ಸೆಪ್ಟೆಂಬರ್ ವೇಳೆಗೆ ಭಾರತದಲ್ಲಿ ಮಕ್ಕಳಿಗೆ ಸ್ವದೇಶಿ ಕೊವಿಡ್ ಲಸಿಕೆ ಲಭ್ಯ

| Updated By: ರಶ್ಮಿ ಕಲ್ಲಕಟ್ಟ

Updated on: Aug 18, 2021 | 6:37 PM

Covid-19 vaccine: "ಜೈಡಸ್ ಕ್ಯಾಡಿಲಾ ಅವರ ಲಸಿಕೆ ಪ್ರಯೋಗವೂ ನಡೆಯುತ್ತಿದೆ. ಇದನ್ನು ಮಕ್ಕಳಿಗೂ ನೀಡಬಹುದು  ಮತ್ತು ಲಭ್ಯವಾಗುವಂತೆ ಮಾಡಲಾಗುವುದು "ಎಂದು ಅಬ್ರಹಾಂ ಹೇಳಿದರು. ವಿದೇಶದಲ್ಲಿ ಬೂಸ್ಟರ್ ಡೋಸ್ ಕುರಿತು ಅಧ್ಯಯನಗಳು ನಡೆಯುತ್ತಿವೆ ಮತ್ತು ಕನಿಷ್ಠ ಏಳು ವಿಭಿನ್ನ ಲಸಿಕೆಗಳನ್ನು ಇದಕ್ಕಾಗಿ ಪ್ರಯತ್ನಿಸಲಾಗಿದೆ

ಸೆಪ್ಟೆಂಬರ್ ವೇಳೆಗೆ ಭಾರತದಲ್ಲಿ ಮಕ್ಕಳಿಗೆ ಸ್ವದೇಶಿ ಕೊವಿಡ್ ಲಸಿಕೆ ಲಭ್ಯ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಸೆಪ್ಟೆಂಬರ್ ವೇಳೆಗೆ ಭಾರತವು ಮಕ್ಕಳಿಗಾಗಿ ಸ್ವದೇಶಿ ಕೊವಿಡ್ -19 ಲಸಿಕೆಯನ್ನು ಹೊಂದುವ ಸಾಧ್ಯತೆಯಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಪುಣೆ) ನಿರ್ದೇಶಕಿ ಪ್ರಿಯಾ ಅಬ್ರಹಾಂ ಹೇಳಿದ್ದಾರೆ. 2-18 ವಯಸ್ಸಿನವರಿಗಾಗಿರುವ ಕೊವಾಕ್ಸಿನ್‌ನ ಹಂತ II ಮತ್ತು III ರ ಪ್ರಯೋಗಗಳ ನಡುವೆಯೇ ಈ ಹೇಳಿಕೆ ಬಂದಿದೆ. ಫಲಿತಾಂಶಗಳು (ಪ್ರಯೋಗಗಳ) ಶೀಘ್ರದಲ್ಲೇ ಲಭ್ಯವಾಗಲಿವೆ ಎಂದು ಆಶಿಸೋಣ. ಫಲಿತಾಂಶಗಳನ್ನು ನಿಯಂತ್ರಕರಿಗೆ ನೀಡಲಾಗುವುದು. ಆದ್ದರಿಂದ, ಸೆಪ್ಟೆಂಬರ್ ಅಥವಾ ಅದರ ನಂತರ, ನಾವು ಮಕ್ಕಳಿಗಾಗಿ ಕೊವಿಡ್ -19 ಲಸಿಕೆಗಳನ್ನು ಹೊಂದಬಹುದು ಎಂದು ಅಬ್ರಹಾಂ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಒಟಿಟಿ ಚಾನೆಲ್ ಇಂಡಿಯಾ ಸೈನ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಐಸಿಎಂಆರ್ ಮತ್ತು ಹೈದರಾಬಾದ್ ಮೂಲದ ಲಸಿಕೆ ತಯಾರಕ ಭಾರತ್ ಬಯೋಟೆಕ್ ಕೊವಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದ್ದು, ಭಾರತದ ಮೊದಲ ಸ್ಥಳೀಯ ಕೋವಿಡ್ -19 ಲಸಿಕೆ ಆಗಿದೆ. ಕೊವಾಕ್ಸಿನ್ ರಾಷ್ಟ್ರೀಯ ಕೊವಿಡ್ -19 ರೋಗನಿರೋಧಕ ಕಾರ್ಯಕ್ರಮದ ಅಡಿಯಲ್ಲಿ ಭಾರತದಲ್ಲಿ ನೀಡಲಾಗುವ ಮೂರು ಲಸಿಕೆಗಳಲ್ಲಿ ಒಂದಾಗಿದೆ. ಇತರ ಎರಡು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ.

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಜನವರಿಯಲ್ಲಿ ದೇಶದಲ್ಲಿ ತುರ್ತು ಬಳಕೆಗಾಗಿ ಕೊವಾಕ್ಸಿನ್ ಅನ್ನು ಅನುಮೋದಿಸಿತು. ಮತ್ತೊಂದು ಕೊವಿಡ್ -19 ಲಸಿಕೆ ಅನುಮೋದನೆ ಪಡೆದರೆ, ಮಕ್ಕಳಿಗೆ ನೀಡಬಹುದು. ಅದು ಜೈಡಸ್ ಕ್ಯಾಡಿಲಾ ಅವರ ZyCoV-D. ತುರ್ತು ಬಳಕೆಯ ಅನುಮೋದನೆಗಾಗಿ ಅರ್ಜಿಯು ಔಷಧ ನಿಯಂತ್ರಕರ ಮುಂದೆ ಬಾಕಿ ಉಳಿದಿದೆ.

“ಜೈಡಸ್ ಕ್ಯಾಡಿಲಾ ಅವರ ಲಸಿಕೆ ಪ್ರಯೋಗವೂ ನಡೆಯುತ್ತಿದೆ. ಇದನ್ನು ಮಕ್ಕಳಿಗೂ ನೀಡಬಹುದು  ಮತ್ತು ಲಭ್ಯವಾಗುವಂತೆ ಮಾಡಲಾಗುವುದು “ಎಂದು ಅಬ್ರಹಾಂ ಹೇಳಿದರು. ವಿದೇಶದಲ್ಲಿ ಬೂಸ್ಟರ್ ಡೋಸ್ ಕುರಿತು ಅಧ್ಯಯನಗಳು ನಡೆಯುತ್ತಿವೆ ಮತ್ತು ಕನಿಷ್ಠ ಏಳು ವಿಭಿನ್ನ ಲಸಿಕೆಗಳನ್ನು ಇದಕ್ಕಾಗಿ ಪ್ರಯತ್ನಿಸಲಾಗಿದೆ ಎಂದು ಅವರು ಹೇಳಿದರು. “ಈಗ ವಿಶ್ವ ಆರೋಗ್ಯ ಸಂಸ್ಥೆ (WHO) ಹೆಚ್ಚಿನ ದೇಶಗಳು ಲಸಿಕೆ ಹಾಕುವವರೆಗೂ ಅದನ್ನು ನಿಲ್ಲಿಸಿದೆ. ಏಕೆಂದರೆ ಹೆಚ್ಚಿನ ಆದಾಯ ಮತ್ತು ಕಡಿಮೆ ಆದಾಯದ ದೇಶಗಳ ನಡುವೆ ಆತಂಕಕಾರಿ ಲಸಿಕೆ ಅಂತರವಿದೆ. ಆದರೆ, ಭವಿಷ್ಯದಲ್ಲಿ, ಬೂಸ್ಟರ್‌ಗಳ ಶಿಫಾರಸುಗಳು ಖಂಡಿತವಾಗಿಯೂ ಬರುತ್ತವೆ ಎಂದಿದ್ದಾರೆ.

ವಿವಿಧ ಕೊವಿಡ್ -19 ಲಸಿಕೆಗಳ ಮಿಶ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ಸುರಕ್ಷತಾ ಕಾಳಜಿಗಳಿಲ್ಲ ಎಂದು ಅಬ್ರಹಾಂ ಹೇಳಿದರು. “ಅಜಾಗರೂಕತೆಯಿಂದ ಎರಡು ವಿಭಿನ್ನ ಲಸಿಕೆಗಳನ್ನು ಎರಡು ಪ್ರಮಾಣದಲ್ಲಿ ನೀಡುವ ಪರಿಸ್ಥಿತಿ ಇತ್ತು. ನಾವು ಆ ಮಾದರಿಗಳನ್ನು NIV (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ) ನಲ್ಲಿ ಪರೀಕ್ಷಿಸಿದ್ದೇವೆ ಮತ್ತು ಎರಡು ಡೋಸ್‌ಗಳಲ್ಲಿ ವಿವಿಧ ಲಸಿಕೆಗಳನ್ನು ಪಡೆದ ರೋಗಿಗಳು ಸುರಕ್ಷಿತವಾಗಿದ್ದಾರೆ ಎಂದು ಕಂಡುಕೊಂಡಿದ್ದೇವೆ. ಯಾವುದೇ ಪ್ರತಿಕೂಲ ಪರಿಣಾಮವನ್ನು ಗುರುತಿಸಲಾಗಿಲ್ಲ ಮತ್ತು ಇಮ್ಯುನೊಜೆನಿಸಿಟಿಯು ಸ್ವಲ್ಪ ಉತ್ತಮವಾಗಿತ್ತು. ಆದ್ದರಿಂದ, ಇದು ಖಂಡಿತವಾಗಿಯೂ ಸುರಕ್ಷತಾ ಸಮಸ್ಯೆಯನ್ನು ಉಂಟುಮಾಡುವ ವಿಷಯವಲ್ಲ. ಅವರು ಈ ವಿದ್ಯಮಾನವನ್ನು ಅಧ್ಯಯನ ಮಾಡುತ್ತಿದ್ದಾರೆ ಮತ್ತು ಕೆಲವು ದಿನಗಳಲ್ಲಿ ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ವ್ಯಾಕ್ಸಿನೇಷನ್ ಕಡ್ಡಾಯವಾಗಿದೆ ಮತ್ತು ಎನ್​ಐವಿ (NIV )ಯಲ್ಲಿ ಮಾಡಿದ ಅಧ್ಯಯನಗಳು ಬಳಕೆಯಲ್ಲಿರುವ ಲಸಿಕೆಗಳು ರೂಪಾಂತರಗಳ ವಿರುದ್ಧ ಕೆಲಸ ಮಾಡುತ್ತವೆ.

ಲಸಿಕೆ ಹಾಕಿದ ಜನರ ದೇಹದಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗುತ್ತಿವೆ. ರೂಪಾಂತರಗಳ ಸಂದರ್ಭದಲ್ಲಿ ಪ್ರತಿಕಾಯಗಳ ಪರಿಣಾಮಕಾರಿತ್ವವನ್ನು ಎರಡು ಮೂರು ಪಟ್ಟು ಕಡಿಮೆ ಮಾಡಲಾಗಿದೆ ಎಂದು ಕಂಡುಬಂದಿದೆ ಎಂದು ಅವರು ಹೇಳಿದರು. “ಆದರೂ, ಲಸಿಕೆಗಳು ಇನ್ನೂ ರೂಪಾಂತರಗಳ ವಿರುದ್ಧ ರಕ್ಷಣಾತ್ಮಕವಾಗಿವೆ. ಅವರು ಸ್ವಲ್ಪ ಕಡಿಮೆ ಪರಿಣಾಮಕಾರಿತ್ವವನ್ನು ತೋರಿಸಬಹುದು, ಆದರೆ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಮತ್ತು ಸಾಯುವಂತಹ ಗಂಭೀರ ಸ್ವರೂಪದ ರೋಗಗಳನ್ನು ತಡೆಗಟ್ಟಲು ಲಸಿಕೆಗಳು ಬಹಳ ಮುಖ್ಯ. ಆದ್ದರಿಂದ, ಯಾವುದೇ ರೂಪಾಂತರವಾಗಿದ್ದರೂ, ಲಸಿಕೆ ಇಲ್ಲಿಯವರೆಗೆ ಡೆಲ್ಟಾ ರೂಪಾಂತರ ಸೇರಿದಂತೆ ಎಲ್ಲದರ ವಿರುದ್ಧ ರಕ್ಷಣಾತ್ಮಕವಾಗಿದೆ. ಆದ್ದರಿಂದ, ಯಾವುದೇ ಹಿಂಜರಿಕೆ ಇರಬಾರದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  West Bengal ಪಶ್ಚಿಮ ಬಂಗಾಳದಲ್ಲಿ ಕೊವಿಡ್ ಲಸಿಕೆ ವ್ಯರ್ಥ ಆಗಿಲ್ಲ; ಸಿರಿಂಜ್ ಕೊರತೆಯೇ ಇಲ್ಲಿನ ಸಮಸ್ಯೆ

(India is likely to have Covid-19 vaccine for children by September says ICMR-NIV director Priya Abraham)