ಭದ್ರತಾ ಪಡೆಗಳ ಆತ್ಮಸ್ಥೈರ್ಯ ಕುಗ್ಗಿಸಬೇಡಿ; ಪಹಲ್ಗಾಮ್ ದಾಳಿ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ನಡೆದ ಪ್ರಕರಣಕ್ಕೆ ನ್ಯಾಯಾಂಗ ತನಿಖೆಗೆ ಕೋರಿ ಪಿಐಎಲ್ ಸಲ್ಲಿಸಲಾಗಿತ್ತು. ಉಗ್ರರ ದಾಳಿಯ ಬಗ್ಗೆ ನ್ಯಾಯಾಂಗ ತನಿಖೆಗೆ ಮನವಿ ಮಾಡಿದ್ದಕ್ಕೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಪಿಐಎಲ್ ಸಲ್ಲಿಸಿದ್ದ ವ್ಯಕ್ತಿಗೆ ತರಾಟೆ ತೆಗೆದುಕೊಂಡ ಸುಪ್ರೀಂಕೋರ್ಟ್ ಉಗ್ರರ ದಾಳಿಯ ಬಗ್ಗೆ ತನಿಖೆ ನಡೆಸುವುದು ಜಡ್ಜ್‌ಗಳ ಜವಾಬ್ದಾರಿಯಲ್ಲ. ಉಗ್ರರ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು. ಈ ರೀತಿಯ ಮನವಿ ಸಲ್ಲಿಸುವುದರಿಂದ ಸೇನಾ ಪಡೆಗಳ ಶಕ್ತಿ ಕುಗ್ಗಲಿದೆ. ಭದ್ರತಾ ಪಡೆಗಳ ಆತ್ಮಸ್ಥೈರ್ಯ ಕುಗ್ಗಿಸುವ ಪಿಐಎಲ್ ಸಲ್ಲಿಸಬೇಡಿ ಎಂದು ಹೇಳಿದೆ.

ನವದೆಹಲಿ, ಮೇ 1: ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ (Pahalgam Terror Attack) ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಇಂದು ವಜಾಗೊಳಿಸಿತು. ಈ ಪ್ರಕರಣದ ವಿಚಾರಣೆಯ ಸಮಯದಲ್ಲಿ ಬಲವಾದ ಟೀಕೆಗಳನ್ನು ಮಾಡಿತು. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನಡೆದ ಹತ್ಯೆಗಳ ತನಿಖೆಯನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಡೆಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು. ಉಗ್ರರ ದಾಳಿ ಕುರಿತು ತನಿಖೆಗೆ ನ್ಯಾಯಾಂಗ ಸಮಿತಿ ರಚಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಸ್ವತಂತ್ರ, ಪಾರದರ್ಶಕ ತನಿಖೆಯ ಅಗತ್ಯವಿದೆ ಎಂದು ಜಮ್ಮು-ಕಾಶ್ಮೀರದ ನಿವಾಸಿಗಳು ಅರ್ಜಿ ಸಲ್ಲಿಸಿದ್ದರು. ಫತೇಶ್ ಕುಮಾರ್ ಶಾಹು, ಮೊಹಮ್ಮದ್ ಜುನೈದ್, ವಿಕ್ಕಿ ಕುಮಾರ್ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ನ್ಯಾಯಾಂಗ ತನಿಖೆಗೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಈ ಅರ್ಜಿಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ ನ್ಯಾಯಪೀಠವು, ಸಂಭಾವ್ಯ ಮಿಲಿಟರಿ ಪ್ರತಿಕ್ರಿಯೆಗೆ ಸಿದ್ಧರಾಗುವಾಗ ಭದ್ರತಾ ಪಡೆಗಳ ಮನೋಬಲವನ್ನು ಕುಗ್ಗಿಸುವುದು ಇದರ ಉದ್ದೇಶವೇ? ಎಂದು ಕೇಳಿತು. “ನ್ಯಾಯಾಂಗ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಯಾವಾಗಿನಿಂದ ಭಯೋತ್ಪಾದನಾ ವಿರೋಧಿ ತನಿಖೆಗಳಲ್ಲಿ ಪರಿಣತರಾದರು?” ಎಂದು ನ್ಯಾಯಮೂರ್ತಿ ಪ್ರಶ್ನಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಸಲ್ಲಿಸುವಾಗ ಜವಾಬ್ದಾರಿಯ ಅಗತ್ಯವನ್ನು ಒತ್ತಿ ಹೇಳಿದ ನ್ಯಾಯಮೂರ್ತಿ ಸೂರ್ಯ ಕಾಂತ್, “ಅಂತಹ ಪಿಐಎಲ್‌ಗಳನ್ನು ಸಲ್ಲಿಸುವ ಮೊದಲು ಜವಾಬ್ದಾರಿಯುತರಾಗಿರಿ. ನಿಮಗೆ ದೇಶದ ಬಗ್ಗೆಯೂ ಕೆಲವು ಕರ್ತವ್ಯವಿದೆ. ನಮ್ಮ ಭದ್ರತಾ ಪಡೆಗಳ ಮನೋಬಲವನ್ನು ಕುಗ್ಗಿಸಬೇಡಿ” ಎಂದು ಟೀಕಿಸಿದರು.
ಇದನ್ನೂ ಓದಿ: ಪಹಲ್ಗಾಮ್ ದಾಳಿ: ಉಗ್ರರಲ್ಲಿ ಒಬ್ಬ ಪಾಕಿಸ್ತಾನ ಸೇನೆಯ ಮಾಜಿ ಕಮಾಂಡೋ
ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅಂತಹ ಅರ್ಜಿಗಳು ಹೈಕೋರ್ಟ್ ಮುಂದೆಯೂ ಹೋಗಬಾರದು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಾಲಯವು ಅರ್ಜಿದಾರರಿಗೆ ಹಿಂತೆಗೆದುಕೊಳ್ಳಲು ಅವಕಾಶ ನೀಡಿತು ಮತ್ತು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಯ ಅಂಶದ ಮೇಲೆ ಮಾತ್ರ ಸಂಬಂಧಪಟ್ಟ ಹೈಕೋರ್ಟ್ ಅನ್ನು ಸಂಪರ್ಕಿಸಲು ನ್ಯಾಯಮೂರ್ತಿ ಅವಕಾಶ ನೀಡಿದ್ದಾರೆ.
Supreme Court strongly criticises the counsels who filed a PIL plea seeking the constitution of a judicial commission to investigate the April 22 Pahalgam terrorist attack in which 26 people were killed.
A bench of Justices Surya Kant and N. Kotiswar Singh said, “Be…
— ANI (@ANI) May 1, 2025
ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ನಿಷೇಧಿತ ಗುಂಪು ಲಷ್ಕರ್-ಎ-ತೈಬಾದ ಪ್ರತಿನಿಧಿಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ಟಿಆರ್ಎಫ್ ವಹಿಸಿಕೊಂಡ ಒಂದು ವಾರಕ್ಕೂ ಹೆಚ್ಚು ಸಮಯದ ನಂತರವೂ, ಅಪರಾಧಿಗಳು ತಲೆಮರೆಸಿಕೊಂಡಿದ್ದಾರೆ. ಮಿಲಿಟರಿ, ಸ್ಥಳೀಯ ಪೊಲೀಸರು, ಗಡಿ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳನ್ನು ಒಳಗೊಂಡ ಬೃಹತ್ ಜಂಟಿ ಹುಡುಕಾಟ ನಡೆಯುತ್ತಿದೆ. ಶಂಕಿತ ಭಯೋತ್ಪಾದಕರ ಗುರುತಿಸುವಿಕೆ ಮತ್ತು ಸೆರೆಹಿಡಿಯುವಿಕೆಗೆ ಸಹಾಯ ಮಾಡಲು ಅವರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಈ ದಾಳಿಯನ್ನು ಹೇಗೆ ನಡೆಸಲಾಯಿತು ಮತ್ತು ಯಾವುದೇ ಭದ್ರತಾ ಲೋಪಗಳು ಉಲ್ಲಂಘನೆಗೆ ಕಾರಣವಾಗಿವೆಯೇ ಎಂಬುದು ಸೇರಿದಂತೆ ಈ ಘಟನೆಯ ಎಲ್ಲಾ ಅಂಶಗಳನ್ನು ಪರಿಶೀಲಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆಯನ್ನು ವಹಿಸಿಕೊಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:13 pm, Thu, 1 May 25








