
ಶ್ರೀನಗರ, ಮೇ 01: ಪಾಕಿಸ್ತಾನದ (Pakistan) ಅನೇಕ ಮುಸ್ಲಿಮರು (Muslim) ಭಾರತಕ್ಕೆ ವಲಸೆ ಬಂದು ಸುಮಾರು ವರ್ಷಗಳಿಂದ ನೆಲೆಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಭಾರತಕ್ಕೆ ಬಂದು ನೆಲೆಸಿರುವ ಅನೇಕ ಮುಸ್ಲಿಮರು ಇಲ್ಲಿನ ಪ್ರಜೆಗಳಂತೆ ವಾಸಿಸುತ್ತಿದ್ದಾರೆ. ಆದರೆ, ಉಗ್ರರು ಮಾಡಿರುವ ದೇಶದ್ರೋಹಿ ಕೃತ್ಯಗಳ ಪರಿಣಾಮ ಕೇಂದ್ರ ಸರ್ಕಾರದ (Central Government) ಆದೇಶದಂತೆ ಅನೇಕರು ಭಾರತ (India) ತೊರೆದು ಪಾಕಿಸ್ತಾನಕ್ಕೆ ತೆರಳುತ್ತಿದ್ದಾರೆ. ಇವರಲ್ಲಿ, ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ 43 ವರ್ಷಗಳಿಂದ ವಾಸಿಸುತ್ತಿರುವ ಇಬ್ಬರು ವೃದ್ಧ ಸಹೋದರಿಯರೂ ಸೇರಿದ್ದಾರೆ.
ಇದೀಗ, ಈ ವೃದ್ಧ ಸಹೋದರಿಯರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ. ಇದರಿಂದ ವೃದ್ಧ ಸಹೋದರಿಯರ ಕುಟುಂಬದಲ್ಲಿ ನಿರಾಶೆಯ ಕಾರ್ಮೋಡ ಆವರಿಸಿದೆ. ಕಳೆದ 43 ವರ್ಷಗಳಿಂದ ರಾಜೌರಿಯಲ್ಲಿ ವಾಸಿಸುತ್ತಿರುವ ಇಬ್ಬರು ಸಹೋದರಿಯರನ್ನು ಭಾರತ ಸರ್ಕಾರ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸುತ್ತಿದೆ. ಅಟ್ಟಾರಿ-ವಾಘಾ ಗಡಿಯಲ್ಲಿ ಅವರನ್ನು ಬಿಡಲು ಬಂದಿದ್ದ ಅವರ ಸೋದರಸಂಬಂಧಿ ಎಂಎಚ್ ಷಾ, ಇಬ್ಬರೂ ಸಹೋದರಿಯರು 1983 ರಲ್ಲಿ ಭಾರತಕ್ಕೆ ಬಂದಿದ್ದಾರೆ ಎಂದರು.
ಪಾಕಿಸ್ತಾನದಲ್ಲಿ ಈಗ ಇವರ ಸಂಬಂಧಿಗಳು ಯಾರೂ ಇಲ್ಲ. ಅವರು ಎಲ್ಲಿ ಹೋಗಬೇಕು ಎಂದು ಸೋದರ ಸಂಬಂಧಿ ಸರ್ಕಾರಕ್ಕೆ ಪ್ರಶ್ನಿಸುತ್ತಿದ್ದಾರೆ. ಈ ಇಬ್ಬರು ಸಹೋದರಿಯರಾದ ಸೈದಾ ಜಮೀರ್ ಫಾತಿಮಾ ಅವರಿಗೆ 67 ವರ್ಷ ಮತ್ತು ಇನ್ನೊಬ್ಬರು ಸೈದಾ ಸಘೀರ್ ಫಾತಿಮಾ ಅವರಿಗೆ 64 ವರ್ಷವಾಗಿದೆ.
ಅವರು 43 ವರ್ಷಗಳಿಂದ ಭಾರತದ ಶ್ರೀನಗರದ ರಾಜೌರಿಯಲ್ಲಿ ವಾಸಿಸುತ್ತಿದ್ದಾರೆ. ಈ ಸಹೋದರಿಯರು ತಮ್ಮ ತಂದೆಯೊಂದಿಗೆ ಚಿಕ್ಕವಯಸ್ಸಿನಲ್ಲಿಯೇ ಭಾರತಕ್ಕೆ ಬಂದಿದ್ದರು. ಭಾರತೀಯ ಪೌರತ್ವಕ್ಕಾಗಿ ಈ ಸಹೋದರಿಯರು ಮನವಿ ಮಾಡಿದ್ದಾರೆ. ಇದಕ್ಕಾಗಿ ಶುಲ್ಕವನ್ನು ಸಹ ಪಾವತಿಸಲಾಗಿದೆ. ಆದರೆ, ಇವರಿಗೆ ಇನ್ನೂ ಪೌರತ್ವ ಸಿಕ್ಕಿಲ್ಲ. ಇಬ್ಬರೂ ಜೀವನದ ಕೊನೆ ಹಂತದಲ್ಲಿದ್ದಾರೆ. ಆದರೆ, ಈಗ ಸರ್ಕಾರ ಇವರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದೆ. ಆದರೆ, ಪಾಕಿಸ್ತಾನದಲ್ಲಿ ಎಲ್ಲಿ ಹೋಗಬೇಕು ಎಂಬುದೆ ಈ ವೃದ್ಧ ಸಹೋದರಿಯರಿಗೆ ಈಗ ಯಕ್ಷ ಪ್ರಶ್ನೆಯಾಗಿದೆ.
“ಈ ಇಬ್ಬರು ಸಹೋದರಿಯರು ಕಳೆದ 43 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ಅವರ ತಂದೆ ನಿಧನರಾಗಿದ್ದಾರೆ ಮತ್ತು ಅವರಿಗೆ ಪಾಕಿಸ್ತಾನದಲ್ಲಿ ಯಾರೂ ಉಳಿದಿಲ್ಲ. ಅವರು ಈಗ ಎಲ್ಲಿಗೆ ಹೋಗುತ್ತಾರೆ? ಅವರ ಭಾರತೀಯ ಪೌರತ್ವಕ್ಕೂ ಅರ್ಜಿ ಸಲ್ಲಿಸಿದ್ದೇನೆ ಮತ್ತು ಸರ್ಕಾರ ಕೇಳಿದ ಶುಲ್ಕವನ್ನು ಸಹ ಠೇವಣಿ ಮಾಡಲಾಗಿದೆ. ಆದರೆ ಅವರಿಗೆ ಇನ್ನೂ ಪೌರತ್ವ ಸಿಕ್ಕಿಲ್ಲ ಮತ್ತು ಈಗ ಇದ್ದಕ್ಕಿದ್ದಂತೆ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಗುತ್ತಿದೆ. ಅವರ ವಯಸ್ಸು ಎಷ್ಟಿದೆಯೆಂದರೆ ಅವರು ಸ್ವಂತವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ ಮತ್ತು ಅವರಿಗೆ ಯಾವುದೇ ಬೆಂಬಲವಿಲ್ಲ. ಅವರಿಗೆ ಪಾಕಿಸ್ತಾನದಲ್ಲಿ ಮನೆ ಅಥವಾ ಕುಟುಂಬವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸರ್ಕಾರದ ಈ ನಡೆ ಮಾನವೀಯತೆಗೆ ವಿರುದ್ಧವಾಗಿದೆ” ಎಂದು ವೃದ್ಧ ಸಹೋದರಿಯರ ಸಂಬಂಧಿ ಎಂ.ಎಚ್. ಷಾ ಹೇಳಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿ: ಉಗ್ರರಲ್ಲಿ ಒಬ್ಬ ಪಾಕಿಸ್ತಾನ ಸೇನೆಯ ಮಾಜಿ ಕಮಾಂಡೋ
ಉಭಯ ದೇಶಗಳ ನಾಗರಿಕರು ಹಿಂದಿರುಗಲು ನಿಗದಿ ಮಾಡಿದ್ದ ಗಡುವು ಮುಕ್ತಾಯಗೊಂಡಿದ್ದು, ತಮ್ಮ ದೇಶಕ್ಕೆ ಮರಳಲು ಪಾಕಿಸ್ತಾನಿ ನಾಗರಿಕರು ಅಟ್ಟಾರಿ ಬಾಗಾ ಗಡಿಯಲ್ಲಿ ಜಮಾವಣೆಗೊಂಡಿದ್ದಾರೆ. ಪಾಕಿಸ್ತಾನದ ಪಂಜಾಬ್‌ನ ರೆಹಮಾನ್ಯರ್ ಜಿಲ್ಲೆಯ 16 ಸದಸ್ಯರು ಫೆಬ್ರವರಿಯಲ್ಲಿ ತಮ್ಮ ಕುಟುಂಬ ಸದಸ್ಯರ ಚಿತಾಭಸ್ಮದೊಂದಿಗೆ ಭಾರತಕ್ಕೆ ಬಂದಿದ್ದರು. ಈ 16 ಜನರಲ್ಲಿ ಕೆಲವು ಮಹಿಳೆಯರು, ಕೆಲವು ಮಕ್ಕಳೂ ಸೇರಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ಚಿತಾಭಸ್ಮವನ್ನು ಹೂಳಲು ಹರಿದ್ವಾರಕ್ಕೆ ಎರಡು ತಿಂಗಳ ಭೇಟಿಗಾಗಿ ಭಾರತಕ್ಕೆ ಬಂದಿದ್ದ ಕುಟುಂಬ ವಿಸಾ ಅವಧಿ ಮುಗಿದ ಹಿನ್ನೆಲೆ ಮತ್ತು ಪಹಲ್ಗಾಮ್‌ನಿಂದಾಗಿ ಪರಿಸ್ಥಿತಿ ಹದಗೆಡುತ್ತಿರುವುದರಿಂದ, ಪಾಕಿಸ್ತಾನಕ್ಕೆ ಹಿಂತಿರುಗುತ್ತಿದೆ.
ವರದಿ: ವಿಲಾಸ್
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Thu, 1 May 25