ನಾನು ಈ ದೇಶದ ರಾಷ್ಟ್ರಪತಿ ಆಗುವುದಿಲ್ಲ, ಬಿಜೆಪಿಯ ಸುಳ್ಳು ಪ್ರಚಾರ ನಂಬಬೇಡಿ: ಮಾಯಾವತಿ

| Updated By: Lakshmi Hegde

Updated on: Mar 27, 2022 | 8:08 PM

ಈಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರ ಅವಧಿ ಜುಲೈ 24ಕ್ಕೆ ಮುಕ್ತಾಯವಾಗುತ್ತದೆ. ಅದಕ್ಕೂ ಮೊದಲು ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಬೇಕಿದೆ.

ನಾನು ಈ ದೇಶದ ರಾಷ್ಟ್ರಪತಿ ಆಗುವುದಿಲ್ಲ, ಬಿಜೆಪಿಯ ಸುಳ್ಳು ಪ್ರಚಾರ ನಂಬಬೇಡಿ: ಮಾಯಾವತಿ
ಮಾಯಾವತಿ
Follow us on

ಲಖನೌ: ಯಾವುದೇ ಪಕ್ಷದವರು ನನಗೆ ರಾಷ್ಟ್ರಪತಿ ಹುದ್ದೆ ನೀಡುತ್ತೇವೆ ಎಂದರೂ ನಾನು ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಬಹುಜನ ಸಮಾಜ ಪಾರ್ಟಿ ಮುಖ್ಯಸ್ಥೆ ಮಾಯಾವತಿ (BSP  Chief Mayawati) ಇಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ಮತ್ತು ಆರ್​ಎಸ್​ಎಸ್​ ವಿರುದ್ಧ ಕಿಡಿಕಾರಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ವೇಳೆ  ಬಿಜೆಪಿ ಮತ್ತು ಆರ್​ಎಸ್​ಎಸ್​ಗಳು ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿವೆ. ಈ ಸಲ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಮುಂದಿನ ಅವಧಿಯ ರಾಷ್ಟ್ರಪತಿ ಹುದ್ದೆಯನ್ನು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿಗೆ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಬಿಜೆಪಿ-ಆರ್​ಎಸ್​ಎಸ್​ಗಳು ಸುಳ್ಳು ಪ್ರಚಾರ ನಡೆಸಿವೆ. ಇದು ನಮ್ಮ ಪಕ್ಷದ ಬೆಂಬಲಿಗರ ದಿಕ್ಕು ತಪ್ಪಸಿದೆ ಎಂದು ಮಾಯಾವತಿ ಕಿಡಿಕಾರಿದ್ದಾರೆ.

ಈ ಸಲ ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಾರ್ಟಿ ಹಿನಾಯವಾಗಿ ಸೋತಿದೆ. ತಮ್ಮ ಸೋಲಿಗೆ ಮುಖ್ಯ ಕಾರಣ ಮಾಧ್ಯಮದವರು ಎಂದು ಮಾಯಾವತಿ ಆರೋಪಿಸಿದ್ದರು. ಅಷ್ಟೇ ಅಲ್ಲ ಯಾವುದೇ ಮಾಧ್ಯಮಗಳ ಪ್ಯಾನಲ್​ ಡಿಸ್ಕಶನ್​​ನಲ್ಲೂ ಬಿಎಸ್​ಪಿಯಿಂದ ಯಾರೂ ಪಾಲ್ಗೊಳ್ಳುವುದಿಲ್ಲ ಎಂದೂ ಹೇಳಿದ್ದಾರೆ. ಇನ್ನು ಮಾಯಾವತಿ ಮಾಜಿ ಮುಖ್ಯಮಂತ್ರಿ.  ಒಂದು ಕಾಲದಲ್ಲಿ ಉತ್ತರ ಪ್ರದೇಶವನ್ನು ಆಳಿದ್ದ ಪಕ್ಷವೀಗ ಅಲ್ಲಿ ಎರಡು ಕ್ಷೇತ್ರದಲ್ಲಿ ಗೆಲ್ಲಲೂ ಕಷ್ಟಪಟ್ಟಿದೆ. ರಾಷ್ಟ್ರಪತಿ ಹುದ್ದೆ ಬಗ್ಗೆ ಮಾತನಾಡಿದ ಮಾಯಾವತಿ, ನಾನೊಮ್ಮೆ ರಾಷ್ಟ್ರಪತಿಯಾಗಿ ಕುಳಿತರೆ ನನ್ನ ಪಕ್ಷ ಅಲ್ಲಿಗೆ ಕೊನೆಯಾದಂತೆ ಎಂಬ ಅರಿವು ನನಗೆ ಇದೆ. ಹೀಗಿರುವಾಗ ನಾನ್ಯಾಕೆ ಆ ಹುದ್ದೆಯನ್ನು ಒಪ್ಪಿಕೊಳ್ಳುತ್ತೇನೆ. ಬಿಜೆಪಿ ಸೇರಿ ಇನ್ಯಾವುದೇ ರಾಷ್ಟ್ರೀಯ ಪಕ್ಷಗಳು ನನ್ನೆದುರು ರಾಷ್ಟ್ರಪತಿ ಹುದ್ದೆಯ ಪ್ರಸ್ತಾಪವನ್ನಿಟ್ಟರೂ ನಾನದನ್ನು ಸ್ಪಷ್ಟವಾಗಿ ತಿರಸ್ಕಾರ ಮಾಡುತ್ತೇನೆ. ಮುಂದೆ ಇಂಥ ಸುದ್ದಿ ಹಬ್ಬಿದರೆ ಯಾರೂ ನಂಬಬೇಡಿ ಎಂದು ಬಿಎಸ್​ಪಿ ಪ್ರತಿಯೊಬ್ಬ ಪದಾಧಿಕಾರಿ, ಕಾರ್ಯಕರ್ತರಲ್ಲೂ ನಾನು ಮನವಿ ಮಾಡುತ್ತೇನೆ ಎಂದು ಮಾಯಾವತಿ ಹೇಳಿದ್ದಾರೆ.

ಈಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರ ಅವಧಿ ಜುಲೈ 24ಕ್ಕೆ ಮುಕ್ತಾಯವಾಗುತ್ತದೆ. ಅದಕ್ಕೂ ಮೊದಲು ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಬೇಕಿದೆ. ಈ ಸಲ ರಾಷ್ಟ್ರಪತಿ ಯಾರಾಗಬಹುದು ಎಂಬ ಕುತೂಹಲ ಸಹಜವಾಗಿಯೇ ಎದ್ದಿದೆ.  ಆದರೆ ಮಾಯಾವತಿ ತಾವಂತೂ ಒಪ್ಪುವುದಿಲ್ಲ ಎಂದು ಹೇಳಿಕೊಂಡಿದ್ದು, ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ನನ್ನ ಮಗಳ ಜಾತಿ ಪ್ರಮಾಣ ಪತ್ರ ವಿಚಾರದಲ್ಲಿ ತನಿಖೆ ಆಗಲಿ, ನನ್ನ ತಪ್ಪಿದ್ದರೆ ನೇಣಿಗೆ ಹಾಕಲಿ -ಶಾಸಕ ಎಂ.ಪಿ.ರೇಣುಕಾಚಾರ್ಯ

Published On - 8:03 pm, Sun, 27 March 22