2 ದಿನದಿಂದ ಕಾಶ್ಮೀರದಲ್ಲಿ ಓಡಾಡಿದ್ದ ಉಗ್ರರ ಟಾರ್ಗೆಟ್ ಪಟ್ಟಿಯಲ್ಲಿತ್ತು ಈ 3 ಸ್ಥಳಗಳು
ಪಹಲ್ಗಾಮ್ ಜೊತೆ ಉಗ್ರರು ಇನ್ನೂ 3 ಸ್ಥಳಗಳನ್ನು ಕೂಡ ದಾಳಿಗೆ ಶಾರ್ಟ್ ಲಿಸ್ಟ್ ಮಾಡಿಕೊಂಡಿದ್ದರು. 2 ದಿನದಿಂದ ಕಾಶ್ಮೀರ ಕಣಿವೆಯಲ್ಲಿ ಓಡಾಡಿದ್ದ ಉಗ್ರರು ಕೊನೆಗೆ ತಮ್ಮ ದಾಳಿಗೆ ಪಹಲ್ಗಾಮ್ ಅನ್ನು ಆಯ್ಕೆ ಮಾಡಿಕೊಂಡಿದ್ದರು. ಸ್ಥಳೀಯರ ರೀತಿಯಲ್ಲೇ ಓಡಾಡುತ್ತಿದ್ದ ಅವರ ಮೇಲೆ ಯಾರಿಗೂ ಅನುಮಾನ ಬಂದಿರಲಿಲ್ಲ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದನಾ ದಾಳಿ ನಡೆಯುವ ಎರಡು ದಿನಗಳ ಮೊದಲೇ ಉಗ್ರರು ಬೈಸರನ್ ಕಣಿವೆಯನ್ನು ತಲುಪಿದ್ದರು. ಪಹಲ್ಗಾಮ್ ಮಾತ್ರವಲ್ಲದೆ ಇತರ ಮೂರು ಪ್ರವಾಸಿ ತಾಣಗಳು ಅವರ ಹಿಟ್‌ಲಿಸ್ಟ್‌ನಲ್ಲಿತ್ತು ಎಂಬ ವಿಷಯ ತನಿಖೆ ವೇಳೆ ಬಯಲಾಗಿದೆ.

ನವದೆಹಲಿ, ಮೇ 1: 26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು (Pahalgam Terror Attack) ನಡೆಸಿದ ಭಯೋತ್ಪಾದಕರು ಬೈಸರನ್ ಕಣಿವೆಯನ್ನು ಹೊರತುಪಡಿಸಿ ಇತರ ಮೂರು ಸ್ಥಳಗಳನ್ನು ತಮ್ಮ ಹಿಟ್ಲಿಸ್ಟ್ನಲ್ಲಿ ಇರಿಸಿಕೊಂಡಿದ್ದರು ಎಂಬ ವಿಷಯ ಎನ್ಐಎ ತನಿಖೆ ವೇಳೆ ಬಯಲಾಗಿದೆ. ಏಪ್ರಿಲ್ 22ರಂದು ನಡೆದ ದಾಳಿಗೂ ಎರಡು ದಿನಗಳ ಮೊದಲು ಭಯೋತ್ಪಾದಕರು ಬೈಸರನ್ ಕಣಿವೆಯಲ್ಲಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಭಯೋತ್ಪಾದಕರು ಆರಂಭದಲ್ಲಿ ಅರು ಕಣಿವೆ, ಮನೋರಂಜನಾ ಉದ್ಯಾನವನ ಮತ್ತು ಬೇತಾಬ್ ಕಣಿವೆ ಸೇರಿದಂತೆ ಇತರ ಮೂರು ಸ್ಥಳಗಳ ಮೇಲೆ ದಾಳಿ ಮಾಡಲು ಯೋಜಿಸಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ, ಆ ಸ್ಥಳಗಳಲ್ಲಿ ಭದ್ರತಾ ಪಡೆಗಳು ಇದ್ದುದರಿಂದ ಅವರ ಯೋಜನೆ ವಿಫಲವಾಯಿತು. ಹೀಗಾಗಿ, ಪಹಲ್ಗಾಮ್‌ನಲ್ಲಿ ದಾಳಿ ನಡೆಸಲಾಯಿತು.
ನಾಲ್ವರು ಭೂಗತ ಕಾರ್ಮಿಕರು (OGW) ಭಯೋತ್ಪಾದಕರಿಗೆ ದಾಳಿ ನಡೆಸಲು ಸ್ಥಳಗಳನ್ನು ಪತ್ತೆಹಚ್ಚಲು ಸಹಾಯ ಮಾಡಿದ್ದಾರೆ ಎಂದು ವರದಿಯಾಗಿದೆ. ದಾಳಿಗೂ ಮುನ್ನ ಈ ಪ್ರದೇಶದಲ್ಲಿ ಮೂರು ಉಪಗ್ರಹ ಫೋನ್‌ಗಳನ್ನು ಬಳಸಿದ್ದಕ್ಕೆ ಸಂಬಂಧಿಸಿದಂತೆ ಪುರಾವೆಗಳು ಸಿಕ್ಕಿವೆ. ಈ ಎರಡು ಸಾಧನಗಳಿಂದ ಸಿಗ್ನಲ್‌ಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಲಾಗಿದೆ. ತನಿಖಾಧಿಕಾರಿಗಳು ಸುಮಾರು 20 OGWಗಳನ್ನು ಗುರುತಿಸಿದ್ದಾರೆ. ಅವರಲ್ಲಿ ಕೆಲವರನ್ನು ಬಂಧಿಸಿದ್ದಾರೆ. ಉಗ್ರರ ದಾಳಿಗೆ ಸಂಬಂಧಿಸಿದಂತೆ ಒಟ್ಟು 186 ಜನರನ್ನು ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಉಗ್ರರ ದಾಳಿ ಬೆನ್ನಲ್ಲೇ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಪುನಾರಚನೆ; ಅಧ್ಯಕ್ಷರಾಗಿ ಅಲೋಕ್ ಜೋಶಿ ನೇಮಕ
ಏಪ್ರಿಲ್ 22 ರಂದು, ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡು ಹಾರಿಸುವ ಮೂಲಕ 26 ಜನರನ್ನು ಹತ್ಯೆ ಮಾಡಿದರು. ಅವರು ಪ್ರವಾಸಿಗರ ಮೇಲೆ ಗುಂಡು ಹಾರಿಸುವ ಮೊದಲು ಅವರ ಹೆಸರು, ಧರ್ಮವನ್ನು ಕೇಳಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಹೇಳಿಕೊಂಡವರ ಬಳಿ ಕಲ್ಮಾ ಪಠಿಸಲು ಹೇಳಿ ಅವರು ನಿಜವಾಗಿಯೂ ಮುಸ್ಲಿಮರೇ ಎಂದು ಖಚಿತಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಉಗ್ರರ ದಾಳಿಯಲ್ಲಿ ಮೃತಪಟ್ಟವರಲ್ಲಿ ಕೇವಲ ಓರ್ವನನ್ನು ಹೊರತುಪಡಿಸಿ ಉಳಿದವರೆಲ್ಲರೂ ಮುಸ್ಲಿಮೇತರರು.
ಈ ದಾಳಿಗೆ ಸಂಬಂಧಿಸಿದಂತೆ NIA ಮತ್ತು ಗುಪ್ತಚರ ಸಂಸ್ಥೆಗಳು ಇಲ್ಲಿಯವರೆಗೆ 2,500ಕ್ಕೂ ಹೆಚ್ಚು ವ್ಯಕ್ತಿಗಳನ್ನು ವಿಚಾರಣೆ ನಡೆಸಿವೆ. ಇಲ್ಲಿಯವರೆಗೆ, 186 ಜನರನ್ನು ಹೆಚ್ಚಿನ ವಿಚಾರಣೆಗಾಗಿ ಬಂಧನದಲ್ಲಿಡಲಾಗಿದೆ. ಇದು ತನಿಖೆಯ ವ್ಯಾಪಕ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








