ಉತ್ತರ ಪ್ರದೇಶ: ಕಾಲೇಜು ಪ್ರಿನ್ಸಿಪಾಲ್ ಮೇಲೆ ವಿದ್ಯಾರ್ಥಿಯಿಂದ ಗುಂಡಿನ ದಾಳಿ

ಕಾಲೇಜು ಪ್ರಿನ್ಸಿಪಾಲ್ ರಾಮ್ ಸಿಂಗ್ ವರ್ಮಾ ವಿದ್ಯಾರ್ಥಿಯನ್ನು ಗದರಿಸಿದಾಗ ವಿದ್ಯಾರ್ಥಿ ಮೂರು ಸುತ್ತು ಗುಂಡುಗಳನ್ನು ಹಾರಿಸಿದ್ದು ಅದರಲ್ಲಿ ಮೂರು ಸುತ್ತಿನ ಗುಂಡು ಕೂಡ ಪ್ರಿನ್ಸಿಪಾಲ್ ದೇಹಕ್ಕೆ ತಾಗಿದೆ.

ಉತ್ತರ ಪ್ರದೇಶ: ಕಾಲೇಜು ಪ್ರಿನ್ಸಿಪಾಲ್ ಮೇಲೆ ವಿದ್ಯಾರ್ಥಿಯಿಂದ ಗುಂಡಿನ ದಾಳಿ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Rashmi Kallakatta

Sep 25, 2022 | 7:37 AM

ಲಖನೌ:  ಉತ್ತರ ಪ್ರದೇಶದ (Uttar Pradesh) ಸೀತಾಪುರದ ಇಂಟರ್ ಕಾಲೇಜೊಂದರ 12ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು, ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರ (College principal) ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಸದರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಕಾಲೇಜು ಪ್ರಿನ್ಸಿಪಾಲ್ ರಾಮ್ ಸಿಂಗ್ ವರ್ಮಾ ವಿದ್ಯಾರ್ಥಿಯನ್ನು ಗದರಿಸಿದಾಗ ವಿದ್ಯಾರ್ಥಿ ಮೂರು ಸುತ್ತು ಗುಂಡುಗಳನ್ನು ಹಾರಿಸಿದ್ದು ಅದರಲ್ಲಿ ಮೂರು ಸುತ್ತಿನ ಗುಂಡು ಕೂಡ ಪ್ರಿನ್ಸಿಪಾಲ್ ದೇಹಕ್ಕೆ ತಾಗಿದೆ. ಜಿಲ್ಲಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಾಂಶುಪಾಲರನ್ನು ಬಿಸ್ವಾದಲ್ಲಿನ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಪ್ರಾಂಶುಪಾಲರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಸಿಎಚ್‌ಸಿ ವೈದ್ಯರು ಅವರನ್ನು ಸೀತಾಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದು, ಅಲ್ಲಿಂದ ಅವರನ್ನು ಲಕ್ನೋ ಟ್ರಾಮಾ ಸೆಂಟರ್‌ಗೆ ಕಳುಹಿಸಲಾಯಿತು.

ಪೊಲೀಸ್ ಮೂಲಗಳ ಪ್ರಕಾರ ಸೀತಾಪುರದ ಜಹಾಂಗೀರಾಬಾದ್ ಪಟ್ಟಣದ ಆದರ್ಶ್ ರಾಮ್ ಸ್ವರೂಪ್ ಇಂಟರ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ದಾನ್‌ಪುರ್ವಾ ಗ್ರಾಮದ ರಾಮ್ ಸಿಂಗ್ ವರ್ಮಾ ಅವರು ತಮ್ಮ ತಾತನ ಹೆಸರಿನಲ್ಲಿ ನಡೆಸುತ್ತಿರುವ ಈ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ಶುಕ್ರವಾರ, ರೇವಾನ್ ಗ್ರಾಮದ ವಿದ್ಯಾರ್ಥಿ ಗುರ್ವಿಂದರ್ ಸಿಂಗ್ ತರಗತಿಯಲ್ಲಿ ರೋಹಿತ್ ಮೌರ್ಯ ಎಂಬ ವಿದ್ಯಾರ್ಥಿಯೊಂದಿಗೆ ವಾಗ್ವಾದ ನಡೆಸಿದ್ದರು. ವಿದ್ಯಾರ್ಥಿಗಳು ಹೊಡೆದು ಬಡಿದು ಜಗಳ ಮಾಡಿಕೊಂಡಾಗ ಅವರನ್ನು ಬಿಡಿಸಲು ಪ್ರಾಂಶುಪಾಲರು ಮಧ್ಯಪ್ರವೇಶಿಸಿದ್ದರು.

ಇದಾದ ನಂತರ ಶನಿವಾರ ಬೆಳಗ್ಗೆ ಪ್ರಾಂಶುಪಾಲ ರಾಮ್ ಸಿಂಗ್ ವರ್ಮಾ ಕಾಲೇಜು ಆವರಣದ ಹೊರಗಡೆ ಇದ್ದಾಗ ಅಕ್ರಮ ಪಿಸ್ತೂಲ್ ಬ್ಯಾಗ್‌ನಲ್ಲಿ ಇಟ್ಟುಕೊಂಡು ಕಾಲೇಜಿಗೆ ಬಂದ ಗುರ್ವಿಂದರ್, ವರ್ಮಾ ಮೇಲೆ ಗುಂಡು ಹಾರಿಸಲು ಆರಂಭಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೊದಲ ಗುಂಡು ಪ್ರಾಂಶುಪಾಲರಿಗೆ ತಗುಲಿಲ್ಲ, ಆದರೆ ಎರಡನೇ ಗುಂಡು ಅವರ ತಲೆಗೆ ಮತ್ತು ಮೂರನೆಯದು ಅವರ ಹೊಟ್ಟೆಗೆ ತಗುಲಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಕ್ಷಣವೇ ಕಾಲೇಜು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ನಾಲ್ಕನೇ ಬುಲೆಟ್ ಅನ್ನು ಲೋಡ್ ಮಾಡುತ್ತಿದ್ದ ಗುರ್ವಿಂದರ್ ಸ್ಥಳದಿಂದ ಪರಾರಿಯಾಗಿದ್ದಾನೆ. ವಿದ್ಯಾರ್ಥಿಗಳಿಬ್ಬರ ನಡುವೆ ಶುಕ್ರವಾರ ನಡೆದ ಜಗಳದ ಕುರಿತು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ಮೂಲಗಳು ಹೇಳಿವೆ.

ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಠಾಣಾಧಿಕಾರಿ ಪ್ರದೀಪ್ ಸಿಂಗ್ ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧಿಕಾರಿಗಳು ಸಹ ವಿದ್ಯಾರ್ಥಿಗಳು ಸಂಗ್ರಹಿಸಿದ ಪಿಸ್ತೂಲ್ ಮೂಲದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಅಪರಾಧಿಯ ಕುಟುಂಬ ಮತ್ತು ಅವನ ಇತರ ಸಂಬಂಧಿಕರನ್ನು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಯೊಂದಿಗಿನ ಜಗಳದಲ್ಲಿ ಪ್ರಾಂಶುಪಾಲರು ಮಧ್ಯಪ್ರವೇಶಿಸಿದ್ದರಿಂದ ಗುರ್ವಿಂದರ್ ಸಿಟ್ಟುಗೊಂಡಿದ್ದ ಎಂದು ಆರೋಪಿಯ ಕುಟುಂಬ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಪ್ರಾಂಶುಪಾಲರು ಗದರಿಸಿದ್ದರು ಎಂದು ಆತ ಹೇಳಿದ್ದ. ಆದರೆ, ಪ್ರಾಂಶುಪಾಲರ ಮೇಲೆ ದಾಳಿ ಮಾಡಲು ಗುರ್ವಿಂದರ್ ಬಳಸಿದ ಗನ್ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಅವರ ಕುಟುಂಬ ಹೇಳಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada