ಟೆನ್ನಿಸ್ನಲ್ಲಿ ದೊಡ್ಡ ಸಾಧನೆ ಮಾಡುವ ಹೆಸರುವಾಸಿಯಾಗಿದ್ದ ಲಿಯಾಂಡರ್ ಪೇಸ್ (Leander Paes) ತೃಣಮೂಲ ಕಾಂಗ್ರೆಸ್ ಪಕ್ಷ(TMC)ವನ್ನು ಇತ್ತೀಚೆಗಷ್ಟೇ ಸೇರ್ಪಡೆಯಾಗಿದ್ದಾರೆ. 2022ರ ವಿಧಾನಸಭೆ ಚುನಾವಣೆ (Goa Assembly Election) ನಿಮಿತ್ತ ಕಳೆದ ತಿಂಗಳ ಕೊನೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆ ರಾಜ್ಯಕ್ಕೆ ಭೇಟಿ ಕೊಟ್ಟಿದ್ದರು. ಇದೇ ವೇಳೆ ದೀದಿ ಸಮ್ಮುಖದಲ್ಲಿಯೇ ಲಿಯಾಂಡರ್ ಪೇಸ್ ಟಿಎಂಸಿಗೆ ಸೇರ್ಪಡೆಗೊಂಡರು. ನಾನು ಅದೆಷ್ಟು ಉತ್ಸಾಹದಿಂದ ಕ್ರೀಡೆಯಲ್ಲಿ ನನ್ನ ದೇಶವನ್ನು ಪ್ರತಿನಿಧಿಸಿದ್ದೆನೋ, ಅಷ್ಟೇ ಉತ್ಸಾಹದಿಂದ ರಾಜಕೀಯದಲ್ಲೂ ಮುನ್ನಡೆಯುತ್ತೇನೆ ಎಂಬುದು ಅವರ ಮಾತಾಗಿದೆ. ಇತ್ತೀಚೆಗೆ ಮಾಧ್ಯಮವೊಂದರ ಜತೆ ಸಂದರ್ಶನದಲ್ಲಿ ಮಾತನಾಡಿದ ಅವರು, ತಾವು ನಕಾರಾತ್ಮಕ ರಾಜಕೀಯದಿಂದ ದೂರ ಇರುವುದಾಗಿ ಹೇಳಿಕೊಂಡಿದ್ದಾರೆ. ಹಾಗೇ, ಗೋವಾ ಚುನಾವಣೆಯಲ್ಲಿ ಟಿಎಂಸಿ ಪಕ್ಷದಿಂದ ಸ್ಪರ್ಧಿಸಲು ಯಾವುದೇ ಹಿಂಜರಿಕೆಯಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.
ಟೆನ್ನಿಸ್ ಕೋರ್ಟ್ನಿಂದ ರಾಜಕೀಯ ಕ್ಷೇತ್ರಕ್ಕೆ ಬಂದಿರುವ ಬಗ್ಗೆ ಮಾತನಾಡಿದ ಲಿಯಾಂಡರ್ ಪೇಸ್, ಈ ಬದಲಾವಣೆ ನಿಜಕ್ಕೂ ಖುಷಿ ತಂದಿದೆ. ಸದ್ಯಕ್ಕಂತೂ ಪ್ರಚಾರದ ಭರಾಟೆಯಲ್ಲಿದ್ದೇನೆ. ಗೋವಾದಲ್ಲಿ ಸಾರ್ವಜನಿಕರು ಇದ್ದಲ್ಲಿಗೇ ಹೋಗಿ ಅವರಿಂದ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ. 30ವರ್ಷ ಕ್ರೀಡೆಯ ಮೂಲಕ ಭಾರತವನ್ನು ಪ್ರತಿನಿಧಿಸಿದೆ. ಇದೀಗ ನನ್ನ ಪ್ಲ್ಯಾಟ್ಫಾರಂ ಬದಲಿಸಿದ್ದೇನೆ. ಜನರಿಗೆ ಗುಣಮಟ್ಟದ ಜೀವನ ನೀಡುವುದು ನನ್ನ ಆದ್ಯತೆ. ಸಾಮಾಜಿಕ ಸಾಮರಸ್ಯ ಮತ್ತು ಶಾಂತಿ ತುಂಬ ಮುಖ್ಯ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಹುದ್ದೆ ಸಿಕ್ಕರೆ ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಲಿಯಾಂಡರ್ ಪೇಸ್, ನನಗೆ ಗೋವಾ ವಿಧಾನಸಭೆಯಲ್ಲಿ ಟಿಎಂಸಿಯಿಂದ ಟಿಕೆಟ್ ಸಿಕ್ಕರೆ ಖಂಡಿತ ಅವರು ಹೇಳಿದ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಜನ ಸೇವೆ ಮಾಡಲು ಸಿಕ್ಕ ಸದಾವಕಾಶ ಎಂದುಕೊಳ್ಳುತ್ತೇನೆ ಎಂದು ಹೇಳಿದರು. ಅಷ್ಟೇ ಅಲ್ಲ, ಮುಂದೆ ಮುಖ್ಯಮಂತ್ರಿ ಹುದ್ದೆ ಸಿಕ್ಕರೂ ಅಷ್ಟೇ ಜವಾಬ್ದಾರಿಯಿಂದ ನಿಭಾಯಿಸುವುದಾಗಿ ಪೇಸ್ ತಿಳಿಸಿದ್ದಾರೆ. ನಾನು ಸಿಎಂ ಆದರೆ ಪ್ರತಿಯೊಂದ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸಿ, ಪರಿಹಾರ ಮಾಡಲು ಪರಿಶ್ರಮವಹಿಸುತ್ತೇನೆ. ಹಿರಿಯರಿಂದ ಸಲಹೆ ಕೇಳಿಕೊಂಡು ಕೆಲಸ ಮಾಡುತ್ತೇನೆ. ನಾನು ತುಂಬ ವ್ಯವಸ್ಥಿತವಾಗಿ ಗೋವಾವನ್ನು ಆಳುತ್ತೇನೆ. ಇಲ್ಲಿನ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಈ ರಾಜ್ಯವನ್ನು ಬಂಗಾರ ಮಾಡುತ್ತೇನೆ ಎಂದು ತುಂಬ ಉತ್ಸಾಹದಲ್ಲಿ ಹೇಳಿಕೊಂಡಿದ್ದಾರೆ.
ಇನ್ನು ನೀವು ರಾಜಕೀಯಕ್ಕೆ ಸೇರಲು ಕಾರಣವೇನು? ಮಮತಾ ಬ್ಯಾನರ್ಜಿ ನಿಮಗೇನು ಸಲಹೆ ನೀಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಲಿಯಾಂಡರ್ ಪೇಸ್, ನನಗೆ ಜನಸೇವೆ ಮಾಡಲು ಇಷ್ಟವಿತ್ತು. ಕಳೆದ 20 ವರ್ಷದಲ್ಲಿ ನಾನು ಯಾವುದೇ ರಾಜಕೀಯ ಪಕ್ಷ ಸೇರಲು ಅವಕಾಶವಿತ್ತು. ಆದರೆ ಅದಕ್ಕೆ ಈಗ ಕಾಲ ಕೂಡಿಬಂತು. ನನಗೀಗ ಸಾಕಷ್ಟು ಸಮಯವಿದ್ದು, ಜನಸೇವೆ ಮಾಡಲು ಕಾತರನಾಗಿದ್ದೇನೆ ಎಂದಿದ್ದಾರೆ. ಹಾಗೇ, ನಮಗೆ ದೀದಿಯವರಂಥ ಡೈನಾಮಿಕ್ ನಾಯಕತ್ವ ಸಿಕ್ಕಿದ್ದು ತುಂಬ ಖುಷಿಕೊಟ್ಟಿದೆ. ಅವರು ತುಂಬ ಸಹಕಾರ ನೀಡಿದ್ದಾರೆ. ಈಗೊಂದು ಅವಕಾಶವನ್ನೂ ಕೊಟ್ಟಿದ್ದಾರೆ ಎಂದು ಲಿಯಾಂಡರ್ ಪೇಸ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಬೀಳಗಿ ಶುಗರ್ಸ್ ಕಾರ್ಖಾನೆ ಸಮೀಪ ರೈತ ಬಣಗಳಿಂದ ಪರ-ವಿರೋಧ ಹೋರಾಟ