ಕನಸಿನ ಕಾರು ಖರೀದಿಗೆ ದುಡ್ಡು ಕೊಟ್ಟರೂ ಕಾಯುವುದು ಕಡ್ಡಾಯ; ಜಾಗತಿಕ ಸಮಸ್ಯೆ ಜಗುಲಿಗೂ ಬಂತು

|

Updated on: Mar 24, 2021 | 1:08 PM

ಕಾರು ಖರೀದಿಸಬೇಕು ಅಂದುಕೊಂಡು ಕೈಯಲ್ಲಿ ಹಣ ಇಟ್ಟುಕೊಂಡರೂ ತಕ್ಷಣವೇ ನಿಮಗೆ ಸಿಗುವುದಿಲ್ಲ ಎಂಬ ಸ್ಥಿತಿ ನಿರ್ಮಾಣ ಆಗಿದೆ. ಏಕೆಂದರೆ ಕಾರುಗಳಲ್ಲಿ ಬಳಸುವ ಮೈಕ್ರೋಪ್ರೊಸೆಸಿಂಗ್ ಚಿಪ್​ಗೆ ಜಾಗತಿಕ ಮಟ್ಟದಲ್ಲೇ ಕೊರತೆ ಆಗಿ, ಈ ಸಮಸ್ಯೆ ಆಗಿದೆ.

ಕನಸಿನ ಕಾರು ಖರೀದಿಗೆ ದುಡ್ಡು ಕೊಟ್ಟರೂ ಕಾಯುವುದು ಕಡ್ಡಾಯ; ಜಾಗತಿಕ ಸಮಸ್ಯೆ ಜಗುಲಿಗೂ ಬಂತು
ಮಹೀಂದ್ರಾ ಥಾರ್
Follow us on

ಒಂದು ಅಥವಾ ಒಂದೂವರೆ ವರ್ಷದ ಹಿಂದೆ ಕಾರು ಖರೀದಿ ಮಾಡಿದವರಾಗಿದ್ದಲ್ಲಿ ಈಗಿನ ಕಾರು ಖರೀದಿಸುವ ಅನುಭವ ಕೇಳಿದರೆ ಅಚ್ಚರಿ ಪಡುತ್ತೀರಿ. ಏಕೆಂದರೆ, ಈ ಹಿಂದೆ ಕಾರುಗಳನ್ನು ಬುಕ್ ಮಾಡಿದ ಕೆಲ ದಿನಗಳಲ್ಲಿ ಡೆಲಿವರಿ ಸಿಗುತ್ತಿತ್ತು. ಅಷ್ಟೇ ಏಕೆ, ಕೆಲ ಕಾರುಗಳಂತೂ ಒಂದೇ ದಿನದಲ್ಲಿ ಡೆಲಿವರಿ ರೆಡಿ ಆಗಿಬಿಡುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಿಂದಿನಂತಿಲ್ಲ. ನಿಮ್ಮ ಕನಸಿನ ಕಾರು ಖರೀದಿಸುವುದೆಂದರೆ, ಕಾದಿಹಳು ಶಬರಿ ರಾಮ ಬರುವನೆಂದು ಎಂಬ ಸನ್ನಿವೇಶ ಎದುರಾಗಿದೆ. ಕೆಲವು ಮಾಡೆಲ್​ಗಳಂತೂ, ಉದಾಹರಣೆಗೆ ಮಹೀಂದ್ರಾ ಥಾರ್​​ಗೆ 2022ನೇ ಇಸವಿ ತನಕ ಕಾಯಬೇಕಾದ ಸ್ಥಿತಿ ಇದೆ.

ಇದು ಯಾಕೆ ಪರಿಸ್ಥಿತಿ ಹೀಗಾಯಿತು ಅಂತ ನೋಡುವುದಾದರೆ, ಸೆಮಿ ಕಂಡಕ್ಟರ್ ಅಥವಾ ಮೈಕ್ರೋಪ್ರೊಸೆಸಿಂಗ್ ಚಿಪ್​ಗಳಿಗೆ ಜಾಗತಿಕ ಮಟ್ಟದಲ್ಲೇ ಕೊರತೆ ಆಗಿದೆ. ನಮ್ಮ ಸ್ಮಾರ್ಟ್ ಫೋನ್ ನಡೆಯುವುದು ಸೆಮಿಕಂಡಕ್ಟರ್​ನಿಂದ. ಟೀವಿ, ಗೃಹೋಪಯೋಗಿ ವಸ್ತುಗಳು, ಕಾರಿನ ಡಿಸ್​ಪ್ಲೇ, ಪ್ಲೇಸ್ಟೇಷನ್ ಹೀಗೆ ನೀವು ಯಾವುದನ್ನೇ ಹೇಳಿ ಎಲ್ಲವೂ ನಡೆಯುವುದು ಸೆಮಿಕಂಡಕ್ಟರ್​ನಿಂದ. ಇವತ್ತಿಗೆ ಶೇಕಡಾ 40ರಷ್ಟು ವಾಹನಗಳ ಮೌಲ್ಯದ ಅಂದಾಜು ಎಲೆಕ್ಟ್ರಾನಿಕ್ಸ್​​ಗೆ ಸಂಬಂಧಿಸಿದ್ದಾಗಿದೆ. ಅದು ಹೇಗೆ ಅಂತೀರಾ? ಕಾರಿನಲ್ಲಿ ಏರ್​ಕಂಡೀಷನ್, ಹೀಟರ್, ಇನ್ಫೋಟೇನ್​ಮೆಂಟ್ ಸಿಸ್ಟಮ್ ಹೀಗೆ ಏನೆಲ್ಲ ಇರುತ್ತದೆ. ಆ ಎಲ್ಲಕ್ಕೂ ಈ ಸೆಮಿ ಕಂಡಕ್ಟರ್ ಬೇಕು.

ಕೊರೊನಾ ಪೆಟ್ಟು ಬಿದ್ದು, ಸೆಮಿ ಕಂಡಕ್ಟರ್ಸ್ ತಯಾರಿಸುವ ಅದೆಷ್ಟೋ ಕಂಪೆನಿಗಳನ್ನು ಮುಚ್ಚಲಾಗಿದೆ. ಕಳೆದ ಅಕ್ಟೋಬರ್​ನಿಂದ ಹಲವು ವಾಹನ ತಯಾರಕರಿಗೆ ಇದು ಹೊಡೆತ ನೀಡುವುದಕ್ಕೆ ಶುರು ಮಾಡಿದೆ. ಮಾರುತಿ ಸುಜುಕಿಯಿಂದ ಮಹೀಂದ್ರಾ ಅಂಡ್ ಮಹೀಂದ್ರಾ, ಕಿಯಾ ಮೋಟಾರ್ಸ್, ನಿಸಾನ್ ಮೋಟಾರ್ಸ್ ಎಲ್ಲ ಕಂಪೆನಿಗಳಿಗೂ ಇದೇ ಸಮಸ್ಯೆಯಾಗಿದೆ. ಈ ಸೆಮಿಕಂಡಕ್ಟರ್ಸ್ ಇದೆಯಲ್ಲಾ, ಪವರ್ ಸ್ಟೇರಿಂಗ್​ನಿಂದ ಬ್ರೇಕ್ ಸೆನ್ಸರ್ಸ್ ತನಕ ಎಲ್ಲಕ್ಕೂ ಬೇಕು. ಎಂಟರ್​ಟೇನ್​ಮೆಂಟ್ ಸಿಸ್ಟಮ್ಸ್, ಪಾರ್ಕಿಂಗ್ ಕ್ಯಾಮೆರಾ ಹೀಗೆ ಎಲ್ಲದರಲ್ಲೂ ಬಳಸಲಾಗುತ್ತದೆ. ಸ್ಮಾರ್ಟ್ ಕಾರುಗಳಲ್ಲಿ ಈ ಚಿಪ್​ಗಳ ಬಳಕೆ ಹೆಚ್ಚು.

ಚಿಪ್​ಗಳ ಉತ್ಪಾದನೆ ಈ ಪರಿಯಲ್ಲಿ ಕೊರತೆ ಆಗುತ್ತಿದ್ದಂತೆಯೇ ಹಳೇ ಮಾಡೆಲ್ ಕಾರುಗಳೇ ಇರಲಿ ಅಥವಾ ಹೊಸ ಮಾಡೆಲ್ ಆಗಿರಲಿ ತಯಾರಿಕೆಗೆ ತೊಡಕಾಗಿದೆ. ಕೋವಿಡ್- 19ಬಿಕ್ಕಟ್ಟಿನಿಂದ ಚೇತರಿಸಿಕೊಂಡು ಕಾರುಗಳಿಗೆ ಬೇಡಿಕೆ ಕುದುರುತ್ತಿದ್ದರೂ ಪೂರೈಕೆ ಮಾಡುವುದಕ್ಕೆ ಹೀಗೆ ಸೆಮಿಕಂಡಕ್ಟರ್ಸ್ ಚಿಪ್​ಗಳಿಗೇ ಕೊರತೆ ಇದೆ. ಪರಿಸ್ಥಿತಿ ಸುಧಾರಿಸುವ ಯಾವ ನಂಬಿಕೆಯೂ ಕುದುರುತ್ತಿಲ್ಲ. ಇನ್ನೂ ಕೆಲ ಸಮಯ ಮುಂದುವರಿದಲ್ಲಿ ನಾನಾ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಕಾರಣುವುದರಲ್ಲಿ ಅನುಮಾನ ಇಲ್ಲ. ಈ ವರದಿಯಲ್ಲಿ ಕಾರಿನ ಬಗ್ಗೆ ಪ್ರಸ್ತಾವ ಮಾಡುತ್ತಿದ್ದೇವೆ. ಹಾಗಿದ್ದರೆ ಯಾವ ಕಾರುಗಳಿಗೆ ಸದ್ಯಕ್ಕೆ ಎಷ್ಟು ಸಮಯ ಕಾಯಬೇಕಾಗುತ್ತದೆ ಎಂದು ಡೀಲರ್​ಗಳು ಹೇಳುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಹೀಗಿದೆ.

ಕಾರುಗಳ ಕಂಪೆನಿ ಹಾಗೂ ಸರಾಸರಿ ವಿಳಂಬ (ತಿಂಗಳುಗಳ ಲೆಕ್ಕದಲ್ಲಿ): ಮಾರುತಿ ಸುಜುಕಿ- ಎರ್ಟಿಗಾ ಸಿಎನ್​ಜಿ: 6 ತಿಂಗಳು. ಇತರ ಎಲ್ಲ ಮಾಡೆಲ್​ಗಳು 1.5ರಿಂದ 2 ತಿಂಗಳು. ಹುಂಡೈ ಮೋಟಾರ್ಸ್- ಕ್ರೆಟಾ: 6ರಿಂದ 7 ತಿಂಗಳು. ವೆನ್ಯೂ: 3ರಿಂದ 4 ತಿಂಗಳು. I20: 3ರಿಂದ 4 ತಿಂಗಳು. ಕಿಯಾ ಮೋಟಾರ್ಸ್- ಸೆಲ್ಟೋಸ್: 2.5 ತಿಂಗಳು. ಸಾನೆಟ್: 3ರಿಂದ 3.5 ತಿಂಗಳು. ಟಾಟಾ ಮೋಟಾರ್ಸ್: ಎಲ್ಲ ಮಾಡೆಲ್​ಗಳು- 1ರಿಂದ 3.5 ತಿಂಗಳು. ಮಹೀಂದ್ರಾ ಅಂಡ್ ಮಹೀಂದ್ರಾ- ಹೊಸ ಥಾರ್: 8ರಿಂದ 10 ತಿಂಗಳು. ಸ್ಕಾರ್ಪಿಯೋ, ಬೊಲೆರೋ: 1.5ರಿಂದ 2 ತಿಂಗಳು. ಎಂ.ಜಿ. ಮೋಟಾರ್ಸ್- ಎಲ್ಲ ಮಾಡೆಲ್​ಗಳು: 2ರಿಂದ 3 ತಿಂಗಳು. ರೆನಾಲ್ಟ್- ಕೈಗರ್: 2 ತಿಂಗಳು.

ಇದನ್ನೂ ಓದಿ: Maruti Suzuki India Price Hike: ಮಾರುತಿ ಸುಜುಕಿ ಇಂಡಿಯಾದಿಂದ ಏಪ್ರಿಲ್ 1ರಿಂದ ವಾಹನಗಳ ಬೆಲೆ ಏರಿಕೆ