ನವದೆಹಲಿ, ಏಪ್ರಿಲ್ 18: ಎಲ್ಲಾ ಇವಿಎಂ ಮೆಷೀನ್ಗಳನ್ನು (EVM machine) ಪ್ರತಿಯೊಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಅಣಕು ಮತದಾನದ ಮೂಲಕ ಪರಿಶೀಲನೆ ನಡೆಸಲಾಗುತ್ತದೆ ಎಂದು ಚುನಾವಣಾ ಆಯೋಗವು (Election Commission) ಇವಿಎಂ ಮತದಾನ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಸುಪ್ರೀಂಕೋರ್ಟ್ಗೆ (Supreme Court) ಮಾಹಿತಿ ನೀಡಿದೆ. ಎಲ್ಲಾ ವಿವಿಪ್ಯಾಟ್ ದಾಖಲೆಗಳನ್ನು ಇವಿಎಂನೊಂದಿಗೆ ಪೂರ್ಣವಾಗಿ ತಾಳೆಯಾಗಬೇಕೆಂದು ಕೋರಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ. ಈ ವೇಳೆ ಚುನಾವಣಾ ಆಯೋಗವು ಇವಿಎಂ ಮತದಾನ ವ್ಯವಸ್ಥೆ ಬಗ್ಗೆ ಕೋರ್ಟ್ಗೆ ವಿವರಣೆ ಕೊಟ್ಟಿದೆ.
ಇವಿಎಂ ಮೆಷೀನ್ನಲ್ಲಿ ಯಾವ ಬಟನ್ ಯಾವ ಅಭ್ಯರ್ಥಿಗೆ ಹೋಗುತ್ತದೆ ಎಂಬುದು ಇವಿಎಂ ತಯಾರಕರಿಗೆ ಗೊತ್ತಿರುವುದಿಲ್ಲ. ಯಾವ ಇವಿಎಂ ಯಾವ ರಾಜ್ಯಕ್ಕೆ ಹೋಗುತ್ತದೆ, ಯಾವ ಕ್ಷೇತ್ರಕ್ಕೆ ಹೋಗುತ್ತದೆ ಎಂಬ ಮಾಹಿತಿಯೂ ತಿಳಿದಿರುವುದಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇವಿಎಂ ವೋಟಿಂಗ್ ಯೂನಿಟ್ನಲ್ಲಿ ಬ್ಯಾಲಟ್ ಯೂನಿಟ್, ಕಂಟ್ರೋಲ್ ಯೂನಿಟ್ ಮತ್ತು ವಿವಿಪ್ಯಾಟ್ ಯೂನಿಟ್ ಎಂಬ ಮೂರು ವಿಭಾಗಗಳಿರುತ್ತವೆ. ಇದರಲ್ಲಿ ವಿವಿಪ್ಯಾಟ್ ಒಂದು ರೀತಿಯಲ್ಲಿ ಪ್ರಿಂಟರ್ ರೀತಿ. ಮತದಾನ ನಡೆಯಲು ಏಳು ಮುಂಚೆ ವಿವಿಪ್ಯಾಟ್ ಮೆಷೀನ್ನ ಫ್ಲ್ಯಾಷ್ ಮೆಮೋರಿಯಲ್ಲಿ ಅಭ್ಯರ್ಥಿಗಳಿಗೆ ಅಲಾಟ್ ಆದ ಚಿಹ್ನೆಗಳನ್ನು ಅಪ್ಲೋಡ್ ಮಾಡಲಾಗುತ್ತದೆ. ಇದು ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳ ಸಮ್ಮುಖದಲ್ಲೇ ನಡೆಯುತ್ತದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಸುಪ್ರೀಂ ನ್ಯಾಯಪೀಠಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ಬೇಕಂತಲೇ ಮಾವಿನ ಹಣ್ಣು ತಿನ್ನುತ್ತಿದ್ದಾರೆ: ಇಡಿ ದೂರು
ಬ್ಯಾಲಟ್ ಯೂನಿಟ್ನಲ್ಲಿ ಮೂಲದಲ್ಲಿ ಕೇವಲ ಬಟನ್ಗಳು ಇರುತ್ತವೆ. ಇವುಗಳಿಗೆ ಅಭ್ಯರ್ಥಿಗಳ ಚಿಹ್ನೆ ನಂತರದಲ್ಲಿ ನಮೂದಿಸಲಾಗುತ್ತದೆ. ಬಟನ್ ಒತ್ತಿದಾಗ ಬ್ಯಾಲಟ್ ಯೂನಿಟ್ನಿಂದ ಕಂಟ್ರೋಲ್ ಯೂನಿಟ್ಗೆ ಸಂದೇಶ ಹೋಗುತ್ತದೆ. ಇದು ವಿವಿಪ್ಯಾಟ್ ಯೂನಿಟ್ಗೆ ಅಲರ್ಟ್ ಹೊರಡಿಸುತ್ತದೆ. ಒತ್ತಲಾಗಿರುವ ಬಟನ್ಗೆ ಜೋಡಿತವಾದ ಚಿಹ್ನೆಯನ್ನು ವಿವಿಪ್ಯಾಟ್ ಯೂನಿಟ್ ಪ್ರಿಂಟ್ ಮಾಡುತ್ತದೆ ಎಂದು ಎಲೆಕ್ಷನ್ ಕಮಿಷನ್ ಪ್ರತಿನಿಧಿಗಳು ಕೋರ್ಟ್ನಲ್ಲಿ ವಿವರಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ