
ದೀಪಾವಳಿ ಹಬ್ಬ (Deepavali 2025) ಎಂದರೆ ದೇಶದ ಬಹುತೇಕ ಕಡೆ ಸಂಭ್ರಮ, ಸಡಗರ. ದೀಪಾವಳಿ ಪಟಾಕಿಯ ಹಬ್ಬವೂ ಹೌದು, ದೀಪದ ಹಬ್ಬವೂ ಹೌದು. ಪಟಾಕಿಯಿಂದ ವಾಯು ನೈರ್ಮಲ್ಯ ಹಾಳಾಗುತ್ತದೆ ಎಂದು ಆರೋಗ್ಯ ತಜ್ಞರು, ಪರಿಸರವಾದಿಗಳು ಎಚ್ಚರಿಸುತ್ತಲೇ ಬರುತ್ತಿದ್ದಾರೆ. ಅದರಲ್ಲೂ ದೆಹಲಿಯಲ್ಲಿ ಮೊದಲೇ ವಿಪರೀತ ವಾಯು ಮಾಲಿನ್ಯ (Pollution) ಇರುತ್ತದೆ. ದೀಪಾವಳಿ ಹಬ್ಬದಂದು ಗಾಳಿಯ ಗುಣಮಟ್ಟ ತೀವ್ರ ಅಪಾಯಕಾರಿ ಮಟ್ಟಕ್ಕೆ ಹೋಗುತ್ತದೆ.
ದೆಹಲಿಯ ಗಾಳಿಗೆ ಪಿಎಂ10, ಪಿಎಂ 2.5 ಇತ್ಯಾದಿ ಅಪಾಯಕಾರಿ ವಸ್ತುಗಳು ಬೆರೆದು ಜನರ ಸ್ವಾಸ್ಥ್ಯತೆಗೆ ಧಕ್ಕೆಯಾಗುತ್ತಿದೆ. ಕಣ್ಣಿಗೆ ಉರಿ, ಗಂಟಲು ಕಿರಿಕಿರಿ, ಶ್ವಾಸಕೋಶ ತೊಂದರೆ ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ದೀಪಾವಳಿ ಹಬ್ಬದ ವೇಳೆ ಸಿಡಿಯುವ ಪಟಾಕಿಗಳಿಂದ ಗಾಳಿ ಇನ್ನಷ್ಟು ಮಲಿನಗೊಳ್ಳುತ್ತದೆ ಎನ್ನುವ ವಾದವನ್ನು ಕೆಲವರು ಒಪ್ಪುವುದಿಲ್ಲ. ಆದರೆ, ಏರ್ ಕ್ವಾಲಿಟಿ ಇಂಡೆಕ್ಸ್ ಅಥವಾ ಎಕ್ಯುಐನ ದತ್ತಾಂಶದಿಂದ ವಾಸ್ತವ ತಿಳಿಯಬಹುದು.
ದೀಪಾವಳಿ ಸೀಸನ್ನಲ್ಲಿ ಹಬ್ಬಕ್ಕೆ ಮುನ್ನ, ಹಬ್ಬದ ದಿನ ಹಾಗೂ ಹಬ್ಬದ ನಂತರದ ದಿನಗಳಲ್ಲಿ ದೆಹಲಿಯ ವಿವಿಧ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಹೇಗಿತ್ತು ಎಂಬುದನ್ನು ಅವಲೋಕಿಸಿದಾಗ ಅಚ್ಚರಿಯ ಫಲಿತಾಂಶ ಕಂಡುಬಂದಿದೆ.
| ಸ್ಟೇಷನ್ | ಅ. 17-19 | ಅ. 20 | ಅ. 21-23 |
| ವಜೀರ್ಪುರ್ | 345 | 423 | 366 |
| ಅಶೋಕ್ ವಿಹಾರ್ | 336 | 427 | 364 |
| ಆನಂದ್ ವಿಹಾರ್ | 321 | 410 | 385 |
| ಪೂಸಾ | 293 | 418 | 353 |
| ವಸಂತ್ ಕುಂಜ್ | 259 | 374 | 324 |
| ಗುರುಗ್ರಾಮ್ | 251 | 433 | 320 |
| ಫರೀದಾಬಾದ್ | 237 | 406 | 318 |
ಇಲ್ಲಿ 2025ರ ಅಕ್ಟೋಬರ್ 20ರಂದು ದೀಪಾವಳಿ ಹಬ್ಬ ಇತ್ತು. ಅದಕ್ಕೆ ಮುಂಚಿನ ಮೂರು ದಿನಗಳು ಹಾಗೂ ನಂತರದ ಮೂರು ದಿನಗಳು ಸೇರಿ ಒಟ್ಟು 7 ದಿನಗಳು ದೆಹಲಿಯ ಗಾಳಿಯ ಗುಣಮಟ್ಟ ಹೇಗಿತ್ತು ಎಂಬುದನ್ನು ಮೇಲಿನ ಟೇಬಲ್ನಲ್ಲಿ ನೋಡಬಹುದು. ದೀಪಾವಳಿ ಹಬ್ಬದಂದು ಪಟಾಕಿಗಳ ಬಳಕೆ ತಾರಕಕ್ಕೇರಿದ ಪರಿಣಾಮ ಕಾಕತಾಳೀಯವೆನಿಸುವುದಿಲ್ಲ.
ಉತ್ತರ ದೆಹಲಿಯಲ್ಲಿ ದೀಪಾವಳಿ ಆಸುಪಾಸಿನ ದಿನಗಳಲ್ಲಿ ದಾಖಲಾದ ವಾಯು ಗುಣಮಟ್ಟ
ಇದನ್ನೂ ಓದಿ: ಪಿಎಂ ಕೌಶಲ್ ವಿಕಾಸ್ ಯೋಜನೆಯ ದುರುಪಯೋಗ; 178 ಟ್ರೈನಿಂಗ್ ಪಾರ್ಟ್ನರ್ಗಳನ್ನು ಕಪ್ಪುಪಟ್ಟಿಗೆ ಸೇರಿಸಿದ ಸರ್ಕಾರ
ದೆಹಲಿಯಲ್ಲಿ ಈ ಸೀಸನ್ನಲ್ಲಿ ಸಾಮಾನ್ಯವಾಗಿ ಮಂಜು ಕವಿದಿರುತ್ತದೆ. ಅದರ ಜೊತೆಗೆ ಕೈಗಾರಿಕೆಗಳು, ವಾಹನಗಳಿಂದ ಮಲಿನಗೊಂಡ ಗಾಳಿ ಬೇಗ ಚದುರುವುದಿಲ್ಲ. ಇದರಿಂದ ದೆಹಲಿಯಲ್ಲಿ ವಾಯು ಮಾಲಿನ್ಯ ಮೇಲ್ಮಟ್ಟದಲ್ಲೇ ಇರುತ್ತದೆ. ಅದರ ಜೊತೆಗೆ ದೀಪಾವಳಿಯ ಪಟಾಕಿ ಅಬ್ಬರವೂ ಮಾಲಿನ್ಯ ಹೆಚ್ಚಿಸುತ್ತದೆ ಎಂಬುದು ಈ ಮೇಲಿನ ದತ್ತಾಂಶದಿಂದ ಸ್ಪಷ್ಟವಾಗುತ್ತದೆ.
(ಮಾಹಿತಿ ಮೂಲ: www.aqi.in/)
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Fri, 7 November 25