ದೆಹಲಿ: ವಿಶ್ವದ ಅತ್ಯಂತ ಪ್ರಬಲ ಮಿಲಿಟರಿ ಶಕ್ತಿಯಿರುವ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ರಕ್ಷಣಾ ವಿದ್ಯಮಾನಗಳನ್ನು ವಿಶ್ಲೇಷಿಸುವ ವೆಬ್ಸೈಟ್ ಮಿಲಿಟರಿ ಡೈರೆಕ್ಟ್ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಚೀನಾ ಮೊದಲ ಸ್ಥಾನ ಪಡೆದುಕೊಂಡಿದೆ. ಅಗಾಧ ಮಿಲಿಟರಿ ವೆಚ್ಚದ ಹೊರತಾಗಿಯೂ ಅಮೆರಿಕ 74 ಅಂಕಗಳೊಂದಿಗೆ 2ನೇ ಸ್ಥಾನ ಪಡೆದುಕೊಂಡಿದೆ. ರಷ್ಯಾ 69 ಅಂಕಗಳೊಂದಿಗೆ 3, ಭಾರತ 61 ಅಂಕಗಳೊಂದಿಗೆ 4, ಫ್ರಾನ್ಸ್ 58 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. 43 ಅಂಕಗಳನ್ನು ಪಡೆದುಕೊಂಡಿರುವ ಬ್ರಿಟನ್ 9ನೇ ಸ್ಥಾನ ತಲುಪಿದೆ.
ಮಿಲಿಟರಿ ಬಜೆಟ್, ಸಶಸ್ತ್ರಪಡೆಯ ಸಿಬ್ಬಂದಿ, ವಾಯುಪಡೆ, ನೌಕಾಪಡೆ, ಭೂಸೇನೆ, ಅಣ್ವಸ್ತ್ರಗಳು, ಸರಾಸರಿ ಸಂಬಳ ಮತ್ತು ಯುದ್ಧೋಪಕರಣಗಳು ಸೇರಿದಂತೆ ಹಲವು ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ. 100ಕ್ಕೆ 82 ಅಂಕಗಳನ್ನು ಪಡೆದುಕೊಂಡಿರುವ ಚೀನಾ ದೇಶವು ವಿಶ್ವದ ಅತ್ಯಂತ ಬಲಿಷ್ಠ ಮಿಲಿಟರಿ ಶಕ್ತಿ ಹೊಂದಿದೆ ಎಂದು ಈ ವರದಿಯು ಹೇಳಿದೆ.
ಇದೀಗ ವಿಶ್ವದ ಹಲವು ದೇಶಗಳಲ್ಲಿ ಚಾಲ್ತಿಯಲ್ಲಿರುವ ಲೆಕ್ಕಾಚಾರಗಳ ಪ್ರಕಾರ ಅಮೆರಿಕ ಮತ್ತು ಚೀನಾ ನಡುವೆ ವಿಶ್ವದ ಆರ್ಥಿಕತೆ ಮತ್ತು ಪ್ರಭಾವದ ಮೇಲಿನ ಹಿಡಿತಕ್ಕೆ ಪೋಟಾಪೋಟಿ ನಡೆಯುತ್ತಿದೆ. ಇದೇ ನೆಪದಲ್ಲಿ ಮುಂದೊಮ್ಮೆ ಸಂಘರ್ಷಗಳು ಸ್ಫೋಟಗೊಂಡರೆ ಚೀನಾವು ಪ್ರಬಲ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ವರದಿಯು ಉಲ್ಲೇಖಿಸಿದೆ.
ರಕ್ಷಣೆಗಾಗಿ ಪ್ರತಿವರ್ಷ 732 ಲಕ್ಷ ಕೋಟಿ ಡಾಲರ್ ಖರ್ಚು ಮಾಡುವ ಅಮೆರಿಕ, ವಿಶ್ವದಲ್ಲಿಯೇ ಅತಿಹೆಚ್ಚು ಮೊತ್ತವನ್ನು ರಕ್ಷಣೆಗಾಗಿ ವ್ಯಯಿಸುವ ಮೊದಲ ದೇಶವಾಗಿದೆ. ಚೀನಾದ ವಾರ್ಷಿಕ ರಕ್ಷಣಾ ವೆಚ್ಚ 261 ಲಕ್ಷ ಕೋಟಿ, ಭಾರತದ ರಕ್ಷಣಾ ವೆಚ್ಚ 71 ಲಕ್ಷ ಕೋಟಿ ಡಾಲರ್ ಆಗಿದೆ.
14,141 ವಿಮಾನಗಳಿರುವ ಅಮೆರಿಕ ವೈಮಾನಿಕ ಯುದ್ಧದಲ್ಲಿ ಮೇಲುಗೈ ಸಾಧಿಸಬಹುದು. ರಷ್ಯಾದಲ್ಲಿ 4,682 ಮತ್ತು ಚೀನಾದಲ್ಲಿ 3,587 ವಿಮಾನಗಳಿವೆ. ಭೂಸೇನೆಯು ಭಾಗಿಯಾಗುವ ಯುದ್ಧಗಳಲ್ಲಿ ಬಳಕೆಯಾಗುವ 54,866 ಯುದ್ಧವಾಹನಗಳು ರಷ್ಯಾದಲ್ಲಿವೆ. ಇದು ವಿಶ್ವದಲ್ಲಿಯೇ ಅತಿಹೆಚ್ಚು. 50,326 ಯುದ್ಧವಾಹನಗಳೊಂದಿಗೆ ಅಮೆರಿಕ ಮತ್ತು 41,641 ಯುದ್ಧವಾಹನಗಳೊಂದಿಗೆ ಚೀನಾ ನಂತರದ ಸ್ಥಾನಗಳಲ್ಲಿವೆ.
ಚೀನಾ ಬಳಿ 406 ಯುದ್ಧನೌಕೆಗಳಿದ್ದರೆ, ರಷ್ಯಾ ಬಳಿ 278 ಮತ್ತು ಅಮೆರಿಕ ಬಳಿ 202 ಯುದ್ಧನೌಕೆಗಳಿವೆ. ಭಾರತದ ನೌಕಾಪಡೆ ಬಳಿ ಇರುವ ಯುದ್ಧನೌಕೆಗಳ ಸಂಖ್ಯೆಯೂ 202 ಎಂಬುದು ಗಮನಾರ್ಹ.
ಇದನ್ನೂ ಓದಿ: ಭಾರತೀಯ ಸೇನೆ ನಂತರ ಈಗ ವಾಯುಸೇನೆ ಸೇರಿಕೊಂಡ ಮುಧೋಳ ನಾಯಿಗಳು
ಇದನ್ನೂ ಓದಿ: ಚೀನಾ ಮಿಲಿಟರಿ ಬಜೆಟ್ ಗಾತ್ರ ಶೇ 6.8 ರಷ್ಟು ಹೆಚ್ಚಳ; ಅತ್ಯಾಧುನಿಕತೆಗೆ ಹೆಚ್ಚು ಒತ್ತು
Published On - 5:09 pm, Sun, 21 March 21