Telangana Road Accident: ತೆಲಂಗಾಣ: ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 20 ಮಂದಿ ಸಾವು
ಆಂಧ್ರದ ಕರ್ನೂಲ್ ಬಸ್ ದುರಂತ, ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗಾ ವೆಂಕಟೇಶ್ವರ ದೇಗುಲದ ಕಾಲ್ತುಳಿತ ಘಟನೆಗಳ ಕಹಿ ನೆನಪು ಮಾಸುವ ಮುನ್ನವೇ ನೆರೆ ರಾಜ್ಯ ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕನಿಷ್ಠ 20 ಮಂದಿ ಮೃತಪಟ್ಟಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದಾರೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿ ಘಟನೆ ಸಂಭವಿಸಿದೆ.

ಹೈದರಾಬಾದ್, ನವೆಂಬರ್ 3: ತೆಲಂಗಾಣದ (Telangana) ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿಯ ಮಿರ್ಜಗುಡದಲ್ಲಿ ಹೈದರಾಬಾದ್-ಬಿಜಾಪುರ (Hyderabad-Bijapur highway) ಹೆದ್ದಾರಿಯಲ್ಲಿ ಸೋಮವಾರ, ಬಸ್‌ಗೆ ಲಾರಿ ಡಿಕ್ಕಿಹೊಡೆದ ಪರಿಣಾಮ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ. 24 ಜನ ಗಾಯಗೊಂಡಿದ್ದಾರೆ. ಜಲ್ಲಿ ತುಂಬಿದ್ದ ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಟ್ರಕ್ ಅತಿ ವೇಗದಲ್ಲಿ ಚಲಿಸುತ್ತಿದ್ದುದೇ ಅಪಘಾತಕ್ಕೆ (Road Accident) ಕಾರಣ ಎಂಬುದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಅಪಘಾತ ನಡೆದ ಸ್ಥಳದ ಬಳಿ ಅಪಾಯಕಾರಿ ತಿರುವೊಂದು ಇದೆ. ಈ ಜಾಗದಲ್ಲಿ ಅತಿ ವೇಗದಲ್ಲಿ ಬಂದ ಲಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಲಾರಿಯಲ್ಲಿದ್ದ ಜಲ್ಲಿಕಲ್ಲು ಹೆಚ್ಚಿನ ಜೀವಹಾನಿಗೆ ಕಾರಣ ಎನ್ನಲಾಗಿದೆ. ಜಲ್ಲಿಕಲ್ಲುಗಳು ಏಕಾಏಕಿ ಬಸ್ನಲ್ಲಿದ್ದ ಪ್ರಯಾಣಿಕರ ಮೇಲೆ ಬಿದ್ದ ಕಾರಣ, ಹೆಚ್ಚಿನ ಪ್ರಯಾಣಿಕರು ಸಾವನ್ನಪ್ಪಿದರು. ಹತ್ತುಕ್ಕೂ ಹೆಚ್ಚು ಜನರು ಜಲ್ಲಿಕಲ್ಲುಗಳ ಅಡಿಯಲ್ಲಿ ಸಮಾಧಿಯಾದರು.
ಘಟನೆಯಲ್ಲಿ ಮೃತಪಟ್ಟವರಲ್ಲಿ 18 ಮಂದಿ ಬಸ್ ಪ್ರಯಾಣಿಕರು, ಬಸ್ ಮತ್ತು ಟಿಪ್ಪರ್ ಚಾಲಕರು ಸೇರಿದ್ದಾರೆ. ಒಂದು ವರ್ಷದ ಮಗು ಸೇರಿದಂತೆ 11 ಮಹಿಳೆಯರು ಮತ್ತು 9 ಪುರುಷರು ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ 24 ಜನರು ಗಾಯಗೊಂಡಿದ್ದು, 5 ಮಂದಿಯ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಘಟನಾ ಸ್ಥಳದಲ್ಲಿ ರಕ್ಷಣಾ ಕರ್ಯಾಚರಣೆಯ ವಿಡಿಯೋ
VIDEO | Rangareddy: Several injured after a tipper collided with a Tandur RTC bus near Mirjaguda on the Hyderabad-Bijapur highway.
(Full video available on PTI Videos – https://t.co/n147TvrpG7) pic.twitter.com/ZwgBJcTDtn
— Press Trust of India (@PTI_News) November 3, 2025
ಅಪಘಾತದ ನಂತರ ಚೆವೆಲ್ಲಾ-ವಿಕಾರಾಬಾದ್ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಗಾಯಾಳುಗಳನ್ನು ಚೆವೆಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳದಲ್ಲಿ ಜೆಸಿಬಿ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.
ತಕ್ಷಣವೇ ನೆರವಿಗೆ ಧಾವಿಸಲು ಅಧಿಕಾರಿಗಳಿಗೆ ಸಿಎಂ ರೇವಂತ್ ರೆಡ್ಡಿ ಸೂಚನೆ
ಮಿರ್ಜಗುಡ ರಸ್ತೆ ಅಪಘಾತದಿಂದ ಆಘಾತಕ್ಕೊಳಗಾಗಿರುವುದಾಗಿ ಸಿಎಂ ರೇವಂತ್ ರೆಡ್ಡಿ ತಿಳಿಸಿದ್ದು, ತಕ್ಷಣವೇ ಅಪಘಾತದ ಸ್ಥಳಕ್ಕೆ ಹೋಗಲು ಅಧಿಕಾರಿಗಳಿಗೆ ಸಿಎಂ ಆದೇಶಿಸಿದ್ದಾರೆ. ಅಗತ್ಯ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಬಸ್ ಅಪಘಾತದಲ್ಲಿ ಗಾಯಗೊಂಡ ಎಲ್ಲರನ್ನು ತಕ್ಷಣ ಹೈದರಾಬಾದ್‌ಗೆ ಸ್ಥಳಾಂತರಿಸಲು ಮತ್ತು ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುವಂತೆ ಸಿಎಸ್ ಮತ್ತು ಡಿಜಿಪಿಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಮತ್ತು ಅದಕ್ಕಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸಿಎಂ ಆದೇಶಿಸಿದ್ದಾರೆ. ಇದನ್ನೂ ಓದಿ: ಆಂಧ್ರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಕಾಲ್ತುಳಿತಕ್ಕೆ ಕಾರಣವೇನು? ಇಲ್ಲಿದೆ ಪೂರ್ತಿ ಮಾಹಿತಿ
ವಾರದ ಹಿಂದಷ್ಟೇ ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಬಸ್ ಬೈಕ್ಗೆ ಡಿಕ್ಕಿಯಾಗಿ ನಂತರ ಬೆಂಕಿಗಾಹುತಿಯಾಗಿ 19 ಪ್ರಯಾಣಿಕರು ಸಾವನ್ನಪ್ಪಿದ್ದು, 12 ಜನರು ಗಾಯಗೊಂಡಿದ್ದರು. ಅದಾದ ಕೆಲವೇ ದಿನಗಳ ನಂತರ, ನವೆಂಬರ್ 1 ರಂದು ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗ ಪಟ್ಟಣದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿ 9 ಮಂದಿ ಮೃತಪಟ್ಟಿದ್ದರು. ಈ ಘಟನೆಗಳ ಕಹಿ ನೆನಪು ಮಾಸುವ ಮುನ್ನವೇ ನೆರೆಯ ತೆಲಂಗಾಣದಲ್ಲಿ ಮತ್ತೊಂದು ದುರಂತ ಸಂಭವಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:18 am, Mon, 3 November 25




