Hemant Soren: ಜಾರ್ಖಂಡ್ ಸಿಎಂ ಸ್ಥಾನಕ್ಕೆ ಚಂಪೈ ಸೊರೇನ್ ರಾಜೀನಾಮೆ; ಸರ್ಕಾರ ರಚಿಸಲಿದ್ದಾರೆ ಹೇಮಂತ್ ಸೊರೇನ್
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೇನ್ ಜಾರ್ಖಂಡ್ ಮುಖ್ಯಮಂತ್ರಿಯಾಗಲಿದ್ದಾರೆ. ಬುಧವಾರ ಚಂಪೈ ಸೊರೇನ್ ಸಿಎಂ ಸ್ಥಾನದಿಂದ ಕೆಳಗಿಳಿದು ಹೇಮಂತ್ ಸೊರೇನ್ಗೆ ಆ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಅಕ್ರಮ ಹಣ ವ್ಯವಹಾರ ಪ್ರಕರಣ ಆರೋಪದಲ್ಲಿ ಇಡಿಯಿಂದ ಬಂಧನಕ್ಕೊಳಗಾಗುವ ಮುನ್ನ ಹೇಮಂತ್ ಸೊರೇನ್ ತಮ್ಮ ಸಿಎಂ ಸ್ಥಾನವನ್ನು ತೊರೆದಿದ್ದರು
ದೆಹಲಿ ಜುಲೈ 03:ಚಂಪೈ ಸೊರೇನ್ (Champai Soren) ಬುಧವಾರ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲರಿಗೆ ಚಂಪೈ ಸೊರೇನ್ ರಾಜೀನಾಮೆ ಪತ್ರ ನೀಡಿದ್ದು, ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೇನ್ (Hemant Soren) ಇಲ್ಲಿ ಸರ್ಕಾರ ರಚಿಸಲಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸುವ ಮೊದಲು ಜನವರಿಯಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ಕಳೆದ ವಾರ ಅವರಿಗೆ ಜಾಮೀನು ನೀಡಲಾಗಿತ್ತು. ಜೆಎಂಎಂ ನಾಯಕ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಕಳೆದ ವಾರ ಅವರಿಗೆ ಜಾಮೀನು ಮಂಜೂರು ಮಾಡಿದ ಜಾರ್ಖಂಡ್ ಹೈಕೋರ್ಟ್, “ಆಪಾದಿತ ಅಪರಾಧದಲ್ಲಿ ಅವರು ತಪ್ಪಿತಸ್ಥನಲ್ಲ” ಎಂದು ನಂಬಲು ಕಾರಣವಿದೆ ಎಂದು ಹೇಳಿದೆ.
ಜೆಎಂಎಂನ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷವು ಹೇಮಂತ್ ಸೊರೇನ್ ಅವರನ್ನು ಶಾಸಕಾಂಗ ಪಕ್ಷದ ನಾಯಕ ಎಂದು ಹೆಸರಿಸಿತು.
ಚಂಪೈ ಸೊರೇನ್ ಇಂದು (ಬುಧವಾರ) ಸಂಜೆ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಚಂಪೈ ಸೊರೇನ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಹೇಮಂತ್ ಸೊರೇನ್ ವಾಪಸಾತಿ ಕುರಿತು ಆಡಳಿತಾರೂಢ ಸಮ್ಮಿಶ್ರ ನಾಯಕರು ಒಮ್ಮತಕ್ಕೆ ಬಂದಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್‌ನ ಜಾರ್ಖಂಡ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್, ರಾಜ್ಯಾಧ್ಯಕ್ಷ ರಾಜೇಶ್ ಠಾಕೂರ್ ಮತ್ತು ಹೇಮಂತ್ ಸೋರೆನ್ ಅವರ ಪತ್ನಿ ಮತ್ತು ಶಾಸಕಿ ಕಲ್ಪನಾ ಸೊರೆನ್ ಉಪಸ್ಥಿತರಿದ್ದರು.
ಜಾರ್ಖಂಡ್‌ನಲ್ಲಿ ಚುನಾವಣೆಗೆ ತಿಂಗಳುಗಳು ಬಾಕಿಯಿದ್ದು, ಹೇಮಂತ್ ಸೊರೇನ್ ಅವರನ್ನು ತನ್ನ ಮುಖವಾಗಿಟ್ಟುಕೊಂಡು ಚುನಾವಣೆ ಎದುರಿಸಲು ಜೆಎಂಎಂ ನೋಡುತ್ತಿದೆ. ಆದರೆ ಚಂಪೈ ಸೊರೇನ್ ಅವರನ್ನು ಬದಲಿಸುವ ನಿರ್ಧಾರವು ಪ್ರತಿಪಕ್ಷ ಬಿಜೆಪಿಗೆ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಜಾರ್ಖಂಡ್ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರ ವಹಿಸಿಕೊಳ್ಳಲು ಹೇಮಂತ್ ಸೊರೇನ್ ಸಜ್ಜು
ಜಾರ್ಖಂಡ್‌ನ ಗೊಡ್ಡಾದ ಪಕ್ಷದ ಸಂಸದ ನಿಶಿಕಾಂತ್ ದುಬೆ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ “ಜಾರ್ಖಂಡ್‌ನಲ್ಲಿ ಚಂಪೈ ಸೊರೇನ್ ಯುಗ ಮುಗಿದಿದೆ” ಎಂದು ಹೇಳಿದ್ದಾರೆ. ಜೆಎಂಎಂ ಅನ್ನು ಗುರಿಯಾಗಿಸಿಕೊಂಡ ಅವರು “ಕುಟುಂಬ ಆಧಾರಿತ ಪಕ್ಷದಲ್ಲಿ, ಕುಟುಂಬದ ಹೊರಗಿನ ಜನರಿಗೆ ರಾಜಕೀಯ ಭವಿಷ್ಯವಿಲ್ಲ. ಮುಖ್ಯಮಂತ್ರಿ ಭಗವಾನ್ ಬಿರ್ಸಾ ಮುಂಡಾ ಅವರಿಂದ ಸ್ಫೂರ್ತಿ ಪಡೆದು ಭ್ರಷ್ಟ ಹೇಮಂತ್ ಸೊರೇನ್ ವಿರುದ್ಧ ನಿಲ್ಲಬೇಕೆಂದು ನಾನು ಬಯಸುತ್ತೇನೆ” ಎಂದು ಹೇಳಿದರು.
67 ವರ್ಷದ ಚಂಪೈ ಸೊರೇನ್ ಅವರು ಜೆಎಂಎಂನ ಹಿರಿಯ ನಾಯಕರಾಗಿದ್ದು ಪಕ್ಷದ ಸಂಸ್ಥಾಪಕ ಮತ್ತು ಹೇಮಂತ್ ಸೊರೇನ್ ಅವರ ತಂದೆ ಶಿಬು ಸೊರೆನ್ ಅವರೊಂದಿಗೆ ದಶಕಗಳಿಂದ ಇದ್ದಾರೆ. ಈ ಹಿಂದೆ ಅವರು ಹೇಮಂತ್ ಸೊರೇನ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:55 pm, Wed, 3 July 24