AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶ: ತಪ್ಪಾದ ಇಂಜೆಕ್ಷನ್​​​ನಿಂದ ಬಾಲಕಿ ಸಾವು, ಶವ ಎಸೆದು ಪರಾರಿಯಾದ ಆಸ್ಪತ್ರೆ ಸಿಬ್ಬಂದಿ

ಸಾರ್ವಜನಿಕರ ಆಕ್ರೋಶಕ್ಕೆ ಹೆದರಿ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಪಲಾಯನ ಮಾಡಿದ್ದು, ಬಾಲಕಿಯ ಕುಟುಂಬದವರು ನ್ಯಾಯ ಬೇಕು ಎಂದು ಒತ್ತಾಯಿಸಿದ್ದಾರೆ. ಮೋಟಾರು ಸೈಕಲ್‌ನಲ್ಲಿ ಬಾಲಕಿ ನಿರ್ಜೀವವಾಗಿ ಮಲಗಿರುವಂತೆ ಆಸ್ಪತ್ರೆಯ ಹೊರಗಿನ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶ: ತಪ್ಪಾದ ಇಂಜೆಕ್ಷನ್​​​ನಿಂದ ಬಾಲಕಿ ಸಾವು, ಶವ ಎಸೆದು ಪರಾರಿಯಾದ ಆಸ್ಪತ್ರೆ ಸಿಬ್ಬಂದಿ
ಸಾವಿಗೀಡಾದ ಬಾಲಕಿ
ರಶ್ಮಿ ಕಲ್ಲಕಟ್ಟ
|

Updated on: Sep 29, 2023 | 5:12 PM

Share

ಲಕ್ನೋ ಸೆಪ್ಟೆಂಬರ್ 29 : ಉತ್ತರ ಪ್ರದೇಶದ (Uttar Pradesh) ಮೈನ್‌ಪುರಿಯಲ್ಲಿ ನಿರ್ಲಕ್ಷ್ಯ ಮತ್ತು ಅಸೂಕ್ಷ್ಮತೆಯ ಆಘಾತಕಾರಿ ಘಟನೆಯೊಂದರಲ್ಲಿ ವರದಿ ಆಗಿದೆ. ಖಾಸಗಿ ಆಸ್ಪತ್ರೆಯ ವೈದ್ಯರು ತಪ್ಪಾದ ಇಂಜೆಕ್ಷನ್ (Injection) ನೀಡಿದ್ದರಿಂದ 17 ವರ್ಷದ ಬಾಲಕಿ ಸಾವಿಗೀಡಾಗಿದ್ದಾಳೆ. ಬಾಲಕಿ ಸಾವಿಗೀಡಾದ ನಂತರ ಆಸ್ಪತ್ರೆಯ ಸಿಬ್ಬಂದಿ ಆಕೆಯ ಶವವನ್ನು ಹೊರಗೆ ನಿಲ್ಲಿಸಿದ್ದ ಮೋಟಾರ್ ಸೈಕಲ್ ಮೇಲೆ ಎಸೆದು, ಆಕೆ ಮೃತಪಟ್ಟಿರುವ ಬಗ್ಗೆಯೂ ತಿಳಿಸದೆ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ.

ಸಾರ್ವಜನಿಕರ ಆಕ್ರೋಶಕ್ಕೆ ಹೆದರಿ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಪಲಾಯನ ಮಾಡಿದ್ದು, ಬಾಲಕಿಯ ಕುಟುಂಬದವರು ನ್ಯಾಯ ಬೇಕು ಎಂದು ಒತ್ತಾಯಿಸಿದ್ದಾರೆ. ಮೋಟಾರು ಸೈಕಲ್‌ನಲ್ಲಿ ಬಾಲಕಿ ನಿರ್ಜೀವವಾಗಿ ಮಲಗಿರುವಂತೆ ಆಸ್ಪತ್ರೆಯ ಹೊರಗಿನ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸಂತ್ರಸ್ತೆ ಭಾರತಿ ಅವರಿಗೆ ಮಂಗಳವಾರ ಜ್ವರ ಕಾಣಿಸಿಕೊಂಡಿದ್ದರಿಂದ ಘಿರೋರ್ ಪ್ರದೇಶದ ಕರ್ಹಾಲ್ ರಸ್ತೆಯಲ್ಲಿರುವ ರಾಧಾ ಸ್ವಾಮಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಆಕೆಯ ಸಂಬಂಧಿ ಮನಿಶಾ ಹೇಳಿದ್ದಾರೆ. ಭಾರತಿ ಬುಧವಾರ ಚೆನ್ನಾಗಿಯೇ ಇದ್ದಳು. ನಂತರ ವೈದ್ಯರು ಚುಚ್ಚುಮದ್ದನ್ನು ನೀಡಿದ್ದಾರೆ. ಈ ಇಂಜೆಕ್ಷನ್ ನೀಡಿದ ನಂತರ ಆಕೆಯ ಸ್ಥಿತಿ ಹದಗೆಟ್ಟಿತು. ಆಕೆಯನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಮ್ಮ ಕೈಲಾಗಲ್ಲ ಎಂದು ಅವರು ಹೇಳಿದ್ದರು. ಆ ಹೊತ್ತಿಗಾಗಲೇ ಭಾರತಿ ಕೊನೆಯುಸಿರೆಳೆದಿದ್ದಳು ಎಂದು ಮನಿಶಾ ಹೇಳಿದ್ದಾರೆ.

ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಆಸ್ಪತ್ರೆಗೆ ಕಳುಹಿಸಿದ ನೋಡಲ್ ಅಧಿಕಾರಿಯು ಅಲ್ಲಿ ವೈದ್ಯರು ಅಥವಾ ಆಡಳಿತ ಸಿಬ್ಬಂದಿ ಇಲ್ಲದಿರುವುದನ್ನು ಕಂಡಿದ್ದರಿಂದ ಆಸ್ಪತ್ರೆಗೆ ಸೀಲ್ ಮಾಡಲು ಆದೇಶಿಸಲಾಗಿದೆ. ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಇದ್ದರು, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ” ಎಂದು ಮುಖ್ಯ ವೈದ್ಯಾಧಿಕಾರಿ ಆರ್‌ಸಿ ಗುಪ್ತಾ ಹೇಳಿದರು.

ಆಸ್ಪತ್ರೆಯನ್ನು ನೋಂದಾಯಿಸಲಾಗಿದೆ ಆದರೆ ಆಸ್ಪತ್ರೆ ನಿರ್ವಾಹಕರು ವೈದ್ಯರು ಅಲ್ಲದ ಕಾರಣ ಅವರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.

ರಾಜ್ಯದ ಆರೋಗ್ಯ ಇಲಾಖೆಯನ್ನು ನಿರ್ವಹಿಸುತ್ತಿರುವ ಯುಪಿ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಗುರುವಾರ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ. ಬಾಲಕಿಗೆ ತಪ್ಪು ಚಿಕಿತ್ಸೆ ನೀಡಲಾಗಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ, ನಂತರ ಆಕೆಯ ಆರೋಗ್ಯ ಹದಗೆಟ್ಟಿದೆ ಎಂದು ಸಿಎಂಒ ಗುಪ್ತಾ ಹೇಳಿದ್ದಾರೆ.

ಆಕೆಯನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡುವ ಬದಲು ಸಿಬ್ಬಂದಿ ರೋಗಿಯನ್ನು ಹೊರಗೆ ತಂದು ಪರಾರಿಯಾಗಿದ್ದಾರೆ ಎಂದು ಕುಟುಂಬದವರು ದೂರಿದ್ದಾರೆ. ಆಸ್ಪತ್ರೆಯಿಂದ ಹೊರ ತಂದ ಸ್ವಲ್ಪ ಸಮಯದ ನಂತರ ಬಾಲಕಿ ಸಾವಿಗೀಡಾಗಿದ್ದಾಳೆ ಎಂದು ಗುಪ್ತಾ ಹೇಳಿದರು. ಒಂದು ವಾರದೊಳಗೆ ವಿವರವಾದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಎಂಒ ಮತ್ತು ಹೆಚ್ಚುವರಿ ಸಿಎಂಒಗೆ ಸೂಚಿಸಲಾಗಿದೆ.

‘ಸದರಿ ಆಸ್ಪತ್ರೆಯ ನೋಂದಣಿ ರದ್ದುಪಡಿಸಿ ಎಫ್‌ಐಆರ್‌ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂತಹ ಘಟನೆಗಳನ್ನು ಯಾವುದೇ ಸಂದರ್ಭದಲ್ಲೂ ಸಹಿಸುವುದಿಲ್ಲ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಉಜ್ಜಯಿನಿ: ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ

ನಿರ್ಲಕ್ಷ್ಯದಿಂದ ರೋಗಿ ಸಾವಿಗೀಡಾಗಿದ್ದಾರೆ ಎಂಬ ಆರೋಪ ನಂತರ ಈ ತಿಂಗಳ ಆರಂಭದಲ್ಲಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೇತೃತ್ವದ ಟ್ರಸ್ಟ್ ನಡೆಸುತ್ತಿರುವ ಅಮೇಥಿಯ ಸಂಜಯ್ ಗಾಂಧಿ ಆಸ್ಪತ್ರೆಯ ವಿರುದ್ಧ ಆಡಳಿತವು ಇದೇ ರೀತಿಯ ಕ್ರಮವನ್ನು ತೆಗೆದುಕೊಂಡಿತು. ಆಸ್ಪತ್ರೆ ಪುನರಾರಂಭಕ್ಕೆ ಆಗ್ರಹಿಸಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ನ್ಯಾಯಾಲಯದ ಮೆಟ್ಟಿಲೇರಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ