LACಗೆ ಹೆಚ್ಚಿನ ಸೈನಿಕರ ರವಾನಿಸಿದ ಭಾರತ-ಚೀನಾ, ಆ್ಯಪ್​ಗಳನ್ನ ಬ್ಯಾನ್​ ಮಾಡಿದ್ದಕ್ಕೆ ಡ್ರ್ಯಾಗನ್ ದೇಶ ಗರಂ

  • Publish Date - 7:02 am, Fri, 4 September 20
LACಗೆ ಹೆಚ್ಚಿನ ಸೈನಿಕರ ರವಾನಿಸಿದ ಭಾರತ-ಚೀನಾ, ಆ್ಯಪ್​ಗಳನ್ನ ಬ್ಯಾನ್​ ಮಾಡಿದ್ದಕ್ಕೆ ಡ್ರ್ಯಾಗನ್ ದೇಶ ಗರಂ

ದೆಹಲಿ: ಭಾರತ-ಚೀನಾ ನಡುವಿನ ಗಡಿಯಲ್ಲಿ ಉಂಟಾಗಿರೋ ಉದ್ವಿಗ್ನ ಸ್ಥಿತಿ ಶಮನಗೊಳಿಸಲು ಚೀನಾ ಮುಂದಾಗಿರೋ ಲಕ್ಷಣಗಳು ಕಂಡು ಬರ್ತಿವೆ. ಒಂದೆಡೆ ಭಾರತ 118 ಆ್ಯಪ್​ಗಳನ್ನ ಬ್ಯಾನ್ ಮಾಡಿರೋದನ್ನ ಟೀಕಿಸಿರೋ ಚೀನಾ, ಮತ್ತೊಂದೆಡೆ ಮೂರನೇ ಬಾರಿ ಭಾರತದ ರಕ್ಷಣಾ ಸಚಿವರನ್ನ ಮಾತುಕತೆ ಆಹ್ವಾನಿಸಿದೆ. ಇದರ ನಡುವೆ ಚೀನಾ ಹೆಚ್ಚಿನ ಸಂಖ್ಯೆಯ ಸೈನಿಕರನ್ನ ಗಡಿ ರವಾನಿಸಿದೆ. ಅದ್ರ ಡಿಟೇಲ್ಸ್ ನೋಡೋಣ ಬನ್ನಿ.

ಲಡಾಖ್​ನ ಭಾರತ-ಚೀನಾ ನಡುವಿನ ವಾಸ್ತವಿಕ ಗಡಿ ರೇಖೆಯ ಬಳಿ ಕಳೆದ ಹಲವು ತಿಂಗಳುಗಳಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಉದ್ವಿಗ್ನ ಸ್ಥಿತಿ ಶಮನಕ್ಕೆ ಎರಡೂ ರಾಷ್ಟ್ರಗಳು ಒತ್ತು ನೀಡಿದ್ರೂ ಸಹ, ಚೀನಾದ ರೆಡ್ ಆರ್ಮಿಯ ಆಕ್ರಮಣಕಾರಿ ಧೋರಣೆಯಿಂದಾಗಿ ಗಡಿಯಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಾಗ್ತಿಲ್ಲ.

ಚೀನಾದ ಆಕ್ರಮಣಕಾರಿ ನೀತಿಯ ವಿರುದ್ಧ, ಭಾರತೀಯ ಸೇನೆ ಸಹ ಆಕ್ರಮಣಕಾರಿ ನೀತಿಯನ್ನ ಅನುಸರಿಸ್ತಿದೆ. ಇದರ ಪರಿಣಾಮ, ಭಾರತ ಗಡಿಯಲ್ಲಿನ ಕೆಲವು ಪ್ರಮುಖ ಪರ್ವತಗಳನ್ನ ಮರು ವಶಪಡಿಸಿಕೊಂಡಿದೆ. ಜೊತೆಗೆ ಭಾರತ ಸರ್ಕಾರ ಚೀನಾದ ಪಬ್​ಜಿ ಸೇರಿ 118 ಆ್ಯಪ್​ಗಳನ್ನ ಬ್ಯಾನ್ ಮಾಡಿದೆ. ಇದೆಲ್ಲದ್ರ ಒಟ್ಟಾರೆ ಪರಿಣಾಮವಾಗಿ ಚೀನಾ ಮೃದು ಧೋರಣೆ ಅನುಸರಿಸಲು ಮುಂದಾಗಿರೋ ಲಕ್ಷಣಗಳು ಕಂಡು ಬರ್ತಿವೆ.

ಭಾರತ-ಚೀನಾ ಗಡಿಯಲ್ಲಿ ಮುಂದುವರಿದ ಉದ್ವಿಗ್ನ ಸ್ಥಿತಿ! ಲಡಾಖ್​ನಲ್ಲಿರೋ ಪ್ಯಾಂಗಾಂಗ್ ತ್ಸೋ ಸರೋವರದ ಸುತ್ತಮುತ್ತ ಭಾರತ ಮತ್ತು ಚೀನಾ ಎರಡೂ ಹೆಚ್ಚಿನ ಸೈನಿಕರನ್ನ ನಿಯೋಜಿಸಿವೆ. ಅದ್ರಲ್ಲೂ ಚೀನಾ ಸೇನೆ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಭಾರತೀಯ ಸೈನಿಕರು, ಗಡಿಯಲ್ಲಿನ ಅತ್ಯಂತ ಪ್ರಮುಖ ಸ್ಥಳಗಳನ್ನ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ನಡುವೆ ಭಾರತೀಯ ಭೂ ಸೇನೆ ಮುಖ್ಯಸ್ಥ ಎಂ.ಎಂ.ನರವಣೆ ಲಡಾಖ್​ಗೆ ಭೇಟಿ ನೀಡಿದ್ರೆ, ವಾಯುಸೇನೆ ಮುಖ್ಯಸ್ಥ ಆರ್.ಕೆ.ಬಧೂರಿಯಾ ಅರುಣಾಚಲ ಪ್ರದೇಶದ ವಾಯುನೆಲೆಗಳಿಗೆ ಭೇಟಿ ನೀಡಿದ್ದಾರೆ. ಈ ಮೂಲಕ ಭಾರತೀಯ ಸೇನೆ ಯುದ್ಧ ಸನ್ನದ್ಧ ಸ್ಥಿತಿಯಲ್ಲಿದೆ ಅನ್ನೋದನ್ನ ಖಾತ್ರಿ ಪಡಿಸಿಕೊಂಡಿದ್ದಾರೆ.

ಏಕಾಏಕಿ ಭಾರತೀಯ ಸೇನೆ ಲಡಾಖ್​ನಲ್ಲಿ ತನ್ನ ಬಲವೃದ್ಧಿ ಮಾಡಿಕೊಂಡಿದ್ದರಿಂದ, ಚೀನಾ ಕೂಡ ಹೆಚ್ಚುವರಿ ಸೈನಿಕರ ನಿಯೋಜಿಸಿದೆ. ಆದ್ರೆ, ಭಾರತೀಯ ಸೇನೆ ಅತ್ಯಂತ ಪ್ರಮುಖ ಸ್ಥಳಗಳಲ್ಲಿ ಸೈನಿಕರನ್ನ ನಿಯೋಜಿಸಿರೋದ್ರಿಂದ, ಚೀನಾ ಸೇನೆ ಮಾಡೋ ಪ್ರತಿಯೊಂದು ಕಾರ್ಯಾಚರಣೆ ಮೇಲೆ ಭಾರತೀಯ ಸೈನಿಕರು ನಿಗಾ ಇಡಲು ಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದ್ರಿಂದ ಚೀನಾ ಕಂಗೆಟ್ಟು ಹೋಗಿದೆ. ಒಂದೆಡೆ ಸೈನಿಕ ಕಾರ್ಯಾಚರಣೆ ಮೂಲಕ ಚೀನಾ ಹಣಿಯುವ ಕೆಲಸವನ್ನ ಭಾರತ ಮಾಡ್ತಿದ್ರೆ, ಮತ್ತೊಂದೆಡೆ ರಾಯಭಾರ ಮತ್ತು ಆರ್ಥಿಕ ನಡೆಗಳ ಮೂಲಕ ಕೂಡ ಚೀನಾಗೆ ಹೊಡೆತ ನೀಡೋ ಕೆಲಸವನ್ನ ಭಾರತ ಮಾಡ್ತಿದೆ. ಇದ್ರಿಂದ ಹೈರಾಗಿರೋ ಚೀನಾ, ಭಾರತ ಪಬ್​ಜಿ ಸೇರಿ 118 ಆ್ಯಪ್​ಗಳನ್ನ ಬ್ಯಾನ್ ಮಾಡಿರೋ ಕುರಿತು ಅಪಸ್ವರ ಎತ್ತಿದೆ.

ನೊಬೆಲ್ ವಿಜೇತ ಭಾರತೀಯ ಕವಿ ರವೀಂದ್ರನಾಥ್ ಟಾಗೋರ್ ಮತ್ತು ಭಾರತೀಯ ಮೂಲದ ಯೋಗ ಚೀನಾದಲ್ಲಿ ತುಂಬಾ ಪ್ರಸಿದ್ಧವಾಗಿದೆ. ನಾವು ಇದನ್ನ ಒಪ್ಪಿಕೊಳ್ಳುತ್ತಿದ್ದೇವೆ. ಆದ್ರೆ, ಭಾರತ ಮಾತ್ರ ಚೀನಾ ಮೂಲದ 118 ಆ್ಯಪ್​ಗಳನ್ನ ನಿಷೇಧಿಸಿರೋದು ಸರಿಯಲ್ಲ ಅಂತಾ ಚೀನಾ ಕ್ಯಾತೆ ತೆಗೆದಿದೆ. ಭಾರತೀಯರು ದೂರದೃಷ್ಟಿಯನ್ನ ಹೊಂದಿದರೆ ಒಳ್ಳೆಯದು ಅಂತಾ ಬಾಯಿಗೆ ಬಂದಿದ್ದನ್ನ ಬಡಬಡಿಸಿದೆ. ಇದರ ನಡುವೆ ರಷ್ಯಾದಲ್ಲಿ ನಡೀತಿರ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಲ್ಗೊಂಡಿದ್ದಾರೆ. ಇದೇ ವೇಳೆ ಚೀನಾ ರಕ್ಷಣಾ ಸಚಿವರ ಜೊತೆ ಮಾತುಕತೆ ನಡೆಸಲು ಚೀನಾ ಮನವಿ ಮಾಡಿದೆ. ಈ ಮೂಲಕ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಬಳಿಕ ಮೂರನೇ ಬಾರಿ ರಾಜನಾಥ್ ಸಿಂಗ್ ಜೊತೆಗೆ ಚರ್ಚೆಗೆ ಆಹ್ವಾನಿಸಿದೆ. ಆದ್ರೆ, ಇದಕ್ಕೆ ಭಾರತ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.

ಭಾರತ ಗಡಿಯಲ್ಲಿ ಉಂಟಾಗಿರೋ ಉದ್ವಿಗ್ನ ಸ್ಥಿತಿ ಶಮನಕ್ಕೆ ಆರಂಭದಿಂದ ಒತ್ತು ನೀಡಿತ್ತು. ಆದ್ರೆ, ಚೀನಾ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಬದಲಿಗೆ ಆಕ್ರಮಣಕಾರಿ ಧೋರಣೆಯನ್ನ ತಳೆದಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ತೋರಿರೋ ಪ್ರತ್ಯಾಕ್ರಮಣಕಾರಿ ಧೋರಣೆಯಿಂದ ಚೀನಾ ಕಂಗೆಟ್ಟಂತೆ ಕಾಣ್ತಿದೆ. ಹೀಗಾಗಿ ಈಗ ಸ್ವಲ್ಪ ಮೃದು ಧೋರಣೆ ತೋರಿದಂತೆ ಕಾಣುತ್ತಿದ್ದು, ಶೀಘ್ರದಲ್ಲಿ ಗಡಿಯಲ್ಲಿ ಪರಿಸ್ಥಿತಿ ಶಾಂತವಾಗುವ ಲಕ್ಷಣಗಳು ಕಂಡು ಬರ್ತಿವೆ.

Click on your DTH Provider to Add TV9 Kannada