Independence Day 2022: ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ

President Droupadi Murmu Speech: 76ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ ಇಂದು (ಆಗಸ್ಟ್ 14) ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಶಿಷ್ಟಾಚಾರದಂತೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

Independence Day 2022: ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ರಾಷ್ಟ್ರಪತಿ ದ್ರೌಪದಿ ಮುರ್ಮು
Edited By:

Updated on: Aug 14, 2022 | 7:15 AM

ದೆಹಲಿ: ದೇಶಾದ್ಯಂತ ‘ಸ್ವತಂತ್ರ ಭಾರತದ ಅಮೃತ ಮಹೋತ್ಸವ’ (Azadi ka Amrit Mahotsav) ವಿಶೇಷ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ನಡೆಯುತ್ತಿವೆ. ದೆಹಲಿ, ಬೆಂಗಳೂರು ಸೇರಿದಂತೆ ಬಹುತೇಕ ಪ್ರಮುಖ ನಗರಗಳಲ್ಲಿ ನಾಳೆಯ (ಆಗಸ್ಟ್ 15) ಸ್ವಾತಂತ್ರ್ಯ ದಿನಾಚರಣೆ  (Independence Day 2022) ಕಾರ್ಯಕ್ರಮಕ್ಕಾಗಿ ಸಿದ್ಧತೆಗಳು ಚುರುಕುಗೊಂಡಿದೆ. 76ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ ಇಂದು (ಆಗಸ್ಟ್ 14) ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಶಿಷ್ಟಾಚಾರದಂತೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ರಾಷ್ಟ್ರಪತಿಗಳ ಭಾಷಣವನ್ನು ಆಕಾಶವಾಣಿಯ (All India Radio – AIR) ಎಲ್ಲ ಕೇಂದ್ರಗಳೂ ಹಾಗೂ ದೂರದರ್ಶನದ (Doordarshan) ಎಲ್ಲ ಪ್ರಸಾರ ಕೇಂದ್ರಗಳು ಸಂಜೆ 7 ಗಂಟೆಗೆ ಪ್ರಸಾರ ಮಾಡಲಿವೆ. ಮೊದಲು ಹಿಂದಿಯಲ್ಲಿ ಭಾಷಣ ಪ್ರಸಾರವಾಗಲಿದೆ. ನಂತರ ಭಾಷಣದ ಇಂಗ್ಲಿಷ್ ಆವೃತ್ತಿ ಪ್ರಸಾರವಾಗಲಿದೆ.

‘ಹಿಂದಿ ಮತ್ತು ಇಂಗ್ಲಿಷ್ ಭಾಷಣದ ನಂತರ ದೂರದರ್ಶನದ ಪ್ರಾದೇಶಿಕ ಚಾನೆಲ್​ಗಳು ಸ್ಥಳೀಯ ಭಾಷೆಗಳಲ್ಲಿ ಭಾಷಣದ ಪ್ರಸಾರ ಮಾಡಲಿವೆ. ಆಕಾಶವಾಣಿಯು ಪ್ರಾದೇಶಿಕ ಭಾಷೆಗಳಲ್ಲಿ ರಾತ್ರಿ 9.30ಕ್ಕೆ ಸ್ಥಳೀಯ ಭಾಷೆಗಳಲ್ಲಿ ಭಾಷಣ ಪ್ರಸಾರ ಮಾಡಲಿದೆ’ ಎಂದು ರಾಷ್ಟ್ರಪತಿ ಭವನದ ಹೇಳಿಕೆ ತಿಳಿಸಿದೆ.

ಒಡಿಶಾದ ಸಂತಾಲಿ ಬುಡಕಟ್ಟು ಸಮುದಾಯದಲ್ಲಿ ಜನಿಸಿದ ದ್ರೌಪದಿ ಮುರ್ಮು ಅವರು ಜುಲೈ 25ರಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆ ಮತ್ತು ಅತಿ ಕಿರಿಯ ರಾಷ್ಟ್ರಪತಿ ಎನ್ನುವ ಶ್ರೇಯಕ್ಕೆ ಅವರು ಪಾತ್ರರಾದರು. ರಾಷ್ಟ್ರಪತಿ ಹುದ್ದೆ ಅಲಂಕರಿಸಿದವರ ಪೈಕಿ ಸ್ವಾತಂತ್ರ್ಯ ನಂತರ ಜನಿಸಿದ ಮಹಿಳೆ ಎಂಬ ಶ್ರೇಯಕ್ಕೂ ಅವರು ಪಾತ್ರರಾಗಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿದ ನಂತರ ದೇಶವನ್ನು ಉದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ಅವರು, ‘ರಾಷ್ಟ್ರಪತಿ ಹುದ್ದೆಯನ್ನು ತಲುಪಿದ್ದು ನನ್ನ ವೈಯಕ್ತಿಕ ಸಾಧನೆಯಲ್ಲ, ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ. ನನ್ನ ನಾಮನಿರ್ದೇಶನವು ಭಾರತದಲ್ಲಿನ ಬಡವರು ಕನಸು ಕಾಣುವುದು ಮಾತ್ರವಲ್ಲದೆ ಆ ಕನಸುಗಳನ್ನು ನನಸಾಗಿಸಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ’ ಎಂದು ಹೇಳಿದ್ದರು.

‘ಪೂರ್ವ ಭಾರತದ ಒಂದು ಸಣ್ಣ ಆದಿವಾಸಿ ಹಳ್ಳಿಯಿಂದ ನನ್ನ ಬದುಕಿನ ಯಾತ್ರೆ ಆರಂಭವಾಯಿತು. ಇದು ನಮ್ಮ ಪ್ರಜಾಪ್ರಭುತ್ವದ ಶಕ್ತಿ. ಸಾಮಾನ್ಯ ಆದಿವಾಸಿ ಮಹಿಳೆ ಇಂದು ದೇಶದ ರಾಷ್ಟ್ರಪತಿ ಸ್ಥಾನಕ್ಕೆ ಬಂದಿದ್ದಾಳೆ. ಇದು ನನಗೆ ಸಿಕ್ಕಿದ್ದು ಎಂದು ನಾನು ಅಂದುಕೊಂಡಿಲ್ಲ. ಇದು ಭಾರತದ ಎಲ್ಲ ಬಡವರಿಗೆ ಸಿಕ್ಕ ಗೌರವ. ನಮ್ಮ ದೇಶದ ಬಡವರು ರಾಷ್ಟ್ರಪತಿಯಾಗುವ ಕನಸು ಕಾಣಬಹುದು, ಅದನ್ನು ನನಸು ಮಾಡಿಕೊಳ್ಳಬಹುದು’ ಎಂದು ಮುರ್ಮು ಅವರು ಸದಾಶಯದ ಮಾತುಗಳನ್ನು ಆಡಿದ್ದರು.