ಅಫ್ಘಾನಿಸ್ತಾನದಲ್ಲಿ ತಾಲಿಬಾನ್ಗೆ ಜಯ: ಜಮ್ಮು ಕಾಶ್ಮೀರದಲ್ಲಿ ಕಟ್ಟೆಚ್ಚರ, ಕಾದು ನೋಡುವ ತಂತ್ರ ಅನುಸರಿಸಲು ಭಾರತ ನಿರ್ಧಾರ
ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಉಗ್ರಗಾಮಿ ಸಂಘಟನೆಗಳು ಮತ್ತು ಇಸ್ಲಾಮ್ ಪ್ರತ್ಯೇಕತಾವಾದಿಗಳು ತಾಲಿಬಾನ್ ನೆರವಿನಿಂದ ಚಟುವಟಿಕೆಗಳನ್ನು ಚುರುಕುಗೊಳಿಸಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಶ್ರೀನಗರ: ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ತಮ್ಮ ಸುಪರ್ದಿಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಭಾರತ ಸರ್ಕಾರ ಮತ್ತು ಸ್ಥಳೀಯ ಆಡಳಿತ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಿದೆ. ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಉಗ್ರಗಾಮಿ ಸಂಘಟನೆಗಳು ಮತ್ತು ಇಸ್ಲಾಮ್ ಪ್ರತ್ಯೇಕತಾವಾದಿಗಳು ತಾಲಿಬಾನ್ ನೆರವಿನಿಂದ ಚಟುವಟಿಕೆಗಳನ್ನು ಚುರುಕುಗೊಳಿಸಬಹುದು ಎಂಬ ಆತಂಕವನ್ನು ಭದ್ರತಾ ವಿಶ್ಲೇಷಕರು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಈ ನಡೆಯು ಮಹತ್ವ ಪಡೆದುಕೊಂಡಿದೆ.
ಅಫ್ಘಾನಿಸ್ತಾನದ ಬೆಳವಣಿಗೆ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಈವರೆಗೆ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ. ಭಾರತ ಸರ್ಕಾರವು ಕಾದುನೋಡುವ ತಂತ್ರ ಅನುಸರಿಸಲು ತೀರ್ಮಾನಿಸಿದಂತಿದೆ. ಅಫ್ಘಾನ್ ಬೆಳವಣಿಗೆ ಬಗ್ಗೆ ಬೇರೆ ದೇಶಗಳು ಹೇಗೆ ಪ್ರತಿಕ್ರಿಯಿಸಲಿವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತ, ತಾಲಿಬಾನ್ನ ಮುಂದಿನ ನಡೆಯನ್ನು ಆಧರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ.
ಕಾಶ್ಮೀರ ವಿಚಾರದಲ್ಲಿ ತಾಲಿಬಾನ್ ಮೂಗು ತೂರಿಸುವುದಿಲ್ಲ ಎಂದು ಭಾರತ ಈವರೆಗೆ ನಿರೀಕ್ಷಿಸಿದೆ. ಕಾಶ್ಮೀರ ಸಮಸ್ಯೆಯು ಆಂತರಿಕ ಸಮಸ್ಯೆ ಎಂಬ ನಿಲುವಿನಿಂದ ಭಾರತವೂ ಹಿಂದಕ್ಕೆ ಸರಿಯುವುದಿಲ್ಲ. ಅಫ್ಘಾನಿಸ್ತಾನದಲ್ಲಿ ಜಯಗಳಿಸಿರುವ ತಾಲಿಬಾನ್ ಮೇಲೆ ಪಾಕಿಸ್ತಾನದ ಐಎಸ್ಐಗೆ ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ ಎಂಬ ವಿಶ್ವಾಸದಲ್ಲಿ ಭಾರತ ಇದೆ.
ದೆಹಲಿಯಲ್ಲಿ ಪ್ರಧಾನಿ ಸಭೆ ಅಫ್ಘಾನಿಸ್ತಾನವು ತಾಲಿಬಾನ್ ವಶಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸಂಭಾವ್ಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಜೈಶಂಕರ್ ಅವರೊಂದಿಗೆ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಬಾಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಭಾರತದಲ್ಲಿ ಲ್ಯಾಂಡ್ ಆಯ್ತು ವಾಯುಪಡೆ ವಿಮಾನ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಆಫ್ಘಾನ್ನಲ್ಲಿ ಸಿಲುಕಿದ್ದ ಭಾರತೀಯ ನಾಗರಿಕರ ಏರ್ಲಿಫ್ಟ್ ಕಾರ್ಯಾಚರಣೆ ಮುಂದುವರಿದಿದೆ. ಅಫ್ಘಾನಿಸ್ತಾನದಿಂದ ಭಾರತೀಯ ದೂತಾವಾಸ ಸಿಬ್ಬಂದಿಯನ್ನು ಕರೆತಂದಿದ್ದ ವಿಮಾನವು ಗಾಜಿಯಾಬಾದ್ನ ಹಿಂಡನ್ ವಾಯುನೆಲೆಯಲ್ಲಿ ಲ್ಯಾಂಡ್ ಆಗಿದೆ. ಅಫ್ಘಾನಿಸ್ತಾನದಲ್ಲಿ ಭಾರತದ ರಾಯಭಾರಿ ಸೇರಿದಂತೆ 120 ಮಂದಿ ಈ ವಿಮಾನದ ಮೂಲಕ ಭಾರತಕ್ಕೆ ಹಿಂದಿರುಗಿದ್ದಾರೆ.
(High Alert in Jammu Kashmir After Taliban Wins in Afghanistan)
ಇದನ್ನೂ ಓದಿ: Taliban and Kashmir: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚುವ ಆತಂಕ
ಇದನ್ನೂ ಓದಿ: Taliban Rule In Afghanistan: ಮೊಬೈಲ್, ಇಂಟರ್ನೆಟ್, ಬಂದೂಕು, ಬದುಕು; ತಾಲಿಬಾನ್ 2.0 ಆಳ್ವಿಕೆಯಲ್ಲಿ ಅಫ್ಘಾನಿಸ್ತಾನ
Published On - 7:56 pm, Tue, 17 August 21