ಕರ್ನಾಟಕದ ವಿಧಾನಸಭೆ ಚುನಾವಣೆ ಹೇಗೆ ಗೆದ್ದಿರಿ ಎಂದು ಉತ್ತರಿಸಿ; ಕಾಂಗ್ರೆಸ್​ಗೆ ಪ್ರಲ್ಹಾದ್ ಜೋಶಿ ಸವಾಲು

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ನಕಲಿ ಮತದಾನ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು. ಕರ್ನಾಟಕದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂಬ ರಾಹುಲ್ ಗಾಂಧಿಯ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸವಾಲು ಹಾಕಿದ್ದಾರೆ. ಚುನಾವಣೆ ಲೋಪವಾಗಿದ್ದರೆ ಪ್ರಕರಣ ಏಕೆ ದಾಖಲಿಸಲಿಲ್ಲ? ವಿಧಾನಸಭಾ ಚುನಾವಣೆಯಲ್ಲಿ ನೀವು ಗೆದ್ದಿದ್ದು ಹೇಗೆಂದು ಉತ್ತರಿಸಿ ಎಂದು ಅವರು ಪ್ರಶ್ನಿಸಿದ್ದಾರೆ.

ಕರ್ನಾಟಕದ ವಿಧಾನಸಭೆ ಚುನಾವಣೆ ಹೇಗೆ ಗೆದ್ದಿರಿ ಎಂದು ಉತ್ತರಿಸಿ; ಕಾಂಗ್ರೆಸ್​ಗೆ ಪ್ರಲ್ಹಾದ್ ಜೋಶಿ ಸವಾಲು
Pralhad Joshi

Updated on: Aug 07, 2025 | 9:49 PM

ನವದೆಹಲಿ, ಆಗಸ್ಟ್ 7: ಕಾಂಗ್ರೆಸ್‌ ಪಕ್ಷ ಚುನಾವಣಾ ಆಯೋಗದ (Election Commission) ಮೇಲೆ ಆರೋಪ ಹೊರಿಸುವ ಮೊದಲು 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election) ಹೇಗೆ ಗೆದ್ದಿತು? ಎಂಬುದಕ್ಕೆ ರಾಹುಲ್‌ ಗಾಂಧಿ (Rahul Gandhi) ಉತ್ತರಿಸಲಿ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸವಾಲು ಹಾಕಿದ್ದಾರೆ. ದೆಹಲಿಯಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಪ್ರಲ್ಹಾದ್ ಜೋಶಿ, ʼಲೋಕಸಭೆ ಚುನಾವಣೆಯಲ್ಲಿ ಇವಿಎಂ ಮತ್ತು ಚುನಾವಣಾ ಆಯೋಗದ ಲೋಪವಿದೆʼ ಎನ್ನುವುದಾದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಅದೇ ಇವಿಎಂಗಳು ಮತ್ತು ಚುನಾವಣಾ ಆಯೋಗ ಕಾರ್ಯ ನಿರ್ವಹಿಸಿದೆ. ಹಾಗಾದರೆ ಕಾಂಗ್ರೆಸ್‌ನವರು ಹೇಗೆ ಆಯ್ಕೆಯಾದರು? ಎಂದು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿಗರ ವಾದ ತರ್ಕಬದ್ಧವಲ್ಲ. 2020ರಲ್ಲಿಯೂ ಆಯ್ಕೆಯಾಗಿದ್ದರು. ಆಗಲೂ ಇದೇ ಚುನಾವಣಾ ಆಯೋಗ ಕಾರ್ಯ ನಿರ್ವಹಿಸುತ್ತಿತ್ತು. ಲೋಪವಾಗಿದ್ದರೆ ಈವರೆಗೂ ಏಕೆ ಪ್ರಕರಣ ದಾಖಲಿಸಲಿಲ್ಲ? ಯಾಕೆ ದಾಖಲೆ ಸಲ್ಲಿಸಲಿಲ್ಲ? ಎಂದು ಪ್ರಶ್ನಿಸಿದ ಪ್ರಲ್ಹಾದ್ ಜೋಶಿ, ಈಗ ಒಂದು ವರ್ಗವನ್ನು ಸಮಾಧಾನಪಡಿಸಲು ಈ ನಡೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ರೈತರ ಹಿತಾಸಕ್ತಿ ಕಾಪಾಡಲು ಯಾವುದೇ ವೈಯಕ್ತಿಕ ನಷ್ಟಕ್ಕೂ ಸಿದ್ಧ ಎಂದು ಟ್ರಂಪ್​ಗೆ ಸವಾಲೆಸೆದ ಪ್ರಧಾನಿ ಮೋದಿ

ಸಂಸತ್‌ನಲ್ಲಿ ಚರ್ಚೆ ಅಸಾಧ್ಯವೆಂದ ಮಾಜಿ ಸ್ಪೀಕರ್: ಚುನಾವಣಾ ಆಯೋಗದ ಕಾರ್ಯ ನಿರ್ವಹಣೆ ಬಗ್ಗೆ ಸಂಸತ್ತು ಚರ್ಚಿಸಲು ಸಾಧ್ಯವಿಲ್ಲ ಎಂಬುದನ್ನು ಲೋಕಸಭೆ ಮಾಜಿ ಸ್ಪೀಕರ್ ಬಲರಾಮ್ ಜಾಖರ್ ತೀರ್ಪು ನೀಡಿದ್ದಾರೆ. ಇನ್ನು, ಸುಪ್ರೀಂ ಕೋರ್ಟ್‌ನಲ್ಲಿ ಸಹ ವಿಚಾರಣೆ ನಡೆಯುತ್ತಿದ್ದು, ಇದು ಕಾನೂನು ವ್ಯಾಪ್ತಿಗೊಳಪಟ್ಟಿದೆ. ಹಿಂದೆಯೂ SIR ನಡೆಸಲಾಗಿದೆ. ಆದರೆ, ಕಾಂಗ್ರೆಸ್ ಅನಗತ್ಯ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.


2023ರಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಸಹ ಬಿಜೆಪಿಯೇ ಅಧಿಕಾರದಲ್ಲಿತ್ತು. ಹಾಗಿದ್ದರೂ ಕಾಂಗ್ರೆಸ್ ಬಹುಮತದಿಂದ ಗೆದ್ದಿತು. ಆಗ ಚುನಾವಣಾ ಆಯೋಗ ಮತ್ತು ಇವಿಎಂ ಎಲ್ಲಾ ಚೆನ್ನಾಗಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಾಕ್ಷಣ ನಿಮಗೆ ಚುನಾವಣಾ ಆಯೋಗ ಚೆನ್ನಾಗಿಲ್ಲ, ಇವಿಎಂಗಳು ವಿಶ್ವಾಸಾರ್ಹವಲ್ಲ ಅಲ್ಲವೇ? ಎಂದು ಪ್ರಲ್ಹಾದ್ ಜೋಶಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಅಮೆರಿಕದ ಸರಕುಗಳ ಮೇಲೆ ಭಾರತವೂ ಶೇ.50ರಷ್ಟು ಸುಂಕ ವಿಧಿಸಬೇಕು; ಟ್ರಂಪ್ ವಿರುದ್ಧ ಶಶಿ ತರೂರ್ ಕಿಡಿ

ಕರ್ನಾಟಕದ ಚುನಾವಣೆಯಲ್ಲಿ ಏನಾಯ್ತು?:

ಕರ್ನಾಟಕದಲ್ಲಿ ವಿಧಾನಸಭೆ ಫಲಿತಾಂಶ ನಿಮ್ಮ ಪರವಾಗಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಪರವಾಗಿ ಇರಲಿಲ್ಲ. ಮಹಾರಾಷ್ಟ್ರದಲ್ಲಿ ಲೋಕಸಭೆ-ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಪರವಾಗಿ ಫಲಿತಾಂಶ ಬರಲಿಲ್ಲ. ದೇಶ ಮತ್ತು ಜಗತ್ತಿಗೆ ಏನನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿದ್ದೀರಿ? ಭಾರತದಲ್ಲಿ ಚುನಾವಣೆಗಳು ಸರಿಯಾಗಿ ನಡೆಯುವುದಿಲ್ಲ ಎಂದು ಸಾರಲು ಪ್ರಯತ್ನಿಸುತ್ತಿದ್ದೀರಾ? ಎಂದು ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.

ಜಾರ್ಖಂಡ್‌, ಜಮ್ಮು-ಕಾಶ್ಮೀರ ಹೇಗೆ ಗೆದ್ದಿರಿ?:

ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಭಾರತದ ಸಾಂಸ್ಥಿಕ ಸಂಸ್ಥೆಗಳ ವಿರುದ್ಧ ಮಾತನಾಡುತ್ತಾರೆ. ಚುನಾವಣೆಗಳಲ್ಲಿ ಅಕ್ರಮ ನಡೆದರೆ ನಿಮ್ಮ ಅಭ್ಯರ್ಥಿಗಳು ಜಾರ್ಖಂಡ್‌ನಲ್ಲಿ ಹೇಗೆ ಗೆದ್ದರು? ಜಮ್ಮು ಮತ್ತು ಕಾಶ್ಮೀರದಲ್ಲಿ ಹೇಗೆ ಗೆದ್ದಿದ್ದೀರಿ? ಸ್ವಲ್ಪ ತಾರ್ಕಿಕವಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದ ಸಚಿವ ಪ್ರಲ್ಹಾದ್ ಜೋಶಿ, ಜನರು ಬುದ್ಧಿವಂತರಿದ್ದಾರೆ. ಹಾಗಾಗಿಯೇ ತಮ್ಮ ಪಕ್ಷವನ್ನು ವಿಪಕ್ಷದಲ್ಲಿ ಸ್ಥಾನದಲ್ಲಿರಿಸಿದ್ದಾರೆ. ಮೂರೇ ಮೂರು ರಾಜ್ಯಗಳಲ್ಲಿ ಆಡಳಿತ ನೀಡಿದ್ದಾರೆ ಎಂದು ರಾಹುಲ್‌ ಗಾಂಧಿಗೆ ಚಾಟಿ ಬೀಸಿದ್ದಾರೆ.

ಅಮೆರಿಕಾ ಅಧ್ಯಕ್ಷ ಟ್ರಂಪ್ ಸುಂಕ ಯೋಜನೆ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಸುಂಕ ನೀತಿಗಳ ಆಧಾರದ ಮೇಲೆ ಅಂತಾರಾಷ್ಟ್ರೀಯ ಸಂಬಂಧಗಳನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಭಾರತ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಜಾಗತಿಕವಾಗಿ ಗೌರವಿಸಲ್ಪಟ್ಟಿದೆ ಎಂದು ಪ್ರಲ್ಹಾದ್ ಜೋಶಿ ಪ್ರತಿಪಾದಿಸಿದರು. ಕೇವಲ ಸುಂಕ ಏರಿಕೆ, ಬದಲಾವಣೆಯಿಂದ ಭಾರತದ ರಾಜತಾಂತ್ರಿಕ ಸಂಬಂಧ ದುರ್ಬಲವಾಗುವುದಿಲ್ಲ. ಭಾರತದ ಸ್ಥಾನಮಾನವನ್ನು ಜಗತ್ತು ಗುರುತಿಸುತ್ತಿದೆ. 190ಕ್ಕೂ ಹೆಚ್ಚು ದೇಶಗಳ ಬೆಂಬಲವನ್ನು ಭಾರತ ಗಳಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ