CJI NV Ramana: ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದಿಂದ ವಿವಾದಗಳಿಗೆ ತುರ್ತು ಪರಿಹಾರ ಸಾಧ್ಯ; ಸಿಜೆಐ ಎನ್ವಿ ರಮಣ ಅಭಿಮತ
ಭಾರತದಲ್ಲಿರುವ ಅನೇಕ ಆಸ್ತಿ ವಿವಾದ ಮತ್ತು ತಕರಾರಿನ ಪ್ರಕರಣಗಳು ಬಗೆಹರಿಯಲು ಬಹಳ ಸಮಯ ಬೇಕಾಗುತ್ತಿದೆ. ಈ ಮಧ್ಯಸ್ಥಿಕೆ ಕೇಂದ್ರ ನಿರ್ಮಾಣವಾದರೆ ಆ ಪ್ರಕರಣಗಳನ್ನು ತ್ವರಿತವಾಗಿ ಬಗೆಹರಿಸಲು ಸಾಧ್ಯವಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹೇಳಿದ್ದಾರೆ.
ಹೈದರಾಬಾದ್: ತ್ವರಿತವಾಗಿ ವಿವಾದಗಳನ್ನು ಬಗೆಹರಿಸಲು ಮಧ್ಯಸ್ಥಿಕೆಯ ಕೇಂದ್ರದ ಅಗತ್ಯವಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ಹೈದರಾಬಾದ್ನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವು ವಿದೇಶದಲ್ಲಿರುವ ಹೂಡಿಕೆದಾರರಿಗೆ ಸಹಾಯಕವಾಗಲಿದೆ. ಹಾಗೇ, ನಾನಾ ರೀತಿಯ ತಕರಾರು, ವಿವಾದದಲ್ಲಿರುವ ಪ್ರಕರಣಗಳನ್ನು ತಾಂತ್ರಿಕವಾಗಿ, ಕಾನೂನಾತ್ಮಕವಾಗಿ ಬಗೆಹರಿಸಲು ನೆರವಾಗಲಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿರುವ ಅನೇಕ ಆಸ್ತಿ ವಿವಾದ ಮತ್ತು ತಕರಾರಿನ ಪ್ರಕರಣಗಳು ಬಗೆಹರಿಯಲು ಬಹಳ ಸಮಯ ಬೇಕಾಗುತ್ತಿದೆ. ಹೀಗಾಗಿ, ಮಧ್ಯಸ್ಥಿಕೆ ಕೇಂದ್ರಗಳು ನಿರ್ಮಾಣವಾದರೆ ಆ ಪ್ರಕರಣಗಳನ್ನು ತ್ವರಿತವಾಗಿ ಬಗೆಹರಿಸಲು ಸಾಧ್ಯವಿದೆ. ತಾಂತ್ರಿಕವಾಗಿ ತಜ್ಞರನ್ನು ಹೊಂದಿರುವ ತಂಡದಿಂದ ಈ ಮಧ್ಯಸ್ಥಿಕೆ ಕೇಂದ್ರದ ಮೂಲಕ ಅನೇಕ ವಿವಾದಗಳನ್ನು ಬೇಗ ಬರೆಹರಿಸಬಹುದು. ಇದರಿಂದ ಕಾನೂನು ವ್ಯವಸ್ಥೆಗೂ ಬಲ ಬಂದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹೇಳಿದ್ದಾರೆ.
ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ, ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ಮೂಲಕ ತಾಂತ್ರಿಕ ತಜ್ಞರನ್ನು ನೇಮಕ ಮಾಡಿ ವಿವಾದಗಳ ಇತ್ಯರ್ಥಗೊಳಿಸಲಾಗುವುದು. ಈ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವನ್ನು ಹಿರಿಯ ಕಾನೂನು ತಜ್ಞರು ಮೇಲ್ವಿಚಾರಣೆ ಮಾಡಲಿದ್ದಾರೆ. ಸದ್ಯದಲ್ಲೇ ಈ ಟ್ರಸ್ಟ್ ಮಂಡಳಿಗೆ ಕೆಲವು ಟ್ರಸ್ಟಿಗಳನ್ನು ಕೂಡ ನೇಮಕ ಮಾಡಲಾಗುವುದು ಎಂದಿದ್ದಾರೆ.
ಪ್ರಪಂಚದಲ್ಲಿರುವ ಇತರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಗಳಿಗಿಂತ ಭಿನ್ನವಾಗಿ, ವಿವಾದ ಪರಿಹಾರವು ಭಾರತದಲ್ಲಿ ಹೂಡಿಕೆದಾರರಿಗೆ ಕಡಿಮೆ ವೆಚ್ಚದಲ್ಲಿ ಆಗಲಿದೆ. ಮಧ್ಯಸ್ಥಿಕೆಯು ಹಲವಾರು ವಿವಾದಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ ಸಿಜೆಐ ಎನ್ವಿ ರಮಣ, ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಕ್ಕೆ ಮೂಲ ಸೌಕರ್ಯ, ಹಣಕಾಸಿನ ನೆರವು ನೀಡುತ್ತಿರುವುದಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಪ್ರಸ್ತಾವಿತ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವು ದೇಶೀಯ ಹೂಡಿಕೆದಾರರಿಗೂ ಬಹಳ ಸಹಾಯ ಮಾಡುತ್ತದೆ. ಹೆಚ್ಚಿನ ಹೂಡಿಕೆದಾರರು ಮೊದಲು ದಾವೆಗಳನ್ನು ತಪ್ಪಿಸಲು ಬಯಸುತ್ತಾರೆ ಮತ್ತು ದಾವೆ ಹೂಡುವುದು ಅನಿವಾರ್ಯವಾದರೆ ವಿವಾದಗಳನ್ನು ಬೇಗನೆ ಬಗೆಹರಿಸಿಕೊಳ್ಳಲು ಬಯಸುತ್ತಾರೆ. ಅದಕ್ಕೆ ಕಾನೂನು ವ್ಯವಸ್ಥೆಯಲ್ಲಿರುವ ತೊಡಕುಗಳನ್ನು ಕಡಿತಗೊಳಿಸಲು ಈ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಅವರಿಗೆ ಸಹಾಯ ಮಾಡುತ್ತದೆ ಎಂದು ಸಿಜೆಐ ರಮಣ ಹೇಳಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಮೂರು ತಿಂಗಳಲ್ಲಿ ಹೈದರಾಬಾದಿನಲ್ಲಿ ಈ ಮಧ್ಯಸ್ಥಿಕೆ ಕೇಂದ್ರದ ಕನಸು ನನಸಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಇದನ್ನು ಮಾಡಲು ತೆಲಂಗಾಣ ಸರ್ಕಾರ ನೀಡಿದ ಸಹಕಾರಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.
ಇದನ್ನೂ ಓದಿ: NDA Exam: ಲಿಂಗ ತಾರತಮ್ಯಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ; ಈ ಬಾರಿ ಮಹಿಳೆಯರಿಗೂ ಎನ್ಡಿಎ ಪರೀಕ್ಷೆ ಬರೆಯಲು ಅವಕಾಶ
Published On - 6:27 pm, Fri, 20 August 21