ಚೆನ್ನೈ: ಕಮಲ್ ಹಾಸನ್ ಖ್ಯಾತಿಗಳಿಸಿದ್ದು ಸಿನಿಮಾದಿಂದಲೇ. ಆದರೆ ಅವರೀಗ ಸಕ್ರಿಯ ರಾಜಕಾರಣಿ ಎನ್ನಿಸಿಕೊಳ್ಳುವತ್ತ ದಾಪುಗಾಲು ಹಾಕುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಇಂದು ಒಂದು ಹೇಳಿಕೆಯನ್ನೂ ನೀಡಿದ್ದಾರೆ. ನನ್ನ ರಾಜಕೀಯ ಜೀವನಕ್ಕೆ ಸಿನಿಮಾಗಳಿಂದ ತೊಂದರೆ ಆಗುವುದಾದರೆ ನಾನು ಸಿನಿಮಾವನ್ನು ಬಿಟ್ಟುಬಿಡುತ್ತೇನೆ ಎಂದು ಹೇಳಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್, ನಾನು ರಾಜಕೀಯಕ್ಕೆ ಸೇರಬೇಕು ಎಂಬುದು ನನ್ನ ತುಂಬ ಹಳೇ ನಿರ್ಧಾರ. ಈ ನನ್ನ ರಾಜಕೀಯ ಕರಿಯರ್ಗೆ ಸಿನಿಮಾಗಳಿಂದ ಅಡೆತಡೆಯಾಗುತ್ತದೆ ಎಂದಾದರೆ ಈಗಿರುವ ಸಿನಿಮಾ ಕಾರ್ಯಗಳನ್ನೆಲ್ಲ ಮುಗಿಸಿಕೊಟ್ಟು, ನಂತರ ಸಂಪೂರ್ಣವಾಗಿ ಬಿಟ್ಟುಬಿಡುತ್ತೇನೆ. ಜನರ ಸೇವೆಯೇ ಆದ್ಯತೆ ಎಂದು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಅದರಲ್ಲಿ 154 ಸೀಟುಗಳಲ್ಲಿ ಎಂಎನ್ಎಂ ಪಕ್ಷ ಸ್ಪರ್ಧಿಸಿದೆ. ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಮಲ್ ಹಾಸನ್ ಸ್ಪರ್ಧೆಗೆ ಇಳಿದಿದ್ದಾರೆ. ಕಮಲ್ ಹಾಸನ್ ರಾಜಕೀಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದಾದ ಬಳಿಕ ಸಿನಿಮಾಕ್ಕೆ ವಾಪಸ್ ಆಗುತ್ತಾರೆ ಎಂದು ಅವರ ವಿರೋಧಿ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ಆದರೆ ಕಮಲ್ ಹಾಸನ್ ಸರಿಯಾಗಿ ಉಲ್ಟಾ ಹೊಡೆದಿದ್ದಾರೆ. ರಾಜಕೀಯದಲ್ಲಿ ಯಾರು ಸೋಲುತ್ತಾರೆ ಎಂದು ಕಾದು ನೋಡೋಣ. ಜನರೇ ನಿರ್ಧರಿಸುತ್ತಾರೆ ಎಂದೂ ತಿರುಗೇಟು ನೀಡಿದ್ದಾರೆ. ಇನ್ನು ತಮಗೆ ಕೆಲವು ಕಡೆಗಳಿಂದ ಬೆದರಿಕೆ ಬರುತ್ತಿರುವುದಾಗಿಯೂ ಕಮಲ್ ಹಾಸನ್ ಹೇಳಿದ್ದಾರೆ. ಆದರೆ ಅದರ ಬಗ್ಗೆ ತುಂಬ ವಿವರಗಳನ್ನು ಅವರು ನೀಡಿಲ್ಲ.
ಇದನ್ನೂ ಓದಿ: ಕೊರೊನಾ ಹೆಚ್ಚಳದ ಮಧ್ಯೆ ರಾಜ್ಯಕ್ಕೆ ಗುಡ್ ನ್ಯೂಸ್: ಕರ್ನಾಟಕಕ್ಕೆ ತುರ್ತಾಗಿ 15.25 ಲಕ್ಷ ಕೊರೊನಾ ಲಸಿಕೆ ರವಾನೆ
Published On - 7:54 pm, Sun, 4 April 21