ಬೀಳಗಿ ಶುಗರ್ಸ್ ಕಾರ್ಖಾನೆ ಸಮೀಪ ರೈತ ಬಣಗಳಿಂದ ಪರ-ವಿರೋಧ ಹೋರಾಟ
ಈ ಹಿಂದೆ ಪೂರೈಸಿರುವ ಕಬ್ಬಿನ ಬಾಕಿ ಹಣ ನೀಡುವುದರೊಂದಿಗೆ ಪ್ರಸಕ್ತ ಸಾಲಿನ ಬೆಳೆಗೆ ಬೆಲೆ ನಿಗದಿ ಮಾಡಬೇಕು ಎಂದು ರೈತರ ಒಂದು ಬಣ ಕಾರ್ಖಾನೆಯ ವಿರುದ್ಧ ಹೋರಾಟ ನಡೆಸಿತು.
ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲ್ಲೂಕು ಬಾಡಗಂಡಿ ಬಳಿಯಿರುವ ಬೀಳಗಿ ಶುಗರ್ಸ್ ಸಕ್ಕರೆ ಕಾರ್ಖಾನೆಯ ಸಮೀಪದ ರೈತ ಬಣಗಳಿಂದ ಪರ-ವಿರುದ್ಧ ಪ್ರತಿಭಟನೆಗಳು ನಡೆದವು. ಮೂರು ವರ್ಷಗಳಿಂದ ಕಬ್ಬು ಬೆಳೆಗಾರರಿಗೆ ಹೆಚ್ಚುವರಿ ಬಿಲ್ ಪಾವತಿಸಿಲ್ಲ ಎಂದು ಆರೋಪಿಸಿ ರೈತರ ಬಣವೊಂದು ಬೀಳಗಿ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿತು. ಪ್ರಸಕ್ತ ಹಂಗಾಮಿನಲ್ಲಿಯೂ ಬೆಲೆ ನಿಗದಿ ಮಾಡಿಲ್ಲ. ಈ ಹಿಂದೆ ಪೂರೈಸಿರುವ ಕಬ್ಬಿನ ಬಾಕಿ ಹಣ ನೀಡುವುದರೊಂದಿಗೆ ಪ್ರಸಕ್ತ ಸಾಲಿನ ಬೆಳೆಗೆ ಬೆಲೆ ನಿಗದಿ ಮಾಡಬೇಕು ಎಂದು ರೈತರ ಒಂದು ಬಣ ಕಾರ್ಖಾನೆಯ ವಿರುದ್ಧ ಹೋರಾಟ ನಡೆಸಿತು. ಬೇಡಿಕೆ ಈಡೇರುವವರೆಗೂ ಕಾರ್ಖಾನೆ ಆರಂಭಿಸಬಾರದು ಎಂದು ರೈತರು ಒತ್ತಾಯಿಸಿದರು.
ಕಾರ್ಖಾನೆ ಪರ ಹೋರಾಟ ನಡೆಸಿದ ಮತ್ತೊಂದು ಬಣವು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿತು. ಕಾರ್ಖಾನೆಗೆ ಕಬ್ಬು ಕಳಿಸುವ ರೈತರಿಗೆ ರಕ್ಷಣೆ ನೀಡಬೇಕು. ಈಗ ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ ಎಂದು ಆರೋಪಿಸಿದ ಅವರು, ಬೀಳಗಿ ಶುಗರ್ಸ್ ನಿಗದಿಗಿಂತ ಹೆಚ್ಚುವರಿಯಾಗಿ ₹157 ಕೊಟ್ಟಿದ್ದಾರೆ. ಹೀಗಾಗಿ ನಾವು ಬೀಳಗಿ ಸಕ್ಕರೆ ಕಾರ್ಖಾನೆಗೆ ಕಬ್ಬು ಕಳಿಸುತ್ತೇವೆ. ನಮ್ಮನ್ನು ತಡೆಯದಂತೆ ರಕ್ಷಣೆ ನೀಡಬೇಕು ಎಂದು ಮನವಿ ಸಲ್ಲಿಸಿದರು. ಬಾಡಗಂಡಿಯಲ್ಲಿ ಇರುವ ಬೀಳಗಿ ಶುಗರ್ಸ್ ಕಾರ್ಖಾನೆಯು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಒಡೆತನದಲ್ಲಿದೆ.
ನಿರಾಣಿ ಕಾರ್ಖಾನೆ ವಿರುದ್ಧ ರೈತರ ಆಕ್ರೋಶ ಬಾಕಿ ಹಣ ಮತ್ತು ದರ ನಿಗದಿ ಮಾಡದ ಹಿನ್ನೆಲೆಯಲ್ಲಿ ನಿರಾಣಿ ಸಕ್ಕರೆ ಕಾರ್ಖಾನೆಯ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿ, ಕಾರ್ಖಾನೆ ಆವರಣದಿಂದ ಕಬ್ಬಿನ ಟ್ರ್ಯಾಕ್ಟರ್ಗಳನ್ನು ಹೊರ ತರಲು ಮುಂದಾದ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ಬಳಿ ಇರುವ ಸಕ್ಕರೆ ಕಾರ್ಖಾನೆಯಲ್ಲಿ ನ.21ರಂದು ನಡೆದಿತ್ತು. ಕಳೆದ ಎರಡು ವರ್ಷಗಳ ಕಬ್ಬಿನ ಬಾಕಿ ಬಿಲ್ ಸೇರಿದಂತೆ, ಪ್ರಸಕ್ತ ಸಾಲಿನ ದರ ಘೋಷಿಸದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಸಾಲಿನ ಬಾಕಿ ಹಣ ಮತ್ತು ಪ್ರಸಕ್ತ ಸಾಲಿನ ದರ ನಿಗದಿ ಮಾಡಬೇಕೆಂದು ಒತ್ತಾಯಿಸಿದರು. ದರ ನಿಗದಿಗೊಳಿಸುವರೆಗೂ ಕಾರ್ಖಾನೆ ಆರಂಭಿಸಬಾರದು ಎಂದು ಪಟ್ಟು ಹಿಡಿದರು. ಘಟನಾ ಸ್ಥಳಕ್ಕೆ ಮುಧೋಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಕ್ಕರೆ ಕಾರ್ಖಾನೆಯು ಸಚಿವ ಮುರುಗೇಶ ನಿರಾಣಿ ಒಡೆತನದಲ್ಲಿದೆ. ಬಾಕಿ ಹಣ ಮತ್ತು ದರ ನಿಗದಿ ಮಾಡುವವರೆಗೂ ಕಾಖಾ೯ನೆ ಆರಂಭಿಸಬಾರದು ಎಂದು ಕಬ್ಬು ಬೆಳೆಗಾರ ರೈತರು ಒತ್ತಾಯಿಸುತ್ತಿದ್ದಾರೆ. ಕಾಖಾ೯ನೆ ಸುತ್ತಮುತ್ತ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: ಎರಡು ವರ್ಷಗಳಿಂದ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಬಂದ್; ಮನನೊಂದ ಕಾರ್ಮಿಕ ಆತ್ಮಹತ್ಯೆಗೆ ಶರಣು ಇದನ್ನೂ ಓದಿ: ಬಾಕಿ ದರ ನಿಗದಿ ಮಾಡದ ಸಕ್ಕರೆ ಕಾರ್ಖಾನೆ: ಆವರಣದಿಂದ ಕಬ್ಬಿನ ಟ್ರ್ಯಾಕ್ಟರ್ ಹೊರತರಲು ರೈತರ ಪ್ರಯತ್ನ
Published On - 3:05 pm, Tue, 16 November 21