
ನವದೆಹಲಿ, ಡಿಸೆಂಬರ್ 2: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russia President Putin) ಅವರ ಭಾರತದ ಭೇಟಿಗೂ ಮುನ್ನ ದೆಹಲಿಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ. ರಷ್ಯಾ ಅಧ್ಯಕ್ಷ ಪುಟಿನ್ ಅವರ ವಾಸ್ತವ್ಯದ ಉದ್ದಕ್ಕೂ ಕಟ್ಟುನಿಟ್ಟಿನ ಸುರಕ್ಷತೆಯನ್ನು ಒದಗಿಸಲು ಅವರ ಭದ್ರತೆಯನ್ನು ಭಾರತ ಮತ್ತು ರಷ್ಯಾದ ಏಜೆನ್ಸಿಗಳು ಜಂಟಿಯಾಗಿ ಸಂಘಟಿಸುತ್ತಿವೆ. ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿರುವ ರಷ್ಯಾದ ವಿಶೇಷ ಭದ್ರತಾ ತಂಡವು ಪುಟಿನ್ ಅವರ ಭೇಟಿಗೆ ಕೆಲವು ದಿನಗಳ ಮೊದಲೇ ದೆಹಲಿಗೆ ಆಗಮಿಸಿದೆ. ದೆಹಲಿಯ ಹೋಟೆಲ್‌ಗಳು, ವಿಮಾನ ನಿಲ್ದಾಣಗಳು, ಸಭೆ ನಡೆಯುವ ಸ್ಥಳಗಳು ಮತ್ತು ಸಂಭಾವ್ಯ ಪ್ರಯಾಣ ಮಾರ್ಗಗಳ ತಪಾಸಣೆಗಳನ್ನು ತಂಡವು ನಡೆಸುತ್ತಿದೆ.
ಪುಟಿನ್ ಇರುವ ಕೊಠಡಿಗಳಿಗೆ ಯಾರು ಪ್ರವೇಶಿಸುತ್ತಾರೆ, ಯಾವ ಲಿಫ್ಟ್‌ಗಳನ್ನು ಬಳಸಲಾಗುತ್ತದೆ, ಪ್ರವೇಶ ಮತ್ತು ನಿರ್ಗಮನದ ಪಾಯಿಂಟ್ಗಳು ಸೇರಿದಂತೆ ಪ್ರತಿಯೊಂದು ವಿವರವನ್ನು ನಿಮಿಷದಿಂದ ನಿಮಿಷಕ್ಕೆ ನಿಖರವಾಗಿ ಪ್ಲಾನ್ ಮಾಡಲಾಗಿದೆ. ಪುಟಿನ್ ಅವರಿಗೆ ನೀಡುವ ಎಲ್ಲಾ ಆಹಾರ ಮತ್ತು ನೀರನ್ನು ಪರೀಕ್ಷಿಸಲು ಮೊಬೈಲ್ ರಾಸಾಯನಿಕ ಪ್ರಯೋಗಾಲಯವು ಅವರೊಂದಿಗೆ ಪ್ರಯಾಣಿಸುತ್ತದೆ. ಕಟ್ಟುನಿಟ್ಟಾದ ಪರಿಶೀಲನೆಯಿಲ್ಲದೆ ಸ್ಥಳೀಯವಾಗಿ ಅವರು ಏನನ್ನೂ ಸೇವಿಸುವುದಿಲ್ಲ. ಅಲ್ಲದೆ, ಪುಟಿನ್ ಅವರು ಹೊರಗಿನ ಶೌಚಾಲಯವನ್ನು ಕೂಡ ಬಳಸುವುದಿಲ್ಲ. ಅವರು ಎಲ್ಲೇ ಹೋದರೂ ಪೋರ್ಟಬಲ್ ಟಾಯ್ಲೆಟ್ ಕೂಡ ಅವರ ಜೊತೆ ಇರುತ್ತದೆ.
ಇದನ್ನೂ ಓದಿ: ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ, ತೈಲ ನಿರ್ಬಂಧ, ಉಕ್ರೇನ್ ಅಮೆರಿಕದ ಕ್ಷಿಪಣಿ ಬಳಕೆ ಬಗ್ಗೆ ಪುಟಿನ್ ಎಚ್ಚರಿಕೆ
ರಷ್ಯಾ ಮತ್ತು ಭಾರತೀಯ ತಂಡಗಳು ಶೂನ್ಯ ದೋಷ ಭದ್ರತಾ ವಾತಾವರಣವನ್ನು ಕಾಪಾಡಿಕೊಳ್ಳಲು ಯಾವುದೇ ಅವಕಾಶವನ್ನು ಬಿಡುತ್ತಿಲ್ಲ.
ದೆಹಲಿಯಾದ್ಯಂತ ಬಹು ಪದರದ ಕಣ್ಗಾವಲು ವಹಿಸಲಾಗಿದೆ. ದೆಹಲಿಯನ್ನು ಹೈ-ಸೆಕ್ಯುರಿಟಿ ವಲಯವಾಗಿ ಪರಿವರ್ತಿಸಲಾಗಿದೆ. ಪ್ರಮುಖ ಹಂತಗಳಲ್ಲಿ ಸ್ನೈಪರ್‌ಗಳನ್ನು ನಿಯೋಜಿಸಲಾಗಿದೆ. ಡ್ರೋನ್ ಕಣ್ಗಾವಲು ಸಕ್ರಿಯವಾಗಿದೆ. ನೈಜ ಸಮಯದಲ್ಲಿ ಪುಟಿನ್ ಅವರ ಬೆಂಗಾವಲು ಪಡೆಯನ್ನು ಪತ್ತೆಹಚ್ಚಲು ಹೈ-ಡೆಫಿನಿಷನ್ ಕ್ಯಾಮೆರಾಗಳು ಮತ್ತು ಮುಖ ಗುರುತಿಸುವಿಕೆ ವ್ಯವಸ್ಥೆಗಳನ್ನು ಇರಿಸಲಾಗಿದೆ.
ಇದನ್ನೂ ಓದಿ: Putin-Modi Meet: ಡಿಸೆಂಬರ್ 4ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ಪುಟಿನ್ ಅವರ ಭೇಟಿಯು ರಕ್ಷಣೆ, ಇಂಧನ, ಬಾಹ್ಯಾಕಾಶ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಭಾರತ-ರಷ್ಯಾ ಸಂಬಂಧಗಳನ್ನು ಬಲಪಡಿಸುವ ನಿರೀಕ್ಷೆಯಿದೆ, ಇದು ಭದ್ರತಾ ಸಂಸ್ಥೆಗಳಿಗೆ ವಿಶೇಷವಾಗಿ ಹೆಚ್ಚಿನ ಜವಾಬ್ದಾರಿಯನ್ನು ನೀಡುತ್ತದೆ.
ಭಾರತದ ಮೇಲೆ ಶೇ. 50ರಷ್ಟು ಸುಂಕಗಳನ್ನು ವಿಧಿಸಿರುವ ಅಮೆರಿಕದ ಒತ್ತಡದ ಹೊರತಾಗಿಯೂ ಭಾರತ ರಷ್ಯಾದಿಂದ ತೈಲ ಮತ್ತು ಇತರ ಇಂಧನ ಸರಬರಾಜುಗಳನ್ನು ಖರೀದಿಸುವುದನ್ನು ಮುಂದುವರಿಸಿರುವುದರಿಂದ ಅವುಗಳಿಗೆ ಹೆಚ್ಚಿನ ಮಹತ್ವವಿದೆ. ಇದರಲ್ಲಿ ಶೇ. 25ರಷ್ಟು ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದ ಸುಂಕವೂ ಸೇರಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ