HP Assembly Elections 2022: ಹಿಮಾಚಲ ಪ್ರದೇಶ ಚುನಾವಣೆ; ಮತಯಂತ್ರ ಸೇರಿತು 412 ಅಭ್ಯರ್ಥಿಗಳ ಭವಿಷ್ಯ

ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಸಂಜೆ 3 ಗಂಟೆ ವೇಳೆಗೆ ಶೇಕಡಾ 55.65ರಷ್ಟು ಮತದಾನವಾಗಿದೆ. ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು, ತೀವ್ರ ಚಳಿಯ ಕಾರಣ ಆರಂಭದ ಕೆಲವು ಗಂಟೆ ಮತದಾನ ನೀರಸವಾಗಿತ್ತು. ಬಳಿಕ ಮತದಾನ ಚುರುಕುಗೊಂಡಿತ್ತು.

HP Assembly Elections 2022: ಹಿಮಾಚಲ ಪ್ರದೇಶ ಚುನಾವಣೆ; ಮತಯಂತ್ರ ಸೇರಿತು 412 ಅಭ್ಯರ್ಥಿಗಳ ಭವಿಷ್ಯ
ಹಿಮಾಚಲ ಪ್ರದೇಶದ ಕುಲ್ಲು ಮತಗಟ್ಟೆಯಲ್ಲಿ ಹಿರಿಯ ನಾಗರಿಕರೊಬ್ಬರನ್ನು ಮತದಾನಕ್ಕಾಗಿ ಮತಗಟ್ಟೆಗೆ ಕರೆತರಲಾಯಿತುImage Credit source: PTI
Follow us
TV9 Web
| Updated By: Ganapathi Sharma

Updated on: Nov 12, 2022 | 6:14 PM

ಶಿಮ್ಲಾ: ಹಿಮಾಚಲ ಪ್ರದೇಶ(Himachal Pradesh) ನೂತನ ಸರ್ಕಾರ ಆಯ್ಕೆ ಮಾಡುವುದಕ್ಕಾಗಿ ರಾಜ್ಯದ ಜನ ಶನಿವಾರ ಮತ ಚಲಾಯಿಸಿದರು. ರಾಜಧಾನಿ ಶಿಮ್ಲಾದಿಂದ (Shimla) ತೊಡಗಿ ಹಿಮಾವೃತ ಪ್ರದೇಶ ಸ್ಪೀತಿ (Spiti) ವರೆಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದರು. ಸಂಜೆ 5 ಗಂಟೆಗೆ ಮತದಾನ ಮುಕ್ತಾಯವಾಗಿದೆ. ಬಿಜೆಪಿ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೇರುವ ಬಯಕೆ ಹೊಂದಿದ್ದರೆ, ಕಾಂಗ್ರೆಸ್ ಕೂಡ ಅಧಿಕಾರ ಹಿಡಿಯಬೇಕೆಂಬ ತುಡಿತದಲ್ಲಿದೆ. 412 ಅಭ್ಯರ್ಥಿಗಳ ಭವಿಷ್ಯ ಇದೀಗ ಮತಯಂತ್ರ ಸೇರಿದೆ.

ಬಿಸಿಲೇರುತ್ತಿದ್ದಂತೆ ಚುರುಕುಗೊಂಡ ಮತದಾನ

ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಸಂಜೆ 3 ಗಂಟೆ ವೇಳೆಗೆ ಶೇಕಡಾ 55.65ರಷ್ಟು ಮತದಾನವಾಗಿದೆ. ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು, ತೀವ್ರ ಚಳಿಯ ಕಾರಣ ಆರಂಭದ ಕೆಲವು ಗಂಟೆ ಮತದಾನ ನೀರಸವಾಗಿತ್ತು. ಮೊದಲ ಒಂದು ಗಂಟೆ ಶೇಕಡಾ 5ರಷ್ಟು ಮಾತ್ರ ಮತದಾನವಾಗಿತ್ತು. 11 ಗಂಟೆ ವೇಳೆಗೆ ಮತದಾನ ಪ್ರಮಾಣ ಶೇಕಡಾ 19.98 ತಲುಪಿತು. ಮಧ್ಯಾಹ್ನ 1 ಗಂಟೆ ವೇಳೆಗೆ ಮತದಾನ ಪ್ರಮಾಣ ಶೇಕಡಾ 37.19ರಷ್ಟಾದರೆ 3 ಗಂಟೆ ವೇಳೆಗೆ ಶೇಕಡಾ 55.65 ರಷ್ಟು ಮತದಾನವಾಗುವ ಮೂಲಕ ಮತ ಚಲಾವಣೆ ಪ್ರಕ್ರಿಯೆ ಹೆಚ್ಚು ಚುರುಕುಪಡೆದುಕೊಂಡಿತು.

ಎಲ್ಲೆಲ್ಲಿ ಎಷ್ಟೆಷ್ಟು ಮತದಾನ?

ಸುಜಾನ್​ಪುರ ಮತ್ತು ಮಂಡಿಯ ಸೆರಾಜ್​ನಲ್ಲಿ ಶೇಕಡಾ 65ರಷ್ಟು ಮತದಾನವಾಯಿತು. ಈ ಮೂಲಕ ಈ ಎರಡು ಕ್ಷೇತ್ರಗಳು 68 ವಿಧಾನಸಭೆ ಕ್ಷೇತ್ರಗಳ ಪೈಕಿ ಅತಿಹೆಚ್ಚು ಮತಚಲಾವಣೆಯಾದ ಕ್ಷೇತ್ರಗಳೆನಿಸಿಕೊಂಡವು (ಸಂಜೆ 3 ಗಂಟೆಯ ಅಂಕಿಅಂಶಗಳ ಪ್ರಕಾರ). ಉಳಿದಂತೆ ಲಾಹುಲ್ ಮತ್ತು ಸ್ಪೀತಿ ಜಿಲ್ಲೆಗಳಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಈ ಜಿಲ್ಲೆಗಳಲ್ಲಿ ಶೇಕಡಾ 62.75ರಷ್ಟು ಮತದಾನವಾಗಿದೆ. ಸಿರ್​ಮೌರ್​ನಲ್ಲಿ ಶೇಕಡಾ 60.38, ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರ ಕ್ಷೇತ್ರ ಇರುವ ಮಂಡಿ ಜಿಲ್ಲೆಯಲ್ಲಿ ಶೇಕಡಾ 58.9ರಷ್ಟು ಮತದಾನವಾಯಿತು.

ಕೊನೆಯ ಕ್ಷಣದ ವರೆಗೂ ಕಾದುನಿಂತು ಜನ ಮತ ಚಲಾಯಿಸುತ್ತಿರುವ ದೃಶ್ಯ ಅನೇಕ ಮತಗಟ್ಟೆಗಳಲ್ಲಿ ಕಂಡುಬಂದಿದೆ. ಅನ್ನಿ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 62.4, ಅಕಿಯಲ್ಲಿ ಶೇಕಡಾ 40, ಚುರಾಹ್​ನಲ್ಲಿ ಶೇಕಡಾ 34.6ರಷ್ಟು ಮತದಾನವಾಯಿತು. ಒಟ್ಟು 1,21,409 ಮತದಾರರು 80 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಹಿರಿಯ ನಾಗರಿಕರಿಗೆ ಮತದಾನಕ್ಕಾಗಿ ಚುನಾವಣಾ ಆಯೋಗ ವಿಶೇಷ ವ್ಯವಸ್ಥೆಯನ್ನು ಮಾಡಿತ್ತು.

ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದೆ.

ಹೆಚ್ಚಿನ ಸಂಖ್ಯೆಯ ಮತದಾನಕ್ಕೆ ಕರೆ ನೀಡಿದ್ದ ಪ್ರಧಾನಿ ಮೋದಿ

ಚುನಾವಣೆ ಆರಂಭಕ್ಕೂ ಮುನ್ನ ಟ್ವೀಟ್ ಮೂಲಕ ರಾಜ್ಯದ ಜನತೆಗೆ ಶುಭ ಹಾರೈಸಿದ್ದ ಪ್ರಧಾನಿ ನರೇಂದ್ರ ಮೋದಿ, ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು. ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕರೆ ನೀಡಿದ್ದರು. ದೇವಭೂಮಿಯ ಎಲ್ಲಾ ಮತದಾರರು ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪೂರ್ಣ ಉತ್ಸಾಹದಿಂದ ಭಾಗವಹಿಸಲು ಮತ್ತು ಮತದಾನದ ಹೊಸ ದಾಖಲೆಯನ್ನು ಸೃಷ್ಟಿಸಲು ನಾನು ವಿನಂತಿಸುತ್ತೇನೆ ಎಂದು ಟ್ವೀಟ್​ನಲ್ಲಿ ಪ್ರಧಾನಿ ಉಲ್ಲೇಖಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಜನತೆಯಲ್ಲಿ ಮನವಿ ಮಾಡಿದ್ದರು.

ಇದನ್ನು ಓದಿ: HP Assembly Elections 2022: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ; ಇಲ್ಲಿದೆ ಮತದಾನದ ವಿವರ