ದೆಹಲಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ ರೈತರನ್ನು ಕೆಳಗಿಳಿಸಿದ ಪೊಲೀಸರು

ಕೆಂಪುಕೋಟೆಯ ಮೇಲೆ ಇನ್ನೂ ಹಲವು ರೈತರು ಇದ್ದಾರೆ. ರಾಷ್ಟ್ರಧ್ವಜ, ಕಿಸಾನ್ ಧ್ವಜ ಹಿಡಿದು ರೈತರಿಂದ ಘೋಷಣೆ ಕೂಗಲಾಗುತ್ತಿದೆ. ಕೆಂಪುಕೋಟೆಯಿಂದ ರೈತರನ್ನು ಕೆಳಗಿಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. 

  • TV9 Web Team
  • Published On - 15:23 PM, 26 Jan 2021
ದೆಹಲಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ ರೈತರನ್ನು ಕೆಳಗಿಳಿಸಿದ ಪೊಲೀಸರು
ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದ ರೈತರು

ದೆಹಲಿ: ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ರೈತರ ಪ್ರತಿಭಟನೆ ದೆಹಲಿಯಲ್ಲಿ ತೀವ್ರಸ್ವರೂಪ ಪಡೆದುಕೊಂಡಿದೆ. ಗಣರಾಜ್ಯೋತ್ಸವ ದಿನವಾದ ಇಂದು ರೈತರು ದೆಹಲಿ ಕೆಂಪುಕೋಟೆ ಆವರಣ ಪ್ರವೇಶಿಸಿ, ರೈತಧ್ವಜವನ್ನು ಹಾರಿಸಿದ್ದಾರೆ. ಸದ್ಯ, ಧ್ವಜಾರೋಹಣ ಸ್ಥಳದಿಂದ ರೈತರನ್ನು ಪೊಲೀಸರು ಕೆಳಗಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನಾ ನಿರತ ರೈತರು ಕೆಂಪುಕೋಟೆಗೆ ನುಗ್ಗಿದ್ದರು. ನೂತನ ಕೃಷಿ ಕಾಯ್ದೆ ವಿರೋಧಿಸಿ ಹೋರಾಟ ಮಾಡುತ್ತಿರುವ ಸಾವಿರಾರು ರೈತರು ಧ್ವಜಾರೋಹಣ ಸ್ಥಳಕ್ಕೆ ಪ್ರವೇಶಿಸಿದ್ದರು. ಧ್ವಜಸ್ತಂಭ ಏರಿ ಎರಡು ಬಾವುಟಗಳನ್ನು ಹಾರಿಸಿದ್ದರು. ನಂತರ ಪೊಲೀಸರು ಅವರನ್ನು ಕೆಳಗೆ ಇಳಿಸಿದ್ದಾರೆ.

ಕೆಂಪುಕೋಟೆಯ ಮೇಲೆ ಇನ್ನೂ ಹಲವು ರೈತರು ಇದ್ದಾರೆ. ರಾಷ್ಟ್ರಧ್ವಜ, ಕಿಸಾನ್ ಧ್ವಜ ಹಿಡಿದು ರೈತರಿಂದ ಘೋಷಣೆ ಕೂಗಲಾಗುತ್ತಿದೆ. ಕೆಂಪುಕೋಟೆಯಿಂದ ರೈತರನ್ನು ಕೆಳಗಿಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪ್ರತಿಭಟನಾ ನಿರತ ರೈತರ ಮೇಲೆ ಲಾಠಿ ಚಾರ್ಜ್​ ಮಾಡಲಾಗಿದೆ. ರೈತರು, ಪೊಲೀಸರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ ಎಂದು ವರದಿ ಆಗಿದೆ.

‘ನಮ್ಮ ಕೆಲಸ ಮುಗಿಯಿತು, ಕೆಂಪುಕೋಟೆಯಿಂದ ವಾಪಸ್ ಹೋಗ್ತೀವಿ’

‘ದೆಹಲಿ ಕೆಂಪುಕೋಟೆಯ ಮೇಲೆ ರೈತಧ್ವಜ ಹಾರಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಸಂದೇಶವೊಂದನ್ನು ರವಾನಿಸುವ ತುಡಿತವಿತ್ತು. ಇದೀಗ ಅದು ಈಡೇರಿದೆ. ನಾವು ವಾಪಸ್​ ಮೊದಲಿದ್ದ ಸ್ಥಳಕ್ಕೆ ಹೋಗ್ತೀವಿ’ ಎಂದು ರೈತ ನಾಯಕರು ಕೆಲ ರಾಷ್ಟ್ರೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

‘ದೆಹಲಿ ಪೊಲೀಸ್ ಅಧಿಕಾರಿಗಳು ಸಹ ರೈತ ನಾಯಕರೊಂದಿಗೆ ಮಾತುಕತೆ ನಡೆಸಿದ್ದು, ನಗರದಿಂದ ವಾಪಸ್ ಹೋಗುವಂತೆ ಸೂಚಿಸಿದ್ದಾರೆ. ಅಧಿಕಾರಿಗಳ ಸೂಚನೆಯನ್ನು ರೈತರು ಒಪ್ಪಿಕೊಂಡಿದ್ದು, ಈ ಮೊದಲು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಗಳಿಗೆ ಹಿಂದಿರುಗುವ ನಿರ್ಧಾರ ಶೀಘ್ರ ಹೊರಬೀಳುವ ನಿರೀಕ್ಷೆಯಿದೆ’ ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ದೆಹಲಿ ಕೆಂಪುಕೋಟೆ ಮೇಲೆ ರೈತಧ್ವಜ; ಇತಿಹಾಸದಲ್ಲಿ ಇದೇ ಮೊದಲು ಕೆಂಪುಕೋಟೆಗೆ ರೈತರ ಮುತ್ತಿಗೆ