Covaxin: ಕೊವ್ಯಾಕ್ಸಿನ್ ಅಡ್ಡಪರಿಣಾಮದ ಅಧ್ಯಯನದ ವಿರುದ್ಧ ಅಸಮಾಧಾನ; ಕ್ಷಮೆಗೆ ಆಗ್ರಹಿಸಿದ ಐಸಿಎಂಆರ್

|

Updated on: May 20, 2024 | 5:42 PM

ಕೊವ್ಯಾಕ್ಸಿನ್ ಅಡ್ಡಪರಿಣಾಮ ಅಧ್ಯಯನದ ಬಗ್ಗೆ ಅಧ್ಯಯನ ನಡೆಸಿದ ಬನಾರಸ್ ಹಿಂದೂ ಯುನಿವರ್ಸಿಟಿ (BHU) ವಿರುದ್ಧ ಐಸಿಎಂಆರ್ ಅಸಮಾಧಾನ ವ್ಯಕ್ತಪಡಿಸಿದೆ. ಇದೊಂದು ಕಳಪೆ ಅಧ್ಯಯನ ಎಂದಿರುವ ಐಸಿಎಂಆರ್ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಕ್ಷಮೆ ಕೋರಬೇಕೆಂದು ಆಗ್ರಹಿಸಿದೆ.

Covaxin: ಕೊವ್ಯಾಕ್ಸಿನ್ ಅಡ್ಡಪರಿಣಾಮದ ಅಧ್ಯಯನದ ವಿರುದ್ಧ ಅಸಮಾಧಾನ; ಕ್ಷಮೆಗೆ ಆಗ್ರಹಿಸಿದ ಐಸಿಎಂಆರ್
ಕೊವ್ಯಾಕ್ಸಿನ್
Follow us on

ನವದೆಹಲಿ: ಕೊರೊನಾವೈರಸ್ (Coronavirus) ಆರ್ಭಟ ಹೆಚ್ಚಾಗಿದ್ದ ಸಮಯದಲ್ಲಿ ನೀಡಲಾಗಿದ್ದ ಕೋವಿಶೀಲ್ಡ್​ ಲಸಿಕೆಯಿಂದ (Covishield Vaccine) ಅಡ್ಡಪರಿಣಾಮಗಳು ಉಂಟಾಗುತ್ತವೆ ಎಂದು ಅದನ್ನು ಸರಬರಾಜು ಮಾಡಿದ್ದ ಕಂಪನಿಯೇ ಒಪ್ಪಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚಾಗಿರುವ ಬೆನ್ನಲ್ಲೇ ಇನ್ನೊಂದು ಕೊವಿಡ್ ಲಸಿಕೆಯಾದ (COVID-19 Vaccination) ಕೊವ್ಯಾಕ್ಸಿನ್​ನಿಂದ (Covaxin) ಕೂಡ ಅಡ್ಡಪರಿಣಾಮ ಉಂಟಾಗುತ್ತದೆ ಎಂದು ಬನಾರಸ್ ಹಿಂದೂ ಯುನಿವರ್ಸಿಟಿ ಅಧ್ಯಯನ ಬಹಿರಂಗಪಡಿಸಿತ್ತು. ಆದರೆ, ಈ ಅಧ್ಯಯನಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಆಕ್ಷೇಪ ವ್ಯಕ್ತಪಡಿಸಿದೆ. ತಪ್ಪು ಅಧ್ಯಯನ ಮಾಡಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಕ್ಷಮೆ ಕೋರಬೇಕೆಂದು ಆಗ್ರಹಿಸಿದೆ.

ಕೊವ್ಯಾಕ್ಸಿನ್ ಅಡ್ಡಪರಿಣಾಮದ ಬಗ್ಗೆ ಬನಾರಸ್ ಹಿಂದೂ ವಿವಿಯಿಂದ ಅಧ್ಯಯನ ನಡೆಸಲಾಗಿತ್ತು. ಅಧ್ಯಯನ ನಡೆಸಿದ ಯುನಿವರ್ಸಿಟಿ ಕೋವಿಶೀಲ್ಡ್​ನಂತೆ ಕೊವ್ಯಾಕ್ಸಿನ್​ನಿಂದ ಕೂಡ ಅಡ್ಡಪರಿಣಾಮ ಉಂಟಾಗುತ್ತದೆ ಎಂದಿತ್ತು. ಆದರೆ, ಈ ಅಧ್ಯಯನ ನಡೆಸಿದ BHU ವಿರುದ್ಧ ಐಸಿಎಂಆರ್ ಅಸಮಧಾನ ಹೊರಹಾಕಿದೆ. ಕಳಪೆ ವಿಧಾನ ಮತ್ತು ವಿನ್ಯಾಸದ ಬಗ್ಗೆ ಪ್ರಶ್ನೆ ಎತ್ತಿದೆ.

ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆಯ ಅಪಾಯಕಾರಿ ಅಂಶ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲು ಸುಪ್ರೀಂಗೆ ಅರ್ಜಿ

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಇಬ್ಬರು ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ಪ್ರೊಫೆಸರ್‌ಗಳ ಅನುಸರಣಾ ಅಧ್ಯಯನವನ್ನು ಖಂಡಿಸಿದೆ. ಕೊವ್ಯಾಕ್ಸಿನ್ ಭಾರತ ನಿರ್ಮಿತ COVID-19 ಲಸಿಕೆಯಾಗಿದ್ದು, ಇದನ್ನು ಪಡೆದ 926 ಜನರಲ್ಲಿ ಮೂರನೇ ಒಂದು ಭಾಗದಷ್ಟು ಜನರಲ್ಲಿ ಗಂಭೀರ ಅಡ್ಡಪರಿಣಾಮಗಳು ಉಂಟಾಗಿವೆ ಎಂದು ಅಧ್ಯಯನ ವರದಿ ಮಾಡಿತ್ತು.

ಈ ಅಧ್ಯಯನಕ್ಕೆ ಪ್ರತಿಕ್ರಿಯಿಸಿದವರಲ್ಲಿ ಸುಮಾರು ಶೇ. 1ರಷ್ಟು ಜನರು ಪಾರ್ಶ್ವವಾಯು ಮತ್ತು ಗುಯಿಲಿನ್-ಬಾರ್ರೆ ಸಿಂಡ್ರೋಮ್ ಎಂಬ ಸ್ವಯಂ ನಿರೋಧಕ ಅಸ್ವಸ್ಥತೆಯನ್ನು ಹೊಂದಿದ್ದಾರೆ ಎಂದು ಅಧ್ಯಯನವು ಹೇಳಿತ್ತು. ಇದು ತೋಳುಗಳು ಮತ್ತು ಕಾಲುಗಳಲ್ಲಿನ ನರಗಳಲ್ಲಿ ದೌರ್ಬಲ್ಯವನ್ನು ಉಂಟುಮಾಡುತ್ತದೆ ಎಂದಿತ್ತು.

ಇದನ್ನೂ ಓದಿ: ಅಡ್ಡಪರಿಣಾಮ ಆರೋಪ: ಕೋವಿಶೀಲ್ಡ್​ ಲಸಿಕೆಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಮುಂದಾದ ಅಸ್ಟ್ರಾಜೆನೆಕಾ

ಜನವರಿ 2022 ಮತ್ತು ಆಗಸ್ಟ್ 2023ರ ನಡುವೆ ನಡೆಸಲಾದ ಅಧ್ಯಯವು ಶೇ. 50ರಷ್ಟು ಜನರು ಉಸಿರಾಟದ ಸೋಂಕಿನ ಬಗ್ಗೆ ದೂರು ನೀಡಿದ್ದಾರೆ ಮತ್ತು ಶೇ. 30ಕ್ಕಿಂತ ಹೆಚ್ಚು ಜನರು ಚರ್ಮ ಮತ್ತು ನರಮಂಡಲದ ಅಸ್ವಸ್ಥತೆಗಳಿಂದ ಹಿಡಿದು ಮೂಳೆ ಮತ್ತು ಸ್ನಾಯುವಿನ ಸಮಸ್ಯೆಗಳವರೆಗೆ ವಿವಿಧ ರೀತಿಯ ದೈಹಿಕ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ಹೇಳಿತ್ತು.

ಆದರೆ, ICMR ಡೈರೆಕ್ಟರ್-ಜನರಲ್ ರಾಜೀವ್ ಬಹ್ಲ್ ಅವರು AESIಗಳ ದರವನ್ನು ಅಥವಾ ವಿಶೇಷ ಆಸಕ್ತಿಯ ಪ್ರತಿಕೂಲ ಘಟನೆಗಳನ್ನು ಹೋಲಿಸಲು ಅಧ್ಯಯನವು ಯಾವುದೇ ನಿಯಂತ್ರಣ ಅಂಗವನ್ನು ಹೊಂದಿಲ್ಲ. ಆದ್ದರಿಂದ, ಕೊವ್ಯಾಕ್ಸಿನ್ ಲಸಿಕೆ ಪಡೆದದ್ದರಿಂದ ಉಂಟಾಗಿದೆ ಎನ್ನಲಾದ ಅಡ್ಡಪರಿಣಾಮಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ