Gautam Adani: ಹಿಂಡೆನ್‌ಬರ್ಗ್ ಆರೋಪ ಆಧಾರರಹಿತವಾಗಿತ್ತು, ಸತ್ಯಮೇವ ಜಯತೇ!; ಕ್ಲೀನ್​ಚಿಟ್​ಗೆ ಗೌತಮ್ ಅದಾನಿ ಪ್ರತಿಕ್ರಿಯೆ

ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಭಾರತದ ಉದ್ಯಮಿ ಗೌತಮ್ ಅದಾನಿಗೆ ದೊಡ್ಡ ಜಯ ಸಿಕ್ಕಿದೆ. ಅದಾನಿ ಗ್ರೂಪ್​ಗೆ ಸೆಬಿ ಇಂದು ಕ್ಲೀನ್ ಚಿಟ್ ನೀಡಿದೆ. ಈ ಕುರಿತಾದ ತನಿಖೆಯಲ್ಲಿ ಗೌತಮ್ ಅದಾನಿ ಸಮೂಹದ ವಿರುದ್ಧಧ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಸೆಬಿ ತನ್ನ ತೀರ್ಪಿನಲ್ಲಿ ಹೇಳಿದೆ. ಈ ಮೂಲಕ ಭಾರೀ ಚರ್ಚೆಗೊಳಗಾಗಿದ್ದ ಈ ಪ್ರಕರಣ ಇಲ್ಲಿಗೆ ಮುಕ್ತಾಯವಾಗಿದೆ.

Gautam Adani: ಹಿಂಡೆನ್‌ಬರ್ಗ್ ಆರೋಪ ಆಧಾರರಹಿತವಾಗಿತ್ತು, ಸತ್ಯಮೇವ ಜಯತೇ!; ಕ್ಲೀನ್​ಚಿಟ್​ಗೆ ಗೌತಮ್ ಅದಾನಿ ಪ್ರತಿಕ್ರಿಯೆ
Adani

Updated on: Sep 18, 2025 | 10:15 PM

ನವದೆಹಲಿ, ಸೆಪ್ಟೆಂಬರ್ 18: ಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆಯಾದ ಹಿಂಡನ್​ಬರ್ಗ್ (Hindenburg Case) ವಿರುದ್ಧದ ಕಾನೂನು ಹೋರಾಟದಲ್ಲಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿಗೆ (Gautam Adani) ಭಾರೀ ಗೆಲುವು ಸಿಕ್ಕಿದೆ. ಭಾರತದ ಕಾರ್ಪೋರೇಟ್ ಜಗತ್ತಿನ ಇತಿಹಾಸದಲ್ಲೇ ಸಂಚಲನ ಮೂಡಿಸಿದ್ದ ಈ ಪ್ರಕರಣದಲ್ಲಿ ಗೌತಮ್ ಅದಾನಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಬಂಡವಾಳ ಮಾರುಕಟ್ಟೆ ನಿಯಂತ್ರಕ (ಸೆಬಿ) ಗೌತಮ್ ಅದಾನಿಗೆ ಕ್ಲೀನ್ ಚಿಟ್ ನೀಡಿದೆ. ಈ ತೀರ್ಪನ್ನು ಸ್ವಾಗತಿಸಿರುವ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, ಯಾವಾಗಲೂ ಸತ್ಯ ಮಾತ್ರ ಗೆಲ್ಲುತ್ತದೆ (ಸತ್ಯಮೇವ ಜಯತೇ) ಎಂದು ಟ್ವೀಟ್ ಮಾಡಿದ್ದಾರೆ.

“ಸಮಗ್ರ ತನಿಖೆಯ ನಂತರ, ನಾವು ಈ ಹಿಂದೆಯೂ ಹೇಳಿಕೊಂಡು ಬಂದಂತೆ ಹಿಂಡೆನ್‌ಬರ್ಗ್ ಮಾಡಿದ್ದ ಆರೋಪಗಳು ಆಧಾರರಹಿತವಾಗಿದ್ದವು ಎಂಬುದನ್ನು ಸೆಬಿ ಪುನರುಚ್ಚರಿಸಿದೆ. ಪಾರದರ್ಶಕತೆ ಮತ್ತು ಸಮಗ್ರತೆಯು ಯಾವಾಗಲೂ ಅದಾನಿ ಗ್ರೂಪ್ ಅನ್ನು ವ್ಯಾಖ್ಯಾನಿಸಿದೆ. ಈ ದುರುದ್ದೇಶಪೂರಿತ ಮತ್ತು ಮೋಸದ ವರದಿಯಿಂದಾಗಿ ಹಣವನ್ನು ಕಳೆದುಕೊಂಡ ಹೂಡಿಕೆದಾರರ ನೋವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಈ ರೀತಿಯ ಸುಳ್ಳು ಕತೆಗಳನ್ನು ಹರಡುವವರು ರಾಷ್ಟ್ರಕ್ಕೆ ಕ್ಷಮೆಯಾಚಿಸಬೇಕು” ಎಂದು ಗೌತಮ್ ಅದಾನಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಒಂದೇ ಒಂದು ನಿಷೇಧವು ಭಾರತದ ಡಿಜಿಟಲ್ ಆರ್ಥಿಕತೆಯನ್ನೇ ಸ್ಥಗಿತಗೊಳಿಸಬಹುದು: ಗೌತಮ್ ಅದಾನಿ ಎಚ್ಚರಿಕೆಯ ಕರೆಗಂಟೆ

“ಭಾರತದ ಸಂಸ್ಥೆಗಳು, ಭಾರತದ ಜನರಿಗೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನಮ್ಮ ಬದ್ಧತೆ ಅಚಲವಾಗಿದೆ. ಸತ್ಯಮೇವ ಜಯತೇ! ಜೈ ಹಿಂದ್!” ಅವರು ಪೋಸ್ಟ್ ಮಾಡಿದ್ದಾರೆ.


ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿದ ಸ್ಟಾಕ್ ಮ್ಯಾನಿಪ್ಯುಲೇಷನ್ ಆರೋಪಗಳಿಂದ ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ ಮತ್ತು ಅದಾನಿ ಪವರ್ ಸೇರಿದಂತೆ ಗೌತಮ್ ಅದಾನಿ ಮತ್ತು ಅದಾನಿ ಗ್ರೂಪ್ ಅನ್ನು ಸೆಬಿ ಆರೋಪ ಮುಕ್ತಗೊಳಿಸಿದೆ.

ಇದನ್ನೂ ಓದಿ: Hindenburg case: ಹಿಂಡೆನ್‌ಬರ್ಗ್ ಪ್ರಕರಣದಲ್ಲಿ ಗೌತಮ್ ಅದಾನಿಗೆ ಕ್ಲೀನ್ ಚಿಟ್

ಹಿಂಡನ್ ಬರ್ಗ್ ಆರೋಪಗಳೇನು?:

ಅದಾನಿ ಗ್ರೂಪ್ ಜನವರಿ 2023ರಲ್ಲಿ ಅಡಿಕಾರ್ಪ್ ಎಂಟರ್‌ಪ್ರೈಸಸ್, ಮೈಲ್‌ಸ್ಟೋನ್ ಟ್ರೇಡ್‌ಲಿಂಕ್ಸ್ ಮತ್ತು ರೆಹ್ವರ್ ಇನ್ಫ್ರಾಸ್ಟ್ರಕ್ಚರ್ ಎಂಬ 3 ಕಂಪನಿಗಳನ್ನು ಅದಾನಿ ಗ್ರೂಪ್ ಕಂಪನಿಗಳ ನಡುವೆ ಹಣವನ್ನು ವರ್ಗಾಯಿಸಲು ಮಾರ್ಗಗಳಾಗಿ ಬಳಸಿಕೊಂಡಿದೆ ಎಂದು ಹಿಂಡೆನ್‌ಬರ್ಗ್ ಆರೋಪಿಸಿತ್ತು. ಹಿಂಡನ್‌ಬರ್ಗ್ ಆರೋಪಗಳ ವರದಿ ಪ್ರಕಟವಾದ ನಂತರ ಅದಾನಿ ಸಮೂಹದ ಷೇರುಗಳು ಭಾರೀ ಕುಸಿತವನ್ನು ಕಂಡಿದ್ದವು. ಕೇವಲ ಕೆಲವೇ ದಿನಗಳಲ್ಲಿ ಹೂಡಿಕೆದಾರರ ಸಂಪತ್ತು 100 ಬಿಲಿಯನ್‌ ಡಾಲರ್‌ಗೂ ಹೆಚ್ಚು ಇಳಿದಿತ್ತು. ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಸುಪ್ರೀಂ ಕೋರ್ಟ್ ತನಿಖೆ ನಡೆಸುವಂತೆ ಸೆಬಿಗೆ ನಿರ್ದೇಶನವನ್ನು ನೀಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ