ಆಧುನಿಕ ಶಹಜಹಾನ್; ಪತ್ನಿಗಾಗಿ ಒಡಿಶಾದಲ್ಲಿ 7 ಕೋಟಿ ರೂ. ದೇಗುಲ ಕಟ್ಟಿಸಿದ ಉದ್ಯಮಿ
ಖೇತ್ರಬಾಸಿ ಲೆಂಕಾ ಹಾಗೂ ವೈಜಯಂತಿ ದಂಪತಿ ಪ್ರಸ್ತುತ ಹೈದರಾಬಾದ್ನಲ್ಲಿ ನೆಲೆಸಿದ್ದಾರೆ. ವೈಜಯಂತಿ ಅವರು ದೇವಿ ‘ಮಾ ಸಂತೋಶಿ’ಯ ಪರಮ ಭಕ್ತೆಯಾಗಿದ್ದಾರೆ. ಅವರು ತಮ್ಮ ತವರು ಗ್ರಾಮದಲ್ಲಿ ‘ಮಾ ಸಂತೋಶಿ’ ದೇಗುಲ ನಿರ್ಮಿಸಬೇಕೆಂಬ ಇಚ್ಛೆ ಹೊಂದಿದ್ದರು.
ಬೆಂಗಳೂರು: ಶಹಜಹಾನ್ ತನ್ನ ಪತ್ನಿ ಮುಮ್ತಾಜ್ಗಾಗಿ ತಾಜ್ ಮಹಲ್ ಕಟ್ಟಿಸಿದಂತೆಯೇ ಉದ್ಯಮಿಯೊಬ್ಬರು ಪತ್ನಿಯ ಆಸೆ ಈಡೇರಿಸುವ ಸಲುವಾಗಿ 7 ಕೋಟಿ ರೂ. ವೆಚ್ಚದಲ್ಲಿ ಒಡಿಶಾದಲ್ಲಿ (Odisha) ದೇಗುಲವೊಂದನ್ನು (Temple) ನಿರ್ಮಿಸಿ ಗಮನ ಸೆಳೆದಿದ್ದಾರೆ. ಒಡಿಶಾದ ಜೈಪುರ (Jajpur) ಜಿಲ್ಲೆಯ ಬಿಂಝಾರ್ಪುರದ (Binjharpur) ಚಿಕಾನ ಗ್ರಾಮದಲ್ಲಿ ದೇವಿ ‘ಮಾ ಸಂತೋಶಿ’ (Goddess Maa Santoshi) ಭವ್ಯ ದೇಗುಲ ನಿರ್ಮಾಣವಾಗಿದ್ದು, ಗಮನ ಸೆಳೆಯುತ್ತಿದೆ. ಪ್ರಸ್ತುತ ಹೈದರಾಬಾದ್ನಲ್ಲಿ ನೆಲೆಸಿರುವ ಖೇತ್ರಬಾಸಿ ಲೆಂಕಾ ಎಂಬ ಉದ್ಯಮಿಯೇ ಪತ್ನಿ ವೈಜಯಂತಿ ಅವರಿಗಾಗಿ ಈ ದೇಗುಲ ಕಟ್ಟಿಸಿದ್ದಾರೆ. ದೇಗುಲವನ್ನು ದಕ್ಷಿಣ ಭಾರತದ ವಾಸ್ತುಶಿಲ್ಪದ ಪ್ರಕಾರ ನಿರ್ಮಾಣ ಮಾಡಲಾಗಿದೆ.
ಖೇತ್ರಬಾಸಿ ಲೆಂಕಾ ಹಾಗೂ ವೈಜಯಂತಿ ದಂಪತಿ ಪ್ರಸ್ತುತ ಹೈದರಾಬಾದ್ನಲ್ಲಿ ನೆಲೆಸಿದ್ದಾರೆ. ವೈಜಯಂತಿ ಅವರು ದೇವಿ ‘ಮಾ ಸಂತೋಶಿ’ಯ ಪರಮ ಭಕ್ತೆಯಾಗಿದ್ದಾರೆ. ಅವರು ತಮ್ಮ ತವರು ಗ್ರಾಮದಲ್ಲಿ ‘ಮಾ ಸಂತೋಶಿ’ ದೇಗುಲ ನಿರ್ಮಿಸಬೇಕೆಂಬ ಇಚ್ಛೆ ಹೊಂದಿದ್ದರು. ಹೀಗಾಗಿ ಲೆಂಕಾ ಅವರು ದೇಗುಲ ನಿರ್ಮಿಸಿದ್ದಾರೆ ಎಂದು ‘ಒಡಿಶಾ ಟಿವಿ’ ವರದಿ ಮಾಡಿದೆ.
ದೇಗುಲ ನಿರ್ಮಾಣ ಕಾರ್ಯ 2008ರಲ್ಲಿ ಆರಂಭವಾಗಿದ್ದು, ಇತ್ತೀಚೆಗೆ ಪೂರ್ಣಗೊಂಡಿತ್ತು. ಸುಂದರವಾದ ಕೆತ್ತನೆ ಮತ್ತು ವಿನ್ಯಾಸ ಹೊಂದಿರುವ ದೇಗುಲವು 86 ಅಡಿಗಳಷ್ಟು ವಿಸ್ತಾರವಾದ ಪ್ರವೇಶದ್ವಾರವನ್ನು ಹೊಂದಿದೆ ಎಂದು ವರದಿ ಉಲ್ಲೇಖಿಸಿದೆ. ಮಾ ಸಂತೋಶಿ ಮಾತ್ರವಲ್ಲದೆ ಶಿವ, ಗಣೇಶ, ಹನುಮಾನ ಹಾಗೂ ನವಗ್ರಹ ಗುಡಿಗಳೂ ದೇಗುಲದಲ್ಲಿವೆ.
ಪಟ್ಟಣಗಳಲ್ಲಿ ಅನೇಕ ದೇವಾಲಯಗಳಿರುವುದರಿಂದ ಹಳ್ಳಿಯಲ್ಲಿ ದೇಗುಲ ನಿರ್ಮಿಸುವ ಆಸೆ ನನಗಿತ್ತು. ನನ್ನ ಕನಸನ್ನು ನನಸು ಮಾಡಿದ ಪತಿಗೆ ನಾನು ಆಭಾರಿಯಾಗಿದ್ದೇನೆ. ಮೊದಲಿಗೆ ನಾವು ಒಂದು ಸಣ್ಣ ದೇವಾಲಯವನ್ನು ನಿರ್ಮಿಸಲು ಬಯಸಿದ್ದೆವು. ಆದರೆ, ದೇವಿಯ ಆಶೀರ್ವಾದದಿಂದ ನಮ್ಮ ಗ್ರಾಮದಲ್ಲಿ ಇಂತಹ ಸುಂದರ ದೇವಾಲಯ ನಿರ್ಮಾಣವಾಗಿದೆ. ಕೊನೆಗೂ ನನ್ನ ಕನಸು ನನಸಾಗಿದೆ ಎಂದು ವೈಜಯಂತಿ ಹರ್ಷ ವ್ಯಕ್ತಪಡಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:14 pm, Thu, 2 March 23