ಪಾಕಿಸ್ತಾನಕ್ಕೆ ಸಾಲ ನೀಡುವ ಐಎಂಎಫ್ ವೋಟಿಂಗ್​ನಲ್ಲಿ ಭಾರತ ಮತದಾನ ಮಾಡದ್ದು ಯಾಕೆ? ಇಲ್ಲಿದೆ ಕಾರಣ

ಭಾರತ ಪಾಕಿಸ್ತಾನ ಯುದ್ಧ ಪರಿಸ್ಥಿತಿಯ ಸಂದರ್ಭದಲ್ಲಿಯೇ ಅಂತರಾಷ್ಟ್ರೀಯ ಹಣಕಾಸು ನಿಧಿ ಐಎಂಎಫ್ ಪಾಕಿಸ್ತಾನಕ್ಕೆ ಸಾಲ ನೀಡಲು ಸಮ್ಮತಿಸಿದೆ. ಪಾಕಿಸ್ತಾನಕ್ಕೆ ಸಾಲ ನೀಡುವ ನಿರ್ಣಯಕ್ಕೆ ನಡೆದ ಮತದಾನ ಪ್ರಕ್ರಿಯೆಯಿಂದ ಭಾರತ ದೂರವುಳಿದಿತ್ತು. ಇದಕ್ಕೆ ಕಾರಣವೇನು? ಕೇಂದ್ರ ಸರ್ಕಾರದ ಮೂಲಗಳು ನೀಡಿದ ಮಾಹಿತಿ ಇಲ್ಲಿದೆ.

ಪಾಕಿಸ್ತಾನಕ್ಕೆ ಸಾಲ ನೀಡುವ ಐಎಂಎಫ್ ವೋಟಿಂಗ್​ನಲ್ಲಿ ಭಾರತ ಮತದಾನ ಮಾಡದ್ದು ಯಾಕೆ? ಇಲ್ಲಿದೆ ಕಾರಣ
ಪಾಕಿಸ್ತಾನಕ್ಕೆ ಸಾಲ ನೀಡಲು ಸಮ್ಮತಿ: ಐಎಂಫ್ ವೋಟಿಂಗ್​ನಿಂದ ಭಾರತ ದೂರವುಳಿಯಲು ಇದೆ ಬಲವಾದ ಕಾರಣ

Updated on: May 10, 2025 | 7:49 AM

ನವದೆಹಲಿ, ಮೇ 10: ಭಾರತದ ತೀವ್ರ ವಿರೋಧದ ನಡುವೆ ಕೊನೆಗೂ ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್‌ಗಳ ಸಾಲ ನೀಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಸಮ್ಮತಿಸಿದೆ. ಪಾಕಿಸ್ತಾನಕ್ಕೆ ಸಾಲ ನೀಡುವ ಪ್ರಸ್ತಾವನೆಯನ್ನು ಮತಕ್ಕೆ ಹಾಕಿದ ಸಂದರ್ಭದಲ್ಲಿ ಭಾರತ ಮಾತ್ರ ವೋಟಿಂಗ್ ಮಾಡದೆ ದೂರವುಳಿದಿದೆ. ಐಎಂಫ್ ನಿರ್ಧಾರವನ್ನು ವಿರೋಧಿಸುವುದಕ್ಕಾಗಿ ಭಾರತ ಈ ನಿರ್ಧಾರ ಕೈಗೊಂಡಿತ್ತು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಅಲ್ಲದೆ, ಮತ ಹಾಕದೆ ಉಳಿದಿದ್ದರ ಹಿಂದೆ ಇನ್ನೂ ಕೆಲವು ತಾಂತ್ರಿಕ ಕಾರಣಗಳಿವೆ ಎಂದು ತಿಳಿಸಿವೆ. ಹಾಗಾದರೆ ಆ ಕಾರಣಗಳೇನು? ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದ್ದೇನು ಎಂಬ ವಿವರಗಳು ಇಲ್ಲಿವೆ.

ಐಎಂಫ್​ನಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಹೇಗೆ?

ಐಎಂಫ್​ ಕಾರ್ಯಕಾರಿ ಮಂಡಳಿಯು ಸದಸ್ಯ ರಾಷ್ಟ್ರಗಳನ್ನು ಪ್ರತಿನಿಧಿಸುವ 25 ನಿರ್ದೇಶಕರನ್ನು ಒಳಗೊಂಡಿದೆ. ಇದು ಸಾಲ ಅನುಮೋದನೆಗಳು ಸೇರಿದಂತೆ ದೈನಂದಿನ ಕಾರ್ಯಾಚರಣೆಯ ವಿಷಯಗಳನ್ನು ನಿರ್ವಹಿಸುತ್ತದೆ. ಇಲ್ಲಿ ವಿಶ್ವಸಂಸ್ಥೆಯಂತೆ ಪ್ರತಿ ಸದಸ್ಯ ದೇಶಕ್ಕೆ ಒಂದು ಮತ ಎಂಬ ನಿಯಮ ಇಲ್ಲ. ಸದಸ್ಯರ ಆರ್ಥಿಕ ಗಾತ್ರಕ್ಕೆ ಅನುಗುಣವಾಗಿ ಹೆಚ್ಚು ಮತ ಚಲಾಯಿಸುವ ಅವಕಾಶ ಇರುತ್ತದೆ. ಉದಾಹರಣೆಗೆ; ಅಮೆರಿಕದಂತಹ ದೇಶಗಳು ಹೆಚ್ಚಿನ ಮತದಾನದ ಪಾಲನ್ನು ಹೊಂದಿವೆ. ಹೀಗಾಗಿ ಐಎಂಎಫ್​ ಒಮ್ಮತದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ವಿರುದ್ಧ ಮತ ಚಲಾಯಿಸುವಂತಿಲ್ಲ!

ಸಾಲದ ನಿಲುವಳಿಗೆ ಮತ ಹಾಕಬೇಕಾದ ಸಂದರ್ಭ ಬಂದಾಗ ಪರವಾಗಿಯೇ ಚಲಾಯಿಸಬೇಕು. ಒಂದು ವೇಳೆ ಅದಕ್ಕೆ ವಿರೋಧ ಇದ್ದರೆ, ವಿರುದ್ಧ ಮತ ಚಲಾಯಿಸಲು ಐಎಂಎಫ್​ ನಿಯಮಗಳಲ್ಲಿ ಅವಕಾಶ ಇಲ್ಲ. ಇಂಥ ಸಂದರ್ಭಗಳಲ್ಲಿ ಮತದಾನದಿಂದ ದೂರ ಉಳಿಯಬಹುದು. ಹೀಗಾಗಿ ಭಾರತವೂ ಐಎಂಫ್ ನಿಲುವು ವಿರೋಧಿಸಿ ಮತದಾನದಿಂದ ದೂರ ಉಳಿದಿದೆ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ.

ಇದನ್ನೂ ಓದಿ
ಭಾರತದ ವಿರೋಧದ ನಡುವೆಯೂ ಪಾಕಿಸ್ತಾನಕ್ಕೆ ಸಾಲ ಕೊಟ್ಟ IMF
ಸೇನಾ ಕಾರ್ಯಾಚರಣೆಯ ಲೈವ್ ಬೇಡ: ಟಿವಿ ಚಾನೆಲ್​ಗಳಿಗೆ ರಕ್ಷಣಾ ಇಲಾಖೆ ಸೂಚನೆ
ಪಾಕ್​ ಜನ ಪ್ರಧಾನಿ ಶೆಹಬಾಜ್ ವಿರುದ್ಧ ಗರಂ ಆಗಿದ್ದೇಕೆ?
ಭಾರತದಿಂದ ಎರಡನೇ ಬಾರಿ ದಾಳಿ, ಅಕ್ಷರಶಃ ನಲುಗಿದ ಪಾಕ್, ಏನೇನಾಯ್ತು?

ಭಾರತ ಪ್ರಬಲ ವಿರೋಧ

ಮತದಾನದಿಂದ ದೂರ ಉಳಿಯುವ ಮೂಲಕ ಭಾರತ ತೀವ್ರ ಅಸಮ್ಮತಿಯನ್ನು ವ್ಯಕ್ತಪಡಿಸಿದೆ. ಇಷ್ಟೇ ಅಲ್ಲದೆ, ಔಪಚಾರಿಕವಾಗಿ ಆಕ್ಷೇಪಣೆಗಳನ್ನು ದಾಖಲಿಸಿದೆ. ಕಳೆದ 35 ವರ್ಷಗಳ ಅವಧಿಯಲ್ಲಿ 28 ಬಾರಿ ಪಾಕಿಸ್ತಾನಕ್ಕೆ ಐಎಂಎಫ್​ ಬೆಂಬಲ ಸಿಕ್ಕಿದೆ. ಇದನ್ನು ಪಾಕಿಸ್ತಾನ ಸರಿಯಾಗಿ ಬಳಸಿಕೊಂಡಿಲ್ಲ ಎಂದು ಭಾರತ ಪ್ರತಿಪಾದಿಸಿದೆ. ಜತೆಗೆ, ಆರ್ಥಿಕ ವ್ಯವಹಾರಗಳಲ್ಲಿ ಪಾಕಿಸ್ತಾನಿ ಸೇನೆಯ ಮುಂದುವರಿದ ಪ್ರಾಬಲ್ಯವನ್ನು ಭಾರತ ಬಲವಾಗಿ ಎತ್ತಿ ತೋರಿಸಿದೆ.

ಇದನ್ನೂ ಓದಿ: ಭಾರತದ ವಿರೋಧದ ನಡುವೆಯೂ ಪಾಕಿಸ್ತಾನಕ್ಕೆ ಸಾಲ ಕೊಟ್ಟ IMF

ಗಡಿಯಾಚೆಗಿನ ಭಯೋತ್ಪಾದನೆ ಬೆಂಬಲಿಸುವ ದೇಶಕ್ಕೆ ಹಣಕಾಸು ನೆರವು ಒದಗಿಸುವುದು ಸರಿಯಲ್ಲ. ಅಂಥ ದೇಶಕ್ಕೆ ಸಹಾಯ ಮಾಡಿದಲ್ಲಿ ಐಎಂಫ್​​ನಂಥ ಸಂಸ್ಥೆಯ ವಿಶ್ವಾಸಾರ್ಹತೆಗೇ ಹೊಡೆತ ಬೀಳಲಿದೆ ಎಂದು ಭಾರತ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:41 am, Sat, 10 May 25