ ಕೂಡ ಸಲ್ಲಿಕೆ ಆಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಡಿಸೆಂಬರ್ 15ರಂದು ಪ್ರಕರಣವನ್ನು ಖುಲಾಸೆ ಮಾಡಿತ್ತು.
ನವದೆಹಲಿ: ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದ 36 ವಿದೇಶಿಯರ ಮೇಲಿದ್ದ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ಖುಲಾಸೆಗೊಳಿಸಿದ ಬೆನ್ನಲ್ಲೇ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಈ 36 ವಿದೇಶಿಯರು ಅವರ ದೇಶಗಳಿಗೆ ಹಿಂದಿರುಗಲು ಸಹಾಯ ಮಾಡಿ ಎಂದು ನಿರ್ದೇಶನ ನೀಡಿದೆ.
ಮಾರ್ಚ್ನಲ್ಲಿ ಕೊರೊನಾ ವೈರಸ್ ಭಾರತದಲ್ಲಿ ನಿಧಾನವಾಗಿ ಹಬ್ಬಲು ಆರಂಭಿಸಿತ್ತು. ಆದಾಗ್ಯೂ ದೆಹಲಿಯಲ್ಲಿ ತಬ್ಲಿಘಿ ಜಮಾತ್ ಕಾರ್ಯಕ್ರಮ ನಡೆಸಲಾಗಿತ್ತು. ಇಲ್ಲಿ ಪಾಲ್ಗೊಂಡಿದ್ದ ಅನೇಕರಿಗೆ ಕೊರೊನಾ ವೈರಸ್ ಹಬ್ಬಿತ್ತು. ಈ ದೇಶದಲ್ಲಿ ಕೊರೊನಾ ವೈರಸ್ ಹರಡಿದ್ದೇ ಇವರಿಂದ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 36 ವಿದೇಶಿಗರ ವಿರುದ್ಧ ಚಾರ್ಜ್ಶೀಟ್ ಕೂಡ ಸಲ್ಲಿಕೆ ಆಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಡಿಸೆಂಬರ್ 15ರಂದು ಪ್ರಕರಣವನ್ನು ಖುಲಾಸೆ ಮಾಡಿತ್ತು.
ದೋಷಮುಕ್ತಗೊಂಡವರು ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಸುಪ್ರಿಂಕೋರ್ಟ್ನ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿತು. ವಿದೇಶಿಗರ ಪರವಾಗಿ ವಾದ ಮಂಡಿಸಿದ ವಕೀಲೆ ಮೇನಕಾ ಗುರುಸ್ವಾಮಿ, ವಿದೇಶಿಯರು ಸುಗಮವಾಗಿ ನಿರ್ಗಮಿಸಲು ನ್ಯಾಯಪೀಠ ಹಸ್ತಕ್ಷೇಪ ಮಾಡಬೇಕು ಎಂದು ಕೋರಿದರು. ಈ ವಿನಂತಿಗೆ ಪ್ರಕ್ರಿಯಿಸಿದ ನ್ಯಾಯಾಲಯ, ಇದಕ್ಕಾಗಿ ನಾವು ನೋಡೆಲ್ ಅಧಿಕಾರಿ ನೇಮಕ ಮಾಡುತ್ತೇವೆ. ಈ ವಿದೇಶಿಯರು ನೋಡೆಲ್ ಅಧಿಕಾರಿಯನ್ನು ಸಂಪರ್ಕಿಸಿ, ಅವರ ನೆರವಿನೊಂದಿಗೆ ವಿದೇಶಕ್ಕೆ ಮರಳಬಹುದು ಎಂದು ಭರವಸೆ ನೀಡಿತು.
ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದ 36 ವಿದೇಶಿಯರು ಆರೋಪ ಮುಕ್ತ