Political Crime Thriller: ಭಾರತದ ಚೊಚ್ಚಲ ಲೈಂಗಿಕ ಹಗರಣದಿಂದಾಗಿ ಆ ನಾಯಕನಿಗೆ ಪ್ರಧಾನಿ ಖುರ್ಚಿ ಜಸ್ಟ್​​ ಮಿಸ್​ ಆಗಿತ್ತು! ಸಂಜಯ್​ ಗಾಂಧಿ ‘ಕೈ’ವಾಡ ಏನಿತ್ತು?

ಇತ್ತ ಕರ್ನಾಟಕದಲ್ಲಿ ಮಾಜಿ ಪ್ರಧಾನಿಯ ಮೊಮ್ಮಗ ಲೈಂಗಿಕ ಟೇಪ್ ಪ್ರಕರಣದಲ್ಲಿ ಸಿಲುಕಿ ತೊಳಲಾಡುತ್ತಿದ್ದಾನೆ. ಇದು ಭಾರತದ ಮೊದಲ ರಾಜಕೀಯ ಲೈಂಗಿಕ ಹಗರಣದ ನೆನಪುಗಳನ್ನು ತರುತ್ತಿದೆ. ಆ ನಾಯಕ ಇನ್ನೇನು ದೇಶದ ಪ್ರಧಾನ ಮಂತ್ರಿ ಆಗಬೇಕಿತ್ತು. ಆದರೆ ಆತನ ಸುಪುತ್ರ ಕಾಲೇಜು ಯುವತಿಯ ಜೊತೆ ಲೈಂಗಿಕ ಹಗರಣದಲ್ಲಿ ಸಿಲುಕಿಬಿಟ್ಟ. ಅಂದಿಗೂ ಮಹಾನುಭಾವನೊಬ್ಬ ಅದರ ಸೂತ್ರಧಾರಿಯಾಗಲು ನಿಂತುಬಿಟ್ಟ. ಆ ಪ್ರಕರಣ ಹೇಗೆ ಬಿಚ್ಚಿಕೊಂಡಿತು... ಪ್ರಕರಣದಲ್ಲಿ ಸಂಜಯ್​ ಗಾಂಧಿ ಹಸ್ತಕ್ಷೇಪ ಏನಿತ್ತು... ಒಂದು ಪ್ರೀಮಿಯಂ ಲೇಖನ ನಿಮಗಾಗಿ

Political Crime Thriller: ಭಾರತದ ಚೊಚ್ಚಲ ಲೈಂಗಿಕ ಹಗರಣದಿಂದಾಗಿ ಆ ನಾಯಕನಿಗೆ ಪ್ರಧಾನಿ ಖುರ್ಚಿ ಜಸ್ಟ್​​ ಮಿಸ್​ ಆಗಿತ್ತು! ಸಂಜಯ್​ ಗಾಂಧಿ 'ಕೈ'ವಾಡ ಏನಿತ್ತು?
ದೇಶದ ಮೊದಲ ಲೈಂಗಿಕ ಹಗರಣದಿಂದ ಆ ನಾಯಕನಿಗೆ ಪ್ರಧಾನಿ ಖುರ್ಚಿ ಜಸ್ಟ್​ ಮಿಸ್​
Follow us
|

Updated on: Jul 04, 2024 | 11:07 AM

ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾದ ಲೈಂಗಿಕ ವಿಡಿಯೋ, ಫೋಟೋಗಳನ್ನು (Prajwal Revanna Scandal) ಜಗತ್ತಿಗೆ ತೋರಿಸಬಾರದಿತ್ತು ಎಂದು ಎಲ್ಲರೂ ಬೊಂಬಡಾ ಹೊಡೆಯುತ್ತಿದ್ದಾರೆ. ಆದರೆ ಅಂದು ಇನ್ನೇನು ಪ್ರಧಾನಿ ಪಟ್ಟ ಅಲಂಕರಿಸಬೇಕಿದ್ದ ಬಾಬು ಜಗಜೀವನ್​ ರಾಮ್ (Babu Jagjivan Ram)​ ಅವರ ಸುಪುತ್ರ ಸುರೇಶ್ ಕುಮಾರ್ ಎಂಬ ಯುವ ನಾಯಕನ ಪರಮ ಅಸಹ್ಯ ಫೋಟೋಗಳು ಸಹ ಇದೇ ರೀತಿ ಹೊರಬಿದ್ದಿದ್ದವು. ಖುದ್ದು ಸಂಜಯ್ ಗಾಂಧಿ (Sanjay Gandhi) ಮತ್ತು ಅವರ ಪತ್ನಿ ಮನೇಕಾ ಗಾಂಧಿ (Maneka Gandhi) ತಮ್ಮ ಸಂಪಾದಕತ್ವದ ‘ಸೂರ್ಯ’ ಮ್ಯಾಗಜೀನ್‌ನಲ್ಲಿ ಖುಲ್ಲಂಖುಲ್ಲಾ ಎಲ್ಲಾ ಪ್ರಕಟಿಸಿದ್ದರು. ಇದು ಇಡೀ ಎಪಿಸೋಡ್​​ನ ಕರಾಳ ಮುಖವನ್ನು ತೋರಿಸುತ್ತದೆ.

ಆ ಮಹಾನ್​​ ನಾಯಕ 3 ದಶಕಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಆಯಕಟ್ಟಿನ ಸ್ಥಾನಮಾನಗಳನ್ನು ಅಲಂಕರಿಸಿದ್ದ. ಆ ಹಿನ್ನೆಲೆಯೊಂದಿಗೆ ಪ್ರಧಾನಿಯಾಗುವ ಆಸೆ ಆಕಾಂಕ್ಷೆ ಹೊಂದಿದ್ದ. ಆದರೆ ಆತನ ಸುಪುತ್ರನ ಲೈಂಗಿಕ ಆಸೆ-ಆಕಾಂಕ್ಷೆಗಳು ಆ ಪ್ರಧಾನಿ ಅವಕಾಶವನ್ನು ಹೇಗೆ ಹಾಳುಮಾಡಿತು ಎಂಬುದರ ಇಂಚಿಂಚು ಮಾಹಿತಿ ಇಲ್ಲಿದೆ. ಹಳಸಿದ ರಾಜಕಾರಣದ ಅಸಹ್ಯಕರ ಮುಖ ಒಂದು ಕಡೆಯಾದರೆ, ಆ ರಾಜಕೀಯ ನೇತಾರನ ಮಗನ ಕಾಮಲಾಲಸೆಯ ಮತ್ತೊಂದು ಮುಖ ಅನಾವರಣವಾಗುತ್ತದೆ.

ಆ ಅಸಹ್ಯಕರ ಕತೆಯನ್ನು ಹೇಳುವ ಮುನ್ನ ಇಲ್ಲೇ ನಮ್ಮ ಕರ್ನಾಟಕದಲ್ಲಿ ನಡೆದಿರುವ ಅದೇ ತರಹದ ಸೆಕ್ಸ್ ಟೇಪ್ ಪ್ರಕರಣವನ್ನು ಸಾಂದರ್ಭಿಕವಾಗಿ ಪ್ರಸ್ತಾಪಿಸಬೇಕಿದೆ. ಈ ಪ್ರಕರಣದ ಕೇಂದ್ರ ಬಿಂದುವಾಗಿರುವ ಜೆಡಿಎಸ್ ಪಕ್ಷದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂಬುದನ್ನೂ ಹೇಳಬೇಕಿದೆ.

ಪ್ರಜ್ವಲ್ ರೇವಣ್ಣ ಪ್ರಕರಣವು 1978 ರಲ್ಲಿ ಬಯಲಾದ ಭಾರತದ ಚೊಚ್ಚಲ ರಾಜಕೀಯ ಲೈಂಗಿಕ ಹಗರಣದ ನೆನಪುಗಳನ್ನು ತರುತ್ತದೆ. ಆ ರಾಜಕೀಯ ನೇತಾರನ ಬೇರಾರೂ ಅಲ್ಲ, ದಶಕಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ, ದಲಿತ ನಾಯಕನಾಗಿ ವಿಜೃಂಭಿಸಿದ್ದ ಬಾಬು ಜಗಜೀವನ್ ರಾಮ್! ಆತನ ಸುಪುತ್ರ 46 ವರ್ಷದ ಸುರೇಶ್ ರಾಮ್, 21 ವರ್ಷದ ಕಾಲೇಜು ಹುಡುಗಿಯ ಜೊತೆಗಿದ್ದಾಗ ತೆಗೆದಿದ್ದ 40-50 ಅಶ್ಲೀಲ ಫೋಟೋಗಳು ವ್ಯವಸ್ಥಿತವಾಗಿ ಬಹಿರಂಗವಾಗಿದ್ದವು. ಅದರೊಂದಿಗೆ ಬಾಬು ಜಗಜೀವನ್ ರಾಮ್ ಮಾನ ಮರ್ಯಾದೆ ಬೀದಿಗೆ ಬಿದ್ದಿತ್ತು. ಮುಂದೆ ಅದೊಂದು ದೊಡ್ಡ ರಾಜಕೀಯ ಸೆಕ್ಸ್​​ ಹಗರಣವಾಗಿ ಮಾರ್ಪಟ್ಟು ಆ ಹಿರಿಯ ನಾಯಕ ಪ್ರಧಾನ ಮಂತ್ರಿಯಾಗಬಹುದಾದ ಕನಸನ್ನು ಭಗ್ನಗೊಳಿಸಿತ್ತು.

ಅಂದು 21 ಆಗಸ್ಟ್ 1978… ಅದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಘಟನೆ. ನಲವತ್ತರ ವಯಸ್ಸಿನ ವ್ಯಕ್ತಿಯೊಬ್ಬ ಮೈಯೆಲ್ಲ ಹಣ್ಣುಗಾಯಿ ನೀರುಗಾಯಿ ಮಾಡಿಕೊಂಡು, ದಿಗ್ಭ್ರಮೆಗೊಂಡು ಸೀದಾ ಕಾಶ್ಮೀರ್ ಗೇಟ್ ಪೊಲೀಸ್ ಠಾಣೆಗೆ ಧಾವಿಸಿದ್ದ. ತನ್ನನ್ನು ಯಾರೋ ಹೊಡೆದುಬಡಿದಿದ್ದಾರೆ ಎಂದು ಹೇಳಿಕೊಂಡು ಎಫ್ಐಆರ್ ದಾಖಲಿಸಲು ಬಯಸಿದ್ದ.

ಹಿಂದಿನ ರಾತ್ರಿ (ಆಗಸ್ಟ್ 20, 1978) ಕನಿಷ್ಠ 12 ಜನರು ತನ್ನನ್ನು ಅಪಹರಿಸಿದರು. ಮತ್ತು ಬಂದೂಕು ತೋರಿಸಿ ತನ್ನ ಮರ್ಸಿಡಿಸ್ ಬೆಂಜ್ ಕಾರನ್ನು ಮೋದಿನಗರಕ್ಕೆ (ಮೀರತ್ ಬಳಿ) ಓಡಿಸುವಂತೆ ಬಲವಂತ ಮಾಡಿದರು ಎಂದು ಆ ವ್ಯಕ್ತಿ ಪೊಲೀಸರ ಬಳಿ ಹೇಳಿಕೊಂಡ. ತನ್ನೊಂದಿಗೆ ಕಾರಿನಲ್ಲಿದ್ದ 21 ವರ್ಷದ ಯುವತಿಯನ್ನೂ ಸಹ ಅಪಹರಿಸಲಾಗಿದೆ ಎಂದೂ ಆತ ಪೊಲೀಸರಿಗೆ ಪ್ರಾಥಮಿಕ ಮಾಹಿತಿ ನೀಡಿದ್ದ. ಆ ಡಜನ್ ಮಂದಿ ತನ್ನನ್ನು ಹಿಂಸಿಸುತ್ತಾ ಕೆಲವು ಪೇಪರ್‌ಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದರು. ಅದನ್ನು ಅನುಸರಿಸಲು ನಿರಾಕರಿಸಿದಾಗ ಅವರೆಲ್ಲಾ ಸೇರಿಕೊಂಡು ತನ್ನನ್ನು ಪ್ರಜ್ಞೆ ಹೋಗುವವರೆಗೂ ಹೊಡೆದರು ಎಂದಿದ್ದ. ಅಷ್ಟೇ ಅಲ್ಲ, ಎದುರಿಗಿದ್ದ ಯುವತಿಯನ್ನು ತೋರಿಸುತ್ತಾ, ತಾನು ಆಕೆಯ ಜೊತೆಗೆ ಆಕ್ಷೇಪಾರ್ಹ ಭಂಗಿಗಳಲ್ಲಿ ಇದ್ದ ಫೋಟೋಗಳನ್ನೂ ಕಸಿದುಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದ.

Also Read: Interesting Crime News! ಭಾರತದ ಖತರನಾಕ್​ ಮಹಿಳಾ ಡಾನ್​​​​​​ಗಳು ಇವರೇ! ಪಂಡಿತ್ ನೆಹರೂರನ್ನು ಮದುವೆಯಾಗ್ತೀಯಾ ಅಂತಾ ಒಬ್ಬಳು ಕೇಳಿದ್ದಳು!

ಗಂಡು ಹೆಣ್ಣಿನ ಆಪ್ತ ಕ್ಷಣಗಳ ಆ 40-50 ಫೋಟೋಗಳು ಸ್ವತಂತ್ರ ಭಾರತದ ಮೊದಲ ರಾಜಕೀಯ ಲೈಂಗಿಕ ಹಗರಣವಾಗಿ ಹೊರಹೊಮ್ಮಿದವು. ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರನ್ನು ಚಲಾಯಿಸುತ್ತಾ ಪೊಲೀಸ್ ಠಾಣೆ ಆವರಣ ಪ್ರವೇಶಿಸಿದ್ದ ಸಂತ್ರಸ್ತ ವ್ಯಕ್ತಿಯು ತನ್ನಪ್ಪನ ರಾಜಕೀಯ ಆಕಾಂಕ್ಷೆಗಳನ್ನು ಹೇಗೆ ಮಣ್ಣುಪಾಲು ಮಾಡಿದ್ದ, ಮುಂದೆ ಅದು ರಾಷ್ಟ್ರ ರಾಜಕಾರಣವನ್ನು ಹೇಗೆ ಅಲ್ಲಾಡಿಸಿಬಿಟ್ಟಿತು, ಮಹಾನಾಯಕನೊಬ್ಬ ವ್ಯವಸ್ಥಿತವಾಗಿ ಆ ಪ್ರಕರಣವನ್ನು ಹೇಗೆ ತನ್ನ ಸ್ವಹಿತಾಸಕ್ತಿ ಸಾಧನೆಗಾಗಿ ಬಳಸಿಕೊಂಡ ಮತ್ತು ತನ್ನ ತಾಯಿ ಮರಳಿ ಪ್ರಧಾನಿಪಟ್ಟ ಅಲಂಕರಿಸುವುದಕ್ಕೆ ಅದು ಹೇಗೆ ಸೋಪಾನವಾಯಿತು ಎಂಬುದು ಈ ಲೇಖನದಲ್ಲಿ ಮುಂದೆ ಅನಾವರಣಗೊಂಡಿದೆ. ಆದರೆ ರಾಷ್ಟ್ರ ರಾಜಕಾರಣದ ಅತ್ಯುನ್ನತ ಹುದ್ದೆಗಳನ್ನು ಅನುಭವಿಸುತ್ತಿದ್ದ ಅನುಭವಿ ರಾಜಕಾರಣಿ, ಕಾಲಾಂತರದಲ್ಲಿ ಪ್ರಧಾನ ಮಂತ್ರಿ ಆಗಬಹುದಾದ ಆತನ ಮಹತ್ವಾಕಾಂಕ್ಷೆಯನ್ನು ಹೇಗೆ ಸಮಾಧಿ ಮಾಡಿತು ಎಂಬುದರ ವಿವರಣೆ ಇಲ್ಲಿದೆ.

ಅಂದು ಛಾಯಾಚಿತ್ರಗಳು-ಇಂದು ವಿಡಿಯೋ ಟೇಪ್‌ಗಳು!

ಮಾಜಿ ಪ್ರಧಾನಿ, ಅವರ ಹಿರಿಯ ಪುತ್ರ ಮತ್ತು ಸಂಸದನಾಗಿದ್ದ ಮೊಮ್ಮಗನನ್ನು ಒಳಗೊಂಡ ಭಾರೀ ಲೈಂಗಿಕ ಹಗರಣ ಈಗ ಸುದ್ದಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ 1978ರಲ್ಲಿ ಅಂದಿನ ಕಪ್ಪುಬಿಳುಪು ಕಾಲದ ಛಾಯಾಚಿತ್ರಗಳು ಮತ್ತು 2024ರಲ್ಲಿ ಈಗ ಪ್ರಜ್ವಲ್ ರೇವಣ್ಣ ವಿಡಿಯೋ ಟೇಪ್‌ಗಳು ಹೇಗೆ ರಾಜಕೀಯ ಬಿರುಗಾಳಿ ಎಬ್ಬಿಸಿದವು ಎಂಬುದನ್ನು ಹಿರಿಯ ಪತ್ರಕರ್ತೆಯೊಬ್ಬರು ತಮ್ಮ ಪುಸ್ತಕದಲ್ಲಿ ವಿವರವಾಗಿ ದಾಖಲಿಸಿದ್ದಾರೆ.

ಸುಮಾರು 3,000 ಅಶ್ಲೀಲ ವೀಡಿಯೊ ಕ್ಲಿಪ್‌ಗಳು, ಫೋಟೋಗಳು ಮತ್ತು ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಲೈಂಗಿಕ ಶೋಷಣೆಯ ಸಚಿತ್ರ ದಾಖಲೆಗಳು, ವರದಿಗಳು ಇತ್ತೀಚೆಗೆ ಜಗಜ್ಜಾಹೀರಾಗುತ್ತಿದ್ದಂತೆ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರ ಪುತ್ರ ಹೆಚ್‌ಡಿ ರೇವಣ್ಣ ಮತ್ತು ಸಂಸದರಾಗಿದ್ದ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಇತ್ತೀಚೆಗೆ ರಾಜಕೀಯ ಬಿರುಗಾಳಿಗೆ ಸಿಲುಕಿದ್ದಾರೆ. ವೈಯಕ್ತಿಕ ನೆಲೆಗಟ್ಟಿನಲ್ಲೂ ಕಾನೂನುಬಲೆಯಲ್ಲಿ ಸಿಲುಕಿದ್ದಾರೆ. ಪ್ರಜ್ವಲ್ ರೇವಣ್ಣ ಚಿಕ್ಕಪ್ಪ ಎಚ್​​ ಡಿ ಕುಮಾರಸ್ವಾಮಿ ಅವರೇ ‘ಉಪ್ಪು ಕುಡಿದವರು ನೀರು ಕುಡಿಯಲೇ ಬೇಕು’ ಎಂದು ಸ್ವತಃ ಹೇಳಿರುವುದು ಆರೋಪಿಯ ಸುತ್ತ ಕಾನೂನು ಕುಣಿಕೆ ಬಿಗಿಯಾದಂತಿದೆ.

ಈ ಪ್ರಕರಣ ಬಟಾಬಯಲಾಗುವ ಹೊತ್ತಿನಲ್ಲಿ ಆರೋಪಿ ಸ್ಥಾನದಲ್ಲಿದ್ದ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್​​ಪೋರ್ಟ್​​ ಬಳಸಿಕೊಂಡು ರಾತ್ರೋರಾತ್ರಿ ವಿದೇಶಕ್ಕೆ ಹಾರಿದ್ದರೆ ಹಿಂದಿನ ಪ್ರಕರಣದಲ್ಲಿ ಬಾಬು ಜಗಜೀವನ್ ರಾಮ್ ಸುಪುತ್ರ ಹಗರಣದಿಂದ ಪಾರಾಗಲು ತನ್ನ ಮೇಲೆ ಯಾರೋ ಹಲ್ಲೆ ಮಾಡಿದ್ದಾರೆ ಎಂದು ಹೇಳುತ್ತಾ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದ.

1978ರಲ್ಲಿ… ದೂರದ ದಿಲ್ಲಿಯ ಕಾಶ್ಮೀರ್ ಗೇಟ್ ಪೊಲೀಸ್ ಠಾಣೆಯಲ್ಲಿ ಕಾರು ಅಪಘಾತ/ ಆಘಾತದ ಬಗ್ಗೆ ಎಫ್‌ಐಆರ್ ದಾಖಲಿಸಿದ್ದು ನಲವತ್ತರ ವಯಸ್ಸಿನ ವ್ಯಕ್ತಿ ಬಿಹಾರದ ಅಬ್ಬರದ ಶಾಸಕ ಸುರೇಶ್ ಕುಮಾರ್ ರಾಮ್. ಆತ ಹಿಂದುಳಿದ ವರ್ಗಗಳ ಹೋರಾಟಗಾರ ‘ಬಾಬು’ ಜಗಜೀವನ್ ರಾಮ್ ಅವರ ಸುಪುತ್ರನಾಗಿದ್ದ. 40 ವರ್ಷದ ಸುರೇಶ್ ಕುಮಾರ್​​ಗೆ ವಿವಾಹವಾಗಿದ್ದು, ಮಗಳಿದ್ದಳು. ಆ ಕ್ಷಣಕ್ಕೆ ಬಾಬು ಜಗಜೀವನ್ ರಾಮ್ ಅವರು ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಭಾರತದ ರಕ್ಷಣಾ ಸಚಿವರಾಗಿದ್ದವರು. ಇನ್ನು 21 ವರ್ಷದ ಯುವತಿ ಸುರೇಶ್ ಕುಮಾರ್ ಅವರ ಖಾಸಾ ಗೆಳತಿಯಾಗಿದ್ದಳು. ಆಕೆ ಮೀರತ್‌ನ ಜಾಟ್ ಕುಟುಂಬದಿಂದ ಬಂದಿದ್ದ ಕಾಲೇಜು ವಿದ್ಯಾರ್ಥಿನಿ ಸುಷ್ಮಾ ಚೌಧರಿ (Sushma Chaudhury).

ಭಾರತದ ಚೊಚ್ಚಲ ರಾಜಕೀಯ ಲೈಂಗಿಕ ಹಗರಣ ಮತ್ತು ಅದರ ಪಾತ್ರಧಾರಿ ಬಾಬು ಪುತ್ರ ಸುರೇಶ್ ಕುಮಾರ್​​:

ತಮ್ಮ ಮಗ ಸುರೇಶ್ ಕುಮಾರ್ ರಾಮ್​ನ ಲೈಂಗಿಕ ಹಗರಣವು ಸಾರ್ವಜನಿಕವಾಗುತ್ತಿದ್ದಂತೆ (1977 ರಿಂದ) ಭಾರತದ ಉಪ ಪ್ರಧಾನ ಮಂತ್ರಿಯಾಗಿದ್ದ ಜಗಜೀವನ್ ರಾಮ್ ಅವರ ಇಮೇಜ್ ಮತ್ತು ಖ್ಯಾತಿ ಸಂಪೂರ್ಣವಾಗಿ ನೆಲಕಚ್ಚಿತು. ಅವರ ರಾಜಕೀಯ ಅವನತಿಗೆ ದಾರಿಯಾಯಿತು.

ಘಟನೆ ಬೆಳಕಿಗೆ ಬಂದ ಮಾರನೆಯ ದಿನ, ಇಡೀ ವೃತ್ತಾಂತ ಬಿಚ್ಚಿಕೊಳ್ಳುತ್ತಿದ್ದಂತೆ ಈ ಸುದ್ದಿಯು ರಾಷ್ಟ್ರವನ್ನು ಬೆಚ್ಚಿಬೀಳಿಸಿತು. ಅದಕ್ಕಿಂತ ಹೆಚ್ಚಾಗಿ, ರಾಜಕೀಯ ವಲಯ ಆಘಾತಗಳನ್ನು ಕಂಡಿತು. ಸೆಪ್ಟೆಂಬರ್ 1978 ರ ಇಂಡಿಯಾ ಟುಡೇ ಆಂಗ್ಲ ವಾರ ಪತ್ರಿಕೆ ಅದನ್ನು ಹೀಗೆ ವಿವರಿಸಿತ್ತು – ರಾಜಕೀಯ ಒಳಸಂಚು, ಅಪರಾಧ ಚೌಕಟ್ಟಿನ ಎಲ್ಲಾ ರೂಪಗಳು-ಕುರೂಪಗಳು ವಿಜೃಂಭಿಸಿದವು. ಇದು ಅಮೆರಿಕದ ಕುಖ್ಯಾತ ವಾಟರ್‌ಗೇಟ್‌ ಛಾಯೆಗಳನ್ನು ಹೊಂದಿತ್ತು. ಪಕ್ಕಾ ಪೊಲಿಟಿಕಲ್​ ಕ್ರೈಂ ಥ್ರಿಲ್ಲರ್ ಚೌಕಟ್ಟನ್ನು ಹೊಂದಿತ್ತು. ​

ಇದನ್ನೂ ಓದಿ:  ನಗುವಿನ ನಟ-ನಗುವಿನ ಸಾಮ್ರಾಟ ಚಾರ್ಲಿ ಚಾಪ್ಲಿನ್ ಶವಪೆಟ್ಟಿಗೆಯನ್ನು ಕಳ್ಳರು ಏಕೆ ಕದ್ದರು?

‘ರಕ್ಷಣಾ ಸಚಿವ ಜಗಜೀವನ್ ರಾಮ್ ಅವರ ಪುತ್ರ ಮತ್ತು ಆತನ ಗೆಳತಿಯ ಅಪಹರಣ ರಾಷ್ಟ್ರವನ್ನು ಅಲ್ಲಾಡಿಸಿದೆ’ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಸುದ್ದಿಯನ್ನು ಪ್ರಕಟಿಸಿತು. ಇನ್ನು ಇಂಡಿಯಾ ಟುಡೇ ವಾರ ಪತ್ರಿಕೆ ಮರುವಾರವೇ… ವಿವಿಐಪಿ ಮಗ ಸೆಕ್ಸ್ ರಾಕೆಟ್‌ನಲ್ಲಿ ಭಾಗಿ ಎಂದು ಶೀರ್ಷಿಕೆ ನೀಡಿ, ಪುಟಗಟ್ಟಲೆ ಸುದ್ದಿಯನ್ನು (ಚಿತ್ರ ಸಮೇತ ಅಲ್ಲ) ಪ್ರಕಟಿಸಿತು. ಹೀಗೆ ಭಾರತದ ಮೊದಲ ರಾಜಕೀಯ ಲೈಂಗಿಕ ಹಗರಣವು ಸಾರ್ವಜನಿಕರಿಗೆ ತಲುಪಿತ್ತು. ದಾಖಲಾರ್ಹ ಸಂಗತಿಯೆಂದರೆ ಆ ಕಾಲಕ್ಕೆ ಭಾರತದ ಪ್ರಧಾನಿ ಪಟ್ಟ ಅಲಂಕರಿಸಲು ಒಟ್ಟು ಮೂವರು ಪ್ರಭಾವಿಗಳು ತಮ್ಮದೇ ಆದ ಲೆಕ್ಕಾಚಾರಗಳೊಂದಿಗೆ ಹಣಾಹಣಿ ನಡೆಸಿದ್ದರು. ಅದರಲ್ಲಿ ಇದೇ ಬಾಬು ಮುಂಚೂಣಿಯಲ್ಲಿದ್ದರು ಎಂಬುದು ಗಮನಾರ್ಹ. (ಗಮನಿಸಿ, ಬಾಬು ಜಗಜೀವನ್​ ರಾಮ್ ಅವರ ಪುತ್ರಿ ಮೀರಾ ಕುಮಾರ್ ಅವರು 2009 ಮತ್ತು 2014 ರ ನಡುವೆ UPA ಎರಡನೇ ಅವಧಿಯಲ್ಲಿ ಲೋಕಸಭಾ ಸ್ಪೀಕರ್​​ ಆಗಿ ಕಾರ್ಯನಿಭಾಯಿಸಿದ್ದರು)

ಅದುವರೆಗೂ ಕಾರ್ಮಿಕ, ಸಂಪರ್ಕ, ರೈಲ್ವೇ ಮತ್ತು ರಕ್ಷಣೆ ಸೇರಿದಂತೆ ಸತತ 31 ವರ್ಷಗಳ ಕಾಲ ಬಹುತೇಕ ಎಲ್ಲ ಆಯಕಟ್ಟಿನ ಖಾತೆಗಳನ್ನು ನಿರ್ವಹಿಸಿದ್ದ ಬಾಬು ಜಗಜೀವನ್ ರಾಮ್ ಪ್ರಧಾನಿ ಕುರ್ಚಿಯ ಕನಸು ಕಾಣುತ್ತಾ, ಹಗಲೂರಾತ್ರಿ ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದರು. ಅತ್ತ, ಪ್ರಧಾನಿ ಮೊರಾರ್ಜಿ ದೇಸಾಯಿಯವರ ಸರ್ಕಾರ ಪತನವಾಗುವ ಲಕ್ಷಣಗಳು ಆಗಲೇ ಕಾಣಿಸುತ್ತಿತ್ತು. ಇತ್ತ, ಮಾಜಿ ಕಾಂಗ್ರೆಸ್ಸಿಗ ಜಗಜೀವನ್ ರಾಮ್ ಅವರು ತುರ್ತು ಪರಿಸ್ಥಿತಿಯ ನಂತರ, 1977 ರಲ್ಲಿ ಖುರ್ಚಿ ಲಾಲಸೆಯಲ್ಲಿ ತಾತ್ಕಾಲಿಕವಾಗಿ ಜನತಾ ಪಕ್ಷದೊಂದಿಗೆ ಕೈಜೋಡಿಸಿದ್ದರು.

“ಇಸ್​​ ಕಂಭಖ್ತ್ ಮುಲ್ಕ್ ಮೇ ಚಮ್ಮಾರ್ ಕಭೀ ಪ್ರಧಾನ ಮಂತ್ರಿ ನಹಿಂ ಹೋ ಸಕ್ತಾ ಹೈ” (ಈ ದರಿದ್ರ ದೇಶದಲ್ಲಿ ಚಮ್ಮಾರ ಎಂದಿಗೂ ಪ್ರಧಾನಿಯಾಗಲು ಸಾಧ್ಯವಿಲ್ಲ) ಎಂದು ದಲಿತ ನಾಯಕ ಜಗಜೀವನ್ ರಾಮ್ 1970 ರ ದಶಕದಲ್ಲಿ ಹಪಾಹಪಿ ವ್ಯಕ್ತಪಡಿಸಿದ್ದ ಕಾಲವೂ ಇತ್ತು. ಸ್ವತಃ ಅವರಿಗೇ ಅದು ದುಸ್ಸಾಧ್ಯದ ಕೆಲಸ ಎಂದು ಗೊತ್ತಿದ್ದರೂ ತಮ್ಮ ಪಯತ್ನವನ್ನು ಅವರು ಜಾರಿಯಲ್ಲಿಟ್ಟಿದ್ದರು ಎಂಬುದು ಕುತೂಹಲಕಾರಿ ಸಂಗತಿಯಾಗಿತ್ತು.

ಅತ್ಯುನ್ನತ ರಾಜಕೀಯ ಕಚೇರಿಯ ಹಾದಿಯು ಇಬ್ಬರು ಅನುಭವಿ ರಾಜಕಾರಣಿಗಳ ರೂಪದಲ್ಲಿ ಅವರಿಗೆ ಅಡೆತಡೆಗಳನ್ನು ನಿರ್ಮಿಸುತ್ತಿತ್ತು. ಏಕೆಂದರೆ ಆ ಇಬ್ಬರೂ ಪ್ರಧಾನಿ ಹುದ್ದೆಯನ್ನು ಬಯಸಿದ್ದರು, ಬಹುಶಃ ಜಗಜೀವನ್ ರಾಮ್ ಅವರಿಗಿಂತ ಹೆಚ್ಚು.

ಇಬ್ಬರಲ್ಲಿ ಒಬ್ಬರು ಮಾಜಿ ಪ್ರಧಾನಿ ಇಂದಿರಾ ಗಾಂಧಿ. ತುರ್ತು ಪರಿಸ್ಥಿತಿಯುದ್ದಕ್ಕೂ ಜಗಜೀವನ್ ರಾಮ್ ಇಂದಿರಾ ಅವರ ಆಪ್ತ ಸಹಾಯಕರಾಗಿದ್ದರು. ಸ್ವಾತಂತ್ಯ್ರಾ ನಂತರ ಜಗಜೀವನ್ ರಾಮ್ ಅವರು ವಿವಿಧ ಕಾಲಗಳಲ್ಲಿ ಜವಾಹರಲಾಲ್ ನೆಹರೂ ಕ್ಯಾಬಿನೆಟ್‌ಗಳಲ್ಲಿಯೂ ಪ್ರಮುಖ ಮಂತ್ರಿ ಸ್ಥಾನಗಳನ್ನು ಹೊಂದಿದ್ದರು. 1977ರ ತುರ್ತು ಪರಿಸ್ಥಿತಿ ಮುಗಿಯುತ್ತಿದ್ದಂತೆ ನಡೆದ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ವಿರುದ್ಧ ಇಂದಿರಾ ಹೀನಾಯವಾಗಿ ಸೋತಿದ್ದು, ಸ್ವಲ್ಪ ಕಾಲ ಅಧಿಕಾರದರಮನೆಯಿಂದ ದೂರವಿದ್ದರು. ಏನೇ ಆಗಲಿ ತಾನು ಅಧಿಕಾರಕ್ಕೆ ಮರಳಲೇಬೇಕೆಂದು ಇಂದಿರಾ ಗಾಂಧಿ ನಿರಂತರವಾಗಿ ರಾಜಕೀಯ ಬಿರುಕುಗಳನ್ನು (ಹೌದು ರಾಜಕೀಯ ಬಿರುಕುಗಳು) ಹುಡುಕುತ್ತಿದ್ದರು.

ಅಂತಹುದರಲ್ಲಿ, ಬಾಬೂಜಿಯನ್ನು (ಜಗಜೀವನ್ ರಾಮ್) ಪ್ರಧಾನಿಯನ್ನಾಗಿ ಕಾಣಲು ಸಾಧ್ಯವೇ ಇಲ್ಲ ಎಂಬುದು ಅವರಿಗೆ (ಇಂದಿರಾ ಗಾಂಧಿ) ಚೆನ್ನಾಗಿ ತಿಳಿದಿತ್ತು” ಎಂದು ಹಿರಿಯ ಪತ್ರಕರ್ತೆ ನೀರಜಾ ಚೌಧರಿ ಅವರು ‘ಹೌ ಪ್ರೈಮ್ ಮಿನಿಸ್ಟರ್ಸ್ ಡಿಸೈಡ್’ ಎಂಬ ಪುಸ್ತಕದಲ್ಲಿ ಬರೆದಿದ್ದರು.

ಇನ್ನು ಬಾಬೂಜಿಗೆ ಇದ್ದ ಮತ್ತೊಂದು ಅಡಚಣೆಯೆಂದರೆ ಜನತಾ ಪಕ್ಷದ ಸ್ನೇಹದಿಂದ ಜಗಜೀವನ್ ರಾಮ್ ಅವರ ಒಡನಾಡಿಯಾಗಿದ್ದ ಚರಣ್ ಸಿಂಗ್. ಚರಣ್ ಸಿಂಗ್ ಮತ್ತು ಇಂದಿರಾಗಾಂಧಿ ಇಬ್ಬರೂ ಉನ್ನತ ಹುದ್ದೆಗೆ ಏರಲು ತಮಗಿರುವ ಏಕೈಕ ಗಂಭೀರ ಸ್ಪರ್ಧಿಯೆಂದರೆ ಜಗಜೀವನ್ ರಾಮ್ ಎಂಬುದನ್ನು ಚೆನ್ನಾಗಿ ಅರಿತಿದ್ದರು. ಹಾಗಾಗಿ ತಾವು ಮೇಲುಗೈ ಸಾಧಿಸಬೇಕೆಂದರೆ ಆತನನ್ನು (ಜಗಜೀವನ್ ರಾಮ್) ಪಕ್ಕಕ್ಕೆ ತಳ್ಳಲೇಬೇಕು ಎಂಬ ಎಣಿಕೆಯಲ್ಲಿದ್ದರು” ಎಂದು ನೀರಜಾ ಚೌಧರಿ ಕಳೆದ ವರ್ಷ ಪ್ರಕಟಿಸಿರುವ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಭಾರತದ ಮೊದಲ ರಾಜಕೀಯ ಲೈಂಗಿಕ ಹಗರಣ ಸ್ಫೋಟಿಸಿದ್ದು ಹೇಗೆ?

ಪುತ್ರನ ಲೈಂಗಿಕ ಹಗರಣ ಸುದ್ದಿಯು ಬಟಾಬಯಲಾಗುತ್ತಿದ್ದಂತೆ ಅದು ಜಗಜೀವನ್ ರಾಮ್ ಮತ್ತು ಅವರ ಕುಟುಂಬಕ್ಕೆ ತೀವ್ರ ಮುಜುಗರವನ್ನು ತಂದೊಡ್ಡಿತ್ತು. ನಂತರ ಅದು ಅವರ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸಿತು. ಅವರ ಇಮೇಜ್‌ಗೆ ಭಾರೀ ಕಳಂಕವನ್ನು ಮೆತ್ತಿತು. ಇದು ಅವರನ್ನು ಪ್ರಧಾನಿ ಹುದ್ದೆಯಿಂದ ದೂರವಿಡುವಂತೆ ನೋಡಿಕೊಳ್ಳಲು ಸಾಕಾಯಿತು. ಘಟನೆಯ ನಂತರ, “ಜಗಜೀವನ್ ರಾಮ್ ಅವರ ಖ್ಯಾತಿಯು ಮಣ್ಣುಪಾಲಾಯಿತು. ಅದು ಅವರ ಮಹತ್ವಾಕಾಂಕ್ಷೆಗೆ ತೀವ್ರ ಹಿನ್ನಡೆಯಾಯಿತು” ಎಂದು ಪತ್ರಕರ್ತೆ ನೀರಜಾ ಚೌಧರಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಅದುವರೆಗೂ ತಾವೊಬ್ಬ ಪ್ರಾಮಾಣಿಕ ರಾಜಕಾರಣಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಜಗಜೀವನ್ ರಾಮ್, ವೈಯಕ್ತಿಕವಾಗಿ ತಮಗೆ ಸಂಬಂಧವಿಲ್ಲದಿದ್ದರೂ ನೈತಿಕ ಹೊಣೆ ಹೊತ್ತು ಅಧಿಕಾರದಿಂದ ದೂರವಾದರು. ಅದಷ್ಟೇ ಆಗಿದ್ದರೆ ಭಾರತದ ಮೊಟ್ಟಮೊದಲ ರಾಜಕೀಯ ಲೈಂಗಿಕ ಹಗರಣದ ಬಗ್ಗೆ ಈಗ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ. ಯಾಕೆಂದರೆ ಆ ಹಗರಣ ಸ್ಫೋಟಿಸಿದ್ದು ಕೇವಲ ಆಕಸ್ಮಿಕವಲ್ಲ. ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾಜಕೀಯ ತಂತ್ರಗಾರಿಕೆಗಳನ್ನು ನಾಜೂಕಾಗಿ ಹೆಣೆಯಲಾಯಿತು. ಆ ಕಾಲಕ್ಕೆ ಒಬ್ಬ ಮಹಾನಾಯಕ ಖುದ್ದಾಗಿ ಕಣಕ್ಕೆ ಇಳಿದುಬಿಟ್ಟಿದ್ದ. ಅದು ಆತನ ತಾಯಿಯ ರಾಜಕೀಯ ಹಾದಿ ಸುಗಮಗೊಳಿಸಿತು ಎಂಬುದು ಕುತೂಹಲಕಾರಿ ಸಂಗತಿ.

ಅದೊಂದು ದೊಡ್ಡ ಯೋಜನೆಯಾಗಿತ್ತು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಅತ್ಯುತ್ತಮವಾಗಿ ಯೋಜಿಸಲಾಯಿತು ಮತ್ತು ಅತ್ಯಂತ ವ್ಯವಸ್ಥಿತವಾಗಿ ಕಾರ್ಯಗತಗೊಳಿಸಲಾಗಿತ್ತು. ಒಂದು ಕಡೆ ಜಗಜೀವನ್ ರಾಮ್ ಅವರ ಸುಪುತ್ರ ಸುರೇಶ್ ಕುಮಾರ್ ರಾಮ್ ಅವರ ದುಷ್ಕೃತ್ಯಗಳು ಮತ್ತೊಂದೆಡೆ ಜನತಾ ಪಕ್ಷದ ಧುರೀಣರಾಗಿ ಗುರುತಿಸಿಕೊಂಡಿದ್ದ ಚರಣ್ ಸಿಂಗ್ ಮತ್ತು ರಾಜ್ ನಾರಾಯಣ್ ಅವರ ದುರಾಸೆಗಳ ಫಲವಾಗಿತ್ತು. ಅದಕ್ಕೆ ‘Operation Suresh Ram’ ಎಂಬ ಹೆಸರಿಡಲಾಗಿತ್ತು.

(ಇಂದಿರಾ ಕಾಂಗ್ರೆಸ್​ ಪರ) ಪರಿಸ್ಥಿತಿಯ ಲಾಭ ಪಡೆಯಲು ಚರಣ್ ಸಿಂಗ್ ಜೊತೆ ಕೈಜೋಡಿಸಿದ್ದು ಸಮಾಜವಾದಿ ರಾಜ್ ನಾರಾಯಣ್. ಇದೇ ರಾಜ್ ನಾರಾಯಣ್ 1977ರಲ್ಲಿ ರಾಯ್​ಬರೇಲಿ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಧಿಯನ್ನು ಹೀನಾಯವಾಗಿ ಸೋಲಿಸಿದ್ದರು.

ತನ್ನ ಪುತ್ರ ಸುರೇಶ್ ಕುಮಾರ್ ಆಗಸ್ಟ್​ 21ರಂದು ದಾಖಲಿಸಿದ್ದ FIRಗೆ ಅನುಸಾರವಾಗಿ ನಡೆದುಕೊಳ್ಳುವ ಸಲುವಾಗಿ ಬಾಬು ಜಗಜೀವನ್ ರಾಮ್ ಪ್ರಕರಣದ ಬಗ್ಗೆ ಬಹಿರಂಗವಾಗಿ ಒಂದೇ ಒಂದು ಮಾತನ್ನೂ ಆಡಿರಲಿಲ್ಲ. ಆಗಸ್ಟ್ 20 ರಂದು ನಿಜವಾಗಿ ಏನಾಯಿತು ಎಂಬುದು ಅಲ್ಲಿಯವರೆಗೆ ಸಾರ್ವಜನಿಕರಿಗೆ ತಿಳಿದಿರಲಿಲ್ಲ. ಆದರೆ ಮಾರನೆಯ ದಿನ ಆ ಒಬ್ಬ ಮಹಾನಾಯಕ ಅಣತಿಯಂತೆ ಎಲ್ಲವೂ ಬಟಾಬಯಲಾಗಿತ್ತು. ತನ್ಮೂಲಕ ಬಾಬು ಪ್ರಧಾನಿ ಆಸೆ ಕೈತಪ್ಪಿತ್ತು. ಆದರೆ ಪೂರ್ವಯೋಜನೆ ರೀತಿಯಲ್ಲಿ ಅದು ಇಂದಿರಾ ಕಾಂಗ್ರೆಸ್​​​ನ ಕೈಹಿಡಿದಿತ್ತು.

‘ಆಪರೇಷನ್ ಸುರೇಶ್ ರಾಮ್’ ಹೊರಗಿಟ್ಟ ವಾಸ್ತವಗಳು ಹೀಗಿದ್ದವು:

ಆಗಸ್ಟ್ 20 ರ ‘ಆಪರೇಷನ್ ಸುರೇಶ್ ರಾಮ್’ ಎಂಬುದು ವಾಸ್ತವವಾಗಿ “ರಾಜ್ ನಾರಾಯಣ್ ಅವರ ಆಶ್ರಯದಲ್ಲಿದ್ದ ಜನತಾ ಪಕ್ಷದ ಇಬ್ಬರು ಕಟ್ಟಾಳುಗಳಾದ ಕೆಸಿ ತ್ಯಾಗಿ ಮತ್ತು ಓಂ ಪಾಲ್ ಸಿಂಗ್ ಅವರು ದೀರ್ಘಕಾಲದಿಂದ ನಡೆಸಿದ್ದ ಕಾರ್ಯತಂತ್ರದ ಫಲ ಅದಾಗಿತ್ತು. ಹಲವಾರು ದಿನಗಳಿಂದ ಸುರೇಶ್ ಕುಮಾರ್ ಅವರ ಮೇಲೆ ಈ ಜೋಡಿ ನಿಗಾ ಇರಿಸಿತ್ತು ಎಂದು ಲೇಖಕಿ ನೀರಜಾ ಚೌಧರಿ ‘ಪ್ರಧಾನ ಮಂತ್ರಿಗಳು ಹೇಗೆ ನಿರ್ಧರಿಸುತ್ತಾರೆ’ ಎಂಬ ಪುಸ್ತಕದಲ್ಲಿ ವಿವರವಾಗಿ ಹೇಳಿದ್ದಾರೆ.

’21 ಆಗಸ್ಟ್ 1978 ರಂದು, ದೆಹಲಿಯ ಹೊರವಲಯದಲ್ಲಿರುವ ಮೋಹನ್ ನಗರದಲ್ಲಿರುವ ಮೋಹನ್ ಮೀಕಿನ್ (ಪ್ರಸಿದ್ಧ ಓಲ್ಡ್ ಮಾಂಕ್ ರಮ್ ತಯಾರಕರು) ಸ್ಥಾವರದ ಗೇಟ್‌ ಮುಂಭಾಗದಲ್ಲಿ ಕಾರು ಅಪಘಾತ ಸಂಭವಿಸಿತು. ಮರ್ಸಿಡಿಸ್ ಕಾರು ಒಬ್ಬ ವ್ಯಕ್ತಿಗೆ ಡಿಕ್ಕಿ ಹೊಡೆದು ಆತನನ್ನು ಸಾಯಿಸಿತ್ತು. ಕಾರಿನೊಳಗೆ ಒಬ್ಬ ಪುರುಷ ಮತ್ತು ಯುವತಿ ಇದ್ದರು. ಅಪಘಾತದಿಂದ ವ್ಯಕ್ತಿ ಸತ್ತಿರುವುದನ್ನು ಕಂಡು ತಮ್ಮ ಮೇಲೆ ದಾಳಿ ನಡೆಸುತ್ತಾರೆ ಎಂದು ಭೀತಿಗೊಳಗಾಗುತ್ತಾರೆ. ತಕ್ಷಣ ಅವರು ಆ ದೊಡ್ಡ ಗೇಟ್​ನತ್ತ ದೌಡಾಯಿಸುತ್ತಾರೆ. ಅಪಘಾತವನ್ನು ನೋಡಿದ ಅಲ್ಲಿದ್ದ ಕಾವಲುಗಾರನು ತಕ್ಷಣ ಇಂಟರ್‌ಕಾಮ್‌ ಮೂಲಕ ಮ್ಯಾನೇಜರ್​​ ಅನಿಲ್ ಬಾಲಿಗೆ ಕರೆ ಮಾಡಿ ಎಚ್ಚರಿಸುತ್ತಾರೆ. ಹೊರಗೆ ಬಂದವನೇ ಮ್ಯಾನೇಜರ್​​ ಅನಿಲ್ ಬಾಲಿ ರಕ್ಷಣಾ ಸಚಿವ ಜಗಜೀವನ್ ರಾಮ್ ಅವರ ಪುತ್ರ ಸುರೇಶ್ ರಾಮ್​ನನ್ನು ಗುರುತಿಸುತ್ತಾನೆ. ಮತ್ತು ಅವರನ್ನು ಸ್ಥಾವರದ ಒಳಗೆ ಕರೆದೊಯ್ಯುತ್ತಾನೆ’ ಎಂದೆಲ್ಲಾ ಪುಸ್ತಕದಲ್ಲಿ ವಿವರಿಸಲಾಗಿದೆ.

ಈ ಮಧ್ಯೆ, ಮ್ಯಾನೇಜರ್ ಬಾಲಿಗೆ ಸುರೇಶ್ ಕುಮಾರ್ ಒಂದು ಮಾತು ಹೇಳುತ್ತಾನೆ. ತಮ್ಮಿಬ್ಬರನ್ನೂ ಕೆಲವರು ಹಿಂಬಾಲಿಸುತ್ತಿದ್ದಾರೆ ಎಂದು ಹೇಳುತ್ತಾನೆ. ಬಾಬೂಜೀ ದೇಖ್ ಲೆಂಗೆ ಗಾಡಿ ಕೊ (ನನ್ನ ತಂದೆ ಕಾರನ್ನು ನೋಡಿಕೊಳ್ಳುತ್ತಾರೆ) – ಎಂದು ಬಾಲಿಗೆ ಹೇಳುತ್ತಾ ಸುರೇಶ್ ರಾಮ್ ಹಾನಿಗೊಳಗಾದ ಕಾರಿನ ಬಗ್ಗೆ ತಿಳಿಸುತ್ತಾ ಮೋಹನ್ ಮೇಕಿನ್ ಸಂಸ್ಥೆಯ ಕಾರಿನಲ್ಲಿ ದೆಹಲಿಗೆ ಹೊರಟುಹೋಗುತ್ತಾರೆ.

ಬಾಲಿಗೆ ಸುರೇಶ್ ರಾಮ್ ಇನ್ನೂ ಒಂದಷ್ಟು ಗುಪ್ತ್​​ ಗುಪ್ತ್​​​ ವಿಷಯಗಳನ್ನು ಹೇಳಿದ್ದ. ಅದು ಆ ದಿನ ನಿಜವಾಗಿ ನಡೆದಿದ್ದ ಸಂಗತಿಯ ಬಗ್ಗೆ ಬೆಳಕು ಚೆಲ್ಲಿತ್ತು. ಸುರೇಶ್ ರಾಮ್ ತಾನೇ ಕ್ಲಿಕ್ಕಿಸಿರುವುದೆಂದು ಹೇಳಿದ್ದ 40-50 ಲೈಂಗಿಕ ಫೋಟೋಗಳು ಈ ಸಮಯದಲ್ಲಿ ಅವನ ಕಾರಿನ ಡ್ಯಾಷ್​​ ಬೋರ್ಡ್​​ನಲ್ಲಿ ಅಡಗಿಕೊಂಡಿದ್ದವು.

“ಅವನು (ಸುರೇಶ್ ರಾಮ್) ತನ್ನ ಗೆಳತಿ ಸುಷ್ಮಾ ಚೌಧರಿಯನ್ನು ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ಮತ್ತು ಅವಳೊಂದಿಗಿನ ಲೈಂಗಿಕ ಕ್ರಿಯೆಯಿಂದ ಪರಮಾನಂದ ಅನುಭವಿಸಿಲು ಆ ಕಾಲದ ‘ಪೋಲರಾಯ್ಡ್ ಕ್ಯಾಮೆರಾ’ದಲ್ಲಿ ಫೋಟೋಗಳನ್ನು ತೆಗೆದಿಟ್ಟುಕೊಂಡಿದ್ದ. ಆ ಫೋಟೋಗಳು ಕಾರಿನ ಡ್ಯಾಷ್​​ ಬೋರ್ಡ್​​ನಲ್ಲಿದ್ದು, ಕಾರನ್ನು ಹಿಂಬಾಲಿಸಿ ಬಂದವರಿಗೆ ತಿಳಿದಿತ್ತು. ಮತ್ತು ಅದೇ ಫೋಟೋಗಳನ್ನು ಕಬಳಿಸಲು ಹೊಂಚುಹಾಕುತ್ತಿದ್ದರು. ಹಾಗಾಗಿ ಸುರೇಶ್ ರಾಮ್ ಚಲಾಯಿಸುತ್ತಿದ್ದ ಕಾರು ಅಪಘಾತವಾಗುತ್ತಿದ್ದಂತೆ ಅದರಲ್ಲಿದ್ದ ಡ್ಯಾಷ್​ಬೋರ್ಡ್​​​ಗೆ ಕೈಹಾಕಿದ್ದರು ಎಂದು ನೀರಜಾ ಚೌಧರಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಸುರೇಶ್ ಕುಮಾರ್ ರಾಮ್ ಮತ್ತು ಆತನ ಗೆಳತಿಯ ಗುಪ್ತ್​​ ಗುಪ್ತ್​​​ ಚಿತ್ರಗಳ ಹೆಚ್ಚಿನ ವಿವರಗಳನ್ನು ನಂತರ ರಾಜ್ ನಾರಾಯಣ್ ಬಹಿರಂಗಪಡಿಸಿದ್ದರು.

ಇದನ್ನೂ ಓದಿ:  Trending -Late Marriages -ಲೇಟ್​ ಆಗಿ ಮದುವೆ ಆಗುವುದು! ಏನಿದು ಲೇಟೆಸ್ಟ್​ ಟ್ರೆಂಡ್​? ತಡವಾಗಿ ಮದುವೆ ಆಗುವುದರಿಂದ ಲಾಭ ಏನು? ನಷ್ಟವೆಷ್ಟು?

“ರಾಜ್ ನಾರಾಯಣ್ ಅದುವರೆಗೂ ಮರ್ಯಾದಾ ಪುರುಷೋತ್ತಮನ ರಾಮಾಯಣವನ್ನು ಜಪಿಸುತ್ತಾ, ಅದರಲ್ಲಿನ ಆಣಿಮುತ್ತುಗಳನ್ನು ಉಲ್ಲೇಖಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಆದರೆ ಯಾವಾಗ ಬಾಬು ಮಗನ 40-50 ಕಾಮಪಟಗಳು ಕೈಗೆ ಬಂದವೋ ಸಂದರ್ಭಕ್ಕೆ ತಕ್ಕಂತೆ ಅವರು ಪಕ್ಕಾ ಕಾಮ ಸೂತ್ರವನ್ನು ಜಪಿಸತೊಡಗಿದರು” ಎಂದು ಆಗಸ್ಟ್ 1978 ರಲ್ಲಿ ಇಂಡಿಯಾ ಟುಡೇ ಮ್ಯಾಗಜೀನ್ ವರದಿ ಮಾಡಿತ್ತು. “ನೀವು ಖಜುರಾಹೋದಲ್ಲಿ ನೋಡುವಂತಹ ಕಾಮ ಸೂತ್ರ ಇದಾಗಿದೆ. ಹೇಳಬೇಕು ಅಂದರೆ ಅದಕ್ಕಿಂತಲೂ ತುಸು ಹೆಚ್ಚೇ ಅಶ್ಲೀಲವಾಗಿದೆ ಎಂದು ರಾಜ್ ನಾರಾಯಣ್ ತನ್ನ ರಾಜಕೀಯ ಸ್ನೇಹಿತನ ಪುತ್ರನಿಗೆ ಸೇರಿದ ಫೋಟೋಗಳ ಬಗ್ಗೆ ಹೇಳಿಕೊಂಡು ಕೆಟ್ಟದ್ದಾಗಿ ನಗಾಡಿದ್ದರು.

ಈ ಕಾಮ ಸೂತ್ರದ ಫೋಟೋಗಳತ್ತ ಯಾರೇ ಕಣ್ಣು ಹಾಯಿಸಿದರೂ ಅದರಲ್ಲಿರುವ ಜೋಡಿ ಸ್ವಇಚ್ಛೆಯಿಂದ ಪೋಸ್ ನೀಡಿರುವುದು ಸ್ಪಷ್ಟವಾಗುತ್ತದೆ ಎಂದು ರಾಜ್ ನಾರಾಯಣ್ ಹೇಳಿದರು. ಹಾಗೆಲ್ಲಾ ಪೋಸ್ ಕೊಡುವಂತೆ ಯಾರನ್ನೂ ಒತ್ತಾಯಿಸಲು ಸಾಧ್ಯವಿಲ್ಲ ಎಂಬುದು ನಾರಾಯಣರ ವಾದವಾಗಿತ್ತು. ಸದಭಿರುಚಿ ಕಾಪಾಡುವ ಸಲುವಾಗಿ ಅಂದಿನ ಬಹುತೇಕ ಪತ್ರಿಕೆಗಳು ರಾಜ್ ನಾರಾಯಣ್ ಫೋಟೋಗಳ ಕುರಿತು ಹೇಳಿದ ಕೈ -ಬಾಯಿ ಸಂಜ್ಞೆಗಳ ವಿವರಣೆಯನ್ನು ಪ್ರಕಟಿಸಲಿಲ್ಲ! ಪತ್ರಿಕೆಯವರ ಎದುರು ಕೆಟ್ಟದಾಗಿ, ಏಕಾಂಗಿಯಾಗಿ ಅಭಿನಯಿಸುತ್ತಾ ವರ್ಣರಂಜಿತವಾಗಿ ರಾಜ್ ನಾರಾಯಣ್ ಫೋಟೋಗಳ ಬಗ್ಗೆ ಹೇಳಿದ್ದರು. ಅದರ ಏಕೈಕ ಉದ್ದೇಶ ಜಗಜೀವನ್​ ರಾಮ್​ನನ್ನು ಹಣಿಯುವುದಾಗಿತ್ತು.

ತಮ್ಮ ವ್ಯಕ್ತಿತ್ವಕ್ಕೆ ಆಗುತ್ತಿರುವ ಹಾನಿಯನ್ನು ನಿಯಂತ್ರಿಸಲು, ಜಗಜೀವನ್ ರಾಮ್ ಅವರು ಕಪಿಲ್ ಮೋಹನ್ (ಅಪಘಾತ ನಡೆದ ಸ್ಥಳದೆದುರು ಇದ್ದ ಮೋಹನ್ ಮೇಕಿನ್ ಸಂಸ್ಥೆಯ ಮುಖ್ಯಸ್ಥ) ಮನೆಯಲ್ಲಿ ರಾಜ್ ನಾರಾಯಣ್ ಅವರನ್ನು ಭೇಟಿಯಾಗಿ ಚೌಕಾಶಿ ಮಾಡಲು ಮುಂದಾದರು. ಆದರೆ ಅದು ವಿಫಲವಾಯಿತು. “ನಾನು ಶೀಘ್ರದಲ್ಲೇ ಪ್ರಧಾನಿಯಾಗಲಿದ್ದೇನೆ, ನಿಮ್ಮಲ್ಲಿ ಯಾರಿಗಾದರೂ ಮಂತ್ರಿಗಿರಿ ಬೇಕೆಂದರೆ ತಿಳಿಸು” ಎಂದು ಪರಿಪರಿಯಾಗಿ ಬೇಡಿಕೊಂಡರು. ತನ್ಮೂಲಕ ನಾರಾಯಣ್‌ಗೆ ಆಮಿಷವೊಡ್ಡಿದರು. ಆದರೆ ಒಪ್ಪಂದಕ್ಕೆ ಬರಲು ವಿಫಲವಾಗುತ್ತಿದ್ದಂತೆ ಜಗಜೀವನ್ ರಾಮ್ ಅವರು ಕಪಿಲ್ ಮೋಹನ್ ಮನೆಯನ್ನು ತೊರೆದರು.

“ಆಜ್ ಯೇ ಕಾಬೂ ಮೇ ಆಯೇ (ಈಗ ಅವನು ನಮ್ಮ ಹಿಡಿತಕ್ಕೆ ಸಿಕ್ಕಿದ) ಎಂದು ಜಗಜೀವನ್ ರಾಮ್ ಹೋದ ನಂತರ ಕಪಿಲ್ ಮೋಹನ್​​ಗೆ ರಾಜ್ ನಾರಾಯಣ್ ಹೇಳಿದರು. ಅದು ಇಡೀ ಒಳಸಂಚಿನ ಉದ್ದೇಶವನ್ನು ಸಾರುವಂತಿತ್ತು.

ಆಕಾಶವೇ ಕಳಚಿಬಿದ್ದಂತೆ ವ್ಯಾಕುಲಗೊಂಡ ಜಗಜೀವನ್ ರಾಮ್ ಇದ್ದಕ್ಕಿದ್ದಂತೆ ಕಪಿಲ್ ಮೋಹನ್ ಅವರ ಮನೆಯಿಂದ ಹೊರಟುಹೋದರು. ನಂತರ, ಮೋಹನ್ ಅವರ ಮ್ಯಾನೇಜರ್​​ ಅನಿಲ್ ಬಾಲಿ ಮದ್ಯದ ದೊರೆಗಳ ಆಣತಿಯಂತೆ ಸುರೇಶ್ ಕುಮಾರ್ ಜೋಡಿಯ ಫೋಟೋಗಳನ್ನು ಸಂಜಯ್ ಗಾಂಧಿಗೆ ಹಸ್ತಾಂತರಿಸಲು ಸೀದಾ ಇಂದಿರಾ ಗಾಂಧಿಯ ಮನೆಗೆ ತೆರಳಿದ.

ಇಡೀ ಪ್ರಕರಣದ ನಿಜವಾದ ಎಪಿಸೋಡ್​ ಅಲ್ಲಿ ಬಿಟ್ಟಿಕೊಳ್ಳುತ್ತದೆ: ನಡು ರಾತ್ರಿ 1 ಗಂಟೆಗೆ ಎದ್ದ ಸಂಜಯ್ ಗಾಂಧಿ, “ಕೆಸಿ ತ್ಯಾಗಿ ಮತ್ತು ಓಂ ಪಾಲ್ ಸಿಂಗ್ ಅವರಿಬ್ಬರನ್ನೂ ಸುರಕ್ಷಿತ ಪಕಡ್​ಬಂಧಿಯಲ್ಲಿ ಇರಿಸಿಕೊಳ್ಳಿ” ಎಂದು ಮ್ಯಾನೇಜರ್​​ ಬಾಲಿಗೆ ಸೂಚಿಸುತ್ತಾರೆ. ಈ ಮಧ್ಯೆ, ಇಂದಿರಾ ಗಾಂಧಿ ಸಹ ಮದ್ಯದ ಮಾಲೀಕ ಮೋಹನ್ ಮತ್ತು ಆತನ ಗ್ಯಾಂಗ್​​ಗೆ ‘ರಾಜ್ ನಾರಾಯಣ್ ಅವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ’ ಎಂದು ದೊಡ್ಡ ಆದೇಶವೊಂದನ್ನು ನೀಡುತ್ತಾರೆ ಎಂದು ‘ಹೌ ಪ್ರೈಮ್ ಮಿನಿಸ್ಟರ್ಸ್ ಡಿಸೈಡ್’ ಪುಸ್ತಕದಲ್ಲಿ ತಿಳಿಸಲಾಗಿದೆ.

ಪ್ರಜ್ವಲ್​​​ ರೇವಣ್ಣ ಅವರದ್ದು ಎನ್ನಲಾದ ಲೈಂಗಿಕ ವಿಡಿಯೋ, ಫೋಟೋಗಳನ್ನು ಜಗತ್ತಿಗೆ ತೋರಿಸಬಾರದಿತ್ತು ಎಂದು ಇಂದು ಎಲ್ಲೆಡೆ ಬೊಂಬಡಾ ಹೊಡೆಯುತ್ತಿದ್ದಾರೆ. ಆದರೆ ಅಂದು ಸುರೇಶ್ ಕುಮಾರ್ ಜೋಡಿಯ ಪರಮ ಅಸಹ್ಯ ಫೋಟೋಗಳನ್ನು ಖುದ್ದು ಸಂಜಯ್ ಗಾಂಧಿ ಅವರ ಪತ್ನಿ ಮನೇಕಾ ಗಾಂಧಿ ಅವರು ತಾವೇ ಎಡಿಟರ್​ ಆಗಿದ್ದ ಸೂರ್ಯ ಮ್ಯಾಗಜೀನ್‌ನಲ್ಲಿ ಖುಲ್ಲಂಖುಲ್ಲಾ ಎಲ್ಲಾ ಪ್ರಕಟಿಸಿದ್ದರು.

ನಲವತ್ತಾರು ವರ್ಷದ ಸುರೇಶ್ ರಾಮ್ ಮತ್ತು ಸುಷ್ಮಾ ಚೌಧರಿ ಜೋಡಿಯ ಲೈಂಗಿಕ ಚಮತ್ಕಾರಗಳು ಎರಡು ಪುಟಗಳಲ್ಲಿ ಸ್ಪ್ರೆಡ್​​ ಆಗಿದ್ದವು. ‘ದಿ ರಿಯಲ್ ಸ್ಟೋರಿ’ ಎಂಬ ಶೀರ್ಷಿಕೆಯಲ್ಲಿ ಲೇಖನವನ್ನು ಮನೇಕಾ ಗಾಂಧಿ ಪ್ರಕಟಿಸಿದ್ದರು ಎಂದು ನೀರಜಾ ಚೌಧರಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಸುರೇಶ್ ರಾಮ್ ಮತ್ತು ಅವರ ರೊಮ್ಯಾಂಟಿಕ್​​ ಪ್ರೇಯಸಿ ಸುಷ್ಮಾ ಚೌಧರಿ ಲೈಂಗಿಕ ಚಮತ್ಕಾರಗಳಲ್ಲಿ ತೊಡಗಿರುವ ಎರಡು ಪುಟಗಳ ಛಾಯಾಚಿತ್ರಗಳನ್ನು ಪ್ರಕಟಿಸುವ ಮೂಲಕ ತುರ್ತು ಪರಿಸ್ಥಿತಿಯ ನಂತರ ದೇಶದಲ್ಲಿ ಬಿಸಿ ದೋಸೆಯಂತೆ ಮಾರಾಟ ಕಂಡ ಪತ್ರಿಕಾ ಸರಕು ಅದಾಗಿತ್ತು ಎಂದು ಹಿರಿಯ ಪತ್ರಕರ್ತ ದಿಲೀಪ್ ಬಾಬ್ ಅವರು 1977 ರಲ್ಲಿ ಇಂಡಿಯಾ ಟುಡೇ ವಾರಪತ್ರಿಕೆಯಲ್ಲಿ ವರದಿ ಮಾಡಿದ್ದರು. ಆದರೆ, ಸೂರ್ಯ ಪತ್ರಿಕೆಯ ಸಂಪಾದಕಿ ಮನೇಕಾ ಗಾಂಧಿ ಅವರು ಪ್ರಕರಣದ ಕುರಿತು ಬಹಿರಂಗವಾಗಿ ಯಾವುದೇ ಪ್ರತಿಕ್ರಿಯೆ/ ಮಾಹಿತಿಯನ್ನು ಹಂಚಿಕೊಳ್ಳಲು ಮುಂದಾಗಲಿಲ್ಲ.

ಈ ಲೈಂಗಿಕ ಹಗರಣದ ಪ್ರಕಟಣೆಗಳು ದೈನಂದಿನ ಪತ್ರಿಕಾ ವಿತರಣೆ ಜಾಲಗಳ ಮೂಲಕ ಹಂಚಿಕೆಯಾಗಲಿಲ್ಲ ಎಂಬುದು ಗಮನಾರ್ಹ. ಖುದ್ದಾಗಿ ವಿತರಕರಿಗೆ ಮಾರಲಾಯಿತು. ತಮ್ಮ ಪತ್ನಿಯ ಪತ್ರಿಕೆ ಪರವಾಗಿ ಸ್ವತಃ ಸಂಜಯ್ ಗಾಂಧಿ ಅವರೇ ಗುಪ್ತ್​ ಗುಪ್ತ್​​​ ಕಾರ್ಯಾಚರಣೆಗಳನ್ನು ನಿರ್ದೇಶಿಸಿದರು ಎಂದು ದಿಲೀಪ್ ಬಾಬ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ತುರ್ತು ಪರಿಸ್ಥಿತಿಯ ನಂತರ ಕುಸಿದುಬಿದ್ದಿದ್ದ ಸೂರ್ಯ ಮ್ಯಾಗಜಿನ್‌ ಮಾರಾಟವು ಇದರಿಂದ ಗಗನಕ್ಕೆ ಚಿಮ್ಮಿತ್ತು. ಆದರೆ ಇತ್ತ ಜಗಜೀವನ್ ರಾಮ್ ಅವರ ಖ್ಯಾತಿಯು ಪಾತಾಳ ಕಚ್ಚಿತ್ತು. ಮೇನಕಾ ಗಾಂಧಿಯ ಸೂರ್ಯ ಪತ್ರಿಕೆಗಳು ಕಾಳಸಂತೆಯಲ್ಲಿಯೂ ಮಾರಾಟವಾದವು ಎಂದು ನೀರಜಾ ಚೌಧರಿ ಬಿಬಿಸಿ ಸುದ್ದಿ ಸಂಸ್ಥೆಗೆ ತಿಳಿಸಿದ್ದರು.

ತಮ್ಮ ಸುಪುತ್ರ ನಡೆಸಿದ್ದ ಲೈಂಗಿಕ ಚಮತ್ಕಾರಗಳ ಹಗರಣದಿಂದಾಗಿ ಜಗಜೀವನ್ ರಾಮ್ ಅವರು ಕಂಡ ರಾಜಕೀಯ ಹಾನಿ/ಅವನತಿ ಮತ್ತೆಂದಿಗೂ ಸರಿಪಡಿಸಲಾಗಲಿಲ್ಲ ಎಂಬುದು ವಾಸ್ತವದ ಸಂಗತಿಯಾಗಿತ್ತು. 1979ರಲ್ಲಿ ವಿರೋಧ ಪಕ್ಷದ ನಾಯಕರಾಗಿ ಮತ್ತು 1986ರ ವರೆಗೆ ನಿರಂತರ ಸಂಸದೀಯ ಓಟದ ಮೂಲಕ ದಾಖಲೆ ನಿರ್ಮಿಸಿದ್ದರೂ ಜಗಜೀವನ್ ರಾಮ್ ಅವರಿಗೆ ಅವರ ಪಾಲಿನ (ಪ್ರಧಾನಿ) ಕುರ್ಚಿ ಭಾಗ್ಯ ಮತ್ತೆಂದಿಗೂ ಸಿಗಲೇ ಇಲ್ಲ. ಹೀಗೆ… ಸ್ವತಂತ್ರ ಭಾರತದ ಮೊದಲ ರಾಜಕೀಯ ಲೈಂಗಿಕ ಹಗರಣವು ಪ್ರಧಾನಿ ಕನಸನ್ನು ಹೀಗೆ ಭಂಗಗೊಳಿಸಿತ್ತು.

ಮಗ ಸುರೇಶ್ ಕುಮಾರ್ ರಾಮ್ ಅವರ ಹಗರಣದ ಹೊರೆ ಬಾಬು ಜಗಜೀವನ್ ರಾಮ್ ಅವರನ್ನು ಛಿದ್ರಗೊಳಿಸಿತ್ತು. ಕಾಲಾಂತರದಲ್ಲಿ ಅವರು ನಿಗೂಢವಾಗಿ ಮೃತಪಟ್ಟರು. ಪ್ರಕರಣದ ಹಿನ್ನೆಲೆಯಲ್ಲಿ ಮೈ ಠೂಟ್ ಗಯಾ ಹೂಂ” (ನಾನು ಛಿದ್ರಗೊಂಡ ಮನುಷ್ಯನಾಗಿದ್ದೇನೆ) ಎಂದು ತಮ್ಮ ಆಪ್ತರಲ್ಲಿ ಒಬ್ಬರಾದ ಕಿಶನ್ ಕಾಂತ್ ಅವರಿಗೆ ಬಾಬು ಜಗಜೀವನ್ ರಾಮ್ ಹೇಳಿದ್ದರು. ಇದರೊಂದಿಗೆ ದೇಶದ ಚೊಚ್ಚಲ ಪೊಲಿಟಿಕಲ್​ ಕ್ರೈಂ ಥ್ರಿಲ್ಲರ್ ವೃತ್ತಾಂತವನ್ನು ಚೆನ್ನಾಗಿ ಅರ್ಥಿಸಿಕೊಳ್ಳಬಹುದಾಗಿದೆ. ಈಗ, ಪ್ರಜ್ವಲ್​ ರೇವಣ್ಣ ಎಪಿಸೋಡ್​ ಅನ್ನು ಮತ್ತೊಮ್ಮೆ ಮೆಲುಕು ಹಾಕಿ…

ಇನ್ನಷ್ಟು  ಪ್ರೀಮಿಯಂ ಲೇಖನಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

ಈ ರಾಶಿಯವರ ಸಣ್ಣ ನಿರ್ಲಕ್ಷ್ಯವು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು
ಈ ರಾಶಿಯವರ ಸಣ್ಣ ನಿರ್ಲಕ್ಷ್ಯವು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು
ಸಂಜು 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ
ಸಂಜು 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ
ಅದ್ದೂರಿ, ಸಡಗರದ ದಸರಾ ಉತ್ಸವ, ಸಿದ್ದರಾಮಯ್ಯ ಸರ್ಕಾರಕ್ಕೆ ಫುಲ್ ಮಾರ್ಕ್ಸ್
ಅದ್ದೂರಿ, ಸಡಗರದ ದಸರಾ ಉತ್ಸವ, ಸಿದ್ದರಾಮಯ್ಯ ಸರ್ಕಾರಕ್ಕೆ ಫುಲ್ ಮಾರ್ಕ್ಸ್
ಜಂಬೂ ಸವಾರಿಗೆ ಮಳೆ ಕಾಟವಿಲ್ಲ, ದಸರಾ ಉತ್ಸವದಲ್ಲಿ ಭಾಗಿಯಾದವರು ನಿರಾಳ
ಜಂಬೂ ಸವಾರಿಗೆ ಮಳೆ ಕಾಟವಿಲ್ಲ, ದಸರಾ ಉತ್ಸವದಲ್ಲಿ ಭಾಗಿಯಾದವರು ನಿರಾಳ
ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಸಹ ಚನ್ನಪಟ್ಟದಿಂದ ಗೆಲ್ತಾನೆ: ನಿಖಿಲ್
ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಸಹ ಚನ್ನಪಟ್ಟದಿಂದ ಗೆಲ್ತಾನೆ: ನಿಖಿಲ್
ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ
ನಂದಿಗಿರಿಧಾಮಕ್ಕೆ ಹರಿದು ಬಂದ ಜನ ಸಾಗರ: ನಡುರಸ್ತೆಯಲ್ಲೇ ನಿಂತ ವಾಹನಗಳು
ನಂದಿಗಿರಿಧಾಮಕ್ಕೆ ಹರಿದು ಬಂದ ಜನ ಸಾಗರ: ನಡುರಸ್ತೆಯಲ್ಲೇ ನಿಂತ ವಾಹನಗಳು