ನವದೆಹಲಿ, ಮಾರ್ಚ್ 29: ‘ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಸ್ಪರ್ಧಿಸಲು ಬೇಕಾದಷ್ಟು ಹಣ ನನ್ನ ಬಳಿ ಇಲ್ಲ. ಹಾಗಾಗಿ, ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾಡಿರುವ ಪ್ರಸ್ತಾಪವನ್ನು ತಿರಸ್ಕರಿಸಿದ್ದೇನೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ. ದೇಶದ ಹಣಕಾಸು ಸಚಿವರೇ ಚುನಾವಣೆ ಎದುರಿಸಲು ಬೇಕಾದಷ್ಟು ಹಣವಿಲ್ಲ ಎಂದು ಹೇಳುತ್ತಾರೆ ಎಂದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಎಷ್ಟು ದುಡ್ಡು ಬೇಕಾಗುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ.
ಹಣಕಾಸು ಖಾತೆಯನ್ನೇ ಹೊಂದಿರುವ ಕೇಂದ್ರ ಸಚಿವರ ಬಳಿ ಚುನಾವಣೆಯಲ್ಲಿ ಸೆಣಸಲು ಬೇಕಾದಷ್ಟು ಹಣವಿಲ್ಲದಿದ್ದರೆ, ಭಾರತದಲ್ಲಿ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಯ ಬಳಿ ಎಷ್ಟು ಹಣ ಬೇಕಾಗುತ್ತದೆ? ಈ ಬಗ್ಗೆ ತಿಳಿಯುವ ಪ್ರಯತ್ನ ಇಲ್ಲಿದೆ.
ಚುನಾವಣೆಗೆ ಸ್ಪರ್ಧಿಸುವ ವೆಚ್ಚವು ಅಭ್ಯರ್ಥಿಯ ಸಂಪತ್ತಿನ ಮೇಲೆ ಅವಲಂಬಿತವಾಗಿರುವುದೇನೋ ನಿಜ. ಆದರೆ ಭಾರತದ ಚುನಾವಣಾ ಆಯೋಗದ ಕೂಡ ಚುನಾವಣಾ ವೆಚ್ಚದ ಮೇಲೆ ಮಿತಿ ನಿಗದಿಪಡಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯು ಹೆಚ್ಚು ಮತದಾರರನ್ನು ಹೊಂದಿರುವ ದೊಡ್ಡ ಕ್ಷೇತ್ರಗಳಲ್ಲಾದರೆ 95 ಲಕ್ಷ ರೂ.ವರೆಗೆ ಖರ್ಚು ಮಾಡಬಹುದು. ಅದಕ್ಕಿಂತ ಹೆಚ್ಚು ಮಾಡುವಂತಿಲ್ಲ. ಸಣ್ಣ ಕ್ಷೇತ್ರಗಳಲ್ಲಾದರೆ 75 ಲಕ್ಷ ರೂಪಾಯಿವರೆಗೆ ಖರ್ಚು ಮಾಡಬಹುದು.
ವಿಧಾನಸಭಾ ಚುನಾವಣೆ ವೇಳೆ ದೊಡ್ಡ ಕ್ಷೇತ್ರಗಳ ಅಭ್ಯರ್ಥಿಯ ಚುನಾವಣಾ ಖರ್ಚಿನ ಮಿತಿ 40 ಲಕ್ಷ ರೂ. ಇದ್ದರೆ, ಚಿಕ್ಕದಾದ ಮತ್ತು ಕಡಿಮೆ ಮತದಾರರಿರುವ ಕ್ಷೇತ್ರಗಳ ಅಭ್ಯರ್ಥಿಯ ಚುನಾವಣಾ ಖರ್ಚಿನ ಮಿತಿ 20 ಲಕ್ಷ ರೂ. ಆಗಿದೆ.
ಆದರೆ ವಾಸ್ತವದಲ್ಲಿ, ಈ ಮಿತಿಯನ್ನು ಅನುಸರಿಸುತ್ತಿರುವುದು ವಿರಳ ಎಂದೇ ಹೇಳಬೇಕಷ್ಟೆ. ಪ್ರಚಾರದ ವೆಚ್ಚದ ಹೊರತಾಗಿ, ಮತದಾರರಿಗೆ ಆಮಿಷವೊಡ್ಡಲು ಅಭ್ಯರ್ಥಿಗಳು ಉಚಿತ ಕೊಡುಗೆಗಳಿಗಾಗಿ ವಿಪರೀತ ಖರ್ಚು ಮಾಡುವುದು ಗುಟ್ಟಾಗಿ ಉಳಿದಿಲ್ಲ. ಚುನಾವಣಾ ಸಂದರ್ಭದಲ್ಲಿ ಆಯೋಗದ ಅಧಿಕಾರಿಗಳು ಅಪಾರ ಪ್ರಮಾಣದಲ್ಲಿ ವಶಪಡಿಸಿಕೊಳ್ಳುವ ನಗದು, ಆಭರಣ, ಗೃಹ ಬಳಕೆಯ ವಸ್ತುಗಳು ಹಾಗೂ ಇತರ ವಸ್ತುಗಳಿಂದ ಇದನ್ನು ತಿಳಿಯಬಹುದಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿಲ್ಲ. ಅವರು ರಾಜ್ಯಸಭಾ ಸದಸ್ಯರಾಗಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಲೋಕಸಭೆ ಚುನಾವಣೆಯಷ್ಟು ಹಣ ಖರ್ಚು ಮಾಡಬೇಕಾಗಿ ಬರುವುದಿಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ನನ್ನ ಬಳಿ ಅಷ್ಟು ಹಣವಿಲ್ಲ ಎಂದ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್ 2016 ರಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅಫಿಡವಿಟ್‌ನಲ್ಲಿ ಸುಮಾರು 2.5 ಕೋಟಿ ರೂ. ನಿವ್ವಳ ಆಸ್ತಿ ಮೌಲ್ಯ ಘೋಷಿಸಿದ್ದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಈವರೆಗೆ ಆಸ್ತಿ ವಿವರ ಘೋಷಿಸಿರುವವರಲ್ಲಿ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ 593 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಇವರು ಕಣದಲ್ಲಿರುವ ಅತ್ಯಂತ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ.
ಇನ್ನುಳಿದಂತೆ, ಈರೋಡ್ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ಅಶೋಕ್ ಕುಮಾರ್ 583 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ನಾಮಪತ್ರ ಸಲ್ಲಿಸಿದ ಡಿಕೆ ಸುರೇಶ್ 593.04 ಕೋಟಿ ರೂ. ಒಡೆಯ, ಆದ್ರೂ ಒಂದು ಸ್ವಂತ ಕಾರು ಇಲ್ಲ!
ಪ್ರಸ್ತುತ ಚುನಾವಣೆಗಳು ಮತ್ತು ಹಣದ ನಡುವಣ ನಂಟು ಹೆಚ್ಚಾಗಿದೆ. ಅಭ್ಯರ್ಥಿಗಳು ಎಷ್ಟು ಶ್ರೀಮಂತರಾಗಿದ್ದಾರೆಯೋ, ಚುನಾವಣೆಯಲ್ಲಿ ಸ್ಪರ್ಧಿಸುವುದು ಅಷ್ಟು ಸುಲಭವಾಗುತ್ತದೆ. ಆದರೆ, ಶ್ರೀಮಂತರಾಗಿದ್ದ ಮಾತ್ರಕ್ಕೆ ಚುನಾವಣೆಯಲ್ಲಿ ಗೆಲುವು ಖಾತರಿಯಾಗದು. ಕಳೆದ ಚುನಾವಣೆಯಲ್ಲಿ ಕೆಲವು ಶ್ರೀಮಂತ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿರುವ ಉದಾಹರಣೆಗಳಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ