5 ವರ್ಷಗಳ ನಂತರ ಭಾರತದಿಂದ ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾ ಪುನರಾರಂಭ

ನಾಳೆಯಿಂದ (ಜುಲೈ 24) ಭಾರತವು ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾ ನೀಡುವುದನ್ನು ಪುನರಾರಂಭಿಸಲಿದೆ ಎಂದು ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಚೀನಾದ ವಿದೇಶಾಂಗ ಸಚಿವಾಲಯ ಈ ಬೆಳವಣಿಗೆಯನ್ನು "ಸಕಾರಾತ್ಮಕ" ಎಂದು ಕರೆದಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರ ಚೀನಾಗೆ ಭೇಟಿ ನೀಡಿದ್ದು, ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

5 ವರ್ಷಗಳ ನಂತರ ಭಾರತದಿಂದ ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾ ಪುನರಾರಂಭ
Minister S Jaishankar With China President

Updated on: Jul 23, 2025 | 7:34 PM

ನವದೆಹಲಿ, ಜುಲೈ 24: ಭಾರತ ಮತ್ತು ಚೀನಾದ (China) ನಡುವಿನ ಶೀತಲ ಸಮರದ ನಡುವೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮವಾಗಿ ಭಾರತವು (India) ಸುಮಾರು 5 ವರ್ಷಗಳ ಅಂತರದ ಬಳಿಕ ಇದೀಗ ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾ ನೀಡುವುದನ್ನು ಪುನರಾರಂಭಿಸಿದೆ. ನಾಳೆಯಿಂದ (ಗುರುವಾರದಿಂದ) ಚೀನಾದ ಪ್ರಜೆಗಳು ಪ್ರವಾಸಿ ವೀಸಾಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭಿಸಬಹುದು ಎಂದು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

“ಭಾರತವು ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾಗಳನ್ನು ಪುನರಾರಂಭಿಸುವುದನ್ನು ನಾವು ಗಮನಿಸಿದ್ದೇವೆ. ಇದು ಸಕಾರಾತ್ಮಕ ಕ್ರಮವಾಗಿದೆ. ಗಡಿಯಾಚೆಗಿನ ಪ್ರಯಾಣವನ್ನು ಸರಾಗಗೊಳಿಸಲು ಇದು ಪ್ರಯೋಜನಕಾರಿಯಾಗಿದೆ. ಎರಡೂ ದೇಶಗಳ ನಡುವಿನ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸಲು ಚೀನಾ ಭಾರತದೊಂದಿಗೆ ಸಂವಹನ ಮತ್ತು ಸಮಾಲೋಚನೆಯನ್ನು ನಿರ್ವಹಿಸುತ್ತದೆ” ಎಂದು ಚೀನಾದ ವಿದೇಶಾಂಗ ಸಚಿವಾಲಯ ಎಕ್ಸ್​ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಭಾರತದ ವಿರುದ್ಧ ಚೀನಾ ಗೌಪ್ಯ ಮಾಹಿತಿ ನೀಡಿದ್ದನ್ನು ಒಪ್ಪಿಕೊಂಡ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್

ಭಾರತೀಯ ರಾಯಭಾರ ಕಚೇರಿಯು ತನ್ನ ಅಧಿಸೂಚನೆಯಲ್ಲಿ ಪ್ರವಾಸಿ ವೀಸಾಗಳಿಗೆ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಪ್ರಕ್ರಿಯೆ, ಬೀಜಿಂಗ್, ಶಾಂಘೈ ಮತ್ತು ಗುವಾಂಗ್‌ಝೌನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರಗಳಲ್ಲಿ ಚೀನೀ ಪ್ರಜೆಗಳು ಸಲ್ಲಿಸಬೇಕಾದ ದಾಖಲೆಗಳನ್ನು ಸಹ ವಿವರಿಸಿದೆ. ಸುಮಾರು ಐದು ವರ್ಷಗಳ ಅಂತರದ ನಂತರ ಕಳೆದ ತಿಂಗಳು ಎರಡೂ ದೇಶದವರು ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸಿದ್ದರು.


ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರ ಚೀನಾ ಭೇಟಿಯ ನಂತರ ಚೀನಾದ ಪ್ರಜೆಗಳಿಗೆ ಪ್ರವಾಸಿ ವೀಸಾ ನೀಡುವುದನ್ನು ಪುನರಾರಂಭಿಸುವ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿ ಅವರು ತಮ್ಮ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಿದ್ದರು. ಕಳೆದ ವಾರ, ಶಾಂಘೈ ಸಹಕಾರ ಸಂಸ್ಥೆ (SCO)ಯ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಭಾಗವಹಿಸಲು ಜೈಶಂಕರ್ ಚೀನಾಕ್ಕೆ ಭೇಟಿ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ