ಋಷಿಕೇಷ, ಮಾರ್ಚ್ 9: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನದ ಬಳಿಕ ಹಿಮಾಚಲ ಪ್ರದೇಶ (Himachal Pradesh) ಕಾಂಗ್ರೆಸ್ (Congress) ಪಕ್ಷದಲ್ಲಿ ಉಂಟಾಗಿರುವ ಆಂತರಿಕ ಬಿಕ್ಕಟ್ಟು ಇದೀಗ ಮತ್ತಷ್ಟು ವಿಕೋಪಕ್ಕೆ ಹೋಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಆರು ಮಂದಿ ಕಾಂಗ್ರೆಸ್ ನಾಯಕರು ಸೇರಿದಂತೆ ಹಿಮಾಚಲ ಪ್ರದೇಶದ 11 ಮಂದಿ ಶಾಸಕರ ತಂಡ ಇದೀಗ ಬಿಜೆಪಿ ಆಡಳಿತವಿರುವ ಉತ್ತರಾಖಂಡ (Uttarakhand) ತಲುಪಿದೆ. ಕಾಂಗ್ರೆಸ್ನ ಬಂಡಾಯ ನಾಯಕರು ಹಾಗೂ ಶಾಸಕರನ್ನೊಳಗೊಂಡ ಹರಿಯಾಣದ ನಂಬರ್ ಪ್ಲೇಟ್ ಹೊಂದಿರುವ ಬಸ್ ಶನಿವಾರ ಬೆಳಗ್ಗೆ ರಿಷಿಕೇಶದ ತಾಜ್ ಹೋಟೆಲ್‌ಗೆ ಆಗಮಿಸಿದೆ ಎಂದು ‘ಎಎನ್‌ಐ’ ವರದಿ ಮಾಡಿದೆ.
ಇದಕ್ಕೂ ಮುನ್ನ ಎಲ್ಲಾ ಬಂಡಾಯ ಕಾಂಗ್ರೆಸ್ ಶಾಸಕರು ಚಂಡೀಗಢದ ಲಲಿತ್ ಹೋಟೆಲ್‌ನಲ್ಲಿ ತಂಗಿದ್ದರು. ಇದೀಗ ಋಷಿಕೇಶದ ಖಾಸಗಿ ಹೋಟೆಲ್‌ನಲ್ಲಿ ಶಾಸಕರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖ್ಖು ದೆಹಲಿಗೆ ಭೇಟಿ ನೀಡಿದ ಎರಡು ದಿನಗಳ ನಂತರ ಕಾಂಗ್ರೆಸ್ ವರಿಷ್ಠರು ಕರೆದಿದ್ದಾರೆ. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ರಾಜ್ಯದ ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ವರದಿ ನೀಡಲು ಮತ್ತು ಲೋಕಸಭೆ ಚುನಾವಣೆ ಕುರಿತು ಚರ್ಚೆ ನಡೆಸಲು ಸುಖ್ಖು ರಾಷ್ಟ್ರ ರಾಜಧಾನಿಗೆ ತೆರಳಿದ್ದರು.
ಈ ಹಿಂದೆ ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಕಾಂಗ್ರೆಸ್ ಹೈಕಮಾಂಡ್ ಮತ್ತು ಬಂಡಾಯ ನಾಯಕರ ಮಧ್ಯೆ ಸಂಧಾನದ ಜವಾಬ್ದಾರಿ ವಹಿಸಿದ್ದರು. ಅವರೀಗ, ಚೆಂಡು ರಾಷ್ಟ್ರೀಯ ನಾಯಕತ್ವದ ಅಂಗಳದಲ್ಲಿದೆ ಎಂದು ಹೇಳಿದ್ದಾರೆ.
ಫೆಬ್ರವರಿಯಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಆರು ಮಂದಿ ಬಂಡಾಯ ಶಾಸಕರು ಮತ್ತು ಮೂವರು ಪಕ್ಷೇತರ ಶಾಸಕರು ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ್ದರು. ಇದರ ಪರಿಣಾಮವಾಗಿ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಸೋಲಾಗಿತ್ತು.
ಇದನ್ನೂ ಓದಿ: ವಿಶ್ವದ ಅತಿ ಉದ್ದದ ಸೆಲಾ ಪಾಸ್ ಸುರಂಗ ಮಾರ್ಗ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ; ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಅಡ್ಡಮತದಾನದ ಬೆನ್ನಲ್ಲೇ ಶಾಸಕ ಸುಧೀರ್ ಶರ್ಮಾ, ರವಿ ಠಾಕೂರ್, ರಾಜಿಂದರ್ ರಾಣಾ, ಇಂದರ್ ದತ್ ಲಖನ್‌ಪಾಲ್, ಚೆತನ್ಯ ಶರ್ಮಾ ಮತ್ತು ದೇವಿಂದರ್ ಕುಮಾರ್ ಭುಟ್ಟೊ ಅವರನ್ನು ಕಾಂಗ್ರೆಸ್ ನೀಡಿದ ದೂರಿನ ಆಧಾರದಲ್ಲಿ ಅನರ್ಹಗೊಳಿಸಿ ಸ್ಪೀಕರ್ ಆದೇಶ ನೀಡಿದ್ದರು. ಸ್ಪೀಕರ್ ಕ್ರಮದ ವಿರುದ್ಧ ಬಂಡಾಯ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ