
ಹೈದರಾಬಾದ್, ಡಿಸೆಂಬರ್ 8: ಹೈದರಾಬಾದ್‌ನಲ್ಲಿರುವ ಯುಎಸ್ ಕಾನ್ಸುಲೇಟ್ ಕಟ್ಟಡಕ್ಕೆ ಹೋಗುವ ರಸ್ತೆಗೆ ಅಮೆರಿಕದ 45 ಮತ್ತು 47ನೇ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ (Donald Trump) ಅವರ ಹೆಸರಿಡಲು ತೆಲಂಗಾಣ ಸರ್ಕಾರ ಭಾನುವಾರ ಪ್ರಸ್ತಾಪಿಸಿದೆ. ಈ ಹೈ ಪ್ರೊಫೈಲ್ ರಸ್ತೆಗೆ ‘ಡೊನಾಲ್ಡ್ ಟ್ರಂಪ್ ಅವೆನ್ಯೂ’ ಎಂದು ಹೆಸರಿಡಲು ನಿರ್ಧರಿಸಲಾಗಿದೆ. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಹೈದರಾಬಾದ್ನ ರಸ್ತೆಗೆ ಟ್ರಂಪ್ ಹೆಸರಿಡುವ ಬಗ್ಗೆ ತೆಲಂಗಾಣ ಸರ್ಕಾರ ಶೀಘ್ರದಲ್ಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ಯುಎಸ್ ರಾಯಭಾರ ಕಚೇರಿಗೆ ಸಮನ್ವಯ ಮತ್ತು ಅನುಮೋದನೆಗಾಗಿ ಮನವಿ ಮಾಡಲಿದೆ.
ಹಾಗೇ, ಗ್ರೀನ್‌ಫೀಲ್ಡ್ ರೇಡಿಯಲ್ ರಸ್ತೆಗೆ ರತನ್ ಟಾಟಾ ಅವರ ಹೆಸರಿಡಲಾಗುವುದು. ರವಿರಿಯಾಲದಲ್ಲಿರುವ ಔಟರ್ ರಿಂಗ್ ರಸ್ತೆ (ORR) ಅನ್ನು ಪ್ರಸ್ತಾವಿತ ರೇಡಿಯಲ್ ರಿಂಗ್ ರಸ್ತೆ (RRR) ನೊಂದಿಗೆ ಸಂಪರ್ಕಿಸುವ ಮುಂಬರುವ ಗ್ರೀನ್‌ಫೀಲ್ಡ್ ರೇಡಿಯಲ್ ರಸ್ತೆಗೆ ದಿವಂಗತ ಉದ್ಯಮಿ ರತನ್ ಟಾಟಾ ಅವರ ಹೆಸರಿಡಲು ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ: Telangana Road Accident: ತೆಲಂಗಾಣ: ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 20 ಮಂದಿ ಸಾವು
ರಾಜ್ಯ ಸರ್ಕಾರವು ಹೈದರಾಬಾದ್ನ ಪ್ರಮುಖ ರಸ್ತೆಗೆ ಯುಎಸ್ ಮೂಲದ ಟೆಕ್ ದೈತ್ಯ ಗೂಗಲ್ ಹೆಸರಿಡಲು ಪ್ರಸ್ತಾಪಿಸಿದೆ. ಇದಲ್ಲದೆ, ‘ವಿಪ್ರೋ’, ‘ಮೈಕ್ರೋಸಾಫ್ಟ್’ ನಂತಹ ಇತರ ಟೆಕ್ ದೈತ್ಯ ಕಂಪನಿಗಳನ್ನು ಸಹ ರಸ್ತೆಗಳಿಗೆ ಇಡುವ ಸಾಧ್ಯತೆಯಿದೆ. ನಗರದ ಹೊರವಲಯದಲ್ಲಿರುವ ಭಾರತ್ ಫ್ಯೂಚರ್ ಸಿಟಿಯಲ್ಲಿ ತೆಲಂಗಾಣ ರೈಸಿಂಗ್ ಗ್ಲೋಬಲ್ ಶೃಂಗಸಭೆ 2025ರ ಮುನ್ನಾದಿನದಂದು ಈ ಘೋಷಣೆ ಮಾಡಲಾಯಿತು.
ನವೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂ (USISPF)ನಲ್ಲಿ ಮಾತನಾಡಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪ್ರಮುಖ ರಸ್ತೆಗಳಿಗೆ ಪ್ರಮುಖ ಜಾಗತಿಕ ಕಂಪನಿಗಳ ಹೆಸರಿಡಲು ಪ್ರಸ್ತಾಪಿಸಿದ್ದರು.
ಇದನ್ನೂ ಓದಿ: ತೆಲಂಗಾಣದ ರಾಜಭವನವನ್ನು ಲೋಕ ಭವನ ಎಂದು ಮರುನಾಮಕರಣ
ಈ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಬಿಜೆಪಿ, ಕಾಂಗ್ರೆಸ್ ನೇತೃತ್ವದ ತೆಲಂಗಾಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಲು ಸೂಚಿಸಿದ್ದಾರೆ. ”ಕಾಂಗ್ರೆಸ್ ಸರ್ಕಾರ ಹೆಸರುಗಳನ್ನು ಬದಲಾಯಿಸಲು ಇಷ್ಟೊಂದು ಉತ್ಸುಕರಾಗಿದ್ದರೆ, ಅವರು ನಿಜವಾಗಿಯೂ ಇತಿಹಾಸ ಮತ್ತು ಅರ್ಥವನ್ನು ಹೊಂದಿರುವ ಹೆಸರುಗಳನ್ನು ಬಳಸಬೇಕು. ರೇವಂತ್ ರೆಡ್ಡಿ ಯಾರ ವರ್ತನೆಯನ್ನು ಅನುಸರಿಸುತ್ತಿದ್ದಾರೋ ಅವರ ಹೆಸರನ್ನೇ ಇಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ