ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ 2 ದಿನಗಳ ಅರುಣಾಚಲ ಪ್ರವಾಸಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಚೀನಾಕ್ಕೆ ಭಾರತ ಕಟುವಾಗಿ ತಿರುಗೇಟು ನೀಡಿದೆ. ಚೀನಾದ ಹೇಳಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿರುವ ವಿದೇಶಾಂಗ ಸಚಿವಾಲಯ, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿದಿದೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಭಾರತೀಯ ನಾಯಕರು ಇತರ ಯಾವುದೇ ರಾಜ್ಯಗಳಿಗೆ ಭೇಟಿ ನೀಡುವ ರೀತಿಯಲ್ಲಿಯೇ ಅರುಣಾಚಲ ಪ್ರದೇಶಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಾರೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿಯೇ ಇತ್ತು, ಇದೆ ಮತ್ತು ಇರಲಿದೆ. ಚೀನಾದ ಆಕ್ಷೇಪಣೆಗಳನ್ನು ಒಪ್ಪಲಾಗದು ಮತ್ತು ಅದು ವಾಸ್ತವವನ್ನು ಬದಲಾಯಿಸಲಾರದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಸೋಮವಾರ ಅಮಿತ್ ಶಾ ಅರುಣಾಚಲ ಪ್ರದೇಶಕ್ಕೆ ತೆರಳಿದ್ದರು. ಅದೇ ದಿನ, ಶಾ ಭೇಟಿಯನ್ನು ವಿರೋಧಿಸಿದ್ದ ಚೀನಾ, ಇದು ನಮ್ಮ ಸಾರ್ವಭೌಮತ್ವದ ಉಲ್ಲಂಘನೆ ಎಂದು ಹೇಳಿತ್ತು. ಅರುಣಾಚಲ ಪ್ರದೇಶ ಚೀನಾದ ಭಾಗವೆಂದು ಆ ದೇಶದ ವಿದೇಶಾಂಗ ಇಲಾಖೆ ಪ್ರತಿಪಾದಿಸಿತ್ತು.
ಇದನ್ನೂ ಓದಿ: Amit Shah: ‘ಒಂದು ಇಂಚು ನೆಲವನ್ನೂ ಬಿಟ್ಟುಕೊಡಲ್ಲ’- ಚೀನಾ ಕ್ಯಾತೆ ಮಧ್ಯೆಯೂ ಅರುಣಾಚಲದಲ್ಲಿ ಅಮಿತ್ ಶಾ ಗುಡುಗು
ಅರುಣಾಚಲ ಪ್ರದೇಶಕ್ಕೆ ಭಾರತದ ಸಚಿವರ ಭೇಟಿಯು ಚೀನಾದ ಪ್ರಾದೇಶಿಕ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ. ಗಡಿಯಲ್ಲಿ ಶಾಂತಿ ನೆಲೆಸಲು ಇದು ಒಳ್ಳೆಯದಲ್ಲ ಎಂದು ಚೀನಾ ವಿದೇಶಾಂಗ ಇಲಾಖೆ ಹೇಳಿತ್ತು. ಅರುಣಾಚಲ ಪ್ರದೇಶವನ್ನು ತನ್ನದು ಎಂದು ಹೇಳಿಕೊಳ್ಳುವ ಚೀನಾ ಅದನ್ನು ದಕ್ಷಿಣ ಟಿಬೆಟ್ ಎಂದು ಕರೆಯುತ್ತದೆ. ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶದ ಹಲವು ಸ್ಥಳಗಳ ಹೆಸರನ್ನು ಚೀನಾ ಬದಲಾಯಿಸಿದ್ದು ವಿಶ್ವಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಚೀನಾ ಸರ್ಕಾರವು ಅರುಣಾಚಲ ಪ್ರದೇಶದ ಹೆಸರು ಬದಲಾಯಿಸಿದೆ ಎಂದ ಮಾತ್ರಕ್ಕೆ ವಾಸ್ತವ ಬದಲಾಗದು. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಹೇಳಿತ್ತು. ಚೀನಾದ ನಡೆಗೆ ಅಮೆರಿಕವೂ ಆಕ್ಷೇಪ ವ್ಯಕ್ತಪಡಿಸಿತ್ತು.
ಅಮಿತ್ ಶಾ ಕೂಡ ಅರುಣಾಚಲ ಪ್ರದೇಶದಿಂದಲೇ ಚೀನಾಕ್ಕೆ ಸ್ಪಷ್ಟ ಸಂದೇಶ ನೀಡಿದ್ದರು. ಭಾರತದ ನೆಲವನ್ನು ಯಾರು ಬೇಕಾದರೂ ಅತಿಕ್ರಮಿಸುವ ಕಾಲ ಇದಲ್ಲ ಎಂದು ಹೇಳಿದ್ದರು. ದೇಶದ ಒಂದು ಇಂಚು ಭೂಮಿಯನ್ನೂ ಯಾರೂ ಕಬಳಿಸಲು ಸಾಧ್ಯವಿಲ್ಲ. ಚೀನಾ ಇನ್ನು ಮುಂದೆ ಸೂಜಿಯ ತುದಿಯಷ್ಟು ಭೂಮಿಯನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ