ಕೆಎಸ್ಆರ್ಟಿಸಿ ಟ್ರೇಡ್ಮಾರ್ಕ್ ಸಂಬಂಧಪಟ್ಟಂತೆ ಕೇಂದ್ರದ ಟ್ರೇಡ್ ಮಾರ್ಕ್ ನೋಂದಣಿ ಸಂಸ್ಥೆ ಅಂತಿಮ ತೀರ್ಪು ನೀಡಿದೆ. ಅದರ ಅನ್ವಯ ಇನ್ನು ಮುಂದೆ ಈ ಲೋಗೋ ನಮ್ಮದು. ಕರ್ನಾಟಕ ರಾಜ್ಯ ಅದನ್ನು ಬಳಸುವಂತಿಲ್ಲ ಎಂದು ಕೇರಳ ಸರ್ಕಾರ ಹೇಳಿಕೊಂಡಿದೆ. ಇತ್ತ ಕರ್ನಾಟಕ ಕೆಎಸ್ಆರ್ಟಿಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸ್ಪಷ್ಟನೆ ನೀಡಿ, ಕೇಂದ್ರ ಟ್ರೇಡ್ಮಾರ್ಕ್ ನೋಂದಣಿ ಸಂಸ್ಥೆಯಿಂದ ನಮಗೆ ಯಾವ ಆದೇಶವೂ ಬಂದಿಲ್ಲ. ಮಾಧ್ಯಮಗಳಲ್ಲಿ ವರದಿ ನೀಡಿ ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ. ಸದ್ಯಕ್ಕಂತೂ ಕೆಎಸ್ಆರ್ಟಿಸಿ ಲೋಗೋ ಅಧಿಕೃತವಾಗಿ ಯಾರ ಪಾಲಿಗೆ ದಕ್ಕಿದೆ ಎಂಬುದರ ಬಗ್ಗೆ ಇನ್ನೂ ಗೊಂದಲವೇ ಇದೆ. ಈ ಸಮಸ್ಯೆ ಈಗಿನದಲ್ಲ. ಕೆಎಸ್ಆರ್ಟಿಸಿ ಲೋಗೋ ಬಳಕೆ ಸಂಬಂಧಪಟ್ಟಂತೆ ಕರ್ನಾಟಕ ಮತ್ತು ಕೇರಳಗಳ ನಡುವೆ ದಶಕಗಳಿಂದಲೂ ಕಾನೂನು ಹೋರಾಟ ನಡೆದುಕೊಂಡೇ ಬಂದಿದೆ.
ಕೇರಳದಲ್ಲಿ 1965ಕ್ಕೂ ಪೂರ್ವದಲ್ಲಿದ್ದ ತಿರುವಾಂಕೂರು ರಾಜ್ಯ ಸಾರಿಗೆ ಇಲಾಖೆಯನ್ನು 1965ರ ಏಪ್ರಿಲ್ 1ರಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಎಂದು ಮರುಸ್ಥಾಪಿಸಲಾಯಿತು. ಹಾಗೇ ಕರ್ನಾಟಕದಲ್ಲಿ 1948ರಲ್ಲಿ ಶುರುವಾದ ರಸ್ತೆ ಸಾರಿಗೆಗೆ ಮೈಸೂರು ಸರ್ಕಾರ ರಸ್ತೆ ಸಾರಿಗೆ ಇಲಾಖೆ (MGRTD) ಎಂದು ನಾಮಕರಣ ಮಾಡಲಾಗಿತ್ತು. ಅದನ್ನು 1973ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಎಂದು ಮರುನಾಮಕರಣ ಮಾಡಲಾಯಿತು. ಸದ್ಯ ಕೇರಳ ಎಸ್ಆರ್ಟಿಸಿ ಮತ್ತು ಕರ್ನಾಟಕ ಎಸ್ಆರ್ಟಿಸಿ ಎಂದೇ ಬಳಕೆಯಲ್ಲಿದ್ದು, ಆಯಾ ರಾಜ್ಯಗಳಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಉದ್ಯೋಗ ವಲಯಗಳಾಗಿ ಮಾರ್ಪಟ್ಟಿವೆ. ಹಾಗೇ ದಶಕಗಳಿಂದಲೂ ಪರಸ್ಪರ ರಾಜ್ಯಗಳಿಗೆ ಸೇವೆಯನ್ನೂ ಸಲ್ಲಿಸುತ್ತಿವೆ. ನಿಲುಗಡೆಗೆ, ಟಿಕೆಟ್ ಬುಕ್ಕಿಂಗ್ ಗೆ ಕೂಡ ಒಂದೇ ಕಚೇರಿಗಳನ್ನು ಬಳಸುವುದು ಉಂಟು. ಆದರೆ ಕೆಎಸ್ಆರ್ಟಿಸಿ ಲೋಗೊ ಅಧಿಕೃತ ಬಳಕೆ ಬಗ್ಗೆ ದಶಕಗಳಿಂದಲೂ ಕಾನೂನು ಹೋರಾಟ ನಡೆಯುತ್ತಲೇ ಇದೆ.
ಟ್ರೇಡ್ ಮಾರ್ಕ್ ನೋಂದಣಿ ಹೇಗೆ?
ಪೇಟೆಂಟ್, ಟ್ರೇಡ್ಮಾರ್ಕ್ ನೋಂದಣಿ ನಿಯಮಗಳು ಹಾಗೂ ಈ ವಿಚಾರಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡುವ ಕೆಲಸದ ಬಗ್ಗೆ ಮೇಲ್ವಿಚಾರಣೆ ಮಾಡುವುದು ಪೇಟೆಂಟ್, ವಿನ್ಯಾ ಮತ್ತು ಟ್ರೇಡ್ಮಾರ್ಕ್ ನಿಯಂತ್ರಕ ಜನರಲ್ ಅವರ ಕಚೇರಿ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಪ್ರಚಾರ ಇಲಾಖೆಯಡಿ ಇದು ಕಾರ್ಯನಿರ್ವಹಿಸುತ್ತದೆ. ಟ್ರೇಡ್ ಮಾರ್ಕ್ ಆ್ಯಕ್ಟ್ 1999ರ ನಿಯಮಗಳ ನಿರ್ವಹಣೆಗಾಗಿ ಈ ಟ್ರೇಡ್ಮಾರ್ಕ್ ರಿಜಿಸ್ಟ್ರಿ ಸಂಸ್ಥೆಯನ್ನು ರಚಿಸಲಾಗಿದ್ದು, ಇದರ ಮುಖ್ಯಸ್ಥರು ಕಂಟ್ರೋಲರ್ ಜನರಲ್ ಆಗಿರುತ್ತಾರೆ. ಇವರೇ ಕಾಲಕಾಲಕ್ಕೆ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಣೆ ಮಾಡುತ್ತಾರೆ. ಹಾಗೇ ಇತರ ಅಧಿಕಾರಿಗಳಿಗೆ ಈ ನೋಂದಣಿ ಕಾರ್ಯಕ್ಕೆ ಸಂಬಂಧಪಟ್ಟ ಕೆಲಸಗಳನ್ನು ನೀಡಬಹುದು. ಸದ್ಯ ಡಿಪಿಐಐಟಿ ಜಂಟಿ ಕಾರ್ಯದರ್ಶಿ ರಾಜೇಂದ್ರ ರತ್ನೂ ಅವರು ಟ್ರೇಡ್ಮಾರ್ಕ್ ರಿಜಿಸ್ಟ್ರಿ ಸಂಸ್ಥೆಯ ಕಂಟ್ರೋಲರ್ ಜನರಲ್ ಆಗಿದ್ದಾರೆ.
ಏನಿದು ಕೆಎಸ್ಆರ್ಟಿಸಿ ಕಾನೂನು ಹೋರಾಟ?
ಕೆಎಸ್ಆರ್ಟಿಸಿ ಟ್ರೇಡ್ಮಾರ್ಕ್ ನೋಂದಣಿಗಾಗಿ 2014ರಲ್ಲಿ ಮೊದಲು ಟ್ರೇಡ್ಮಾರ್ಕ್ ರಿಜಸ್ಟರಿ ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ. ಚೆನ್ನೈನಲ್ಲಿರುವ ಕಚೇರಿಯಲ್ಲಿ ಅರ್ಜಿ ಸಲ್ಲಿಸುತ್ತಿದ್ದಂತೆ, ಕೇರಳ ಆರ್ಟಿಸಿ ಅದರ ವಿರುದ್ಧ ನೋಟಿಸ್ ನೀಡಿತು. ಅಲ್ಲದೆ, ತನ್ನ ರಾಜ್ಯದ ಟ್ರೇಡ್ ಮಾರ್ಕ್ ನೋಂದಣಿ ಕಚೇರಿಯನ್ನು ಸಂಪರ್ಕಿಸಿ, ಕರ್ನಾಟಕ ಕೆಎಸ್ಆರ್ಟಿಸಿ ಟ್ರೇಡ್ಮಾರ್ಕ್ ನೋಂದಣಿ ಮಾಡಿಕೊಂಡಿದ್ದರ ಮಾಹಿತಿ ನೀಡಿತು. ಅಂದಿನಿಂದಲೂ ಕಾನೂನು ಹೋರಾಟ ನಡೆಯುತ್ತಲೇ ಇತ್ತು.
ಇದೀಗ ಕೇರಳ ತಾನು ಕೆಎಸ್ಆರ್ಟಿಸಿ ಟ್ರೇಡ್ ಮಾರ್ಕ್ ಗೆದ್ದಿದ್ದಾಗಿ ಹೇಳಿಕೆ ನೀಡಿದೆ. ಮೊದಲು ಈ ಪದವನ್ನು ಬಳಕೆ ಮಾಡಿದ್ದು ನಾವು. ಟ್ರೇಡ್ಮಾರ್ಕ್ ಆ್ಯಕ್ಟ್ನ 34ನೇ ವಿಭಾಗದಲ್ಲಿ ಉಲ್ಲೇಖವಾಗಿರುವ ಮೊದಲ ಬಳಕೆದಾರ ನಿಯಮದಡಿಯಲ್ಲಿ ಟ್ರೇಡ್ಮಾರ್ಕ್ ಗೆದ್ದಿದ್ದೇವೆ ಎಂದು ತಿಳಿಸಿದೆ. ಕಾನೂನು ಹೋರಾಟದ ವೇಳೆ ಕೇರಳ ಆರ್ಟಿಸಿ ತನ್ನ ಹಳೇ ಬಸ್ಗಳು, ಬಸ್ಡಿಪೋಗಳು, ಮಾಜಿ ಸಾರಿಗೆ ಸಚಿವರುಗಳ ಹೇಳಿಕೆಗಳು, ಬರಹಗಳು ಹಾಗೇ ಇದಕ್ಕೆ ಸಂಬಂಧಪಟ್ಟ ಹೇಳಿಕೆಗಳನ್ನು ಟ್ರೇಡ್ಮಾರ್ಕ್ ರಿಜಿಸ್ಟ್ರಿಗೆ ಒದಗಿಸಿದೆ. 1969ರಲ್ಲಿ ಬಿಡುಗಡೆಯಾದ ಕಣ್ಣೂರು ಡಿಲಕ್ಸ್ ಸಿನಿಮಾದಲ್ಲಿ KSRTC (Kerala) ಬಸ್ ಕಣ್ಣೂರು ಮತ್ತು ತಿರುವನಂತಪುರ ಮಧ್ಯೆ ಸಂಚರಿಸುತ್ತಿರುವ ದೃಶ್ಯವನ್ನೂ ಒದಗಿಸಿ, ತಾನೇ ಮೊದಲು ಈ ಹೆಸರು ಬಳಸಿದ್ದು ಎಂಬುದನ್ನು ಪ್ರತಿಪಾದಿಸಿದೆ.
ಮುಂದೇನು?
ಮುಂದೇನು ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಕೆಎಸ್ಆರ್ಟಿಸಿ ಟ್ರೇಡ್ಮಾರ್ಕ್ ಕೇರಳಕ್ಕೆ ಸಿಕ್ಕಿದೆ ಎಂದು ಕೇರಳ ಸಾರಿಗೆ ಸಚಿವ ಅಂತೋನಿ ರಾಜು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಹಾಗೇ, ಕರ್ನಾಟಕ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ್, ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್, ವಿನ್ಯಾಸ ಮತ್ತು ಟ್ರೇಡ್ ಮಾರ್ಕ್ ಕಚೇರಿಯಿಂದ ನೋಟಿಸ್ ಬರದೆ, ನಾವು ಕೆಎಸ್ಆರ್ಟಿಸಿ ಟ್ರೇಡ್ಮಾರ್ಕ್ ಬಿಟ್ಟುಕೊಡುವುದಿಲ್ಲ. ಯಾವುದೇ ನಿರ್ಧಾರವನ್ನೂ ಕೈಗೊಳ್ಳುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: KSRTC Logo: ಯಾರಿಗೆ ಟ್ರೇಡ್ಮಾರ್ಕ್: ನಮಗೆ ಯಾವ ಆದೇಶವೂ ಬಂದಿಲ್ಲ ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ ಸ್ಪಷ್ಟನೆ