ಉಗ್ರರ ವಶದಲ್ಲಿರುವ ಅಫ್ಘಾನಿಸ್ತಾನ (Afghanistan)ದಿಂದ ಭಾರತೀಯರನ್ನು ಮರಳಿ ದೇಶಕ್ಕೆ ಕರುವ ಕಾರ್ಯಾಚರಣೆ ಕಳೆದ ಸೋಮವಾರದಿಂದಲೂ ನಡೆಯುತ್ತಿದೆ. ಹೀಗೆ ಅಫ್ಘಾನ್ನ ಕಾಬೂಲ್ ವಿಮಾನ ನಿಲ್ದಾಣದಿಂದ ಭಾರತೀಯರು ಮತ್ತು ಅಫ್ಘಾನ್ನ ಅಲ್ಪಸಂಖ್ಯಾತರನ್ನು ಭಾರತಕ್ಕೆ ತರುವ ಕಾರ್ಯಾಚರಣೆಗೆ ಇದೀಗ ‘ಆಪರೇಶನ್ ದೇವಿ ಶಕ್ತಿ (Operation Devi Shakti) ’ಎಂದು ಹೆಸರು ನೀಡಲಾಗಿದೆ. ಟ್ವೀಟ್ ಮೂಲಕ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಅಫ್ಘಾನ್ನಿಂದ ಭಾರತಕ್ಕೆ ಜನರನ್ನು ಸ್ಥಳಾಂತರ ಮಾಡುವ ಕಾರ್ಯಾಚರಣೆಗೆ ಆಪರೇಶನ್ ದೇವಿ ಶಕ್ತಿ ಎಂದು ಇನ್ನು ಮುಂದೆ ಕರೆಯಲಾಗುತ್ತದೆ ಎಂದಿದ್ದಾರೆ. ಹಾಗೇ, ಇಂದು 78ಜನರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದ್ದಾಗಿ ಮಾಹಿತಿ ನೀಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರೊಂದಿಗೆ, ಅಲ್ಲಿನ ಅಲ್ಪಸಂಖ್ಯಾತ ಹಿಂದು ಮತ್ತು ಸಿಖ್ ಸಮುದಾಯದವರನ್ನೂ ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗುತ್ತಿದೆ. ಹಾಗೇ, ಇಂದು ಬೆಳಗ್ಗೆ 78 ಜನರ ಒಂದು ಬ್ಯಾಚ್ ಕಾಬೂಲ್ ಬಿಟ್ಟಿದ್ದು, ಅದು ತಜಕೀಸ್ತಾನದ ರಾಜಧಾನಿ ದುಶಾಂಬೆ ಮೂಲಕ ಭಾರತ ತಲುಪಲಿದೆ. ಈ ಬಗ್ಗೆ ಟ್ವೀಟ್ ಮಾಡಿದ ಎಸ್.ಜೈಶಂಕರ್, ಆಪರೇಶನ್ ದೇವಿ ಶಕ್ತಿ ಮುಂದುವರಿಯುತ್ತಿದೆ. ಇಂದು 78 ಜನರ ಬ್ಯಾಚ್ವೊಂದು ಕಾಬೂಲ್ ಬಿಟ್ಟಿದೆ. ದುಶಾಂಬೆ ಮೂಲಕ ಆಗಮಿಸಲಿದೆ. ಸ್ಥಳಾಂತರ ಪ್ರಕ್ರಿಯೆ ನಡೆಸುತ್ತಿರುವ ಐಎಎಫ್ ಎಂಸಿಸಿ, ಏರ್ ಇಂಡಿಯಾ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳಿಗೆ ಧನ್ಯವಾದಗಳು ಎಂದಿದ್ದಾರೆ. ಜೈಶಂಕರ್ ತಮ್ಮ ಟ್ವೀಟ್ನಲ್ಲಿ ಆಪರೇಶನ್ ದೇವಿ ಶಕ್ತಿ ಎಂದು ಉಲ್ಲೇಖಿಸಿದಾಗಲೇ, ಭಾರತ ಸರ್ಕಾರ ಹೀಗೊಂದು ಹೆಸರಿಟ್ಟಿದೆ ಎಂಬುದು ಗೊತ್ತಾಗಿದ್ದು.
Op Devi Shakti continues.
78 evacuees from Kabul arrive via Dushanbe.
Salute @IAF_MCC, @AirIndiain and #TeamMEA for their untiring efforts. #DeviShakti
— Dr. S. Jaishankar (@DrSJaishankar) August 24, 2021
ಭಾನುವಾರ ಕಾಬೂಲ್ನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಸೋಮವಾರದಿಂದ ಭಾರತ ತಮ್ಮ ದೇಶದ ಜನರನ್ನು ಅಲ್ಲಿಂದ ಕರೆದುಕೊಂಡು ಬರಲು ಶುರು ಮಾಡಿದೆ. ಸೋಮವಾರ 40 ಭಾರತೀಯರನ್ನು ಕಾಬೂಲ್ ವಿಮಾನ ನಿಲ್ದಾಣದಿಂದ ಏರ್ಲಿಫ್ಟ್ ಮಾಡಲಾಗಿತ್ತು. ಅಂದಿನಿಂದಲೂ ಕಾಬೂಲ್ನಲ್ಲಿ ಭದ್ರತಾ ವ್ಯವಸ್ಥೆ ಹದಗೆಡುತ್ತಿದೆ. ಈ ಮಧ್ಯೆಯೂ ಭಾರತ ಇಲ್ಲಿಯವರೆಗೆ 800ಕ್ಕೂ ಹೆಚ್ಚು ಜನರನ್ನು ಅಫ್ಘಾನ್ನಿಂದ ಕರೆದುಕೊಂಡು ಬಂದಿದೆ.
ಏರ್ಪೋರ್ಟ್ ಹೊರಗೆ ಜನಸಂದಣಿ
ಅಫ್ಘಾನಿಸ್ತಾನದಲ್ಲಿ ಇರುವ ವಿವಿಧ ದೇಶಗಳ ಜನರನ್ನು ಸ್ಥಳಾಂತರ ಮಾಡುವ ಕೆಲಸವನ್ನು ಆಯಾ ದೇಶಗಳು ಮಾಡುತ್ತಿವೆ. ಹಾಗೇ, ಅಫ್ಘಾನ್ ನಾಗರಿಕರು ಬೇರೆ ದೇಶಗಳಿಗೆ ಹೋಗಲು ಇಚ್ಛಿಸುವವರಿಗೂ ಕೈಲಾದ ಸಹಾಯ ಮಾಡುತ್ತಿವೆ. ಈ ಮಧ್ಯೆ ಉಗ್ರರ ಆಡಳಿತಕ್ಕೆ ಹೆದರಿ, ಅಫ್ಘಾನ್ ತೊರೆಯಲು ಸಾವಿರಾರು ಜನರು ಕಾಬೂಲ್ ಏರ್ಪೋರ್ಟ್ ಹೊರಗೆ ಸೇರುತ್ತಿದ್ದಾರೆ. ಅನೇಕರು ಒಂದು ವಾರದಿಂದಲೂ ವಿಮಾನ ನಿಲ್ದಾಣದ ಹೊರಗಿನ ಆವರಣದಲ್ಲಿ ಬೀಡು ಬಿಟ್ಟಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಹಂಗಾಮಿ ಸರ್ಕಾರ ರಚಿಸಿದ ತಾಲಿಬಾನ್: ಆಹಾರ ಧಾನ್ಯದ ಬೆಲೆ ಏರಿಕೆ
Bay of Bengal Earthquake: ಬಂಗಾಳ ಕೊಲ್ಲಿಯಲ್ಲಿ ಭೂಕಂಪ; ಚೆನ್ನೈ ಭಾಗದಲ್ಲಿ ಕಂಪಿಸಿದ ನೆಲ
(India gave a name as operation Devi Shakti to the evacuation drive of Indian nationals)
Published On - 2:39 pm, Tue, 24 August 21